ADVERTISEMENT

ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ ಹೆಸರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 0:30 IST
Last Updated 23 ಮಾರ್ಚ್ 2024, 0:30 IST
<div class="paragraphs"><p>ಐಸ್ಟೋಕ್ ಸಾಂದರ್ಭಿಕ ಚಿತ್ರ</p></div>

ಐಸ್ಟೋಕ್ ಸಾಂದರ್ಭಿಕ ಚಿತ್ರ

   

ಬೆಂಗಳೂರು: ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಕ್ಷುದ್ರಗ್ರಹವೊಂದಕ್ಕೆ ಬೆಂಗಳೂರು ಮೂಲದ ಖಭೌತ ವಿಜ್ಞಾನಿ ಜಯಂತಮೂರ್ತಿ ಅವರ ಹೆಸರನ್ನು ಇಟ್ಟಿದೆ. ಇನ್ನು ಮುಂದೆ ಈ ಕ್ಷುದ್ರಗ್ರಹವನ್ನು ‘ಜಯಂತಮೂರ್ತಿ‘ ಹೆಸರಿನಿಂದಲೇ ಕರೆಯಲಾಗುವುದು.

ಜಯಂತ ಅವರು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021ರಲ್ಲಿ ನಿವೃತ್ತಿ ಹೊಂದಿದ್ದರು. ಆ ಬಳಿಕ ಅದೇ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಖಭೌತ ವಿಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ ಕ್ಷುದ್ರಗ್ರಹ ‘2005 ಇಎಕ್ಸ್‌ 296’ಕ್ಕೆ ಅವರ ಹೆಸರು ಇಡುವ ಸಂಬಂಧ ಅಂತರರಾಷ್ಟ್ರೀಯ ಖಗೋಳ ಒಕ್ಕೂಟ ಇದೇ 18ರಂದು ಪ್ರಕಟಣೆ ಹೊರಡಿಸಿದೆ. ನಾಸಾದ ನವ ದಿಗಂತ ವಿಜ್ಞಾನ ಅನ್ವೇಷಣೆ ತಂಡದ ಸದಸ್ಯರಾಗಿ ಜಯಂತ ಅವರು ಬ್ರಹ್ಮಾಂಡದಿಂದ ಹೊರಹೊಮ್ಮುವ ನೆರಳಾತೀತ ಹಿನ್ನೆಲೆಯ ವಿಕಿರಣವನ್ನು ಗಮನಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೂರ್ತಿ, ‘ಖಗೋಳ ವಿಜ್ಞಾನದ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇತ್ತು. ನೀಲ್ ಆರ್ಮಸ್ಟ್ರಾಂಗ್ ಅವರು ಚಂದ್ರನ ಮೇಲೆ ಇಳಿಯುವುದನ್ನು ನೋಡಿದ್ದೆ. ಆಕಾಶದತ್ತ ತಲೆ ಎತ್ತಿ ನೋಡುವಾಗ ನನ್ನ ಹೆಸರಿನ ಕ್ಷುದ್ರಗ್ರಹ ನೋಡಲು ಖುಷಿ ಎನ್ನಿಸುತ್ತದೆ. ಕ್ಷುದ್ರಗ್ರಹಗಳಿಗೆ ವಿಜ್ಞಾನಿಗಳಲ್ಲದೇ ಬೇರೆಯವರ ಹೆಸರುಗಳನ್ನೂ ಇಡಲಾಗುತ್ತದೆ. ಚೆಸ್ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್ ಆನಂದ್ ಅವರ ಹೆಸರನ್ನೂ ಕ್ಷುದ್ರಗ್ರಹವೊಂದಕ್ಕೆ ಇಡಲಾಗಿದೆ’ ಎಂದರು.

‘ನನ್ನ ಪ್ರಾಥಮಿಕ ಸಂಶೋಧನಾ ಆಸಕ್ತಿ ಅಂತರ್ ತಾರಾ ಮಾಧ್ಯಮ (ಇಂಟರ್‌ಸ್ಟೆಲ್ಲಾರ್) ಮತ್ತು ಧೂಳು, ನೆರಳಾತೀತ ಖಗೋಳ ವಿಜ್ಞಾನ ಹಾಗೂ ಬಾಹ್ಯಾಕಾಶ ಯಾನಗಳ ಕುರಿತಾಗಿತ್ತು’ ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.