ADVERTISEMENT

2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040– ಚಂದ್ರನ ಅಂಗಳಕ್ಕೆ ಮಾನವ ಗುರಿ: PM ಮೋದಿ

ಪಿಟಿಐ
Published 17 ಅಕ್ಟೋಬರ್ 2023, 10:07 IST
Last Updated 17 ಅಕ್ಟೋಬರ್ 2023, 10:07 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ರಾಯಿಟರ್ಸ್ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಮಂಗಳವಾರ ಸಭೆ ನಡೆಸಿ, 2035ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಸಿದ್ಧಪಡಿಸುವುದು ಹಾಗೂ 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಗುರಿಯನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.

ADVERTISEMENT

ಗಗನಯಾನ ಯೋಜನೆ ಹಾಗೂ ಬಾಹ್ಯಾಕಾಶಕ್ಕೆ ತೆರಳುವ ನೌಕೆಯಲ್ಲಿರುವ ಗಗನ ಯಾತ್ರಿಗಳು ಅನಿರೀಕ್ಷಿತ ಅಪಾಯಗಳಿಂದ ಪಾರಾಗುವ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಕುರಿತು ವಿಜ್ಞಾನಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ಯೋಜನೆಯ ಸಿದ್ಧತೆ ಮತ್ತು 2025ರಲ್ಲಿ ಜಾರಿಗೊಳ್ಳುವ ಯೋಜನೆಗಳ ಸಿದ್ಧತೆಯ ಅವಲೋಕನ ಸಭೆ ಇದಾಗಿದೆ’ ಎಂದು ಪ್ರಧಾನಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಆವಿಷ್ಕಾರಗಳ ಕುರಿತು ಪ್ರಧಾನಿ ಅವರು ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಶುಕ್ರ ಹಾಗೂ ಮಂಗಳ ಗ್ರಹಕ್ಕೆ ಲ್ಯಾಂಡರ್‌ ಕಳುಹಿಸುವ ಯೋಜನೆ ಒಳಗೊಂಡಂತೆ ಅಂತರಗ್ರಹ ಕಾರ್ಯಾಚರಣೆಗಳ ಕುರಿತು ವಿಜ್ಞಾನಿಗಳು ಹೆಚ್ಚಿನ ಕೆಲಸ ಮಾಡಬೇಕಿದೆ’ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

‘ಇತ್ತೀಚಿನ ಚಂದ್ರಯಾನ–3 ಯೋಜನೆ ಹಾಗೂ ಆದಿತ್ಯ ಎಲ್‌1 ಯೋಜನೆಗಳ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಈಗ ಹೊಸ ಹಾಗೂ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಬೇಕಾಗಿದೆ. ಭಾರತೀಯ ಅಂತರಿಕ್ಷ ನಿಲ್ದಾಣದ ನಿರ್ಮಾಣ 2035ರ ಹೊತ್ತಿಗೆ ಆಗುವಂತೆ ಹಾಗೂ ಚಂದ್ರನ ಅಂಗಳಕ್ಕೆ ಮಾನವರ ಕಳುಹಿಸುವ ಯೋಜನೆ 2040ರೊಳಗೆ ಯಶಸ್ವಿಯಾಗುವಂತೆ ಯೋಜನೆ ರೂಪಿಸಬೇಕಿದೆ’ ಎಂದು ತಿಳಿಸಿದ್ದಾರೆ.

‘ಭಾರತದ ಬಾಹ್ಯಾಕಾಶ ಯೋಜನೆ ಹೊಸ ಎತ್ತರಕ್ಕೆ ಬೆಳೆದು ನಿಂತಿದೆ. ಬಾಹ್ಯಾಕಾಶ ವಿಜ್ಞಾನಿಗಳ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಭರವಸೆ ಇದೆ’ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಚಂದ್ರಯಾನ ಸರಣಿ ಯೋಜನೆಗಳ ಆಧರಿಸಿ, ಹೊಸ ತಲೆಮಾರಿನ ಉಡ್ಡಯನ ವಾಹನ, ಹೊಸ ಮಾದರಿಯ ಉಡ್ಡಯನ ಕೇಂದ್ರದ ನಿರ್ಮಾಣ, ಮಾನವ ಕೇಂದ್ರಿತ ಪ್ರಯೋಗಾಲಯ ಹಾಗೂ ಅದರ ಪೂರಕ ತಂತ್ರಜ್ಞಾನದ ಅಭಿವೃದ್ಧಿ’ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.

‘ಬಾಹ್ಯಾಕಾಶ ಇಲಾಖೆಯು ಗಗನಯಾನ ಯೋಜನೆ ಒಳಗೊಂಡಂತೆ ಬಹಳಷ್ಟು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಮಾನವ ಸಹಿತ ಉಡ್ಡಯನ ವಾಹನ ಮತ್ತು ಅದರ ವ್ಯವಸ್ಥೆಯೂ ಒಳಗೊಂಡಿದೆ. ಮಾನವ ಸಹಿತ ಉಡ್ಡಯನ ವಾಹನದಲ್ಲಿ ಮಾನವ ರಹಿತ ಯೋಜನೆ ಒಳಗೊಂಡಂತೆ 20 ಪ್ರಮುಖ ಪರೀಕ್ಷಾರ್ಥ ಪ್ರಯೋಗಗಳು ನಡೆದಿವೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.