ಆಕ್ಸಿಜನ್ ಅಣುಗಳ ಸಾಂದ್ರತೆಯನ್ನು ಬದಲಾಯಿಸಿದರೆ ಆಯುಸ್ಸನ್ನೂ ಬದಲಾಯಿಸಬಹುದೇ? ಆ್ಯಂಟಿಆಕ್ಸಿಡೆಂಟುಗಳೆಂಬ ಪದಾರ್ಥಗಳು ಇದಕ್ಕೆ ನೆರವಾಗಬಹುದೆನ್ನುವ ಆಸೆಯಿದೆ.
ಮೊನ್ನೆ ನನ್ನನ್ನು ಭೇಟಿಯಾದ ನನ್ನ ಗೆಳೆಯರೊಬ್ಬರು ‘ನೂರು ವರ್ಷ ಆಯುಸ್ಸು ನಿಮಗೆ. ಈಗಷ್ಟೆ ನಿಮ್ಮ ಬಗ್ಗೆ ಮಾತನಾಡುತ್ತಿದ್ದೆವು’ ಎಂದರು.
‘ಒಟ್ಟೋ? ಅಥವಾ ಈಗಿನಿಂದ ನೂರು ವರ್ಷವೋ’ ಎಂದು ತಮಾಷೆ ಮಾಡಿದೆ.
ಅದಕ್ಕೆ ಅವರು ಈಗಿನಿಂದ ನೂರು ವರ್ಷ ಅಂತಿಟ್ಟುಕೊಳ್ಳಿ ಎಂದರೆ. ಅಷ್ಟೊಂದು ದೀರ್ಘಾಯುಸ್ಸು ದೊರಕುವುದಾದರೆ ಯಾರಿಗೆ ಬೇಡ ಅಲ್ಲವೇ? ಮೊನ್ನೆ ಬಂದ ಸುದ್ದಿಯೊಂದು ಈ ಖುಷಿಯನ್ನು ನೀಡಿದೆ. ಒಂದಿಷ್ಟು ಔಷಧ ನಮ್ಮ ಆಯುಸ್ಸನ್ನು ಹೆಚ್ಚಿಸಬಹುದಂತೆ. ಹಾಂ! ತಾಳಿ. ಇದೋ ನಿರಾಸೆಯ ಸುದ್ದಿ. ಈ ಔಷಧವನ್ನು ಅಮ್ಮನ ಹಾಲು ಸೇವಿಸುವ ಬಾಲ್ಯದಲ್ಲಿಯೇ ಸೇವಿಸಿದರೆ ಮಾತ್ರ ದೀರ್ಘಾಯುಸ್ಸು ಎನ್ನುತ್ತದೆ, ಇಎಂಬಿಓ ರಿಪೋರ್ಟ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ಸಂಶೋಧನೆ. ಇಟಲಿಯ ಟ್ರೆಂಟೊ ವಿಶ್ವವಿದ್ಯಾನಿಲಯದ ಲ್ಯೂಕಾ ಟಿಬೇರಿ ಮತ್ತು ಸಂಗಡಿಗರು ರಪಾಮೈಸಿನ್ ಎನ್ನುವ ಔಷಧವನ್ನು ಬಾಲ್ಯದಲ್ಲಿ ನೀಡಿದರೆ ಆಯುಸ್ಸು ದೀರ್ಘವಾಗುತ್ತದೆ ಎಂದು ವರದಿ ಮಾಡಿದ್ದಾರೆ.
‘ರಪಾಮೈಸಿನ್’ ಅಥವಾ ‘ಸೈರೊಲಿಮಸ್’ ಎನ್ನುವುದು ಒಂದು ಆ್ಯಂಟಿಆಕ್ಸಿಡೆಂಟು. ಡಯಾಬಿಟೀಸು, ನರಕ್ಷಯದ ಕೆಲವು ಕಾಯಿಲೆಗಳು, ಕ್ಯಾನ್ಸರ್ ಮುಂತಾದ ಮುಪ್ಪಿನ ಕಾಯಿಲೆಗಳನ್ನು ನಿಯಂತ್ರಿಸುವ ಗುಣ ಅದಕ್ಕಿದೆಯಂತೆ. ಹೀಗಾಗಿಯೇ ಅದು ಆಯುಸ್ಸನ್ನು ಹೆಚ್ಚಿಸಬಹುದು ಎನ್ನುವ ಆಸೆಯೂ ಹುಟ್ಟಿತ್ತು. ಆಯುಸ್ಸನ್ನು ಹೆಚ್ಚಿಸಲು ಅಥವಾ ಸಾವನ್ನು ದೂರವಿಡಲು ರಪಾಮೈಸಿನ್ ನೆರವಾಗಬಹುದು ಎನ್ನುವ ಸುದ್ದಿ ಹೊಸತಲ್ಲ. ಹತ್ತು ವರ್ಷಗಳ ಹಿಂದೆಯೇ ಈ ಬಗ್ಗೆ ‘ಸೀನೋರೇಬ್ಡೈಟಿಸ್’ ಎನ್ನುವ ದುಂಡುಹುಳದ ಮೇಲೆ ನಡೆದ ಸಂಶೋಧನೆಗಳು ಸೂಚನೆ ನೀಡಿದ್ದುವು. ರಪಾಮೈಸಿನ್ ಉಣಿಸಿ ಬೆಳೆಸಿದ ದುಂಡುಹುಳುಗಳು ಉಳಿದವುಗಳಿಗಿಂತಲೂ ಹೆಚ್ಚು ಕಾಲ ಬದುಕಿದ್ದುವು. ಇದಕ್ಕೆ ಕಾರಣವಿಷ್ಟೆ. ದೀರ್ಘಾಯುಷಿಗಳನ್ನು ಮುಪ್ಪು ನಿಧಾನವಾಗಿ ಅಡರಿಕೊಳ್ಳುತ್ತದೆ.
ಮುಪ್ಪು ಎಂದರೆ ಇನ್ನೇನಲ್ಲ, ದೇಹದ ಕೋಟ್ಯಂತರ ಜೀವಕೋಶಗಳಲ್ಲಿ ನಿಧಾನವಾಗಿ ಸಂಗ್ರಹವಾಗುವ ದೋಷಗಳು – ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಜೀವಕೋಶಗಳಲ್ಲಿ ಜರುಗುವ ಸಾವಿರಾರು ಜೈವಿಕ ಕ್ರಿಯೆಗಳಿಂದಾಗಿ ಹುಟ್ಟುವ ಕೆಲವು ರಾಸಾಯನಿಕ ಅಣುಗಳು ಜೀವಕೋಶಗಳಿಗೆ ಮಾರಕವಾಗುತ್ತವೆ. ಇದು ವಿವಿಧ ಅಂಗಗಳಿಗೆ ಮುಪ್ಪು ತರುತ್ತವೆ ಎನ್ನುವುದು ತರ್ಕ. ಈ ತರ್ಕಕ್ಕೆ ಪುರಾವೆಗಳೂ ಇವೆ. ರಿಯಾಕ್ಟಿವ್ ಆಕ್ಸಿಜನ್ ಅಣುಗಳು ಅರ್ಥಾತ್ ಬಲು ಕ್ರಿಯಾಶೀಲವಾದ ಆಕ್ಸಿಜನ್ ಅಣುಗಳಿರುವ ರಾಸಾಯನಿಕಗಳು ಸಂಗ್ರಹವಾದರೆ ಅಂತಹ ಜೀವಕೋಶವು ತನ್ನಂತಾನೇ ಸಾಯುತ್ತದೆ.
ಹಾಗಿದ್ದರೆ, ಈ ಆಕ್ಸಿಜನ್ ಅಣುಗಳ ಸಾಂದ್ರತೆಯನ್ನು ಬದಲಾಯಿಸಿದರೆ ಆಯುಸ್ಸನ್ನೂ ಬದಲಾಯಿಸಬಹುದೇ? ಆ್ಯಂಟಿಆಕ್ಸಿಡೆಂಟುಗಳೆಂಬ ಪದಾರ್ಥಗಳು ಇದಕ್ಕೆ ನೆರವಾಗಬಹುದೆನ್ನುವ ಆಸೆಯಿದೆ. ಇದೇ ಕಾರಣದಿಂದಲೇ ಆ್ಯಂಟಿಆಕ್ಸಿಡೆಂಟುಗಳಿರುವ ಆಹಾರ ಒಳ್ಳೆಯದು ಎನ್ನುವುದು. ಬೆಳೆವಣಿಗೆಯ ಹಂತದಲ್ಲಿ ಹೀಗೆ ಜೀವಕೋಶಗಳ ಅಭಿವೃದ್ಧಿ ಹಾಗೂ ಸಾವು ಜೊತೆ, ಜೊತೆಯಾಗಿರುತ್ತವೆ. ಜೀವಕೋಶಗಳ ಸಾವನ್ನು ತಡೆದರೆ, ಅರ್ಥಾತ್ ಈ ಆಕ್ಸಿಜನ್ ಸಾಂದ್ರತೆಯನ್ನು ಈ ಹಂತದಲ್ಲಿ ಕುಗ್ಗಿಸಿದರೆ ಆಯುಸ್ಸು ಹೆಚ್ಚಾಗಬಹುದು ಎನ್ನುವ ಊಹೆ ಇತ್ತು. ದುಂಡುಹುಳುಗಳಲ್ಲಿ ನಡೆದ ಸಂಶೋಧನೆ ಇದನ್ನು ಸಮರ್ಥಿಸಿತ್ತು. ಆದರೆ ಅದು ನಿಜವೇ?
ಈ ಪ್ರಶ್ನೆಯ ಬೆನ್ನು ಹತ್ತಿದ ಟಿಬೇರಿ ತಂಡ ಇಲಿಗಳು ಹಾಗೂ ಹಣ್ಣುನೊಣಗಳ ಮೇಲೆ ಪ್ರಯೋಗಗಳನ್ನು ನಡೆಸಿದೆ. ಹುಟ್ಟಿ ನಾಲ್ಕು ದಿನಗಳಾದ ಇಲಿಮರಿಗಳ ಹೊಟ್ಟೆಗೆ ರಪಾಮೈಸಿನ್ ಔಷಧವನ್ನು ಪ್ರತಿದಿನವೂ ಒಂದಿಷ್ಟು ಎನ್ನುವಂತೆ ಒಂದು ತಿಂಗಳ ಕಾಲ ಚುಚ್ಚಿದರು. ಇನ್ನೊಂದಷ್ಟು ಇಲಿಮರಿಗಳಿಗೆ ಒಂದು ತಿಂಗಳಿನಿಂದ ಎರಡು ತಿಂಗಳವರೆಗೆ ಔಷಧ ಚುಚ್ಚಿದರು. ಇನ್ನಷ್ಟು ಇಲಿಮರಿಗಳನ್ನು ಹಾಗೆಯೇ ಇರಿಸಿದ್ದರು. ಇದೇ ರೀತಿಯಲ್ಲಿ ಮೊಟ್ಟೆ ಒಡೆದು ಹೊರಬಂದ ನೊಣಗಳ ಲಾರ್ವಾಗಳಿಗೆ ಒಂದನೇ ದಿನದಿಂದ ನಾಲ್ಕು ದಿನಗಳವರೆಗೆ ಹಾಗೂ ಅದು ನೊಣವಾದ ಮೇಲೆ ಬೇರೆ, ಬೇರೆ ಸಮಯದಲ್ಲಿ ಆಹಾರದಲ್ಲಿ ರಪಾಮೈಸಿನ್ ಬೆರೆಸಿ ಉಣಿಸಿದರು. ಇಲಿಮರಿಗಳು ಹಾಗೂ ನೊಣಗಳು ಎಷ್ಟು ದಿನಗಳವರೆಗೆ ಬದುಕುತ್ತವೆ ಎಂದು ಗಮನಿಸಿದರು. ಹಾಗೆಯೇ ಅವುಗಳ ದೇಹದಲ್ಲಿ ಆಗುವ ಜೈವಿಕ ಕ್ರಿಯೆಗಳನ್ನು ವಿವಿಧ ಸಮಯದಲ್ಲಿ ಪರಿಶೀಲಿಸಿದರು. ಅದರಲ್ಲಿಯೂ ಬೆಳೆವಣಿಗೆಯ ಸಮಯದಲ್ಲಿ ನೊಣ, ಇಲಿ, ಮನುಷ್ಯ ಮೊದಲಾದ ಹಲವು ಜೀವಿಗಳಲ್ಲಿ ಚುರುಕಾಗಿರುವ ಒಂದು ಸಾಮಾನ್ಯ ‘ಎಂಟಿಓಆರ್’ ಎನ್ನುವ ಕ್ರಿಯೆಯನ್ನೂ ಗಮನಿಸಿದರು. ದೇಹದ ಬೆಳವಣಿಗೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಯೋಗದ ಫಲಿತಾಂಶ ಇಲಿಗಳಲ್ಲಿಯೂ ನೊಣಗಳಲ್ಲಿಯೂ ಒಂದೇ ತೆರನ ಫಲಿತಾಂಶ ತೋರಿದ್ದು ಅಚ್ಚರಿಯನ್ನುಂಟುಮಾಡಿದೆ. ಬೆಳವಣಿಗೆಯ ಅರಂಭದ ಹಂತದಲ್ಲಿ ಅಂದರೆ ನಾಲ್ಕನೇ ದಿನದಿಂದ ಒಂದು ತಿಂಗಳವರೆಗಿನ ಇಲಿಮರಿಗಳು ಹಾಗೂ ನಾಲ್ಕು ದಿನಗಳವರೆಗೆ ರಪಾಮೈಸಿನ್ ಸೇವಿಸಿದ್ದ ನೊಣಗಳು ಉಳಿದವುಗಳಿಗಿಂತಲೂ ಹೆಚ್ಚು ದಿನಗಳು ಬದುಕಿದ್ದುವು. ನೂರು ವಯಸ್ಸು ಆಯುಸ್ಸು ನೂರಾಹತ್ತು ಆದಂತೆ, ಸುಮಾರು ಒಂಬತ್ತು ಶತಾಂಶ ಆಯುಸ್ಸು ಹೆಚ್ಚಿತ್ತು. ಸ್ವಲ್ಪ ವಯಸ್ಸಾದ ಮೇಲೆ ಕೊಟ್ಟ ಔಷಧವೂ ಆಯುಸ್ಸು ಹೆಚ್ಚಿಸಿತ್ತಾದರೂ ಅಷ್ಟೊಂದಲ್ಲ. ಕೇವಲ ನಾಲ್ಕೋ ಐದೋ ಶತಾಂಶದಷ್ಟು ಹೆಚ್ಚಿಸಿತ್ತು. ಆರಂಭದಲ್ಲಿ ಔಷಧ ಪಡೆದುಕೊಂಡ ಇಲಿಗಳ ಬೆಳೆವಣಿಗೆ ಸ್ವಲ್ಪ ಕುಂಠಿತವಾಗಿದೆ ಎನ್ನಿಸಿದರೂ ಅನಂತರ ಅವು ವಯಸ್ಸಾದ ಮೇಲೆ ಔಷಧ ಪಡೆದುಕೊಂಡ ಹಾಗೂ ಔಷಧವೇ ನೀಡದ ಇಲಿಗಳಷ್ಟೆ ತೂಕ ಹಾಗೂ ಗಾತ್ರ ಬೆಳೆಸಿಕೊಂಡವು. ಜೊತೆಗೆ ಎಂಟಿಓಆರ್ ಕ್ರಿಯೆ ಇವುಗಳಲ್ಲಿ ವ್ಯತ್ಯಯವಾಗಿತ್ತು ಎನ್ನುವುದನ್ನೂ ಟಿಬೇರಿ ತಂಡ ಗಮನಿಸಿದೆ.
ಅರ್ಥಾತ್, ಮುಪ್ಪಿನಲ್ಲಿ ಔಷಧ ತೆಗೆದುಕೊಳ್ಳುವುದಕ್ಕಿಂತಲೂ ಬಾಲ್ಯದಲ್ಲಿ ನೀಡಿದ ಔಷಧ ಆಯುಸ್ಸನ್ನು ಹೆಚ್ಚಿಸುತ್ತದೆ ಎನ್ನುವುದು ಇವರ ತೀರ್ಮಾನ. ಇಲಿ, ಹಣ್ಣುನೊಣಗಳೆರಡರಲ್ಲಿಯೂ ಸಮಾನ ಫಲಿತಾಂಶ ದೊರೆತಿರುವುದು ಔಷಧದ ಪರಿಣಾಮ ಸತ್ಯ ಎನ್ನುತ್ತದೆಯೇ? ಕಾದು ನೋಡೋಣ. ಅಲ್ಲಿಯವರೆವಿಗೂ ದೀರ್ಘಾಯುಸ್ಸು ಇರಲಿ ಎನ್ನುವ ಹಾರೈಕೆಯೇ ರಕ್ಷೆ. ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.