ADVERTISEMENT

‘ಫೆದಾ‘ ಕುವೈತ್‌ನ ಮೊದಲ AI ಸುದ್ದಿ ನಿರೂಪಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2023, 13:50 IST
Last Updated 12 ಏಪ್ರಿಲ್ 2023, 13:50 IST
ಚಿತ್ರ ಕೃಪೆ : (Twitter/@KuwaitNews)
ಚಿತ್ರ ಕೃಪೆ : (Twitter/@KuwaitNews)   

AI ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಹೊಸ ಪ್ರಯೋಗಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಈ ನಡುವೆಯೇ ಕುವೈತ್‌ನ ಸುದ್ದಿ ಸಂಸ್ಥೆಯೊಂದು ಎಐ (ಆರ್ಟಿಫಿಶಿಯಲ್‌ ಇಂಟಿಲಿಜನ್ಸ್‌) ನಿರ್ಮಿತ ‘ಸುದ್ದಿ ನಿರೂಪಕಿ‘ಯನ್ನು ಪರಿಚಯಿಸಿ ಅಚ್ಚರಿ ಮೂಡಿಸಿದೆ. ‌ಈ ಮೂಲಕ ಮಾಧ್ಯಮ ಲೋಕದ ನೈಜ ನಿರೂಪಕರಿಗೆ ಸವಾಲೊಡ್ಡಿದೆ.

2018ರಲ್ಲಿ ಚೀನಾದ ಕ್ಸಿನ್ಹುವಾ ಎಂಬ ಸುದ್ದಿ ಸಂಸ್ಥೆ ಮೊದಲ ಬಾರಿಗೆ ವರ್ಚುವಲ್‌ ಸುದ್ದಿ ನಿರೂಪಕನನ್ನು ಪರಿಚಯಿಸಿತ್ತು. ಚೀನಾದ ಎಐ ಸುದ್ದಿ ನಿರೂಪಕನಿಗಿಂತ ಕುವೈತ್‌ ಅಭಿವೃದ್ದಿಪಡಿಸಿರುವ ಎಐ ನ್ಯೂಸ್‌ ಪ್ರೆಸೆಂಟರ್‌ ‘ಫೆದಾ‘ ಜಗತ್ತಿನ ಗಮನ ಸೆಳೆದಿದೆ. ಕುವೈತ್‌ನ ಎಐ ಸುದ್ದಿ ನಿರೂಪಕಿ ಮನುಷ್ಯರ ಹಾಗೆ ನ್ಯೂಸ್ ಬುಲೆಟಿನ್‌ಗಳನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ.

ಏಪ್ರಿಲ್ 9ರಂದು ಕುವೈತ್ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿ ಮೊದಲ ‘ಎಐ ಸುದ್ದಿ ನಿರೂಪಕಿಯನ್ನು‘ ಜಗತ್ತಿಗೆ ಪರಿಚರಿಸಿದ್ದಾರೆ. ಕಪ್ಪು ಜಾಕೆಟ್‌, ಬಿಳಿ ಟೀ ಶರ್ಟ್‌ ಧರಿಸಿರುವ ಈ ವರ್ಚುಲ್ ನ್ಯೂಸ್ ಪ್ರೆಸೆಂಟರ್‌ ತನ್ನನ್ನು ‘ಫೆದಾ‘ ಎಂದು ಪರಿಚಯಿಸಿಕೊಂಡಿದ್ದಾಳೆ.

ADVERTISEMENT

‘ನಾನು ಫೆದಾ, ಕೃತಕ ಬುದ್ದಿಮತ್ತೆಯ ಸಹಾಯದಿಂದ ಕೆಲಸ ಮಾಡುವ ಕುವೈತ್‌ನ ಮೊದಲ ನಿರೂಪಕಿ. ಯಾವ ರೀತಿಯ ಸುದ್ದಿಗಳನ್ನು ನೀವು ಬಯಸುತ್ತೀರಿ? ನಿಮ್ಮ ಅಭಿಪ್ರಾಯಗಳನ್ನು ಕೇಳೋಣ‘ ಎಂದು ಅರೇಬಿಕ್‌ ಭಾಷೆಯಲ್ಲಿ ಹೇಳಿದ್ದಾಳೆ.

ಕುವೈತ್‌ ಸುದ್ದಿ ಸಂಸ್ಥೆಯ ಉಪ ಸಂಪಾದಕ-ಮುಖ್ಯಸ್ಥ ಅಬ್ದುಲ್ಲಾ ಬೋಫ್ಟೈನ್ ಈ ಹೊಸ ಸಂಶೋಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸ ವಿಧಾನಗಳ ಮೂಲಕ ಎಐ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು. ‘ಫೆಧಾ ಎಂಬುದು ಜನಪ್ರಿಯ ಹಳೆಯ ಕುವೈತ್ ಹೆಸರು. ಈ ಹೆಸರು ಬೆಳ್ಳಿ ಮತ್ತು ಲೋಹವನ್ನು ಸೂಚಿಸುತ್ತದೆ. ರೋಬೋಟ್‌ಗಳು ಬೆಳ್ಳಿ ಮತ್ತು ಲೋಹದ ಬಣ್ಣದಲ್ಲಿ ಇರಬೇಕೆಂದು ಮನುಷ್ಯರಾದ ನಾವು ಊಹಿಸಿದ್ದೇವೆ. ಆದ್ದರಿಂದ ಈ ಹೆಸರನ್ನು ನೀಡಿದ್ದೇವೆ" ಎಂದು ಅಬ್ದುಲ್ಲಾ ಬೋಫ್ಟೈನ್ ವಿವರಿಸಿದ್ದಾರೆ.

ಈ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನಗಳು ನೈಜ ಸುದ್ದಿ ನಿರೂಪಕರ ಸ್ಥಾನಗಳನ್ನು ಕಿತ್ತುಕೊಳ್ಳುವ ಸಾಧ್ಯತೆಯಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.