ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ‘ಆದಿತ್ಯ ಎಲ್1’ ವೀಕ್ಷಣಾಲಯವು ಅಂತರಿಕ್ಷದಲ್ಲಿ ನಿಗದಿತ ತಾಣ ಲಗ್ರಾಂಜ್ 1 ಪಾಯಿಂಟ್‌ಗೆ ತಲುಪಿದೆ. ಇದನ್ನು ಎಲ್1 ಸುತ್ತ ಪರಿಭ್ರಮಿಸಲಿರುವ ಹ್ಯಾಲೊ ಆರ್ಬಿಟ್‌ಗೆ ಸೇರಿಸುವ ಕಾರ್ಯವನ್ನು ಇಸ್ರೊ ಕೈಗೊಳ್ಳುತ್ತಿದೆ.
ಎಲ್1 ಸುತ್ತಲು ಪರಿಭ್ರಮಿಸುವ ಹ್ಯಾಲೊ ಆರ್ಬಿಟ್‌ಗೆ ವೀಕ್ಷಣಾಲಯವನ್ನು ಸೇರಿಸುವುದರಿಂದ ಗ್ರಹಣ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಸೂರ್ಯನ ವಾತಾವರಣವನ್ನು ನಿರಂತರವಾಗಿ ಗಮನಿಸುವುದು ಸಾಧ್ಯವಾಗಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.
‘ವೀಕ್ಷಣಾಲಯವು ಈಗ ಹ್ಯಾಲೊ ಆರ್ಬಿಟ್‌ನತ್ತ ಸಾಗುತ್ತಿದೆ. ಅದನ್ನು ಸೂಕ್ತ ಸ್ಥಳದಲ್ಲಿ ನೆಲೆಗೊಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಸರಿಯಾದ ಸ್ಥಳ ತಲುಪಲು ಪ್ರತಿ ಕ್ಷಣಕ್ಕೆ 31 ಮೀಟರ್ ವೇಗದಲ್ಲಿ ಕ್ರಮಿಸುವಂತೆ ಮಾಡುವ ಕೆಲಸ ನಡೆದಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಸುದ್ದಿಗಾರರಿಗೆ ತಿಳಿಸಿದರು.
ಹ್ಯಾಲೊ ಆರ್ಬಿಟ್ ಕಾರ್ಯವಿವರಿಸಿದ ಅವರು, ಇದು ಎಲ್1 ಪಾಯಿಂಟ್ ಸುತ್ತಲೂ ಒಂದು ಆಯಾಮದಲ್ಲಿ 6 ಲಕ್ಷ ಕಿ.ಮೀ ಗಾತ್ರದಲ್ಲಿ ಪರಿಭ್ರಮಿಸಲಿದೆ. ಇನ್ನೊಂದು ಆಯಾಮದಲ್ಲಿ 2 ಲಕ್ಷ ಕಿ.ಮೀ ಗಾತ್ರ ಹಾಗೂ ಮತ್ತೊಂದು ಆಯಾಮದಲ್ಲಿ 1 ಲಕ್ಷ ಕಿ.ಮೀ ಗಾತ್ರದಲ್ಲಿ ಚಲಿಸಿ, ಅಂಡಾಕಾರದ ಕಕ್ಷೆಯನ್ನು ರೂಪಿಸಲಿದೆ ಎಂದರು.
ಹೊಸದಾದ ಈ ಕಕ್ಷೆಯಲ್ಲಿ ವೀಕ್ಷಣಾಲಯವನ್ನು ಹೆಚ್ಚು ನಿಖರವಾಗಿ ನೆಲೆಗೊಳಿಸಬೇಕಿದೆ. ಆ ಕಾರ್ಯವನ್ನು ನೆರವೇರಿ ಸದಿದ್ದರೆ, ವೀಕ್ಷಣಾಲಯವು ಎಲ್1 ಪಾಯಿಂಟ್‌ನಿಂದಲೇ ವಿಮುಖವಾಗುವ ಸಾಧ್ಯತೆಗಳಿವೆ. ಇದು ಆಗದಂತೆ ನಿಖರವಾಗಿ ನೆಲೆಗೊಳಿಸಬೇಕಿದೆ ಎಂದು ಹೇಳಿದರು.
ಆದಿತ್ಯ ಎಲ್1 ವೀಕ್ಷಣಾಲಯದ ಪ್ರಯಾಣದ ಹಾದಿ
ಸೆ.2,2023: ಇಸ್ರೊದಿಂದ ಆದಿತ್ಯ ಎಲ್1 ವೀಕ್ಷಣಾಲಯ ಹೊತ್ತ ಪಿಎಸ್ಎಲ್‌ವಿ –ಸಿ57 ಉಡಾವಣೆ.
ಸೆ.5–15, 2023: ನಾಲ್ಕು ಹಂತದಲ್ಲಿ ಕಕ್ಷೆಯ ವಿವಿಧ ಹಂತಕ್ಕೆ ತಲುಪಿಸುವ ಕಾರ್ಯ ಸೇರ್ಪಡೆ.
ಸೆ.18,2023: ಆದಿತ್ಯ ಎಲ್1ನಿಂದ ವೈಜ್ಞಾನಿಕ ಅಂಕಿ ಅಂಶ ಸಂಗ್ರಹಣ ಕಾರ್ಯ ಆರಂಭ.
ಸೆ.30,2023: ಭೂಮಿಯ ಪ್ರಭಾವಲಯದಿಂದ ಬೇರ್ಪಟ್ಟು ಭೂಮಿ–ಸೂರ್ಯನ ಲಾಗ್ರೇಂಜ್ ಪಾಯಿಂಟ್1 ನತ್ತ ಚಲನೆ.
ಅ.6,2023: 16 ಸೆಕೆಂಡ್‌ಗಳ ಅವಧಿಯಲ್ಲಿ ವೀಕ್ಷಣಾಲಯದ ಚಲನೆಯ ಪಥ ಸರಿಪಡಿಸುವ ಕಾರ್ಯ ಯಶಸ್ವಿ.
ನ.7,2023: ಹೆಲಿಯೊಸ್ ಪೇಲೋಡ್‌ನಿಂದ ಮೊದಲ ಬಾಇಗೆ ಹೈ ಎನರ್ಜಿಯ ಎಕ್ಸ್‌ರೇ ದೃಶ್ಯಾವಳಿ ಸೆರೆ.
ಡಿ.1,2023: ಆ್ಯಸ್ಪೆಕ್ಸ್ ಪೇಲೋಡ್‌ನಲ್ಲಿದ್ದ ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್ ಕಾರ್ಯಾರಂಭ
ಡಿ.10,2023: ಎಸ್‌ಯುಐಟಿ ಪೇಲೋಡ್‌ನಿಂದ ಸೂರ್ಯನ ಪೂರ್ಣಮುದ್ರಿಕೆಯ ಚಿತ್ರದ ಸೆರೆ.
ಜ.6,2024: ಲಾಗ್ರೇಂಜ್1 ನೆಲೆ ತಲುಪಿಸಿದ ಆದಿತ್ಯ ಎಲ್1 ವೀಕ್ಷಣಾಲಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.