ಮತದಾನದ ವಿಷಯ ಬಂದಾಗ ಮತ್ತೆ ಮತ್ತೆ ಕೇಳಿಬರುವುದು ‘ಇವಿಎಂ’ ಎಂಬ ವಿದ್ಯುನ್ಮಾನ ಮತಯಂತ್ರದ ವಿಚಾರ. ಈ ಯಂತ್ರ ಹೇಗೆ ತಯಾರಾಯಿತು, ಯಾಕೆ ತಯಾರಾಯಿತು ಎನ್ನುವುದನ್ನು ಒಂದಿಷ್ಟು ತಿಳಿಯೋಣ.
ಒಂದು ಅಂದಾಜಿನ ಪ್ರಕಾರ, 2014ರಲ್ಲಿ ಲೋಕಸಭಾ ಚುನಾವಣೆಗೆ ಮೊದಲಿದ್ದ ಓಟಿನ ಚೀಟಿಯ ಪದ್ದತಿಯನ್ನು ಬಳಸಿದ್ದರೆ, ಆಗ ಇದ್ದ 930,000 ಮತಗಟ್ಟೆಗಳಿಗೆ ಸುಮಾರು 800 ಟನ್ ಕಾಗದ, 400,000 ಶೀಶೆಗಳಷ್ಟು ಶಾಯಿ ಬೇಕಾಗುತ್ತಿತ್ತಂತೆ. ಇಷ್ಟಲ್ಲದೆ ಓಟಿನ ಚೀಟಿಗಳನ್ನು ಸಂರಕ್ಷಿಸಿ ಇಡಲಿಕ್ಕೆ ಸುಮಾರು ಇಪ್ಪತ್ತೈದು ಲಕ್ಷ ಭದ್ರಪೆಟ್ಟಿಗೆಗಳು ಬೇಕಾಗುತ್ತಿದ್ದವಂತೆ. ಯಂತ್ರವನ್ನು ಬಳಸಿದರೆ ಮುದ್ರಣ, ಸಾರಿಗೆ, ಸಂಗ್ರಹಣೆ ಮತ್ತು ವಿತರಣೆಯ ವೆಚ್ಚ – ಎಲ್ಲವೂ ಕಡಿಮೆಯಾಗುವುದರಿಂದ, ಹಿಂದಿನ ವಿಧಾನಕ್ಕಿಂತ ವಿದ್ಯುನ್ಮಾನ ಮತಯಂತ್ರವು ಲಾಭದಾಯಕ ಎಂಬುದು ಒಂದು ಮುಖ್ಯವಾದ ಲೆಕ್ಕಾಚಾರ. ಮತದಾನದ ವೇಗವು ಇವಿಎಂಗಳ ಬಳಕೆಯಿಂದ ಹೆಚ್ಚಾಗುತ್ತದೆ ಎಂಬುದೂ ಕೂಡ ಒಂದು ಲೆಕ್ಕಾಚಾರ.
ಆದರೆ ಇಂಥ ಯಂತ್ರಗಳ ಯೋಜನೆ ಹೊಸದೇನೂ ಅಲ್ಲ. 1977ರಲ್ಲೇ ಚುನಾವಣಾ ಆಯೋಗವು ಈ ಯೋಜನೆಯನ್ನು ಹಾಕಿ, ಹೈದರಾಬಾದ್‌ನ ‘ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (ECIL) ಎಂಬ ಸಂಸ್ಥೆಯ ಹತ್ತಿರ ಇಂಥ ಯಂತ್ರದ ಪ್ರಯೋಗ ಮಾದರಿಯನ್ನು ತಯಾರಿಸಲಿಕ್ಕೆ ಹೇಳಿತು. ಇಲ್ಲಿನ ಒಟ್ಟು ಜನಸಂಖ್ಯೆ, ಅನಕ್ಷರತೆ, ತಂತ್ರಜ್ಞಾನದ ಪರಿಚಯದ ಕೊರತೆ, ಇಲ್ಲಿನ ಪ್ರಾಕೃತಿಕ ವೈಚಿತ್ರ್ಯಗಳು – ಇವನ್ನೆಲ್ಲವನ್ನೂ ತಲೆಯಲ್ಲಿಟ್ಟುಕೊಂಡು ನೋಡಿದಾಗ, ವಿದೇಶಗಳಲ್ಲಿ ಇರುವಂಥ ದುಬಾರಿಯಾದ ಯಂತ್ರಗಳು ಇಲ್ಲಿಗೆ ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು.
ಇನ್ನು ನಮ್ಮಲ್ಲಿ ಎಷ್ಟೋ ಕಡೆಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇದಕ್ಕೇನು ಮಾಡುವುದು? ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲೂ ಇವಿಎಂಗಳನ್ನು ಬಳಸಬೇಕು ಎಂದಾದರೆ ಅದು ಬ್ಯಾಟರಿಯನ್ನು ಬಳಸಬೇಕು, ಹೀಗಾಗಿ 6 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುವಂತೆ ಅದನ್ನು ರೂಪಿಸಲಾಯಿತು. ಇವಿಎಂಗಳನ್ನು ಸಂಗ್ರಹಿಸುವ ಕೊಠಡಿಯನ್ನು ಹವಾನಿಯಂತ್ರಣ ಮಾಡುವ ಅಗತ್ಯವಿಲ್ಲದಂತೆಯೂ ಅದನ್ನು ವಿನ್ಯಾಸ ಮಾಡಲಾಗಿದೆ. ನಮ್ಮ ದೇಶದಲ್ಲಿ ಉತ್ತರದಲ್ಲಿ ಹಿಮಾಲಯದ ಚಳಿಯೂ ಇದೆ, ರಾಜಸ್ಥಾನದ ಮರುಭೂಮಿಗಳ ಬಿಸಿಯೂ ನಮ್ಮಲಿದೆ, ದಟ್ಟವಾದ ಕಾಡುಗಳೂ ಇವೆ, ಎತ್ತರದ ಗುಡ್ಡಗಳೂ ಇವೆ. ಇಂಥಲ್ಲೆಲ್ಲ ನಮ್ಮ ಯಂತ್ರ ಕೆಟ್ಟು ಹೋಗದಂತೆ ಅದನ್ನು ರೂಪಿಸಬೇಕು. ಕ್ರಿಮಿಕೀಟಗಳು, ಇಲಿಗಳು , ಫಂಗಸ್ ಇವುಗಳ ಕಾಟವನ್ನು ತಾಳಿಕೊಳ್ಳುವ ಶಕ್ತಿಯೂ ಯಂತ್ರಕ್ಕಿರಬೇಕು.
ಇನ್ನು ಇದನ್ನು ತಯಾರಿಸಿದ ಕಾಲದಲ್ಲಿ ನಮ್ಮ ಜನರಿಗೆ ತಂತ್ರಜ್ಞಾನದ ಪರಿಚಯ ಅಷ್ಟಾಗಿ ಇರಲಿಲ್ಲ. ತಂತ್ರಜ್ಞಾನದ ಪರಿಚಯ ಇಲ್ಲದವರೂ ಬಳಸಬೇಕಾದರೆ ಅದರ ನಿರ್ವಹಣೆ, ಓಟು ಹಾಕುವ ವಿಧಾನ ಎಲ್ಲ ಸರಳವಾಗಿರಬೇಕು, ಇಂಥ ಸರಳ ವಿನ್ಯಾಸಕ್ಕೂ ಆದ್ಯತೆ ಕೊಡಲಾಯಿತು.
ಮತಗಟ್ಟೆಗಳಿಗೆ ಕೆಲವು ಕಡೆ ಆನೆಗಳಲ್ಲಿ, ಒಂಟೆಗಳಲ್ಲಿ, ದೋಣಿಗಳಲ್ಲಿ ಅಧಿಕಾರಿಗಳು ಸಾಗಬೇಕಾಗುವ ಪರಿಸ್ಥಿತಿಯೂ ಇದೆ. ಕಾಡುಗಳಲ್ಲಿ ಕಿಲೋಮೀಟರುಗಳ ದೂರವನ್ನು ಕ್ರಮಿಸಿ ಮತಗಟ್ಟೆಯನ್ನು ತಲುಪಬೇಕಾದ ಸಂದರ್ಭಗಳೂ ಉಂಟು. ಅಧಿಕಾರಿಗಳು ಆರು ದಿನಗಳ ಕಾಲ ನಡೆದು ಮತಗಟ್ಟೆಗೆ ಮುಟ್ಟಬೇಕಾದ ಪ್ರದೇಶಗಳೂ ನಮ್ಮ ದೇಶದಲ್ಲಿವೆ. ಇಂಥಲ್ಲೆಲ್ಲಿಯೂ ತೊಂದರೆಯಾಗದಂತೆ ಮತಯಂತ್ರ ರೂಪುಗೊಳ್ಳಬೇಕು. ಹೀಗಾಗಿ ಅದರ ಭಾರವೂ ಹೆಚ್ಚಿರಬಾರದು, ಗಾತ್ರವೂ ದೊಡ್ಡದಿರಬಾರದು. ಈ ನಿರ್ಬಂಧಗಳನ್ನು ಮರೆತು ತಂತ್ರಜ್ಞಾನ ಸಿದ್ಧವಾಗುವಂತಿಲ್ಲ. ಬೆಂಗಳೂರಿನ ಹೈಟೆಕ್ ಮತಗಟ್ಟೆಯಲ್ಲಿ ನಡೆದದ್ದು ಯಾವುದೋ ಉತ್ತರಪ್ರದೇಶದ ಕಾಡಿನಲ್ಲಿಯೂ ಕೆಲಸ ಮಾಡಬೇಕು. ತಂತ್ರಜ್ಞಾನದ ವಿನ್ಯಾಸ ಮಾಡುವವರಿಗೆ ಎದುರಾದ ಇಂಥ ಸವಾಲುಗಳು ಒಂದೇ ಎರಡೇ?
1979ರಲ್ಲೇ ಇಂಥ ಮೊದಲ ಪ್ರಯೋಗ ಮಾದರಿಯನ್ನು ಸಿದ್ಧಗೊಳಿಸಲಾಯಿತು ಕೂಡ. ಅನಂತರ ಬೆಂಗಳೂರಿನ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (BEL) ಕೂಡ ಈ ಯಂತ್ರದ ತಯಾರಿಯಲ್ಲಿ ಭಾಗಿಯಾಯಿತು. 1982ರಲ್ಲಿ ಕೇರಳದಲ್ಲಿ ಮತ್ತು 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಇಂಥ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿ ನೋಡಲಾಯಿತು. ಅದಾದ ಮೇಲೆ ಗೋವಾದಲ್ಲಿ ಸಾಕ್ಷರತೆ ಹೆಚ್ಚಿದ್ದದ್ದರಿಂದ ಮತ್ತು ಅಲ್ಲಿ ಅಂತ ಗಲಾಟೆಯೇನೂ ಇಲ್ಲದ್ದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗ ಮಾಡಿ ನೋಡಲಾಯಿತು. ಒಟ್ಟಿನಲ್ಲಿ ಸರಳವಾಗಿ, ದೊಡ್ಡ ಖರ್ಚು ವೆಚ್ಚಗಳು ಇಲ್ಲದೆ ತಯಾರಿಸಿದ್ದರಿಂದ ಭೂತಾನ್ ದೇಶವು ಕೂಡ ನಮ್ಮ ಇವಿಎಂ ಅನ್ನು ಬಳಸುತ್ತಿದೆ.
ಈ ಮತಯಂತ್ರವು ಎರಡು ಘಟಕಗಳನ್ನು ಒಳಗೊಂಡಿರುತ್ತದೆ; ಒಂದು ನಿಯಂತ್ರಣ ಘಟಕ (ಕಂಟ್ರೋಲಿಂಗ್ ಯೂನಿಟ್) ಮತ್ತು ಒಂದು ‘ಬ್ಯಾಲಟಿಂಗ್ ಘಟಕ’. ಕಂಟ್ರೋಲಿಂಗ್ ಯೂನಿಟ್ ಉಸ್ತುವಾರಿ ಮತಗಟ್ಟೆ ಅಧಿಕಾರಿಯ ಹತ್ತಿರ ಇರುತ್ತದೆ. ಇದು ಗಣಕಯಂತ್ರಗಳ ಸಿಪಿಯು ಇದ್ದಂತೆ ಎನ್ನಬಹುದು. ಮತದಾರ ಬಳಸುವುದು ಬ್ಯಾಲಟಿಂಗ್ ಘಟಕವನ್ನು. ನಮ್ಮ ಮತಯಂತ್ರದಲ್ಲಿ ಇರುವುದು ಕೆಲವು ಸಾವಿರ ಸಾಲುಗಳ ಸಾಫ್ಟ್ವೆರ್ ಪ್ರೋಗ್ರಾಮ್ ಮಾತ್ರ. ವಿದೇಶಗಳ ಯಂತ್ರಗಳಿಗೆ ಹೋಲಿಸಿದರೆ ಇದರ ಸಂಕೀರ್ಣತೆ ಬಹಳ ಕಡಮೆ ಎನ್ನಬೇಕು. ಎಲೆಕ್ಟ್ರಾನಿಕ್ಸಿನ ಭಾಷೆಯಲ್ಲಿ ಹೇಳುವುದಾದರೆ, ಮತಯಂತ್ರವು ಒಂದು ತರದ embedded system ಎನ್ನಬಹುದು. ಇದಕ್ಕೆ ಬೇಕಾಗುವ ಚಿಪ್‌ಗಳು ಅಮೆರಿಕಾ ಮತ್ತು ಜಪಾನಿನ ಕಂಪೆನಿಗಳಲ್ಲಿ ತಯಾರಾಗುತ್ತವೆ. /// ಮತಗಟ್ಟೆ ವಶಪಡಿಸಿಕೊಳ್ಳುವುದನ್ನು ಇದು ಪೂರ್ತಿಯಾಗಿ ತಡೆಯಲಾರದಾದರೂ, ನಿಮಿಷಕ್ಕೆ 5 ಓಟಿಗಿಂತ ಹೆಚ್ಚು ಇದರಲ್ಲಿ ಹಾಕಲಾಗದು, ಅದು ಗಂಟೆಗೆ 300ಕ್ಕಿಂತ ಹೆಚ್ಚು ಮತಗಳನ್ನು ಸ್ವೀಕರಿಸಲಾಗದು, ಹೀಗೆ ಮತಗಟ್ಟೆ ವಶಪಡಿಸಿಕೊಂಡದ್ದರ ಪರಿಣಾಮವನ್ನು ಸ್ವಲ್ಪ ತಗ್ಗಿಸುವಂತೆ ತಂತ್ರಜ್ಞಾವನ್ನು ಕಲ್ಪಿಸಲಾಗಿದೆ.///
ಹೀಗೆ, ಈ ಸಣ್ಣ ಗಾತ್ರದ ಯಂತ್ರದ ವಿನ್ಯಾಸದ ಹಿಂದೆ ಎಷ್ಟೆಲ್ಲಾ ವಿಚಾರಗಳಿವೆ ಎಂದು ಯೋಚಿಸಿದರೆ ಅಚ್ಚರಿಯೇ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.