ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13-5ಜಿ: RAM ಹೆಚ್ಚಿಸಬಹುದಾದ ಬಜೆಟ್ ಫೋನ್

ಅವಿನಾಶ್ ಬಿ.
Published 23 ಜುಲೈ 2022, 16:15 IST
Last Updated 23 ಜುಲೈ 2022, 16:15 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13   

ಸ್ಯಾಮ್‌ಸಂಗ್ ವೈವಿಧ್ಯಮಯ ಮಾಡೆಲ್‌ಗಳ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇದರ ಎಂ ಸರಣಿಯಲ್ಲಿ ಎರಡು ಫೋನ್‌ಗಳು ಜು.23ರಂದು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13 ಹಾಗೂ ಎಂ13 - 5ಜಿ. ಕೈಗೆಟಕುವ ದರದಲ್ಲಿರುವ ಹೊಚ್ಚ ಹೊಸ ಫೋನ್ ಎಂ13 5ಜಿ ಆವೃತ್ತಿಯು ಪ್ರಜಾವಾಣಿಗೆ ರಿವ್ಯೂಗೆ ದೊರೆತಿದೆ. ಇದು ಸ್ವಯಂಚಾಲಿತ ಡೇಟಾ ಸ್ವಿಚಿಂಗ್ ಮತ್ತು RAM ಪ್ಲಸ್ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆದಿದೆ. ಭಾರತಕ್ಕಿನ್ನಷ್ಟೇ ಬರಬೇಕಿರುವ 5ಜಿ ನೆಟ್‌ವರ್ಕ್‌ನ 11 ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಒಂದು ವಾರ ಬಳಸಿ ನೋಡಿದ ಬಳಿಕ ಅದರ ಕಾರ್ಯಾಚರಣೆ ಹೇಗಿದೆ ಅಂತ ನೋಡೋಣ.

ಡಿಸ್‌ಪ್ಲೇ, ವಿನ್ಯಾಸ
ಸ್ಯಾಮ್‌ಸಂಗ್ ಎಂ13 5ಜಿ ಫೋನ್, 6.5 ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇ ಸ್ಕ್ರೀನ್ ಹೊಂದಿದ್ದು, 90Hz ರಿಫ್ರೆಶ್ ರೇಟ್ ಹೊಂದಿರುವುದರಿಂದ, ಬ್ರೌಸ್ ಮಾಡುವುದು ಮತ್ತು ಸ್ಕ್ರಾಲ್ ಮಾಡುವುದು ಸುಲಲಿತ ಅನ್ನಿಸುತ್ತದೆ. ಸ್ಕ್ರೀನ್‌ನ ಸುತ್ತ ಬೆಝೆಲ್ (ಕಪ್ಪನೆಯ ಖಾಲಿ ಭಾಗ) ಇರುವುದರಿಂದ ಪೂರ್ಣ ಪರದೆಯಲ್ಲಿ ಚಿತ್ರ ವೀಕ್ಷಿಸಲಾಗದು. ಹಿಂಭಾಗದಲ್ಲಿ ಮ್ಯಾಟ್ ಫಿನಿಶಿಂಗ್ ಇರುವ ಪಾಲಿಕಾರ್ಬೊನೇಟ್ ಪ್ಯಾನೆಲ್ ಇದ್ದು, ಫ್ಲ್ಯಾಶ್ ಜೊತೆಗೆ ಅವಳಿ ಕ್ಯಾಮೆರಾ ಸೆಟಪ್ ಇದೆ. ಇದು ಹಿಂದಿನ ಗ್ಯಾಲಕ್ಸಿ ಎಂ12ಕ್ಕಿಂತ ಹಗುರವಾಗಿದ್ದು, 720x1600 ಪಿಕ್ಸೆಲ್ ಸ್ಕ್ರೀನ್ ರೆಸೊಲ್ಯುಶನ್ ಹೊಂದಿದೆ. ಕಣ್ಣುಗಳ ರಕ್ಷಣೆಯ ಮೋಡ್ ಇದ್ದು, ಪ್ರಖರ ಬಿಸಿಲಿನಲ್ಲಿಯೂ ಸ್ಕ್ರೀನ್ ಮೇಲಿನ ಪಠ್ಯವನ್ನು ಚೆನ್ನಾಗಿ ಓದುವಂತೆ ಡಿಸ್‌ಪ್ಲೇ ಬ್ರೈಟ್‌ನೆಸ್ ಒಗ್ಗಿಕೊಳ್ಳುತ್ತದೆ. ಎರಡು ಸಿಮ್ ಟ್ರೇಗಳಿವೆ ಮತ್ತು 1ಟಿಬಿ ವರೆಗೂ ಸ್ಟೋರೇಜ್ ವಿಸ್ತರಿಸುವ ಮೆಮೊರಿ ಕಾರ್ಡ್ ಸ್ಲಾಟ್ ಇದೆ. ಬಾಕ್ಸ್‌ನಲ್ಲಿ 15W ಅಡಾಪ್ಟಿವ್ ಫಾಸ್ಟ್ ಚಾರ್ಜರ್ ನೀಡಲಾಗಿದೆ.

ಕಾರ್ಯಾಚರಣೆ
ಗ್ಯಾಲಕ್ಸಿ ಎಂ13 5ಜಿಯಲ್ಲಿ 2.2GHz ಸಾಮರ್ಥ್ಯದ ಒಕ್ಟಾಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್, ಆಂಡ್ರಾಯ್ಡ್ 12 ಆಧಾರಿತ ಒನ್ ಯುಐ 4 ಕಾರ್ಯಾಚರಣಾ ವ್ಯವಸ್ಥೆ ಇದೆ. ಇಂಟರ್ಫೇಸ್ ಚೆನ್ನಾಗಿದೆಯಾದರೂ, ಸಾಕಷ್ಟು ಬ್ಲಾಟ್‌ವೇರ್‌ಗಳನ್ನು ಸ್ಯಾಮ್‌ಸಂಗ್ ಅಳವಡಿಸಿಯೇ ನೀಡುವುದು ಕೆಲವರಿಗೆ ಇಷ್ಟವಾಗದಿರಬಹುದು. 6ಜಿಬಿ RAM ಇದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ RAM ಪ್ಲಸ್ ಎಂಬ ವೈಶಿಷ್ಟ್ಯವನ್ನು ಬಳಸಿ ಇದನ್ನು 12GB ವರೆಗೂ ಹೆಚ್ಚಿಸಿಕೊಳ್ಳಬಹುದು. ನಮಗೆ ಬೇಕಾದಾಗ RAM ಹೆಚ್ಚಿಸುವ, ಅಂದರೆ, ಅಸ್ತಿತ್ವದಲ್ಲಿರುವ ಮೆಮೊರಿಯನ್ನೇ RAM ಆಗಿ ಬಳಸುವ ವ್ಯವಸ್ಥೆಯಿದು. ಉದಾಹರಣೆಗೆ, ಕೆಲವು ಭರ್ಜರಿ ಗ್ರಾಫಿಕ್ಸ್ ಇರುವ ತೂಕದ ಗೇಮ್‌ಗಳು ಹೆಚ್ಚುವರಿ ಮೆಮೊರಿ ಬೇಡುತ್ತವೆ. ಅದಕ್ಕೆ ಅನುಗುಣವಾಗಿ 2GB, 4GB ಅಥವಾ 6GB ಯಷ್ಟು RAM ಹೆಚ್ಚಿಸಿಕೊಳ್ಳಬಹುದು. ಇದು ಗೇಮಿಂಗ್ ಅಥವಾ ಅನ್ಯ ಕಾರ್ಯಗಳ ಸಂದರ್ಭ ಸ್ಥಾಗಿತ್ಯ (ಹ್ಯಾಂಗ್) ಅಥವಾ ವಿಳಂಬ (ಲೇಟೆನ್ಸಿ) ಅನುಭವಕ್ಕೆ ಬಾರದಂತೆ ತಡೆಯುತ್ತದೆ. ಸಾಮಾನ್ಯ ಗೇಮಿಂಗ್, ಫೇಸ್‌ಬುಕ್ ಹಾಗೂ ಇತರ ಆ್ಯಪ್‌ಗಳು, ಜಾಲತಾಣಗಳ ಬ್ರೌಸಿಂಗ್ ವೇಳೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ADVERTISEMENT

15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತಿದ್ದು, 5000mAh ಬ್ಯಾಟರಿ ಇದೆ. ಸಾಕಷ್ಟು ಸಂಖ್ಯೆಯಲ್ಲಿ ವಿಡಿಯೊ ನೋಡಿದರೆ, ಫೇಸ್‌ಬುಕ್ ಜಾಲಾಡಿದರೆ ಮತ್ತು ಗೇಮ್ ಆಡಿದರೆ ಬೇಗನೇ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತದೆ. ವಾಟ್ಸ್ಆ್ಯಪ್, ಸ್ವಲ್ಪ ಫೇಸ್‌ಬುಕ್, ಒಂದೆರಡು ಗಂಟೆ ಗೇಮಿಂಗ್, ಒಂದು ಗಂಟೆ ವಿಡಿಯೊ, ಇಮೇಲ್, ವಾಟ್ಸ್ಆ್ಯಪ್ - ಹೀಗೆ ಸಾಮಾನ್ಯ ಬಳಕೆಯಲ್ಲಾದರೆ ಒಂದುವರೆ ದಿನಕ್ಕೆ ಚಾರ್ಜ್‌ಗೆ ತೊಂದರೆಯಾಗಿಲ್ಲ. ಎಂದಿನಂತೆ, ಸ್ಯಾಮ್‌ಸಂಗ್ ನಾಕ್ಸ್ (Knox) ಸುರಕ್ಷತೆಯಿದೆ ಹಾಗೂ ಅತ್ಯಾಧುನಿಕ ಸ್ಮಾರ್ಟ್ ವೈಶಿಷ್ಟ್ಯಗಳೂ ಇವೆ. ಮುಖ ಗುರುತಿಸುವ ಮತ್ತು ಬೆರಳಚ್ಚು ಸ್ಕ್ಯಾನರ್ ಮೂಲಕ ಸ್ಕ್ರೀನ್ ಅನ್‌ಲಾಕ್ ಮಾಡುವ ವ್ಯವಸ್ಥೆ ವೇಗವಾಗಿ ಕೆಲಸ ಮಾಡುತ್ತದೆ.

ಡೇಟಾ ಸ್ವಿಚಿಂಗ್ ವೈಶಿಷ್ಟ್ಯ: ಈ ಫೋನ್‌ನಲ್ಲಿ ಪ್ರತ್ಯೇಕ ಟೆಲಿಕಾಂ ಆಪರೇಟರ್‌ಗಳ ಎರಡು ಸಿಮ್ ಕಾರ್ಡ್ ಬಳಸುತ್ತಿದ್ದರೆ ಅನುಕೂಲವಿದೆ. ಒಂದರ ಇಂಟರ್ನೆಟ್ ಸಂಪರ್ಕ ಅಥವಾ ಡೇಟಾ ಸಿಗ್ನಲ್ ಇಲ್ಲದಿರುವಾಗ, ಸ್ವಯಂಚಾಲಿತವಾಗಿ ಮತ್ತೊಂದು ಸಿಮ್ ಕಾರ್ಡ್‌ನ ಡೇಟಾವನ್ನು ಫೋನ್ ಬಳಸಿಕೊಳ್ಳುತ್ತದೆ. ಇದು ಪ್ರಯಾಣದಲ್ಲಿರುವಾಗ, ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ.

ಕ್ಯಾಮೆರಾ
50 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇದ್ದು, ಉತ್ತಮ ಬೆಳಕಿರುವಲ್ಲಿ ಫೋಟೋ, ವಿಡಿಯೊಗಳು ಚೆನ್ನಾಗಿ ಸೆರೆಯಾಗುತ್ತವೆ. ಸ್ವಯಂಚಾಲಿತವಾಗಿ ಫೋಕಸ್ ಆಗುವ ತಂತ್ರಜ್ಞಾನವಿದ್ದು, ವೃತ್ತಿಪರರಿಗೆ 'ಪ್ರೋ' ಮೋಡ್ ಇದೆ. ನೈಟ್ ಮೋಡ್ ಬಳಸಿದರೆ ಬೆಳಕು ಕಡಿಮೆ ಇರುವಲ್ಲಿ ಕೊಂಚ ಮಟ್ಟಿಗೆ ಉತ್ತಮ ಎನ್ನಿಸಬಹುದಾದ ಚಿತ್ರ ಅಥವಾ ವಿಡಿಯೊಗಳನ್ನು ಸೆರೆಹಿಡಿಯಬಹುದು. 5 ಮೆಗಾಪಿಕ್ಸೆಲ್ ಸೆನ್ಸರ್ ಇರುವ ಸೆಲ್ಫೀ ಕ್ಯಾಮೆರಾದಲ್ಲಿ ಸೋಷಿಯಲ್ ಮೀಡಿಯಾಗಳಿಗೆ ಹಂಚಿಕೊಳ್ಳುವಂತೆ ಸುಂದರವಾಗಿಸಬಲ್ಲ ಸಾಕಷ್ಟು ಫಿಲ್ಟರ್‌ಗಳಿವೆ. ಜೊತೆಗೆ, ಕೈಯೆತ್ತಿದರೆ ಸೆಲ್ಫೀ ಸೆರೆಹಿಡಿಯುವ ಸ್ವಯಂಚಾಲಿತ ವ್ಯವಸ್ಥೆ ಇದರಲ್ಲೂ ಇದೆ. ಪೋರ್ಟ್ರೇಟ್ ಮೋಡ್ ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನು ಬಳಸಿದರೆ, ಹಿನ್ನೆಲೆಯನ್ನು ಮಬ್ಬಾಗಿಸಿ ಮುಖವನ್ನಷ್ಟೇ ನಿಖರವಾಗಿ ತೋರಿಸಬಹುದು. ಈ ಮೋಡ್ ಹಿಂಭಾಗದ ಕ್ಯಾಮೆರಾದಲ್ಲಿಯೂ ಚೆನ್ನಾಗಿ ಕೆಲಸ ಮಾಡುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13 - 5ಜಿ ಮಾದರಿಯು ಎರಡು ಸ್ಟೋರೇಜ್ ವೈವಿಧ್ಯಗಳಲ್ಲಿ ಲಭ್ಯವಿದೆ. 4GB+64GB (ಬೆಲೆ ₹13,999) ಹಾಗೂ 6GB+128GB (ಬೆಲೆ ₹15,999).

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ13 ಸಾಧನದ 4ಜಿ ಆವೃತ್ತಿಯೂ ಇಂದು (ಜು.23) ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಅದರಲ್ಲಿ 6000mAh ಬ್ಯಾಟರಿ, ತ್ರಿವಳಿ ಕ್ಯಾಮೆರಾ ಹೊಂದಿದ್ದು, ಬೆಲೆ 5ಜಿ ಮಾದರಿಗಿಂತ ಕಡಿಮೆ. ಅಂದರೆ 4GB+64GB (ಬೆಲೆ ₹11,999) ಹಾಗೂ 6GB+128GB (ಬೆಲೆ ₹13,999).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.