ಮಡಚುವ ಫೀಚರ್ ಫೋನ್‌ಗಳು ಸ್ಮಾರ್ಟ್ ರೂಪದಲ್ಲಿ ಬಂದು ಕೆಲವು ವರ್ಷಗಳೇ ಸಂದವು. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯ 5ನೇ ಆವೃತ್ತಿಯ ಆಂಡ್ರಾಯ್ಡ್ ಫೋನನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 5 ಎರಡು ವಾರ ಬಳಸಿ ನೋಡಿದ ಬಳಿಕ, ಅದು ಹೇಗಿದೆ? ಇಲ್ಲಿದೆ ಮಾಹಿತಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5 ಮಧ್ಯಭಾಗದಲ್ಲಿ ಪುಸ್ತಕದಂತೆ (ಲಂಬವಾಗಿ) ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು, ತೆರೆದಾಗ 7.6 ಇಂಚಿನ ಸ್ಕ್ರೀನ್ ಗಾತ್ರ ಹೊಂದಿದೆ. ಮುಚ್ಚಿದಾಗ ಅದರ ಸ್ಕ್ರೀನ್ ಗಾತ್ರ 6.2 ಇಂಚು. ಗೊರಿಲ್ಲಾ ಗ್ಲಾಸ್ ರಕ್ಷಣೆಯಿದ್ದು, ಡೈನಮಿಕ್ AMOLED ಸ್ಕ್ರೀನ್ ಇದೆ. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಆಕರ್ಷಕವಾಗಿದ್ದರೆ, ಮುಂಭಾಗದಲ್ಲಿ ಎರಡೂ ಸ್ಕ್ರೀನ್‌ಗಳಲ್ಲಿ (ತೆರೆದಾಗ ದೊಡ್ಡ ಸ್ಕ್ರೀನ್, ಮಡಚಿದಾಗ ಸಣ್ಣ ಸ್ಕ್ರೀನ್) ಒಂದೊಂದು ಸೆಲ್ಫಿ ಕ್ಯಾಮೆರಾ ಇದ್ದೂ ಇಲ್ಲದಂತೆ ಅಡಗಿ ಕುಳಿತಿದೆ. ಮುಚ್ಚಿದಾಗ, ಝಡ್ ಫೋಲ್ಡ್ 4ನೇ ಸರಣಿಯ ಫೋನ್‌ಗಿಂತ 5ನೇ ಸರಣಿಯದು ಸುಮಾರು ಎರಡು ಮಿಮೀ ಚಿಕ್ಕದು. ಅಂದರೆ, ಇದು 13.4 ಮಿಮೀ ದಪ್ಪ ಇದೆ. ಪವರ್ ಬಟನ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು, ತಳಭಾಗದಲ್ಲಿ ಉತ್ತಮ ಸ್ಪೀಕರ್ ಗ್ರಿಲ್, ಮೈಕ್ ಇದೆ. ತೂಕ 253 ಗ್ರಾಂ. ಇದು ಗೂಗಲ್‌ನ ಪಿಕ್ಸೆಲ್ ಫೋನ್‌ಗಿಂತ ಹಗುರವಿದೆ.
ಬಿಸಿಲಿನಲ್ಲಿ ಬಳಸುವಾಗಲೂ ಸ್ಕ್ರೀನ್‌ನ ಬೆಳಕಿನ ಪ್ರಖರತೆಯು ಚೆನ್ನಾಗಿ ಹೊಂದಿಕೊಳ್ಳುವ ಮೂಲಕ, ಓದುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.
ಆಂಡ್ರಾಯ್ಡ್ 13 ಕಾರ್ಯಾಚರಣಾ ವ್ಯವಸ್ಥೆ ಆಧಾರಿತ ಒನ್ ಯುಐ 5.1.1 ಕಾರ್ಯಾಚರಣಾ ವ್ಯವಸ್ಥೆ ಇದರಲ್ಲಿದ್ದು, ಕಳೆದ ವರ್ಷದ ಝಡ್ ಫೋಲ್ಡ್ 4ಕ್ಕೆ ಹೋಲಿಸಿದರೆ, ಹೆಚ್ಚು ಕೆಲಸ ಮಾಡಿದಾಗ ಈ ಫೋನ್ ಅಷ್ಟೊಂದು ಬಿಸಿ ಆಗುವುದಿಲ್ಲ. ಅರ್ಧ ಗಂಟೆ ಸತತ ಗೇಮ್ ಆಡಿದರೂ ಹೆಚ್ಚು ಬಿಸಿ ಅನುಭವಕ್ಕೆ ಬಂದಿಲ್ಲ. ಇದಕ್ಕೆ ಕಾರಣವೆಂದರೆ, ಎರಡನೇ ಪೀಳಿಗೆಯ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8 ಚಿಪ್‌ಸೆಟ್ ಇದರಲ್ಲಿ ಬಳಕೆಯಾಗಿದ್ದು, ಇದು ಕಾರ್ಯಾಚರಣೆಯನ್ನು ವೇಗವಾಗಿಯೂ, ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವ ವೈಶಿಷ್ಟ್ಯವನ್ನೂ ನಿಭಾಯಿಸುತ್ತದೆ. ದೊಡ್ಡ ಪರದೆಯಲ್ಲಿ ಮಲ್ಟಿ ಟಾಸ್ಕಿಂಗ್ (ಏಕಕಾಲದಲ್ಲಿ ಹಲವು ಆ್ಯಪ್‌ಗಳಲ್ಲಿ ಕೆಲಸ ಮಾಡುವ) ಸಾಮರ್ಥ್ಯ ತುಂಬ ಅನುಕೂಲಕರವಾಗಿದೆ.
ಮಡಚಬಹುದಾದ ಈ ಫೋನ್‌ನಲ್ಲಿ ಮಲ್ಟಿ ವಿಂಡೋ ಎಂಬ ಈ ವೈಶಿಷ್ಟ್ಯವಿದೆ. ಅಂದರೆ ಸ್ಕ್ರೀನ್ ತೆರೆದು, ಒಂದು ವಿಂಡೋದಲ್ಲಿ ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ, ಎಕ್ಸ್ ಮುಂತಾದ ಸೋಷಿಯಲ್ ಮೀಡಿಯಾ ಅಥವಾ ಬ್ರೌಸರ್ ಆ್ಯಪ್ ತೆರೆದಿಟ್ಟರೆ, ಮತ್ತೊಂದರಲ್ಲಿ ನಮ್ಮ ಇಮೇಲ್ ಮತ್ತು ಅಲರಾಂ, ಟೈಮರ್ ಮುಂತಾದವನ್ನೂ ಇರಿಸಿಕೊಂಡು ಕೆಲಸ ಮಾಡಬಹುದು ಎಂಬುದು ಈ ದೊಡ್ಡ ಪರದೆಯ ಫೋನ್‌ನ ಮುಖ್ಯ ಅನುಕೂಲಗಳಲ್ಲೊಂದು. ನಮಗೆ ಬೇಕಾದ ವಿಂಡೋವನ್ನು ದೊಡ್ಡದಾಗಿ ಅಥವಾ ಸ್ಕ್ರೀನ್‌ನ ಮೊದಲ ಅರ್ಧಭಾಗದಲ್ಲಿಯೂ, ಮತ್ತೆರಡು ಆ್ಯಪ್‌ಗಳನ್ನು ಎರಡನೇ ಅರ್ಧದ ಮೇಲ್ಭಾಗ ಅಥವಾ ಕೆಳಭಾಗಗಳಲ್ಲಿಯೂ ತೆರೆದಿರಿಸಬಹುದು. ಒಂದರಲ್ಲಿ ಗೇಮ್ ಆಡುತ್ತಾ, ಮತ್ತೊಂದರಲ್ಲಿ ಎಸ್ಎಂಎಸ್ ಕಳುಹಿಸಲೂಬಹುದು. ಇದು ಮಲ್ಟಿ ವಿಂಡೋ ಸಾಮರ್ಥ್ಯ.
ಅದೇ ರೀತಿ ಎರಡು ಭಾಗದ ಸ್ಕ್ರೀನ್‌ನಲ್ಲಿ ಗೋಚರಿಸುವುದರಿಂದ ಸೆಟ್ಟಿಂಗ್ಸ್ ಆ್ಯಪ್, ಜಿಮೇಲ್ ಮುಂತಾದ ಆ್ಯಪ್‌ಗಳಲ್ಲಿ ಕೆಲಸ ಮಾಡುವುದು ಅತ್ಯಂತ ಸುಲಲಿತ. ಜೊತೆಗೆ ಎಕ್ಸೆಲ್ ಮುಂತಾದ ಶೀಟ್‌ಗಳಲ್ಲಿ ಕೆಲಸ ಮಾಡುವುದು ಸುಲಭ. ಐಪಿಎಕ್ಸ್8 ರೇಟಿಂಗ್ ಇರುವುದರಿಂದ, ಇದು ಜಲನಿರೋಧಕವಾಗಿದೆ.
ಕ್ಯಾಮೆರಾ
50 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಲೆನ್ಸ್, 10 ಮೆಗಾಪಿಕ್ಸೆಲ್‌ನ 3x ಟೆಲಿಫೋಟೊ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಅಲ್ಟ್ರಾವೈಡ್ ಲೆನ್ಸ್‌ಗಳ ಸಂಗಮವಾಗಿರುವ ತ್ರಿವಳಿ ಕ್ಯಾಮೆರಾ ಸೆಟಪ್‌ನಿಂದ ಚಿತ್ರಗಳು, ವಿಡಿಯೊಗಳು ಸ್ಪಷ್ಟವಾಗಿ ಸೆರೆಯಾಗುತ್ತವೆ. ಜೊತೆಗೆ, 4 ಮೆಗಾಪಿಕ್ಸೆಲ್ ಸಾಮರ್ಥ್ಯದ ಒಳಭಾಗದ (ತೆರೆದಾಗ ಕಾಣಿಸುವ ಸ್ಕ್ರೀನ್‌ನ ಮುಂಭಾಗದಲ್ಲಿ) ಹಾಗೂ 10 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಸ್ಕ್ರೀನ್‌ನಲ್ಲಿರುವ (ಮಡಚಿದಾಗ ಕಾಣಿಸುವ) ಲೆನ್ಸ್ ಸೆಲ್ಫಿ ಮತ್ತು ವಿಡಿಯೊ ಕರೆಗಳಿಗೆ ಬಳಸಬಹುದು. ಪ್ರಧಾನ ಕ್ಯಾಮೆರಾ ಸೆಟಪ್‌ನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ವೈಶಿಷ್ಟ್ಯವಿರುವುದರಿಂದ ಚಿತ್ರ ಅಥವಾ ವಿಡಿಯೊ ಶೇಕ್ ಆಗದೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಅನುಕೂಲಕರವಾಗಿದೆ.
ಬಣ್ಣಗಳ ಸ್ಪಷ್ಟತೆ, ಚಿತ್ರದ ನಿಖರತೆ ಸ್ಯಾಮ್‌ಸಂಗ್‌ನ ಪ್ರಮುಖ ವೈಶಿಷ್ಟ್ಯವಾಗಿದ್ದು, ಈ ಫೋನ್‌ನಲ್ಲಿಯೂ ಅದು ಬಿಂಬಿತವಾಗಿದೆ. ಪೋರ್ಟ್ರೇಟ್ ಮೋಡ್‌ನಲ್ಲಿ ಚಿತ್ರದ ಹಿನ್ನೆಲೆಯಂತೂ ಮಸುಕಾಗಿ, ಚಿತ್ರದ ಫೋಕಸ್ ಭಾಗವು ಎದ್ದು ಕಾಣುತ್ತದೆ. 8ಕೆ ಸಾಮರ್ಥ್ಯದ ವಿಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದ್ದು, ಸ್ಪಷ್ಟವಾದ ವಿಡಿಯೊಗಳು ದಾಖಲಾಗುತ್ತವೆ. 4ಕೆ ಮತ್ತು 1080 ಪಿಕ್ಸೆಲ್ ವಿಡಿಯೊಗಳು ಕೂಡ ಸ್ಪಷ್ಟವಾಗಿಯೂ, ಪ್ರಖರವಾಗಿಯೂ ಗಮನ ಸೆಳೆಯುತ್ತವೆ.
ಪೂರ್ಣ ಪರದೆಯಲ್ಲಿ ಹಾಗೂ ಮಲ್ಟಿಟಾಸ್ಕಿಂಗ್ ಮಾಡುತ್ತಲೇ, ಒಂದು ದಿನ ಪೂರ್ತಿ ಬ್ಯಾಟರಿ ಚಾರ್ಜ್ ಲಭ್ಯವಾಗಿರುವುದು ವಿಶೇಷ. 4,440 mAh ಬ್ಯಾಟರಿಯಿದ್ದರೂ, ಪ್ರೊಸೆಸರ್ ಹಾಗೂ ಕಾರ್ಯಾಚರಣಾ ವ್ಯವಸ್ಥೆಯ ನವೀನ ತಂತ್ರಜ್ಞಾನದ ಫಲವಾಗಿ, ಇದು ಸಾಮಾನ್ಯ 5000mAh ಬ್ಯಾಟರಿಯ ಸಾಧನಗಳಿಗಿಂತ ಚೆನ್ನಾಗಿದೆ.
ಬೆಲೆ: 256ಜಿಬಿ ಆವೃತ್ತಿಗೆ ₹1,54,999; 512ಜಿಬಿ ಸಾಧನಕ್ಕೆ ₹1,64,999 ಹಾಗೂ 1ಟಿಬಿ ಆವೃತ್ತಿಗೆ ₹1,84,999.
ಅತ್ಯುತ್ತಮ ತಂತ್ರಾಂಶ ಬೆಂಬಲವನ್ನು ಘೋಷಿಸಿರುವ ಸ್ಯಾಮ್‌ಸಂಗ್, 4 ಬಾರಿ ಕಾರ್ಯಾಚರಣಾ ವ್ಯವಸ್ಥೆಯ ಅಪ್‌ಗ್ರೇಡ್ ನೀಡುವುದಾಗಿ ಹೇಳಿದೆ.
ಪ್ರೀಮಿಯಂ ಫೋನ್ ಆಗಿದ್ದರೂ, ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಒಂದು ರೀತಿಯಲ್ಲಿ ಮಿನಿ ಕಂಪ್ಯೂಟರ್‌ನಂತೆ ಕೆಲಸ ಮಾಡಬಲ್ಲ, ವಿಡಿಯೊ ವೀಕ್ಷಣೆ, ಮಲ್ಟಿಟಾಸ್ಕಿಂಗ್, ಉತ್ತಮ ಫೋಟೊಗ್ರಫಿ, ಒಳ್ಳೆಯ ಬ್ಯಾಟರಿ, ಪ್ರೀಮಿಯಂ ಗುಣಮಟ್ಟ, ಅತ್ಯಾಧುನಿಕ ವೈಶಿಷ್ಟ್ಯಗಳು - ಇವುಗಳನ್ನು ನಿರೀಕ್ಷಿಸುವವರಿಗೆ ಸ್ಯಾಮ್‌ಸಂಗ್ ಝಡ್ ಫೋಲ್ಡ್ 5 ಸಾಧನ ಇಷ್ಟವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.