ಟೊರಾಂಟೊ: ನೀರಿನಿಂದ ಮಾಲಿನ್ಯ ವಸ್ತುಗಳನ್ನು ಮಾತ್ರ ಹೀರುವ ಮೂಲಕ ನೀರು ಶುದ್ಧೀಕರಿಸುವ ಸ್ಪಾಂಜ್ ಬಗ್ಗೆ ಭಾರತೀಯ ಸಂಜಾತೆ, ಟೊರಾಂಟೊ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಸಂಶೋಧನೆ ನಡೆಸಿದ್ದಾರೆ.
ಹೈದರಾಬಾದ್ ಮೂಲದ ಪಾವನಿ ಚೆರುಕುಲ್ಲಿ ಎಂಬ ಯುವ ಸಂಶೋಧಕಿ ಸ್ಪಾಂಜ್ ಮೂಲಕ ಜಲ ಶುದ್ಧೀಕರಿಸುವ ತಂತ್ರಜ್ಞಾನದ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ವಿಶ್ವ ವಿದ್ಯಾನಿಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯವೆಸಗುತ್ತಿರುವ ಪಾವನಿ, ತಾನು ಮಲಿನ ನೀರಿನಲ್ಲಿರುವ ತೈಲಾಂಶವನ್ನು ಬೇರ್ಪಡಿಸಿ ನೀರು ಶುದ್ಧೀಕರಿಸುವ ಹೊಸ ಸ್ಪಾಂಜ್‍ವೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಹೇಳಿದ್ದಾರೆ.
ನೀರಿನಲ್ಲಿ ಅಧಿಕ ಪ್ರಮಾಣದಲ್ಲಿ ಜೈವಿಕ ಪದಾರ್ಥಗಳಿರುತ್ತವೆ. ಭಾರತದ ಪ್ರಮುಖ ನದಿಗಳಾದ ಗಂಗಾ,ಯಮುನಾ ಮತ್ತು ಮುಸಿ ನದಿ ಜೈವಿಕ ತ್ಯಾಜ್ಯಗಳಿಂದಾಗಿ ಮಲಿನಗೊಂಡಿದೆ. ಹಾಗಾಗಿ ಭಾರತೀಯ ನದಿಗಳನ್ನು ಶುದ್ಧೀಕರಿಸುವ ದೃಷ್ಟಿಯಿಂದ ನಾವು ಈ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ ಎಂದಿದ್ದಾರೆ ಪಾವನಿ.
ಪಾವನಿ ಅವರ ಪ್ರಾಜೆಕ್ಟ್ ತುಂಬಾ ಸುಲಭ ವಿಧಾನದ್ದಾಗಿದೆ. ಆಧುನಿಕ ತಂತ್ರಜ್ಞಾನದ ಈ ಸ್ಪಾಂಜ್ ಫಿಲ್ಟರ್‍ನಂತೆ ಕಾರ್ಯವೆಸಗುತ್ತದೆ. ಸ್ಪಾಂಜ್ ಮೂಲಕ ನೀರು ಹಾದು ಹೋಗುವಾಗ ತೈಲಾಂಶವಿರುವ ಹನಿಗಳು ಸ್ಪಾಂಜ್‍ನಲ್ಲಿ ಉಳಿದು ನೀರು ಮಾತ್ರ ಹೊರಗೆ ಬರುತ್ತದೆ. ಪಾಲಿಯುರೇಥೇನ್ ಸ್ಪಾಂಜ್ ಇಲ್ಲಿ ಬಳಕೆಯಾಗಿದ್ದು ಇದು ನೀರಿನಲ್ಲಿರುವ ಮಾಲಿನ್ಯವನ್ನು ಬೇರ್ಪಡಿಸಲು ಸಹಾಯ ಮಾಡುತ್ತದೆ. ಪಾವನಿ ಅವರ ಪರಿಕಲ್ಪನೆ ಲ್ಯಾಬ್‍ನಲ್ಲಿ ಮತ್ತಷ್ಟು ಪರಿಷ್ಕರಣೆ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.