ADVERTISEMENT

ರೋಗಿಗಳಿಗೆ ವರವಾಗುತ್ತಿರುವ 'ಎಐ'

ಅಮೃತೇಶ್ವರಿ ಬಿ.
Published 5 ನವೆಂಬರ್ 2024, 23:30 IST
Last Updated 5 ನವೆಂಬರ್ 2024, 23:30 IST
<div class="paragraphs"><p>'ಎಐ'</p></div>

'ಎಐ'

   

ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರಿಕ ಕಲಿಕೆಯು ಜಗತ್ತಿನ ಮೂಲೆಮೂಲೆಗೂ ತನ್ನ ಬಾಹುಗಳನ್ನು ಚಾಚಿರುವುದು ಈಗ ಸಾಮಾನ್ಯ ವಿಷಯ. ಅಂತೆಯೇ ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ, ಈ ಕೃತಕ ಬುದ್ಧಿಮತ್ತೆ. ಯಾವುದೋ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲೆಂದು ಆಸ್ಪತ್ರೆಗೆ ಹೋಗಿ ದಾಖಲಾದಾಗ ಆ ಕಾಯಿಲೆ ವಾಸಿಯಾದರೆ ಅದುವೇ ಪುಣ್ಯ. ಇರುವ ಒಂದು ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಹೋಗಿ ಮತ್ತೊಂದು ಸಮಸ್ಯೆಯನ್ನು ಆಹ್ವಾನಿಸಿ ಕರೆತಂದರೆ ಅದೊಂದು ಪಜೀತಿಯೇ ಸರಿ. ಆದರೆ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾದಾಗ ಅಲ್ಲಿ ನಮಗೆ ಮತ್ತಾವುದೋ ಸೋಂಕು ತಗಲುವುದು ಸಾಮಾನ್ಯವಾಗಿ ನಿರೀಕ್ಷಿತವಾಗಿಬಿಟ್ಟಿದೆ.‌ ಇದನ್ನು ‘ನೋಸೋಕೋಮಿಯಲ್‌ ಇನ್‌ಫೆಕ್ಷನ್‌’ ಎನ್ನುತ್ತೇವೆ. ಇನ್ನು,‌ ಒಂದು ಕಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ, ಆ ಕಾಯಿಲೆಗೆ ಕಾರಣವಾದ ರೋಗಾಣುಗಳು ಔಷಧಗಳ ವಿರುದ್ಧವೇ ಹೋರಾಡುವ ಶಕ್ತಿ ಬೆಳೆಸಿಕೊಂಡುಬಿಟ್ಟರೆ? ಇಂತಹ ಪ್ರಕರಣಗಳೂ ಇವೆ. ಅದನ್ನು ‘ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್’ ಎನ್ನುತ್ತೇವೆ. ಇವೆರೆಡೂ ಸಮಸ್ಯೆಗಳು ಸದ್ಯ ಜಾಗತಿಕವಾಗಿ ತಲೆದೋರಿರುವ ಗಂಭೀರ ಆರೋಗ್ಯ ಸಮಸ್ಯೆಗಳ ಪಟ್ಟಿಯಲ್ಲಿರುವಂಥವು. ಇವೆರಡೇ ಕಾಯಿಲೆಗಳಿಂದ ವರ್ಷದಲ್ಲಿ ಜಾಗತಿಕವಾಗಿ ಸುಮಾರು ಹನ್ನೆರಡು ಲಕ್ಷ ಸಾವುಗಳು ಸಂಭವಿಸುತ್ತಿವೆಯಂತೆ! ‌‌

ಇಂತಹ ಪರಿಸ್ಥಿತಿಗಳಲ್ಲಿ ತೀವ್ರ ನಿಗಾಘಟಕದಲ್ಲಿ ದಾಖಲಾಗಿರುವ ರೋಗಿಗಳ ರಕ್ತನಾಳದೊಳಗಿನ ಸೋಂಕು, ವೈದ್ಯರು ನೀಡುವ ಆ್ಯಂಟಿಬಯಾಟಿಕ್‌ ಅಥವಾ ಇನ್ನಿತರೆ ಚಿಕಿತ್ಸೆಗೆ ಹೀಗೆ ಪ್ರತಿರೋಧವೊಡ್ಡಿದರೆ ‘ಸೆಪ್ಸಿಸ್‌’ ಎನ್ನುವ ರಕ್ತನಂಜು ಉಂಟಾಗಬಹುದು. ಸೋಂಕು ಒಂದು ವೇಳೆ ಸೆಪ್ಸಿಸ್‌ ಹಂತಕ್ಕೆ ತಿರುಗಿದರೆ, ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ಮಾರಣಾಂತಿಕವಾಗುವ ಸಾಧ್ಯತೆ ಬಹಳ ಹೆಚ್ಚಿದೆಯಂತೆ. ವ್ಯಕ್ತಿಯಿಂದ ವ್ಯಕ್ತಿಗೆ, ಅವರ ಜೀವನಶೈಲಿ, ಆಹಾರಪದ್ಧತಿ, ಆನುವಂಶೀಯತೆಯ ಆಧಾರದಮೇಲೆ ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್ ಮಟ್ಟ ಬೇರೆಬೇರೆಯಾಗಿರುತ್ತದೆ. ಈ ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್ ಬಗ್ಗೆ ತುರ್ತಾಗಿ ತಿಳಿದು ಬಂದರೆ ಚಿಕಿತ್ಸೆ ಸುಲಭ. ಈ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಿಮುಗಿಸಿಬಿಡುತ್ತದೆ, ಈ ಕೃತಕ ಬುದ್ಧಿಮತ್ತೆ! ಲಂಡನ್ನಿನ ಕಿಂಗ್ಸ್‌ ಕಾಲೇಜಿನ ಸಂಶೋಧಕರು ಈ ಹೊಸ ಮಾರ್ಗವನ್ನು ಪತ್ತೆಮಾಡಿದ್ದಾರಂತೆ.

ADVERTISEMENT

ಪ್ರಸ್ತುತ ಪ್ರಯೋಗಾಲಯದ ತಂತ್ರಜ್ಞರು ಒಂದು ರೋಗಾಣುವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲು ಏನಿಲ್ಲವೆಂದರೂ ನಾಲ್ಕರಿಂದ ಐದು ದಿನಗಳು ಬೇಕು. ಈ ಸಮಯಾಂತರದಲ್ಲಿ ರೋಗಿಗಳ ಸೋಂಕು ಮತ್ತಷ್ಟು ಉಲ್ಬಣಗೊಳ್ಳಬಹುದು. ಅದರಲ್ಲೂ ಐಸಿಯುಗಳಲ್ಲಿ ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿರುವ ರೋಗಿಗಳ ಕಥೆಯಂತೂ ಇನ್ನೂ ಜಟಿಲ. ಆದರೆ ಅದನ್ನು ಪತ್ತೆಮಾಡಲು ಕೃತಕ ಬುದ್ಧಿಮತ್ತೆ ಮಾತ್ರ ಅಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ, ರೋಗಿಗಳ ಸೋಂಕಿನ ತೀವ್ರತೆಯನ್ನಾಧರಿಸಿ ಯಾರಿಗೆ ಮೊದಲು ಚಿಕಿತ್ಸೆ ನೀಡಬೇಕೆಂದೂ ತಿಳಿಸುತ್ತದಂತೆ. ಹಾಗಾಗಿ ಕೃತಕ ಬುದ್ಧಿಮತ್ತೆ ನೀಡುವ ಆಯಾ ‘ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್‌’ಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನಾಧರಿಸಿ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು; ಹಾಗೂ ಯಾವ ರೀತಿಯ ಆ್ಯಂಟಿಬಯಾಟಿಕ್‌ಗಳನ್ನು ಬಳಸಬಹುದೆಂದು ತಾಳೆ ಹಾಕಿ ರೋಗಿಯನ್ನು ಸೋಂಕಿನ ತೀವ್ರತೆಯಿಂದ ರಕ್ಷಿಸಬಹುದು ಎನ್ನುತ್ತಾರೆ, ಕಿಂಗ್ಸ್‌ ಕಾಲೇಜಿನ ಸಂಶೋಧಕರು.

ಐಸಿಯುಗೆ ದಾಖಲಾಗುವ ರೋಗಿಗಳು ಕೆಲವೊಮ್ಮೆ ಆ ರೋಗಾಣುವನ್ನು ಪತ್ತೆ ಮಾಡುವ ಮುಂಚೆಯೇ ಮರಣಿಸಬಹುದು. ಇಂತಹ ಪ್ರಕರಣಗಳನ್ನು ತಪ್ಪಿಸಲೆಂದು ‘ಬ್ರಾಡ್‌ ಸ್ಪೆಕ್ಟ್ರಮ್‌ ಆ್ಯಂಟಿಬಯಾಟಿಕ್‌’ಗಳನ್ನು ವೈದ್ಯರು ನೀಡಲೇಬೇಕಾಗುತ್ತದೆ. ದುರದೃಷ್ಟವಶಾತ್‌ ಅವು ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಸಾಯಿಸಿಬಿಡುತ್ತವೆ. ಆಗ ರೋಗಾಣುಗಳು ಔಷಧಗಳಿಗೆ ಮತ್ತಷ್ಟು ಪ್ರತಿರೋಧವೊಡ್ಡಿ ಬೆಳೆದು ವೃದ್ಧಿಯಾಗಿಬಿಡುತ್ತವೆ. ಇಂತಹ ಗಂಭೀರ ಪರಿಸ್ಥಿತಿಗಳನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆಯನ್ನು ವೈದ್ಯದಲ್ಲಿ ಬಳಸುವುದರಿಂದ ತುರ್ತಾಗಿ ರೋಗವನ್ನು ಪತ್ತೆ ಮಾಡುವುದಲ್ಲದೇ, ಸರಿಯಾದ ಆ್ಯಂಟಿಬಯಾಟಿಕ್‌ಗಳನ್ನೂ ಸೂಚಿಸುತ್ತವೆ. ಇದನ್ನು ಈಗಾಗಲೇ ಇಲಿಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದು, ಜಾಗತಿಕವಾಗಿ ಸುಮಾರು ಇಪ್ಪತ್ತು ಸಾವಿರ ರೋಗಿಗಳನ್ನು ಗುಣಪಡಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆಯಂತೆ.

ಮತ್ತೊಂದು ಸಾಮಾನ್ಯ ಹಾಗೂ ಗಂಭೀರ ಕಾಯಿಲೆಯೆಂದರೆ ಮಧುಮೇಹ - ಡಯಾಬಿಟಿಸ್‌ ಮೆಲ್ಲಿಟಸ್.‌ ಇದು ಜಾಗತಿಕವಾಗಿ ವರ್ಷಕ್ಕೆ 50 ಕೋಟಿ ಜನರನ್ನು ಬಾಧಿಸಿದರೆ, ಸುಮಾರು 70 ಲಕ್ಷ  ಜನರನ್ನು ಬಲಿ ಪಡೆಯುತ್ತಿದೆ. ಇನ್ಸುಲಿನ್‌ ಹಾರ್ಮೋನು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಸಾಮರ್ಥವನ್ನು ಕಳೆದುಕೊಂಡಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆಯಾದರೆ‌ ಅದನ್ನು ‘ಡಯಾಬಿಟಿಸ್‌ ಮೆಲ್ಲಿಟಸ್’ ಎನ್ನುತ್ತೇವೆ. ಆಗ ಔಷಧಗಳ ಮೂಲಕ ಇನ್ಸುಲಿನ್‌ ಅನ್ನು ದೇಹಕ್ಕೆ ನೀಡಿ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲಾಗುತ್ತಿದೆ ಎನ್ನುವುದು ನಮ್ಮೆಲ್ಲರಿಗೂ ತಿಳಿದ ವಿಷಯ. ಆದರೆ ಈ ವಿಧಾನದಿಂದ ನೈಜಸಮಯದಲ್ಲಿ ಬದಲಾವಣೆಗಳನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಲೋಪವನ್ನು ಸರಿಪಡಿಸಲು ಡೆನ್ಮಾರ್ಕ್‌, ಇಂಗ್ಲೆಂಡ್‌, ಚೆಕ್‌ ಗಣರಾಜ್ಯಮತ್ತು ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ತಂಡವೊಂದು ಸ್ಮಾರ್ಟ್‌ ಇನ್ಸುಲಿನ್‌ ಒಂದನ್ನು ಸಿದ್ಧಪಡಿಸಿದೆ. ಇದಕ್ಕೆ ‘NNC2215’ ಎಂದು ಹೆಸರಿಸಿದ್ದಾರೆ. ಈ ‘ಸ್ಮಾರ್ಟ್‌ ಇನ್ಸುಲಿನ್‌’ನಲ್ಲಿ ಎರಡು ಘಟಕಗಳಿವೆಯಂತೆ. ಒಂದು ಸುರುಳಿಯಾಕಾರದ ಘಟಕ, ಮತ್ತೊಂದು ಗ್ಲೂಕೋಸ್‌ನಂತಿರುವ ಗ್ಲೂಕೋಸೈಡ್‌. ರಕ್ತದಲ್ಲಿ ಸಕ್ಕರೆ ಕಡಿಮೆಯಾದಾಗ, ಗ್ಲೂಕೋಸೈಡ್‌ ಆ ಸುರುಳಿಯೊಂದಿಗೆ ಜೋಡಿಸಿಕೊಳ್ಳುತ್ತದೆ. ಆಗ ಇನ್ಸುಲಿನ್‌ ನಿಷ್ಕ್ರಿಯವಾಗಿ ಸಕ್ಕರೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗದಂತೆ ಜಾಗ್ರತೆಯನ್ನು ವಹಿಸುತ್ತದೆ. ಕ್ರಮೇಣ ನಾವು ಆಹಾರ ಸೇವಿಸಿದಾಗ ರಕ್ತದಲ್ಲಿ ಗ್ಲೂಕೋಸಿನ ಪ್ರಮಾಣ ಏರುತ್ತಿದ್ದಂತೆ ಅದು ಗ್ಲೂಕೋಸೈಡಿನ ಜಾಗವನ್ನು ಆಕ್ರಮಿಸುತ್ತದೆ. ಈ ಬದಲಾವಣೆ ಇನ್ಸುಲಿನ್‌ ಅನ್ನು ಪುನಃ ಸಕ್ರಿಯಗೊಳಿಸಿ ಸಕ್ಕರೆಯ ಪ್ರಮಾಣವನ್ನು ಹತೋಟಿಗೆ ತರುತ್ತದೆ. ಆದರೆ ಈ ಎರಡನೇ ಹಂತ ಅರ್ಥಾತ್‌, ಇನ್ಸುಲಿನ್‌ ಸಕ್ರಿಯವಾಗುವಾಗ ಹಂತಹಂತವಾಗಿ ಆಗದೆ, ಒಂದಿಷ್ಟು ಪ್ರಮಾಣದ ಗ್ಲೂಕೋಸ್‌ ಅನ್ನು ದಿಢೀರನೆ ಬಯಸುತ್ತದೆ. ಒಮ್ಮೆ ಸಕ್ರಿಯವಾಗಿಬಿಟ್ಟರೆ ಕ್ಷಿಪ್ರವಾಗಿ ಇನ್ಸುಲಿನ್‌ ಉತ್ಪಾದನೆ ಶುರುವಾಗಿಬಿಡುತ್ತದೆ. ಇದು ನಿಧಾನಗತಿಯಲ್ಲಿ ಹಂತಹಂತವಾಗಿ ನಡೆದರೆ ಒಳಿತು. ಹಾಗಾಗಿ ಈ ದೋಷದ ಮೇಲೆ ಇನ್ನಷ್ಟು ಸಂಶೋಧನೆಯನ್ನು ಕೈಗೊಂಡಿರುವ ತಂಡ ಸದ್ಯದಲ್ಲೇ ಇದಕ್ಕೆ ಪರಿಹಾರವನ್ನು ಪತ್ತೆ ಮಾಡಲಿದೆಯಂತೆ.

ಒಟ್ಟಾರೆ, ಈ ಸ್ಮಾರ್ಟ್‌ ಯುಗದಲ್ಲಿ, ಮಾರಣಾಂತಿಕ ಸಮಸ್ಯೆಗಳನ್ನು ಹತ್ತಿಕ್ಕುವ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಕ್ಷಿಪ್ರವಾಗಿ ಸ್ಮಾರ್ಟ್‌ ಆಗಿಸುತ್ತಿರುವ ಕೃತಕ ಬುದ್ಧಿಮತ್ತೆಯ ಅನಿವಾರ್ಯತೆಯೂ ಇದೆಯೆಂದರೆ ತಪ್ಪಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.