ADVERTISEMENT

ಝಿಬಾಕ್ಸ್‌: ಸಾಂಕ್ರಾಮಿಕ ಹರಡುವ ಬ್ಯಾಕ್ಟೀರಿಯಾ, ಫಂಗೈ ಕೊಲ್ಲುವ ತಂತ್ರಜ್ಞಾನ

ಅಪಾಯಕಾರಿ ವೈರಾಣುಗಳ ಸಂಹಾರಕ!

ಎಸ್.ರವಿಪ್ರಕಾಶ್
Published 4 ಜನವರಿ 2021, 21:11 IST
Last Updated 4 ಜನವರಿ 2021, 21:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಸ್ಪತ್ರೆಯ ವಾರ್ಡ್‌ಗಳು ಮತ್ತು ಐಸಿಯುಗಳಲ್ಲಿರುವ ಕೊರೊನಾ ಸೇರಿದಂತೆ ವಿವಿಧ ಬಗೆಯ ಅಪಾಯಕಾರಿ ರೋಗಕಾರಕ ವೈರಾಣುಗಳು, ಬ್ಯಾಕ್ಟೀರಿಯಾಗಳು, ಫಂಗೈಗಳನ್ನು ನಾಶ ಮಾಡಬಲ್ಲ ತಂತ್ರಜ್ಞಾನವೊಂದನ್ನು ಬೆಂಗಳೂರಿನ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಅಂಡ್‌ ಮಾಲೆಕ್ಯುಲಾರ್‌ ಪ್ಲಾಟ್‌ಫಾರಂ(ಸಿ–ಕ್ಯಾಂಪ್‌) ಇನ್ನೆರಡು ಸಂಸ್ಥೆಗಳ ಜತೆ ಸೇರಿ ಅಭಿವೃದ್ಧಿಪಡಿಸಿದೆ.

ಈ ಸೋಂಕು ನಾಶಕ ಜೈವಿಕ ತಂತ್ರಜ್ಞಾನ ಬಳಕೆಗೆ ಸಿದ್ಧವಾಗಿದೆ. ಇದಕ್ಕೆ ‘ಝಿಬಾಕ್ಸ್‌’ ಎಂದು ಹೆಸರಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ಈ ತಂತ್ರಜ್ಞಾನ ವರದಾನ ಎನಿಸಿದೆ.

ಆಸ್ಪತ್ರೆ ಮಾತ್ರವಲ್ಲದೆ ಯಾವುದೇ ಕಟ್ಟಡಗಳ ಒಳಗೆ ಇರಬಹುದಾದ ಸೋಂಕು ಹರಡುವ ವೈರಾಣುಗಳನ್ನು ಈ ಅತ್ಯಾಧುನಿಕ ದೇಶಿ ನಿರ್ಮಿತ ತಂತ್ರಜ್ಞಾನ ನಾಶಪಡಿಸಬಲ್ಲದು. ವಾಯುಶೋಧಕದ(ಏರ್‌ಪ್ಯೂರಿಫಯರ್) ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ವಾಯುಶೋಧಕದ ಮೂಲಕ ಸೂಕ್ಷ್ಮಾಣುಗಳ ನಿವಾರಕವನ್ನು ಸೇರಿಸಲಾಗುತ್ತದೆ. ಇದು ಯಾವುದೇ ಒಂದು ಕೊಠಡಿಯಲ್ಲಿ ಇರಬಹುದಾದ ಕೋಟಿಗಟ್ಟಲೆ ವೈರಸ್‌, ಬ್ಯಾಕ್ಟೀರಿಯಾ ಮತ್ತು ಫಂಗೈಗಳನ್ನು ನಾಶಪಡಿಸುತ್ತದೆ.

ADVERTISEMENT

* ಪ್ರಮುಖ ಮೂರು ಗುಣಲಕ್ಷಣಗಳನ್ನು ಒಳಗೊಂಡ ತಂತ್ರಜ್ಞಾನ ಯಾವುದೇ ದೇಶದಲ್ಲಿ ಸದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ಝಿಬಾಕ್ಸ್‌ ‘ಜಾಗತಿಕ ಜೀವ ರಕ್ಷಕ’

–ಡಾ.ತಸ್ಲಿಮಾರಿಫ್‌ ಸೈಯ್ಯೆದ್, ಸಿಇಒ, ಸಿ–ಕ್ಯಾಂಪ್

* ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈ ತಂತ್ರಜ್ಞಾನದ ಕ್ಲಿನಿಕಲ್ ಟ್ರಯಲ್‌ ನಡೆದಿದೆ. ಈ ತಂತ್ರಜ್ಞಾನ ಬಳಕೆಗೆ ಯೋಗ್ಯವಾಗಿದೆ.

–ಡಾ.ಜಾನಕಿ ವೆಂಕಟರಾಮನ್, ನಿರ್ದೇಶಕಿ, ಬಯೋಮೊನೆಟಾ ಟೆಕ್ನಾಲಜಿ

ಮೂರು ಗುಣಲಕ್ಷಣಗಳು:

1. ಆರಂಭದಲ್ಲಿ ಆಸ್ಪತ್ರೆಗಳಿಗಾಗಿ ಸೋಂಕು ತಡೆ ತಂತ್ರಜ್ಞಾನವಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಔಷಧಗಳ ನಿರೋಧಕ ಶಕ್ತಿ ಬೆಳೆಸಿಕೊಂಡ ಬ್ಯಾಕ್ಟೀರಿಯಾ ಸೋಂಕು ತಡೆಗಟ್ಟುವ ಉದ್ದೇಶವಿತ್ತು. ಹೊಸ ತಂತ್ರಜ್ಞಾನವು ಆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

2.ರೋಗವನ್ನು ತರಬಲ್ಲ ಸೂಕ್ಷ್ಮಾಣುಗಳನ್ನು ‘ಬಲೆ’ಗೆ ಬೀಳಿಸುವುದಷ್ಟೇ ಅಲ್ಲದೆ, ಅವುಗಳನ್ನು ಕೊಲ್ಲುವಲ್ಲೂ ಯಶಸ್ವಿಯಾಗಿತ್ತು. ಇವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದುದು ಮಾತ್ರವಲ್ಲದೆ ರೋಗಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುತ್ತಿರಲಿಲ್ಲ.

3.ಎಲ್ಲಕ್ಕಿಂತ ಮುಖ್ಯವಾಗಿ ಈ ತಂತ್ರಜ್ಞಾನದ ಕಾರ್ಯನಿರ್ವಹಣೆ ಸ್ವಯಂ ಚಾಲಿತವಾಗಿದ್ದರಿಂದ, ನಿರ್ವಹಣೆಗೆ ಯಾವುದೇ ವ್ಯಕ್ತಿಯ ಅಗತ್ಯವಿರಲಿಲ್ಲ. ಇದರಿಂದ ವೈರಸ್‌ ಸೋಂಕಿಗೆ ಒಳಗಾದವರಿಂದ ಆಸ್ಪತ್ರೆ ಸಿಬ್ಬಂದಿ ಸೋಂಕಿಗೆ ಒಳಗಾಗುವ ಆಪಾಯವೂ ಇರಲಿಲ್ಲ.

ಸಿ–ಕ್ಯಾಂಪ್‌ ಜತೆಗೆ ‘ಅಪ್ಲೈಡ್‌ ಮೆಟಿರಿಯಲ್ಸ್‌ ಇಂಡಿಯಾ’, ‘ಬಯೊಮೊನೆಟಾ ರೀಸರ್ಚ್‌’ ಸೇರಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿವೆ. ಕೋವಿಡ್‌–19 ಇನೋವೆಷನ್‌ ಡಿಪ್ಲಾಯ್‌ಮೆಂಟ್‌ ಆಕ್ಸಲರೇಟರ್‌(ಸಿ–ಸಿಐಡಿಎ) ಯೋಜನೆ ಅಡಿ ತಂತ್ರಜ್ಞಾನ ರೂಪುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.