ತಲೆ ಮೇಲೆ ಸೇಬು ಬಿದ್ದ ತಕ್ಷಣ ಗುರುತ್ವಾಕರ್ಷಣೆ ನಿಯಮ ರಚನೆಯ ಜ್ಞಾನೋದಯ ನ್ಯೂಟನ್‌ಗೆ ಆಯಿತು. ಆದರೆ ಏನೋ ಕಂಡುಹಿಡಿಯಲು ಹೊರಟ ಬಹಳಷ್ಟು ವಿಜ್ಞಾನಿಗಳಿಗೆ ಇನ್ನೇನೋ ಸಿಕ್ಕ ಪರಿಣಾಮ ಆ ಆಕಸ್ಮಿಕ ಅನ್ವೇಷಣೆಯೇ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಉದಾಹರಣೆಗಳು ಬಹಳಷ್ಟು.
ಹೃದ್ರೋಗದ ಔಷಧ ಕಂಡುಹಿಡಿಯಲು ಹೋಗಿ ಪುರುಷತ್ವ ವೃದ್ಧಿಸುವ ವಯಾಗ್ರಾ ಶೋಧನೆಯಾಯಿತು, ಹಾಗೆಯೇ ಜೇನು ಗೂಡಿನ ಕುರಿತು ಸ್ಪೇನ್ ವಿಜ್ಞಾನಿಗಳು ಅಧ್ಯಯನ ನಡೆಸಲು ಅವುಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿಟ್ಟಾಗ, ಅದನ್ನೂ ತಿಂದು, ಜೇನು ಗೂಡಿನಲ್ಲಿದ್ದ ಮೇಣವನ್ನೂ ತಿನ್ನಲಾರಂಭಿಸಿದ ‘ಗೆಲ್ಲೇರಿಯಾ ಮೆಲ್ಲೋನೆಲ್ಲಾ’ ಎಂಬ ಪ್ಲಾಸ್ಟಿಕ್ ತಿನ್ನುವ ಜೀವಿಯ ಪತ್ತೆಯಾದವು.
ಹೀಗೆ... ವಿಜ್ಞಾನ ಲೋಕದಲ್ಲಿನ ಬಹಳಷ್ಟು ಆಕಸ್ಮಿಕಗಳು ಕೆಲವೊಮ್ಮೆ ವಿಜ್ಞಾನಿಗಳ ಜೀವವನ್ನೇ ಬಲಿ ಪಡೆದಿವೆ. ಇನ್ನೂ ಕೆಲವೊಮ್ಮೆ ಹೊಸ ಆವಿಷ್ಕಾರಗಳೊಂದಿಗೆ ಅವರ ಹೆಸರು ಶಾಶ್ವತವಾಗಿರುವಂತೆ ಮಾಡಿದೆ. ಅಂಥ ಕೆಲವು ಆಕಸ್ಮಿಕ ವೈಜ್ಞಾನಿಕ ಆವಿಷ್ಕಾರಗಳ ಪಟ್ಟಿ ಹೀಗಿವೆ.
ಕ್ವಿನೈನ್
ಕೋವಿಡ್‌ಗಾಗಿ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಕ್ಕಾಗಿ ಅಮೆರಿಕಾ, ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು ಕೋರಿದ್ದವು. ಆದರೆ ಮಲೇರಿಯಾ ಔಷಧವೂ ಆಕಸ್ಮಿಕವಾಗಿಯೇ ದೊರೆತದ್ದು. ನಿಸರ್ಗದತ್ತವಾಗಿ ಒಂದು ಪ್ರಬೇಧದ ಮರದ ತೊಗಟೆಯಲ್ಲಿ ಸಿಗುವ ಮಲೇರಿಯಾ ಔಷಧ ಈಗ ಪ್ರಯೋಗಾಲಯದಲ್ಲಿ ರಾಸಾಯನಿಕವಾಗಿ ಸಿದ್ಧವಾಗುತ್ತಿದೆ.
1600ರ ಸುಮಾರಿನಲ್ಲಿ ದಕ್ಷಿಣ ಅಮೇರಿಕಾದ ಸ್ಥಳೀಯ ಆಂಡೀನ್ ಜನಾಂಗದ ವ್ಯಕ್ತಿಯೊಬ್ಬ ಕಾಡಿನಲ್ಲಿ ಕಳೆದುಹೋಗಿದ್ದ. ಆತನಿಗೆ ಮಲೇರಿಯಾ ಇತ್ತು. ತೀವ್ರ ಬಳಲಿದ ಆತ ಕ್ವಿನೈನ್ ಪ್ರಬೇಧಕ್ಕೆ ಸೇರಿದ ಕ್ವಿನಾ–ಕ್ವಿನಾ ಮರ ಕೆಳಗೆ ನಿಂತಿದ್ದ ನೀರನ್ನು ಕುಡಿದ. ಕಹಿಯಾಗಿದ್ದ ಆ ನೀರು ಕುಡಿದು ಏನೋ ಕುಡಿದುಬಿಟ್ಟೆ ಎಂದು ಗಾಭರಿಯಾಗಿದ್ದ. ಆದರೆ ಆಗಿದ್ದೇ ಬೇರೆ. ಆತನಿಗಿದ್ದ ಜ್ವರ ಕಡಿಮೆಯಾಯಿತು. ಹೀಗಾಗಿ ಧೈರ್ಯದಿಂದ ಆತ ಮನೆ ದಾರಿಯನ್ನು ಹುಡುಕಿದ. ಸ್ಥಳೀಯರು ಈ ಕಥೆಯನ್ನು ದಾಖಲಿಸಿದ್ದಾರೆ. ಆದರೆ ಈ ಕ್ವಿನೈನ್ ಇಡೀ ಜಗತ್ತಿನ ಬಹುದೊಡ್ಡ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಿಸಿದೆ.
ಮೈಕ್ರೋವೇವ್
ರೇಥಿಯಾನ್ ಕಾರ್ಪೊರೇಷನ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪೆರ್ಸಿ ಸ್ಪೆನ್ಸರ್ ಎಂಬ ವಿಜ್ಞಾನಿ 1946ರಲ್ಲಿ ರೇಡಾರ್‌ಗೆ ಸಂಬಂಧಿಸಿದ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹೊಸ ವ್ಯಾಕ್ಯೂಮ್ ಕೊಳವೆಯನ್ನು ಪರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಜೇಬಿನಲ್ಲಿದ್ದ ಚಾಕೊಲೇಟ್ ತಮ್ಮ ಅರಿವೆಗೆ ಬರುವ ಮೊದಲೇ ಕರಗಿತ್ತು. ಇದನ್ನು ಅವರು ಎಂದೂ ನಿರೀಕ್ಷಿಸರಲಿಲ್ಲ.
ಕುತೂಹಲದಿಂದ ತಮ್ಮ ಅನ್ವೇಷಕ ಬುದ್ಧಿಯನ್ನು ಅತ್ತ ತಿರುಗಿಸಿದರು. ಈ ಟ್ಯೂಬ್‌ನಲ್ಲಿ ಮೊಟ್ಟೆ ಹಾಗೂ ಪಾಪ್‌ಕಾರ್ನ್ ಇಟ್ಟು ಪರೀಕ್ಷಿಸಿದರು. ಅಂತಿಮವಾಗಿ ಇದು ಮೈಕ್ರೋವೇವ್‌ನಿಂದ ಹೊರಹೊಮ್ಮುವ ಬಿಸಿಶಾಖದಿಂದಾಗಿ ಆಗುತ್ತಿರುವುದನ್ನು ಪತ್ತೆ ಮಾಡಿದರು. ತಕ್ಷಣ ಅದರ ಪೇಟೆಂಟ್ ಪಡೆದದರು. ಹೀಗೆ ಅಭಿವೃದ್ಧಿಪಡಿಸಿದ ಮೊದಲ ಮೈಕ್ರೋವೇವ್ ಅವನ್ 340 ಕೆ.ಜಿ. ತೂಕದ್ದು ಮತ್ತು 5.6ಅಡಿ ಎತ್ತರದ್ದಾಗಿತ್ತು ಎಂದರೆ ಆಶ್ಚರ್ಯವಾದರೂ ಸತ್ಯ.
ಕ್ಷ–ಕಿರಣ
ಜರ್ಮನಿಯವಿಲ್ಹೆಲ್ಮ್ ರೋಂಟ್ಜೆನ್ ಎಂಬಭೌತವಿಜ್ಞಾನಿ1985ರ ಸುಮಾರಿಗೆ ಕ್ಯಾಥೋಡ್ ರೇ ಟ್ಯೂಬ್ ಕುರಿತ ಅಧ್ಯಯನದಲ್ಲಿ ತೊಡಗಿದ್ದರು. ಈ ಕೊಳವೆಯನ್ನು ಬೇರೊಂದು ವಸ್ತುವಿನಿಂದ ಮುಚ್ಚಲಾಗಿತ್ತು. ಹೀಗಿದ್ದರೂ ಪಕ್ಕದಲ್ಲಿದ್ದ ಪ್ರತಿದೀಪಕ ಪರದೆ ಮಾತ್ರ ಹೊಳೆಯುತ್ತಿತ್ತು. ಕೊಠಡಿಯಲ್ಲಿ ಕತ್ತಲು ಆವರಿಸಿತ್ತು, ಕೊಳವೆ ಬೆಳಗುತ್ತಿತ್ತು. ಆದರೆ ಅದರಿಂದ ಹೊರಹೊಮ್ಮಿದ ಕಿರಣವು ಪರದೆಯನ್ನು ಬೆಳಗುತ್ತಿತ್ತು. ಈ ಬೆಳಕನ್ನು ಪತ್ತೆ ಮಾಡಿದ ರೋಂಟ್ಜೆನ್, ತನ್ನ ಕೈಗಳನ್ನು ಅಡ್ಡಹಿಡಿದು ಆ ಬೆಳಕನ್ನು ತಡೆಯುವ ಪ್ರಯತ್ನ ನಡೆಸಿದರು. ಆದರೆ ಅವರ ಕೈಗಳ ಮೂಳೆಗಳು ಪರದೆ ಮೇಲೆ ಮೂಡಿದ್ದು ಇವರಲ್ಲಿ ಅಚ್ಚರಿ ಮೂಡಿಸಿತು. ಫೋಟೊಗ್ರಫಿಕ್ ಹಾಳೆಯ ಮೇಲೆ ಇದನ್ನು ದಾಖಲಿಸಿದರು. ಮುಂದೆ ಅದು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಆವಿಷ್ಕಾರವೇ ಆಯಿತು.
ವೆಲ್ಕ್ರೋ
ಚೀಲದ ಹೊದಿಕೆ, ಚಪ್ಪಲಿಯ ಪಟ್ಟಿ ಗಟ್ಟಿಯಾಗಿ ಹಿಡಿದುಕೊಳ್ಳಲು ಬಳಸುವ ಪರ್‌ಪರ್ ಸದ್ದಿನ ವೆಲ್ಕ್ರೋ ಎಲ್ಲರಿಗೂ ತಿಳಿದಿರುವ ತಿಳಿದಿದೆ. 1941ರಲ್ಲಿ ಸ್ವಿಸ್ ಎಂಜಿನಿಯರ್ ಜಾರ್ಜ್ ಡಿ ಮೆಸ್ಟ್ರಲ್ ತನ್ನ ನಾಯಿಯೊಂದಿಗೆ ಹೀಗೇ ಸುತ್ತಾಡುವಾಗ ಬರ್ಡಾಕ್ ಎಂಬ ಗಿಡದ ಚುಂಗುಬೀಜಗಳು ಅವರ ಬಟ್ಟೆಗೆ ಮೆತ್ತಿದ್ದವು. ಅವು ಎಷ್ಟು ಗಟ್ಟಿಯಾಗಿ ಹಿಡಿದಿದ್ದವು ಎಂದರೆ, ಅವುಗಳನ್ನು ಬಿಡಿಸಲು ಜಾರ್ಜ್ ಪರದಾಡಿದರು. ಆ ಬೀಜಗಳ ತುದಿಯಲ್ಲಿರುವ ಸಣ್ಣ ಕೊಕ್ಕೆಯಿಂದ ಬಟ್ಟೆಯ ನೂಲಿಗೆ ಬಿಗಿಯಾಗಿ ಕಚ್ಚಿಕೊಂಡಿದ್ದನ್ನು ಗಮನಿಸಿದರು.
ಇದನ್ನು ತೆಗೆದುಹಾಕುವ ಬದಲಿಗೆ ಅವುಗಳು ಅಂಟಿದ್ದು ಹೇಗೆ ಎಂಬುದನ್ನು ಪತ್ತೆ ಮಾಡಿದರು. ಅದೇ ರೀತಿಯ ಪದಾರ್ಥವನ್ನು ಅಭಿವೃದ್ಧಿಪಡಿಸಲಾರಂಭಿಸಿದರು. ಅವರ ಅಂದಿನ ಆ ಆವಿಷ್ಕಾರವೇ ಇಂದು ವೆಲ್ಕ್ರೋ ಹೆಸರಿನಲ್ಲಿ ಜನಪ್ರಿಯವಾಗಿದೆ. ಇದು ನಾಸಾದಲ್ಲೂ ಈಗ ಬಳಕೆಯಾಗುತ್ತಿದೆ.
ಶುಗರ್ ಫ್ರೀ
ಸಕ್ಕರೆ ಕಬ್ಬಿನಿಂದಲೇ ಸಿದ್ಧವಾಗುತ್ತದೆ ಎನ್ನುವುದು ಎಷ್ಟು ಸತ್ಯವೋ, ನೈಸರ್ಗಿಕ ಸಿಹಿಗಿಂತ 400 ಪಟ್ಟು ಹೆಚ್ಚಿರುವ ಕೃತಕವಾಗಿ ಸಿಹಿಯೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದೂ ಅಷ್ಟೇ ಸತ್ಯ. ಇದರ ಆವಿಷ್ಕಾರವಾಗಿದ್ದು 1878ರಲ್ಲಿ. ಕಾನಸ್ಟಂಟೈನ್ ಫಾಲ್ಬರ್ಗ್ ಎಂಬ ವಿಜ್ಞಾನಿಯು ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಕಲ್ಲಿದ್ದಲಿನ ಟಾರ್ ಕುರಿತು ಅಧ್ಯಯನದಲ್ಲಿ ತೊಡಗಿದ್ದರು.
ದಿನವಿಡೀ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅವರು ಹಸಿವಾಗಿದ್ದರಿಂದ ಕೈಯನ್ನೂ ತೊಳೆದುಕೊಳ್ಳದೆ ಆಹಾರ ಸೇವಿಸಲಾರಂಭಿಸಿದರು. ತಿಂದ ಆಹಾರ ಅಗತ್ಯಕ್ಕಿಂತ ಹೆಚ್ಚು ಸಿಹಿ ಇರುವುದನ್ನು ಅವರು ಗಮನಿಸಿದರು. ಇದು ಸೇವಿಸಿದ ಆಹಾರದ್ದಲ್ಲ, ಕೈಗೆ ಮೆತ್ತಿದ ಯಾವುದೋ ರಾಸಾಯನಿಕದ ಪರಿಣಾಮ ಎಂದೆನಿಸಿತು. ತಕ್ಷಣವೇ ಪ್ರಯೋಗಾಲಯಕ್ಕೆ ಮರಳಿದ ಅವರು, ರಂಜಕ ಕ್ಲೊರೈಡ್ ಹಾಗೂ ಅಮೊನಿಯಾ ಒಳಗೊಂಡ ಒ–ಸಲ್ಫೊಬೆನ್ಜಾಯಿಕ್ ಆಸಿಡ್ (ರಾಸಾಯನಿಕಗಳನ್ನು ಪ್ರಯೋಗಾಲಯದಲ್ಲಿ ಮಾರ್ಗದರ್ಶನವಿಲ್ಲದೆ ಪ್ರಯೋಗಿಸುವುದು ಅಪಾಯಕಾರಿ) ನಿಂದ ಸಿಹಿ ಪ್ರಮಾಣ ಹೆಚ್ಚಾಗಿದ್ದನ್ನು ಗಮನಿಸಿದರು. 1884ರಲ್ಲಿ ಇದಕ್ಕೆ ಪೇಟೆಂಟ್ ಪಡೆಯಲಾಯಿತು. ಒಂದನೇ ವಿಶ್ವಯುದ್ಧದಲ್ಲಿ ಕೃತಕ ಸಿಹಿ ಎಲ್ಲೆಡೆ ಹಂಚಲಾಗುತ್ತಿತ್ತು. ಇದರ ಸೇವನೆ ನಂತರ ಕ್ಯಾಲೊರಿಗಾಗಿ ಜನರು ಇತರ ಆಹಾರ ಸೇವನೆ ಮಾಡುತ್ತಿರಲಿಲ್ಲ. ಇದರ ಮೇಲೆ ಮತ್ತಷ್ಟು ಪ್ರಯೋಗ ನಡೆಸಿದ ನಂತರ 1907ರಲ್ಲಿ ಮಧುಮೇಹಿಗಳಿಗೆ ನೈಸರ್ಗಿಕ ಸಿಹಿ ಬದಲು, ಈ ಕೃತಕ ಸಿಹಿಯನ್ನು ಶಿಫಾರಸು ಮಾಡಲಾಯಿತು.
ಪೇಸ್‌ಮೇಕರ್
1956ರ ಸುಮಾರಿನಲ್ಲಿ ವಿದ್ಯುತ್ ನಿರೋಧಕದ ಸರ್ಕ್ಯೂಟ್ ಪೂರ್ಣಗೊಳಿಸುವ ಕೆಲಸದಲ್ಲಿದ್ದ ವಿಲ್ಸನ್ ಗ್ರೇಟ್‌ಬ್ಯಾಚ್ ಎಂಬ ವಿಜ್ಞಾನಿ, ಆಕಸ್ಮಿಕವಾಗಿ ತಪ್ಪಾದ ಸರ್ಕ್ಯೂಟ್ ಅನ್ನು ವಿನ್ಯಾಸಗೊಳಿಸಿದ್ದರು. ಸರ್ಕ್ಯೂಟ್‌ನಲ್ಲಿ ತಪ್ಪಾದ ರೆಸಿಸ್ಟರ್ ಅಳವಡಿಸಿದ್ದರು. ಇದು ಅವರ ಹೃದಯ ಬಡಿತಕ್ಕೆ ಸರಿಸಮನಾಗಿಯೇ ಮಿಡಿಯುತ್ತಿತ್ತು.
ಹೃದಯಕ್ಕೆ ವಿದ್ಯುತ್ ಕಂಪನ ನೀಡುವಲ್ಲಿ ವ್ಯತ್ಯಯ ಉಂಟಾದಾಗ ವಿದ್ಯುತ್ ಪ್ರಚೋದನೆ ನೀಡುವ ಮೂಲಕ ಹೃದಯ ಬಡಿತ ಸರಿಯಾಗುವಂತೆ ಮಾಡುವ ಲೆಕ್ಕಾಚಾರದಲ್ಲಿದ್ದ ಗ್ರೇಟ್ ಬ್ಯಾಚ್, ಈ ಸಾಧನವನ್ನೇ ಕಿರಿದಾಗಿ ವಿನ್ಯಾಸಗೊಳಿಸಿ ಏಕೆ ದೇಹದೊಳಗೆ ಇದನ್ನು ಅಳವಡಿಸುವಂತೆ ಅಭಿವೃದ್ಧಿಪಡಿಸಬಾರದು ಎಂಬ ಆಲೋಚನೆ ಹೊಂದಿದರು. 1958ರಲ್ಲಿ ತಮ್ಮ ಆವಿಷ್ಕಾರದ ಸಾಧನವನ್ನು ಕಿರಿದುಗೊಳಿಸಿದರು. ಪೇಸ್‌ಮೇಕರ್ ಆದ ಈ ಸಾಧನವನ್ನು ಮೊದಲಿಗೆ ನಾಯಿಯಲ್ಲಿ ಅಳವಡಿಸಲಾಗಿತ್ತು.
ವಯಾಗ್ರ
ಪುರುಷರಲ್ಲಿನ ನಿಮಿರುವಿಕೆಯ ಸಮಸ್ಯೆಗೆ ಮೊದಲು ಪತ್ತೆಯಾದ ವಯಾಗ್ರ ಮಾತ್ರೆ, ಪ್ರಾಥಮಿಕವಾಗಿ ಬಳಕೆಗೆ ಉದ್ದೇಶಿಸಲಾಗಿದ್ದು, ಹೃದಯ ಸಂಬಂಧಿ ಚಿಕಿತ್ಸೆಗೆ. ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಈ ಔಷಧವು ಹೃದಯ ಸಮಸ್ಯೆ ನಿವಾರಿಸುವ ಬದಲು ಹೃದಯ ಬಡಿತ ಹೆಚ್ಚಿಸುವ ಪುರುಷತ್ವ ವೃದ್ಧಿಸಿದ್ದನ್ನು ತಜ್ಞರು ವರದಿ ಮಾಡಿದ್ದರು.
ತಕ್ಷಣವೇ ಇದನ್ನು ಹೃದ್ರೋಗಿಗಳಿಗೆ ನೀಡುವ ಬದಲು, 4ಸಾವಿರ ಪುರುಷರಿಗೆ ನೀಡಿ ಅವರಲ್ಲಿ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪತ್ತೆ ಮಾಡಿದರು. ಅವರಲ್ಲೂ ಅದೇ ಫಲಿತಾಂಶ ನೀಡಿತು. ಹೀಗಾಗಿ 1998ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಈ ನೀಲಿ ಮಾತ್ರ ಪುರುಷತ್ವಕ್ಕೆ ಇಂದಿಗೂ ಜನಪ್ರಿಯ.
ಇನ್ಸುಲಿನ್
ಸ್ಟಾರ್ಸ್‌ಬೋರ್ಗ್ ವಿಶ್ವವಿದ್ಯಾಲಯದ ಆಸ್ಕರ್ ಮಿನ್ಕೋವಿಸ್ಕಿ ಹಾಗೂ ಜೋಸೆಫ್ ವಾನ್ ಮೆರಿಂಗ್ ಎಂಬ ಇಬ್ಬರು ವಿಜ್ಞಾನಿಗಳು 1889ರಲ್ಲಿ ಮೇಧೋಜೀರಕ ಗ್ರಂಥಿಯು ಜೀರ್ಣಕ್ರಿಯೆಯಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಿದ್ದರು. ಆರೋಗ್ಯವಂತ ನಾಯಿಯ ದೇಹದಲ್ಲಿದ್ದ ಮೇಧೋಜೀರಕ ಗ್ರಂಥಿಯನ್ನು ತೆಗೆದರು. ಕೆಲ ದಿನಗಳ ನಂತರ ಆ ನಾಯಿ ವಿಸರ್ಜಿಸಿದ ಮೂತ್ರದ ಸುತ್ತ ನೊಣಗಳು ಹಾರಾಡಲಾರಂಭಿಸಿದವು.
ಮೂತ್ರವನ್ನು ಪರೀಕ್ಷಿಸಿದಾಗ ಅದರಲ್ಲಿ ಸಕ್ಕರೆ ಅಂಶ ಇರುವುದನ್ನು ಪತ್ತೆ ಮಾಡಿದರು. ಹಾಗಿದ್ದರೆ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಿಸುವ ಶಕ್ತಿ ಮೇದೋಜೀರಕ ಗ್ರಂಥಿಗೆ ಇದೆ ಎಂದು ಪತ್ತೆ ಮಾಡಿದರು. ಆದರೆ ಇದೇ ಪ್ರಯೋಗ 1920ರಿಂದ 1922ರ ಅವಧಿಯಲ್ಲೂ ನಡೆಯಿತು. ಟೊರೆಂಟೊ ವಿಶ್ವಿವಿದ್ಯಾಲಯದ ಸಂಶೋಧಕರು ಮೇಧೋಜೀರಕ ಗ್ರಂಥಿಯು ಇನ್ಸುಲಿನ್ ಎಂಬುದನ್ನು ಉತ್ಪಾದಿಸುತ್ತದೆ ಎಂಬುದನ್ನು ಪತ್ತೆ ಮಾಡಿದರು. ಇದಕ್ಕಾಗಿ ಈ ವಿಜ್ಞಾನಿಗಳ ತಂಡಕ್ಕೆ ನೋಬೆಲ್ ಪ್ರಶಸ್ತಿ ದೊರೆಯಿತು. ಒಂದು ವರ್ಷದೊಳಗಾಗಿ ಎಲಿ ಲಿಲ್ಲಿ ಎಂಬ ಔಷಧ ಕಂಪನಿ ಇನ್ಸುಲಿನ್ ಉತ್ಪಾದನೆ ಆರಂಭಿಸಿತು.
ವ್ಯಾಸಲಿನ್
1859ರಲ್ಲಿ ರಾಬರ್ಟ್ ಚೆಸಿಬ್ರೊ ಎಂಬ 22 ವರ್ಷದ ಯುವ ವಿಜ್ಞಾನಿ ಪೆನ್ನಿಸ್ಲೇವಿಯಾದ ತೈಲ ಭಾವಿಯಲ್ಲಿ ಯಾವುದೋ ಅಧ್ಯಯನದಲ್ಲಿ ತೊಡಗಿದ್ದ. ರಾಡ್ ವ್ಯಾಕ್ಸ್ ಎಂಬ ಜಿಗುಟು ಇರುವ ಪದಾರ್ಥವು ಪದೇ ಪದೇ ತೈಲ ಭಾವಿಯಲ್ಲಿ ಸಮಸ್ಯೆ ಸೃಷ್ಟಿಸುತ್ತಿತ್ತು.
ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು, ತಮಗಾದ ಗಾಯಕ್ಕೆ ಇದನ್ನು ಹಚ್ಚಿಕೊಳ್ಳುತ್ತಿದ್ದ ಅಂಶವನ್ನೂ ಚೆಸಿಬ್ರೊ ಗಮನಿಸಿದರು. ಇದನ್ನು ನಂತರ ಪ್ರಯೋಗಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಿದರು. ಅದರ ಫಲವೇ ಇಂದು ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ರೂಪದಲ್ಲಿ ಬಳಕೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.