ADVERTISEMENT

ಚಂದ್ರ, ಗುರು, ಶ್ರವಣ ನಕ್ಷತ್ರ ದರ್ಶನ ಆಗಸ್ಟ್ 22ರಂದು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 1:10 IST
Last Updated 22 ಆಗಸ್ಟ್ 2021, 1:10 IST
ಭಾನುವಾರ ಆಗಸದಲ್ಲಿ ಚಂದ್ರ, ಗುರು ಹಾಗೂ ಶ್ರಾವಣ ನಕ್ಷತ್ರವನ್ನು ಒಟ್ಟಾಗಿ ಕಣ್ತುಂಬಿಕೊಳ್ಳಬಹುದು.
ಭಾನುವಾರ ಆಗಸದಲ್ಲಿ ಚಂದ್ರ, ಗುರು ಹಾಗೂ ಶ್ರಾವಣ ನಕ್ಷತ್ರವನ್ನು ಒಟ್ಟಾಗಿ ಕಣ್ತುಂಬಿಕೊಳ್ಳಬಹುದು.   

ಉಡುಪಿ: ಶ್ರವಣ ಹುಣ್ಣಿಮೆಯ ಚಂದ್ರನೊಂದಿಗೆ ಗುರುಗ್ರಹದ ಹುಣ್ಣಿಮೆ ಆ.22ರಂದು ನಡೆಯುತ್ತಿರುವುದು ವಿಶೇಷ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಸಂಯೋಜಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಹುಣ್ಣಿಮೆ ದಿನ ಸಂಪೂರ್ಣ ಚಂದ್ರ ಇಡೀ ರಾತ್ರಿ ಬೆಳಗಿ, ಮುಂದಿನ ದಿನದ ಸೂರ್ಯೋದಯಕ್ಕೆ ಅಸ್ತನಾಗುತ್ತಾನೆ. ಚಂದ್ರನಂತೆಯೇ ಗುರು ಗ್ರಹ ವರ್ಷದಲ್ಲಿ ಕೆಲವು ದಿನಗಳು ಇಡೀ ರಾತ್ರಿ ಕಾಣುತ್ತದೆ. ಭಾನುವಾರ ಚಂದ್ರ ಹಾಗೂ ಗುರು ಗ್ರಹ ಜೊತೆಯಾಗಿ ಹುಣ್ಣಿಮೆ ಆಚರಿಸುತ್ತಿರುವುದು ವಿಶೇಷ. ಇದೊಂದು ಅಪರೂಪದ ವಿದ್ಯಮಾನವಾಗಿದ್ದು, ಚಂದ್ರ, ಗುರು ಹಾಗೂ ಶ್ರವಣ ನಕ್ಷತ್ರವೂ ಜೊತೆ ಜೊತೆಯಾಗಿ ಕಾಣಸಿಗಲಿದ್ದು, ಆಸಕ್ತರು ಕಣ್ತುಂಬಿಕೊಳ್ಳಬಹುದು. ದೂರ ದರ್ಶಕದಲ್ಲಿ ಗುರು ಗ್ರಹ ನೋಡಲು ಆಗಸ್ಟ್‌ ತಿಂಗಳು ಒಳ್ಳೆಯ ಕಾಲ ಎನ್ನುತ್ತಾರೆ ಡಾ.ಎ.ಪಿ.ಭಟ್‌.

ಆಕಾಶದಲ್ಲಿ ಚಂದ್ರನು ಗುರು ಗ್ರಹಕ್ಕಿಂತ ದೊಡ್ಡದಾಗಿ ಕಾಣುತ್ತಾನೆ. ವಾಸ್ತವವಾಗಿ ಚಂದ್ರ ಗುರುಗ್ರಹಕ್ಕಿಂತ ಚಿಕ್ಕದಾಗಿದ್ದರೂ ಭೂಮಿಗೆ ತುಂಬಾ ಹತ್ತಿರದಲ್ಲಿರುವುದು ಇದಕ್ಕೆ ಕಾರಣ. ವಾಸ್ತವವಾಗಿ ಚಂದ್ರ ಭಾನುವಾರ 3,74,484 ಕಿಮೀ ದೂರದಲ್ಲಿದ್ದರೆ, ಗುರು ಗ್ರಹ ಭೂಮಿಯಿಂದ 36.50 ಕೋಟಿ ಕಿಮೀ ದೂರದಲ್ಲಿರುತ್ತದೆ. ಚಂದ್ರನಿಗಿಂತ ಗುರುಗ್ರಹ ಅದೆಷ್ಟು ದೊಡ್ಡದು ಎಂದರೆ ಗುರುಗ್ರಹದ ಹೊಟ್ಟೆ ಖಾಲಿಯಾಗಿದ್ದರೆ 60 ಸಾವಿರ ಚಂದ್ರರನ್ನು ತುಂಬಬಹುದು.

ADVERTISEMENT

ಶ್ರವಣ ಮಾಸ ಎಂದರೆ ಹುಣ್ಣಿಮೆ ಚಂದ್ರ. ಶ್ರವಣ ನಕ್ಷತ್ರ ಭೂಮಿಯಿಂದ ಸುಮಾರು 16.7 ಜ್ಯೋತಿರ್ವರ್ಷ ದೂರದಲ್ಲಿದೆ. ಈ ನಕ್ಷತ್ರ ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದು. ಇಂದಿನ ದಿನ ಶ್ರವಣ ನಕ್ಷತ್ರ, ಚಂದ್ರ ಹಾಗೂ ಗುರು ಗ್ರಹ ಅಕ್ಕಪಕ್ಕದಲ್ಲಿ ಕಾಣಲಿದ್ದು ಖಗೋಳಾಸಕ್ತರು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಆಸ್ಟ್ರೊನಾಮರ್ಸ್‌ ಕ್ಲಬ್‌ನ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.