ADVERTISEMENT

ಉತ್ತಮ ಧ್ವನಿ, ಸಂಗೀತ ಆಸ್ವಾದನೆಗೆ ಥಾಮ್ಸನ್ ಆಲ್ಫಾಬೀಟ್-25 ಸೌಂಡ್ ಬಾರ್

ಅವಿನಾಶ್ ಬಿ.
Published 23 ಅಕ್ಟೋಬರ್ 2024, 6:17 IST
Last Updated 23 ಅಕ್ಟೋಬರ್ 2024, 6:17 IST
<div class="paragraphs"><p>ಥಾಮ್ಸನ್ ಆಲ್ಫಾಬೀಟ್ 25 ಪೋರ್ಟೆಬಲ್ ಸೌಂಡ್ ಬಾರ್</p></div>

ಥಾಮ್ಸನ್ ಆಲ್ಫಾಬೀಟ್ 25 ಪೋರ್ಟೆಬಲ್ ಸೌಂಡ್ ಬಾರ್

   

130 ವರ್ಷದ ಇತಿಹಾಸವಿರುವ ಫ್ರೆಂಚ್ ಗೃಹೋಪಯೋಗಿ ಉತ್ಪನ್ನಗಳ ಬ್ರ್ಯಾಂಡ್ ಆಗಿರುವ ಥಾಮ್ಸನ್ ಇತ್ತೀಚೆಗೆ ಸೌಂಡ್‌ಬಾರ್‌ಗಳ ಮೂಲಕ ಭಾರತೀಯ ಆಡಿಯೊ ಮಾರುಕಟ್ಟೆಗೆ ಪ್ರವೇಶಿಸಿದೆ. 'ಮೇಕ್ ಇನ್ ಇಂಡಿಯಾ' ಧ್ಯೇಯದೊಂದಿಗೆ ಉತ್ತರ ಪ್ರದೇಶದ ನೋಯಿಡಾದಲ್ಲಿ ತಯಾರಿಕಾ ಘಟಕ ಹೊಂದಿರುವ ಥಾಮ್ಸನ್ ಈಗಾಗಲೇ ಟಿವಿ, ವಾಷಿಂಗ್ ಮೆಷಿನ್‌ಗಳ ಮೂಲಕ ಭಾರತೀಯ ಗ್ರಾಹಕರ ಗಮನ ಸೆಳೆದಿದೆ. ಹೊಸ ಸೇರ್ಪಡೆ ಆಲ್ಫಾಬೀಟ್ 25 ಹಾಗೂ ಆಲ್ಫಾಬೀಟ್ 60 ಹೆಸರಿನ ಎರಡು ಸೌಂಡ್‌ಬಾರ್‌ಗಳು. ಇದರಲ್ಲಿ ಆಲ್ಫಾಬೀಟ್ 25 ಹೆಸರಿನ, ಚಿಕ್ಕದಾದ ಮತ್ತು ಆಕರ್ಷಕವಾದ ಪೋರ್ಟೆಬಲ್ ಸೌಂಡ್‌ಬಾರ್ ಅನ್ನು ಪ್ರಜಾವಾಣಿ ರಿವ್ಯೂ ನಡೆಸಿದ್ದು, ಕಂಡುಬಂದ ಪ್ರಮುಖ ಅಂಶಗಳು ಹೀಗಿವೆ.

ವಿನ್ಯಾಸ

ADVERTISEMENT

ಸುಮಾರು 43 ಸೆ.ಮೀ. ಉದ್ದ, ಸುಮಾರು 8 ಸೆ.ಮೀ. ಎತ್ತರವಿರುವ ಈ ಸೌಂಡ್ ಬಾರ್ ನೋಡಲು ಆಕರ್ಷಕವಾಗಿದ್ದು, ಎಲ್ಲಿ ಬೇಕಾದರಲ್ಲಿಗೆ ಒಯ್ಯಲು ಸುಲಭವಾಗಿದೆ. ಟಿವಿ, ಮೊಬೈಲ್, ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ಗೆ ಇದನ್ನು ಬ್ಲೂಟೂತ್ (ಅತ್ಯಾಧುನಿಕ v5.3 ಬೆಂಬಲ) ಮೂಲಕ ಸಂಪರ್ಕಿಸಿ, ಸರೌಂಡ್ ಸೌಂಡ್‌ನಲ್ಲಿ ಧ್ವನಿಯನ್ನು ಆನಂದಿಸಬಹುದು. ಇದರ ಜೊತೆಗೆ ಆರ್‌ಜಿಬಿ ಬಣ್ಣಗಳ ಲೈಟಿಂಗ್ ಇದಕ್ಕೆ ವಿಶೇಷ ಮೆರುಗು ನೀಡುತ್ತದೆ. ಬಾಕ್ಸ್‌ನಲ್ಲಿ ಸೌಂಡ್‌ಬಾರ್ ಜೊತೆಗೆ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್, ಆಡಿಯೊ ಕೇಬಲ್, ಬಳಕೆದಾರರ ಕಿರುಪುಸ್ತಿಕೆ ಮತ್ತು ವಾರಂಟಿ ಕಾರ್ಡ್ ನೀಡಲಾಗಿದೆ.

ಕಪ್ಪು ಬಣ್ಣದ ಈ ಸೌಂಡ್‌ಬಾರ್‌ನ ಹಿಂಭಾಗದಲ್ಲಿ 3.5 ಹೆಡ್‌ಫೋನ್ ಜ್ಯಾಕ್ ಕೂಡ ಇದೆ. ಅದೇ ರೀತಿ, ಯುಎಸ್‌ಬಿ ಸಾಧನ ಅಳವಡಿಸುವ ಪೋರ್ಟ್, ಎಯುಎಕ್ಸ್ ಪೋರ್ಟ್, ಒಂದು ಆನ್/ಆಫ್ ಸ್ವಿಚ್ ಹಾಗೂ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದೆ. ಚಾರ್ಜಿಂಗ್ ಸೂಚಿಸುವ ಇಂಡಿಕೇಟರ್ ದೀಪ ಇದೆ. ಬ್ಯಾಟರಿ ಕಡಿಮೆ ಇರುವಾಗ ಇದು ಕೆಂಪು ಬಣ್ಣದಲ್ಲಿರುತ್ತದೆ, ಚಾರ್ಜಿಂಗ್ ಪೂರ್ಣಗೊಂಡಾಗ ಹಸಿರಿಗೆ ಬದಲಾಗುತ್ತದೆ.

ಈ ಧ್ವನಿವರ್ಧಕದ ಮೇಲ್ಭಾಗದಲ್ಲಿ ಐದು ಬಟನ್‌ಗಳಿವೆ. ಪ್ರಮುಖವಾಗಿ ಇವುಗಳ ಬಳಕೆ ಪ್ಲೇ/ಪಾಸ್, ವಾಲ್ಯೂಮ್ ಹೆಚ್ಚು, ವಾಲ್ಯೂಮ್ ಕಡಿಮೆ, ಮೋಡ್ ಬಟನ್ ಹಾಗೂ ಎಲ್ಇಡಿ ಬೆಳಕನ್ನು ಆನ್/ಆಫ್ ಮಾಡುವ ಬಟನ್‌ಗಳು. ವಾಲ್ಯೂಮ್ ಬಟನ್‌ಗಳನ್ನು ಸ್ವಲ್ಪ ದೀರ್ಘ ಕಾಲ ಒತ್ತಿಹಿಡಿದರೆ ಹಿಂದಿನ/ಮುಂದಿನ ಹಾಡು ಪ್ಲೇ ಆಗುತ್ತದೆ.

ಶೂನ್ಯದಿಂದ ಪೂರ್ಣ ಚಾರ್ಜಿಂಗಿಗೆ ಸುಮಾರು 4 ಗಂಟೆ ಬೇಕಾಗುತ್ತದೆ. 2000mAh ಬ್ಯಾಟರಿ ಸಾಮರ್ಥ್ಯದಲ್ಲಿ, ಸಾಮಾನ್ಯ ವಾಲ್ಯೂಮ್‌ನಲ್ಲಿ ಹಾಡುಗಳನ್ನು ಕೇಳುವುದಾದರೆ ಸುಮಾರು 10 ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರಬಹುದಾಗಿದೆ.

ಹಾಡು ಪ್ಲೇ ಆಗುವಾಗ ಗಮನ ಸೆಳೆಯುವುದು ಎಲ್‌ಇಡಿ ದೀಪಗಳು. ಸೌಂಡ್‌ಬಾರ್‌ನ ಎರಡೂ ಪಾರ್ಶ್ವಗಳಲ್ಲಿ ಬೆಳ್ಳಿ ಬೆಳಕಿನ ದೀಪಗಳ ರೇಖೆಗಳಿದ್ದರೆ, ಮುಂಭಾಗದಲ್ಲಿರುವ ಫ್ಯಾಂಟಮ್ ದೀಪಗಳು ಹಾಡಿನ ಬೀಟ್ಸ್‌ಗೆ ತಕ್ಕಂತೆ ಕುಣಿಯುತ್ತವೆ. ಎಲ್‌ಇಡಿ ಬೆಳಕು ನಿಯಂತ್ರಿಸುವ ಬಟನ್‌ನಲ್ಲಿ ಆರು ಮೋಡ್‌ಗಳಿವೆ. ಎಂದರೆ ಒಂದು ಬಾರಿ, ಎರಡು, ಮೂರು, ನಾಲ್ಕು, ಐದು ಬಾರಿ ಮತ್ತು ಆರು ಬಾರಿ ಪ್ರೆಸ್ ಮಾಡುತ್ತಿರುವಾಗ ಅನುಕ್ರಮವಾಗಿ ಬಣ್ಣಗಳು ಬದಲಾಗುತ್ತಾ ಹೋಗುತ್ತವೆ. ಕೊನೆಯದು ಎಲ್‌ಇಡಿ ದೀಪವನ್ನು ಆಫ್ ಮಾಡುವುದಕ್ಕಾಗಿ.

ಕಾರ್ಯಾಚರಣೆ ಹೇಗಿದೆ?

ಮನೆಯೊಳಗೆ ಸಂಗೀತವನ್ನು ಆನಂದಿಸಲು ಅತ್ಯುತ್ತಮ ಸೌಂಡ್‌ಬಾರ್ ಇದು. ಹೆಚ್ಚು ಜಾಗದ ಅಗತ್ಯವೂ ಇಲ್ಲ. 25 ವ್ಯಾಟ್ಸ್ ಔಟ್‌ಪುಟ್ ಮೂಲಕ ಬೇಸ್ ಧ್ವನಿ ಮತ್ತು ಶಾರ್ಪ್ ಧ್ವನಿ - ಎರಡು ಕೂಡ ಅತ್ಯುತ್ತಮವಾಗಿ ಮೂಡಿಬರುತ್ತವೆ. ಸ್ಟೀರಿಯೊ ಧ್ವನಿಯ ಗುಣಮಟ್ಟ ಚೆನ್ನಾಗಿದೆ. ತೀರಾ ಹಗುರವೂ ಇದ್ದು, ಜೇಬಿಗೂ ಭಾರವಾಗದ ಬೆಲೆಯಲ್ಲಿ ಇದು ದೊರೆಯುತ್ತಿದೆ. ಈಗಾಗಲೇ ಗ್ರಾಹಕರ ವಿಶ್ವಾಸ ಗಳಿಸಿರುವ ಥಾಮ್ಸನ್‌ನಂತಹಾ ಬ್ರ್ಯಾಂಡ್‌ನಿಂದ ಬಂದಿರುವ ಉತ್ಪನ್ನ ಹಣಕ್ಕೆ ತಕ್ಕ ಮೌಲ್ಯ ಎನ್ನಲಡ್ಡಿಯಿಲ್ಲ. ಇದರ ಈಗಿನ ಮಾರುಕಟ್ಟೆ ಬೆಲೆ ₹1,499.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.