ಕೋವಿಡ್-19 ಮಹಾಮಾರಿ ತಂದೊಡ್ಡಿದ ಲಾಕ್‌ಡೌನ್ ಕಾರಣಕ್ಕೆ ಮಕ್ಕಳಿಗೆ ಮನೆಯಿಂದಲೇ ಆನ್‌ಲೈನ್ ಮೂಲಕ ಪಾಠ ಕೇಳಿಸಿಕೊಳ್ಳುವುದು, ವರ್ಚುವಲ್ ಮೀಟಿಂಗ್ ಮುಂತಾದವು ಅನಿವಾರ್ಯ. ಈ ಸಂದರ್ಭದಲ್ಲಿ ಕಣ್ಣುಗಳ ಹಿತದೃಷ್ಟಿಯಿಂದ ಮೊಬೈಲ್ ಫೋನ್‌ಗಳಿಗಿಂತ ಟ್ಯಾಬ್ಲೆಟ್‌ಗಳು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಮಾರುಕಟ್ಟೆಯೂ ವೇಗ ಪಡೆಯಿತು. ಈ ಹಂತದಲ್ಲಿ ಸ್ಯಾಮ್‌ಸಂಗ್ ಕೈಗೆಟುಕುವ ದರದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಲೈಟ್ ಎಂಬ ಟ್ಯಾಬ್ಲೆಟ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಪ್ರಜಾವಾಣಿಗೆ ರಿವ್ಯೂಗೆ ದೊರೆತ 8.7 ಇಂಚು ಸ್ಕ್ರೀನ್ ಗಾತ್ರದ ಸ್ಯಾಮ್‌ಸಂಗ್ ಎ7 ಲೈಟ್ ಟ್ಯಾಬ್ಲೆಟ್ ಹೇಗಿದೆ? ನೋಡೋಣ.
ವಿನ್ಯಾಸ, ಪ್ರಮುಖ ಸ್ಪೆಸಿಫಿಕೇಶನ್‌ಗಳು
ಟಚ್ ಸ್ಕ್ರೀನ್ ಡಿಸ್‌ಪ್ಲೇ ಇರುವ ಈ ಟ್ಯಾಬ್ಲೆಟ್ ಹೆಸರಿಗೆ ತಕ್ಕಂತೆ ಲೈಟ್ (ಸುಮಾರು 370 ಗ್ರಾಂ) ಮತ್ತು ಸ್ಲಿಮ್ ಆಗಿದೆ. ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸರ್ ಇರುವ ಕ್ಯಾಮೆರಾ, ಮುಂಭಾಗದಲ್ಲೂ ವಿಡಿಯೊ ಕರೆ ಅಥವಾ ಸೆಲ್ಫೀಗಾಗಿ 2 MP ಸಾಮರ್ಥ್ಯದ ಪಂಚ್ ಹೋಲ್ ಕ್ಯಾಮೆರಾ ಲೆನ್ಸ್ ಇದೆ. 1.8GHz ಒಕ್ಟಾಕೋರ್ ಮೀಡಿಯಾಟೆಕ್ ಹೀಲಿಯೊ P22T ಪ್ರೊಸೆಸರ್, 3GB RAM ಹಾಗೂ 32GB ಸ್ಟೋರೇಜ್ ಇದೆ. ಆಂಡ್ರಾಯ್ಡ್ 11 ಆಧಾರಿತ ಒನ್ ಯುಐ ಕೋರ್ 3.1 ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ 5100 mAh ಬ್ಯಾಟರಿ ಇದರಲ್ಲಿದೆ. 1TB ವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಹಾಗೂ 4ಜಿ ಮೈಕ್ರೋ ಸಿಮ್ ಸ್ಲಾಟ್ ಕೂಡ ಇದರಲ್ಲಿದೆ. 366 ಗ್ರಾಂ ತೂಕವಿದ್ದು, ಬೂದು ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಿದ್ದು, ನೋಡಲು ಪ್ರೀಮಿಯಂ ಸಾಧನದಂತಿದೆ.
ಇತ್ತೀಚೆಗಿನ ಆಧುನಿಕ ಯುಎಸ್‌ಬಿ ಟೈಪ್-ಸಿ ಪೋರ್ಟ್ ಇದ್ದು, ಬ್ಲೂಟೂತ್, ವೈಫೈ, ಜಿಪಿಎಸ್ ಸೌಕರ್ಯಗಳಿವೆ. ಇದು ಹೆಚ್ಚು ಬೆಲೆಯ, 10 ಇಂಚು ಸ್ಕ್ರೀನ್‌ನ ಎ7 ಟ್ಯಾಬ್ಲೆಟ್ ಮಾದರಿಯ ಸರಳೀಕೃತ ರೂಪ ಎನ್ನಬಹುದು. ಎ7 ಲೈಟ್ ಸಾಧನದ TFT ಸ್ಕ್ರೀನ್ 1340x800 ಪಿಕ್ಸೆಲ್ ರೆಸೊಲ್ಯುಶನ್ ಹೊಂದಿದ್ದು, ಡಿಸ್‌ಪ್ಲೇ ಈ ಮೌಲ್ಯಕ್ಕೆ ತಕ್ಕಂತಿದೆ. ಅದೇ ರೀತಿ, ಡಾಲ್ಬಿ ಅಟ್ಮೋಸ್ ಸ್ಪೀಕರ್‌ಗಳಿರುವುದರಿಂದ ಧ್ವನಿ ಗುಣಮಟ್ಟ ಚೆನ್ನಾಗಿದೆ. ಕೆಳಭಾಗದಲ್ಲಷ್ಟೇ ಅಲ್ಲದೆ ಮೇಲ್ಭಾಗದಲ್ಲಿಯೂ ಸ್ಪೀಕರ್ ಗ್ರಿಲ್ (ಡ್ಯುಯಲ್ ಸ್ಪೀಕರ್) ಇರುವುದರಿಂದ ಸ್ಟೀರಿಯೋ ಧ್ವನಿ ಚೆನ್ನಾಗಿ ಕೇಳಿಸುತ್ತದೆ. ಇಯರ್‌ಫೋನ್‌ಗಾಗಿ 3.5 ಮಿ.ಮೀ. ಜಾಕ್ ಕೂಡ ಇದೆ.
ಇದರಲ್ಲಿರುವ ಕ್ಯಾಮೆರಾದಿಂದ ಉತ್ತಮ ಫೊಟೊಗಳನ್ನು ನಿರೀಕ್ಷಿಸುವಂತಿಲ್ಲ. ಇದು ಬೇಸಿಕ್ ಟ್ಯಾಬ್ ಆಗಿದ್ದು, ಆನ್‌ಲೈನ್ ಮೀಟಿಂಗ್‌ಗಳು, ವಿಡಿಯೊ ತರಗತಿಗಳಿಗಾಗಿಯಷ್ಟೇ ಸೀಮಿತ. ಆದರೂ ಹಿಂಭಾಗದ 8MP ಕ್ಯಾಮೆರಾ ಹೊರಾಂಗಣದಲ್ಲಿ ಪರವಾಗಿಲ್ಲ ಅನ್ನಿಸಬಹುದಾದ ಫೊಟೊ, ವಿಡಿಯೊಗಳನ್ನು ಒದಗಿಸುತ್ತದೆ. ಇನ್ನು, ಇದಕ್ಕೆ ಲಭ್ಯವಿರುವ ಕವರ್ ಖರೀದಿಸಿದರೆ ಅದು ಮಾನಿಟರ್ ಸ್ಟ್ಯಾಂಡ್ ರೂಪದಲ್ಲಿಯೂ ಕೆಲಸ ಮಾಡುತ್ತದೆ ಮತ್ತು ಡೆಸ್ಕ್ ಅಥವಾ ಮೇಜಿನ ಮೇಲಿರಿಸಿ ಯಾವುದೇ ಮೀಟಿಂಗ್ ಅಥವಾ ತರಗತಿಗಳನ್ನು, ಮನರಂಜನಾ ವಿಡಿಯೊ ತಾಣಗಳನ್ನು ನೋಡುವುದಕ್ಕೆ, ಇ-ಪುಸ್ತಕಗಳನ್ನು ಓದುವುದಕ್ಕೆ ಅನುಕೂಲಕರ. ಗೇಮಿಂಗ್‌ಗೆ ಕೂಡ ಉತ್ತಮ ಬೆಂಬಲವಿದೆಯಾದರೂ, ಹೆಚ್ಚು ಗ್ರಾಫಿಕ್ಸ್, ಆನಿಮೇಶನ್ ಇರುವ ಗೇಮ್‌ಗಳಿಗೆ 3ಜಿಬಿ RAM ಒಂದಿಷ್ಟು ತೊಡಕಾಗಬಹುದು.
ಈ ಮಾದರಿಯ ಟ್ಯಾಬ್ಲೆಟ್‌ನಲ್ಲಿ ಇನ್ನೊಂದು ವೈಶಿಷ್ಟ್ಯವಿದೆ. ಇದರಲ್ಲಿ 4ಜಿ ಸಿಮ್ ಕಾರ್ಡ್ ಅಳವಡಿಸಿ, ಮೊಬೈಲ್ ಫೋನ್ ರೂಪದಲ್ಲಿಯೂ ಬಳಸಬಹುದು. ಇಲ್ಲವೇ ಬೇರೊಂದು ಆಂಡ್ರಾಯ್ಡ್ ಫೋನ್ ಬಳಸಿ, ಇದರಲ್ಲೇ ಕರೆ-ಎಸ್ಸೆಮ್ಮೆಸ್ ನಿಭಾಯಿಸಲು 'ಕಾಲ್ ಆ್ಯಂಡ್ ಟೆಕ್ಸ್ಟ್ ಆನ್ ಅದರ್ ಡಿವೈಸಸ್' ಎಂಬ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
ಒಂದು ಕೈಯಲ್ಲಿ ಬಳಸಲು ಅನುವಾಗುವಂತೆಯೂ ಇದರ ಯೂಸರ್ ಇಂಟರ್ಫೇಸ್ ರೂಪಿಸಲಾಗಿದೆ. ಇತ್ತೀಚಿನ ಸ್ಕ್ರೀನ್‌ಗೆ ಹೋಗಬೇಕಿದ್ದರೆ ಸ್ಕ್ರೀನ್‌ನ ಎಡ ಮಧ್ಯದಿಂದ ಮೇಲಕ್ಕೆ ಸ್ವೈಪ್ ಮಾಡಿದರಾಯಿತು. ಅದೇ ರೀತಿ ಹಿಂದೆ ಹೋಗಬೇಕಿದ್ದರೆ ಸ್ಕ್ರೀನ್ ಮಧ್ಯದಿಂದ ಎಡಕ್ಕೂ, ಹೋಂಗೆ ಹೋಗಬೇಕಿದ್ದರೆ ಎಡ ಮಧ್ಯದಿಂದ ಕೆಳಕ್ಕೂ ಸ್ವೈಪ್ ಮಾಡಿದರಾಯಿತು.
ಒಟ್ಟಾರೆ ಹೇಗಿದೆ
ತೆಳುವಾದ ಬೆಝೆಲ್ ಇರುವ, ಉತ್ತಮ ಬ್ಯಾಟರಿ ಸಾಮರ್ಥ್ಯ, ಹಗುರ, ಸ್ಲಿಮ್ ಮತ್ತು ಬೆಲೆ - ಇವಿಷ್ಟು ಸ್ಯಾಮ್‌ಸಂಗ್ ಎ7 ಲೈಟ್ ಟ್ಯಾಬ್ಲೆಟ್‌ನ ಪ್ಲಸ್ ಪಾಯಿಂಟ್ಸ್. ಅತ್ಯಾಧುನಿಕ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ದೊಡ್ಡ ಸ್ಕ್ಕೀನ್ ಸಾಧನ ಬೇಕು ಎಂದುಕೊಳ್ಳುವವರಿಗೆ ಜೇಬಿಗೆ ಭಾರವಲ್ಲದ ಟ್ಯಾಬ್ಲೆಟ್ ಇದು. ಮಕ್ಕಳಿಗೆ ಆನ್‌ಲೈನ್ ತರಗತಿಗೆ ಮತ್ತು ಮನೆಯಿಂದಲೇ ಕಚೇರಿ ಕೆಲಸ ಮಾಡುವವರಿಗೆ ಆನ್‌ಲೈನ್ ಮೀಟಿಂಗ್ ಮುಂತಾದ ಕಾರ್ಯಗಳಿಗೆ ಸೂಕ್ತವಾಗುತ್ತದೆ. ಮೊದಲ ಬಾರಿ ಬ್ರ್ಯಾಂಡೆಡ್ ಟ್ಯಾಬ್ಲೆಟ್ ತೆಗೆದುಕೊಳ್ಳುವವರು ಇದನ್ನು ಪ್ರಯತ್ನಿಸಬಹುದು. ಬೆಲೆ ₹14,999 ಇದ್ದರೆ, ವೈಫೈ ಮಾತ್ರ (ಸಿಮ್ ಕಾರ್ಡ್ ಬೆಂಬಲವಿಲ್ಲದ) ಸಾಧನಕ್ಕೆ ₹11,999.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.