ಗಾಳಿಯ ಮೂಲಕವೂ ಕೋವಿಡ್–19 ವೈರಸ್ ಹರಡುತ್ತದೆ ಎಂದು ಕಳೆದ ವಾರ ಎರಡು ನೂರಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಾಂಕ್ರಾಮಿಕ ರೋಗತಜ್ಞರು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯೂಎಚ್‌ಒ) ಪತ್ರ ಬರೆದದ್ದು ದೊಡ್ಡ ಸುದ್ದಿಯಾಗಿತ್ತು. ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕಿನಿಂದ ಕಂಗೆಟ್ಟಿದ್ದ ಜನರಿಗೆ ಈ ಸುದ್ದಿ ಮತ್ತಷ್ಟು ಆತಂಕ ಮೂಡಿಸಿತ್ತು. ಆನಂತರ, ಗಾಳಿಯಿಂದ ಹರಡುವುದಿಲ್ಲ ಎನ್ನುವ ಸಮಜಾಯಿಷಿ ಸುದ್ದಿಗಳು ಹೊರಬಿದ್ದವು.
ಈ ಸುದ್ದಿಗಳು ಹೀಗೆ ಹರಿದಾಡುವ ವೇಳೆಯಲ್ಲೇ ಹ್ಯೂಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಕೊರೊನಾ ನಿಯಂತ್ರಿಸಲು ‘ಕ್ಯಾಚ್ ಆಂಡ್ ಕಿಲ್’ ಏರ್ ಫಿಲ್ಟರ್ ಅಭಿವೃದ್ಧಿಪಡಿಸಿದ್ದಾರೆ. ಇದು ಶೇ 99.8ರಷ್ಟು ಕೊರೊನಾ ಮತ್ತು ಸಾರ್ಸ್ ವೈರಾಣುಗಳನ್ನು ನಿಷ್ಕ್ರಿಯಗೊಳಿಸಿ, ನಾಶಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಈ ಮಧ್ಯೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸೆಂಟರ್ ಫಾರ್ ನ್ಯಾನೊ ಸೈನ್ಸ್ ಆಂಡ್ ಎಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳ ನೂತನ್ ಲ್ಯಾಬ್ ನವೋದ್ಯಮವು ಕೊರೊನಾ ಸೋಂಕು ನಿಯಂತ್ರಿಸಲು ಇದೇ ಮಾದರಿಯಲ್ಲಿ‘ಏರ್ ಪ್ಯೂರಿಫೈಯರ್ ಮತ್ತು ಸ್ಟೆರಲೈಸರ್’ ಅಭಿವೃದ್ಧಿಪಡಿಸಿದೆ.ಏರ್ ಫಿಲ್ಟರ್‌ನಲ್ಲಿರುವ ನ್ಯಾನೊ ತಂತ್ರಜ್ಞಾನ ಕೋವಿಡ್–19 ವೈರಾಣು ಮುಕ್ತ ಪರಿಶುದ್ಧ ಗಾಳಿ ನೀಡುತ್ತದೆ ಎಂದು ತಯಾರಕರು ಹೇಳಿದ್ದಾರೆ.
ಕ್ಯಾಚ್ ಆಂಡ್ ಕಿಲ್ ಮಾದರಿ
‘ಕ್ಯಾಚ್ ಆಂಡ್ ಕಿಲ್’ ಮಾದರಿಯಲ್ಲಿಯೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಏರ್ ಫಿಲ್ಟರ್ ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
‘ನಮ್ಮ ನ್ಯಾನೊ ಕೊರೊನಾ ಏರ್ ಫಿಲ್ಟರ್ ಕೂಡ‘ಕ್ಯಾಚ್ ಆಂಡ್ ಕಿಲ್’ ಏರ್ ಫಿಲ್ಟರ್‌ನಷ್ಟೇ ಸಮರ್ಥವಾಗಿ ಕೆಲಸ ಮಾಡುತ್ತದೆ. ನಾಲ್ಕು ಹಂತದಲ್ಲಿ ನಡೆಯುವ ಗಾಳಿಯ ಫಿಲ್ಟರ್ ಪ್ರಕ್ರಿಯೆಯಲ್ಲಿ ಶೇ 99.9ರಷ್ಟು ವೈರಾಣು, ಬ್ಯಾಕ್ಟೀರಿಯಾ ನಾಶವಾಗುತ್ತವೆ’ ಎನ್ನುತ್ತಾರೆ ಸಂಶೋಧಕ ನೂತನ್ ಹಿರೇನಲ್ಲೂರು.
ನಾಲ್ಕು ಹಂತದಲ್ಲಿ ಗಾಳಿ ಪರೀಕ್ಷೆ
ನಾವು ಉಸಿರಾಡುವ ಗಾಳಿಯಲ್ಲಿರುವ ವೈರಾಣು, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳನ್ನುಈ ಯಂತ್ರದಲ್ಲಿರುವ ಬಹುಹಂತದ ಏರ್ ಫಿಲ್ಟರ್‌ಗಳು (Multi Stages Air Filters) ತಡೆಹಿಡಿದು ಕೊಲ್ಲುತ್ತವೆ. ಗಾಳಿಯಲ್ಲಿರುವ ದುರ್ವಾಸನೆ, ವಿಷಕಾರಿ ಅನಿಲ, ಹೊಗೆ, ಶಿಲೀಂಧ್ರ, ಧೂಳಿನ ಕಣ, ಹೂವುಗಳ ಪರಾಗಗಳನ್ನು ಸೋಸಿ ಶುದ್ಧಗಾಳಿ ನೀಡುತ್ತದೆ.
ಏರ್ ಫಿಲ್ಟರ್‌ನಲ್ಲಿ ಅಳವಡಿಸಲಾಗಿರುವ ಫೈಬರ್‌ಗಳ ಮೇಲಿರುವ ಲೋಹ ಲೇಪಿತ ನ್ಯಾನೊ ಕಣಗಳು ಕೋವಿಡ್–19 ವೈರಾಣುಗಳನ್ನು ತಡೆಹಿಡಿದು, ನಾಶಪಡಿಸುತ್ತವೆ.ಕಡಿಮೆ ಸದ್ದು ಮಾಡುವ ಈ ಯಂತ್ರಪರಿಸರಸ್ನೇಹಿಯಾಗಿದ್ದು, ಮರುಬಳಕೆಯ ಏರ್ ಫಿಲ್ಟರ್‌ಗಳನ್ನುವರ್ಷಕ್ಕೊಮ್ಮೆ ಬದಲಾಯಿಸಬೇಕಾ ಗುತ್ತದೆ.ಒಂದು ಯಂತ್ರ ಅಂದಾಜು ನಾಲ್ಕು ಸಾವಿರ ಚದರ ಅಡಿಯ ಒಳಾಂಗಣದ ಗಾಳಿಯನ್ನು ಶುದ್ಧಗೊಳಿಸುತ್ತದೆಎಂದು ನೂತನ್ ಲ್ಯಾಬ್ಸ್ ಹೇಳಿಕೊಂಡಿದೆ.
ಈ ಸಾಧನವನ್ನು ಎಲ್ಲಿ ಬಳಸಬಹುದು?
ನಾಲ್ಕು ಗೋಡೆಗಳ ನಡುವೆ ದ್ವಿತೀಯ ಹಂತದ ಸೋಂಕು ಹರಡದಂತೆ ನಿಯಂತ್ರಿಸಲು ಈ ಸಾಧನ ಸಹಾಯಕಾರಿ. ಮನೆ, ಶಾಲೆ, ಕಾಲೇಜು, ಕಚೇರಿ, ಆಸ್ಪತ್ರೆ, ಅಂಗಡಿ, ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್, ಪಾರ್ಟಿ ಹಾಲ್, ವಿಮಾನ ನಿಲ್ದಾಣ, ಚಿತ್ರಮಂದಿರಗಳಲ್ಲಿ ಶುದ್ಧ ಗಾಳಿಗಾಗಿ ಈ ಯಂತ್ರವನ್ನು ಬಳಸಬಹುದು ಎನ್ನುತ್ತಾರೆ ತಯಾರಕರು.
ಸಂಪರ್ಕ: 9071149995
ವೆಬ್‌ಸೈಟ್:www.nutanlabs.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.