ADVERTISEMENT

Bengaluru Tech Summit: ಕಟ್ಟಡಗಳ ಸದೃಢತೆ ಪರೀಕ್ಷೆಗೆ ಎಐ

ಇ.ಎಸ್.ಸುಧೀಂದ್ರ ಪ್ರಸಾದ್
Published 19 ನವೆಂಬರ್ 2024, 20:15 IST
Last Updated 19 ನವೆಂಬರ್ 2024, 20:15 IST
ಬೆಂಗಳೂರಿನ ಅರಮನೆ ಆವರಣದಲ್ಲಿ ಮಂಗಳವಾರ ಆರಂಭವಾದ ಬೆಂಗಳೂರು ಟೆಕ್ ಸಮ್ಮಿಟ್ ಪ್ರದರ್ಶನ ಮಳಿಗೆಯಲ್ಲಿ ಪ್ರದರ್ಶಿಸಲಾದ ಕಟ್ಟಡ ಸದೃಢತೆ ಪರೀಕ್ಷಿಸುವ ಸಾಧನವನ್ನು ಡಾ. ರೇಣು ಶರತ್ ವೆಗೇಸನ್‌ ವಿವರಿಸಿದರು
– ಪ್ರಜಾವಾಣಿ ಚಿತ್ರ
ಬೆಂಗಳೂರಿನ ಅರಮನೆ ಆವರಣದಲ್ಲಿ ಮಂಗಳವಾರ ಆರಂಭವಾದ ಬೆಂಗಳೂರು ಟೆಕ್ ಸಮ್ಮಿಟ್ ಪ್ರದರ್ಶನ ಮಳಿಗೆಯಲ್ಲಿ ಪ್ರದರ್ಶಿಸಲಾದ ಕಟ್ಟಡ ಸದೃಢತೆ ಪರೀಕ್ಷಿಸುವ ಸಾಧನವನ್ನು ಡಾ. ರೇಣು ಶರತ್ ವೆಗೇಸನ್‌ ವಿವರಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕೊಚ್ಚಿಹೋದ ನಂತರ ಅಣೆಕಟ್ಟೆಗಳ ಸದೃಢತೆಯ ವಿಷಯವು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿಶಾಖಪಟ್ಟಣದ ಅಕ್ಷಯ ಇನ್ನೋಟೆಕ್‌ ಕಂಪನಿಯು ಇಂಥ ಕಟ್ಟಡಗಳ ತಪಾಸಣೆಗೆ ಮಾದರಿಯೊಂದನ್ನು ಸಿದ್ಧಪಡಿಸಿದ್ದು, ಬೆಂಗಳೂರು ಟೆಕ್‌ ಶೃಂಗದಲ್ಲಿ ಇದು ಪ್ರದರ್ಶನಗೊಳ್ಳುತ್ತಿದೆ.

ಅಣೆಕಟ್ಟೆ, ಶಾಖೋತ್ಪನ್ನ ಕೇಂದ್ರ, ಪರಮಾಣು ಇಂಧನ ಕೇಂದ್ರ ಹಾಗೂ ಇನ್ಯಾವುದೇ ಬೃಹತ್ ಕಟ್ಟಡಗಳ ಸದೃಢತೆಯನ್ನು ಪರೀಕ್ಷಿಸಲು ಅತ್ಯಾಧುನಿಕ ಕ್ಯಾಮೆರಾ ಬಳಸಿ, ಮಷೀನ್ ಲರ್ನಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಬಳಸಿದ ತಂತ್ರಜ್ಞಾನ ಇದಾಗಿದೆ.

‘ಸ್ಟ್ರಕ್ಚರಲ್‌ ಹೆಲ್ತ್ ಮಾನಿಟರಿಂಗ್ ಟೂಲ್‌’ ಎಂದು ಕರೆಯಲಾಗುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಲ್ಲಿ ಮಲ್ಟಿಸ್ಪೇಷಿಯಲ್‌ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಬಳಸಿ ಡ್ರೋನ್ ಮೂಲಕ ಕಟ್ಟಡದ ಪ್ರತಿಯೊಂದು ಕೋನದಿಂದ ಚಿತ್ರ ಸಹಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಡ್ರೋನ್‌ ಕಳುಹಿಸುವ ಪ್ರತಿಯೊಂದು ಮಾಹಿತಿಯನ್ನೂ ಸಂಗ್ರಹಿಸುವ ತಂತ್ರಾಂಶವು ಅದನ್ನು ವಿಶ್ಲೇಷಿಸುತ್ತದೆ’ ಎಂದು ಕಂಪನಿಯ ಡಾ. ರೇಣು ಶರತ್ ವೆಗೇಸನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೀಗೆ ಸಂಗ್ರಹಿಸುವ ಮಾಹಿತಿಯನ್ನು ಆಧರಿಸಿ ಕಟ್ಟಡವು ಕಂಪನವನ್ನು ಎಷ್ಟರ ಮಟ್ಟಿಗೆ ತಡೆಯಬಹುದು, ಕಟ್ಟಡದ ಒಟ್ಟು ಸದೃಢತೆ ಎಷ್ಟಿದೆ, ಕಟ್ಟಡದ ಯಾವ ಭಾಗ ದುರ್ಬಲವಾಗಿದೆ, ದುರಸ್ತಿ ಮಾಡದಿದ್ದರೆ ಎಷ್ಟು ಭಾಗ, ಎಷ್ಟು ದಿನಗಳಲ್ಲಿ ಹಾಗೂ ಎಷ್ಟು ಪ್ರಮಾಣದಲ್ಲಿ ಕುಸಿಯಲಿದೆ ಎಂಬ ಮಾಹಿತಿಯನ್ನು ಇದು ನೀಡುತ್ತದೆ. ಕಟ್ಟಡ ಕುಸಿಯುವ 2 ಗಂಟೆ ಮೊದಲೇ ತಿಳಿಸುವಷ್ಟರ ಮಟ್ಟಿಗೆ ಇದು ನಿಖರತೆ ಹೊಂದಿದೆ’ ಎಂದು ವಿವರಿಸಿದರು.

‘ಶಾಖೋತ್ಪನ್ನ ಕೇಂದ್ರದ ಒಂದು ಘಟಕದ ಸಮೀಕ್ಷೆಗೆ ಕನಿಷ್ಠ ಮೂರು ಗಂಟೆ ಬೇಕು. ಹಾಗೆಯೇ 2 ಕಿ.ಮೀ. ಉದ್ದದ ಅಣೆಕಟ್ಟೆಯ ಸಮೀಕ್ಷೆಗೆ 2 ದಿನಗಳು ಅಗತ್ಯ. ಇದಕ್ಕಾಗಿ ಅತಿನೇರಳೆ ಕಿರಣ, ಇನ್‌ಫ್ರಾ ರೆಡ್ ರೇಡಿಯೇಷನ್‌, ಡೀಪ್‌ ಪೆನೆಟ್ರೇಷನ್‌ನಂತ ಸ್ಕ್ಯಾನರ್‌ಗಳನ್ನು ಬಳಸಲಾಗುವುದು. ಇದರಿಂದ ನೀರಿನ ಮೇಲೆ ಹಾಗೂ ನೀರಿನ ಒಳಭಾಗದಲ್ಲೂ ಡ್ರೋನ್‌ಗಳ ಮೂಲಕ ಮಾಹಿತಿ ಸಂಗ್ರಹಿಸಿ ಈ ಸಾಧನ ವರದಿ ಸಿದ್ಧಪಡಿಸಲಿದೆ’ ಎಂದು ಡಾ. ರೇಣು ಹೇಳಿದರು.

‘ಈ ಸಾಧನವನ್ನು ಲಿಖಿತ್ ರೆಡ್ಡಿ, ಶರತ್ ಬಾಬು ಹಾಗೂ ಮಲ್ಲಿಕಾರ್ಜುನ್ ಅಭಿವೃದ್ಧಿಪಡಿಸಿದ್ದಾರೆ. ಐದು ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಈ ತಂತ್ರಜ್ಞಾನ ಎನ್‌ಟಿಪಿಸಿ ಸೇರಿದಂತೆ ಹಲವು ಕಟ್ಟಡಗಳ ಪರೀಕ್ಷೆಗೆ ಪ್ರಾಯೋಗಿಕವಾಗಿ ಬಳಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.