ADVERTISEMENT

ಬಾವಲಿಗಳ 'ಜಿಪಿಎಸ್' ಬುದ್ಧಿ...

ನೇಸರ ಕಾಡನಕುಪ್ಪೆ
Published 5 ನವೆಂಬರ್ 2024, 23:35 IST
Last Updated 5 ನವೆಂಬರ್ 2024, 23:35 IST
<div class="paragraphs"><p>ಬಾವಲಿ</p></div>

ಬಾವಲಿ

   


ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನೀವಿರುವ ಜಾಗದಲ್ಲಿ ವಿದ್ಯುತ್‌ ದೀಪವಿಲ್ಲ; ಬೆಳದಿಂಗಳೂ ಇಲ್ಲ. ನಿಮ್ಮ ಮನೆಯಿಂದ ಕತ್ತಲೆಯ ಹೊತ್ತಿನಲ್ಲಿ ಸುಮಾರು ಮೂರು ಕಿಲೋಮೀಟರ್‌ ಸಂಪೂರ್ಣ ಅಂಧಕಾರದಲ್ಲಿ ಕ್ರಮಿಸುತ್ತೀರಿ. ವಾಪಸ್‌ ಹೋಗಬೇಕು ಎಂದರೆ ಅದು ಸಾಧ್ಯವೇ? ಅದು ಅಸಾಧ್ಯ ತಾನೇ? ಆದರೆ, ಅದು ಬಾವಲಿಗಳಿಗೆ ಸಾಧ್ಯ. ಮೊದಲನೆಯದಾಗಿ ಕತ್ತಲಿನಲ್ಲಿ ಸಂಚಾರ ಆರಂಭಿಸಲೇ ನಮಗೆ ಸಾಧ್ಯವಾಗದು. ಇನ್ನು ವಾಪಸಾಗುವ ಮಾತೆಲ್ಲಿ ಬಂದಿತು?

ಆದರೆ, ಬಾವಲಿಗಳು ತಮ್ಮಲ್ಲಿ ಅಡಗಿರುವ ‘ಎಕೊಲೊಕೇಟಿಂಗ್’ (‘ಪ್ರತಿಫಲನ ಜಾಗಪತ್ತೆ’) ಸಾಮರ್ಥ್ಯದಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ರಮಿಸುವ ಶಕ್ತಿಯನ್ನು ತಂತ್ರಜ್ಞಾನವನ್ನಾಗಿ ಬದಲಿಸುವ ಸಂಶೋಧನೆಯನ್ನು ಜರ್ಮನಿಯ ಕಾನ್ಸ್‌ಸ್ಟಾನ್ಸ್ ಜರ್ಮನಿ ವಿಶ್ವವಿದ್ಯಾಲಯದ ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನದಿಂದ ‘ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ’ಗೆ ಹೊಸ ಆಯಾಮವೇ ಸಿಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ADVERTISEMENT

ಬಾವಲಿಗಳು ಈಗಾಗಲೇ ಅನೇಕ ತಂತ್ರಜ್ಞಾನ ಸಂಶೋಧನೆಗೆ ಸ್ಫೂರ್ತಿಯಾಗಿವೆ. ಉದಾಹರಣೆಗೆ, ಸಾಗರದಾಳದಲ್ಲಿ ಬಳಸುವ ‘ಸೋನಾರ್‌’ ವ್ಯವಸ್ಥೆ. ಡಾಲ್ಫಿನ್‌ಗಳು ಸಹ ಇದೇ ಶಕ್ತಿಯನ್ನು ಹೊಂದಿವೆ. ಅಂದರೆ, ಬಾವಲಿಗಳು ಅಥವಾ ಡಾಲ್ಫಿನ್‌ಗಳು ಹೊರಡಿಸುವ ‘ಅಲ್ಟ್ರಾಸೋನಿಕ್’ ಶಬ್ದವು ಬಹುದೂರ ಸಂಚರಿಸಿ ವಾಸಪಾಗುತ್ತವೆ. ಈ ವಾಪಸಾಗುವ ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಜೀವಸಂಕುಲದಲ್ಲಿ ಬಾವಲಿ, ಡಾಲ್ಫಿನ್‌ ರೀತಿಯ ಕೆಲವೇ ಜೀವಿಗಳಿಗೆ ಇರುವುದು. 1915ರಲ್ಲಿ ನೌಕಾ ವಾಸ್ತುಶಿಲ್ಪತಜ್ಞ ಲೂಯಿಸ್ ನಿಕ್ಸನ್ ಈ ತಂತ್ರಜ್ಞಾನವನ್ನು ಕಂಡುಹಿಡಿದ. ಆ ತಂತ್ರಜ್ಞಾನವನ್ನು ಇಂದಿಗೂ ಜಲಾಂತರ್ಗಾಮಿ ನೌಕೆಗಳಲ್ಲಿ ಬಳಸಲಾಗುತ್ತಿದೆ. ಹೆಚ್ಚಾಗಿ ಭೂಮಿಯೊಳಗಿನ ಅಥವಾ ಸಾಗರದೊಳಗಿನ ಸೈನ್ಯದಿಂದ ಶಬ್ದಬಳಕೆ ಅಥವಾ ಪತ್ತೆ ಇದರ ಹೂರಣ. ಆದರೆ, ಸೋನಾರ್ ಭೂಮಿಯ ಮೇಲೂ ಬಳಕೆಯಾಗಬೇಕು ಎಂಬ ವಾದ ಮೊದಲಿನಿಂದಲೂ ಇದೆ. ಆದರೆ, ಭೂಮಿಯ ಮೇಲೆ ‘ರೇಡಾರ್’ ಹಾಗೂ ‘ಲೇಸರ್’ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆ ಇರುವ ಕಾರಣ, ಸೋನಾರ್ ಬಳಕೆ ಅಷ್ಟಾಗಿ ಪ್ರಚಲಿತವಾಗಲಿಲ್ಲ. ಆದರೆ, ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿಗಳು ಈ ವಾದವನ್ನು ಭಿನ್ನವಾಗಿಯೇ ವ್ಯಾಖ್ಯಾನಿಸಿದ್ದಾರೆ. ಅಂದರೆ, ಈ ಬಗೆಯ ತಂತ್ರಜ್ಞಾನಗಳನ್ನು ಕೇವಲ ಸೇನೆಯ ಬಳಕೆಗೆ ಮೀಸಲು ಮಾಡದೇ ನಾಗರಿಕ ಬಳಕೆಗೂ ಬಳಸಬಹುದೇ ಎಂಬ ಚಿಂತನೆ.

20 ಕಿಲೋಹರ್ಟ್ಸ್‌ ಕಂಪನಾಂಕಕ್ಕಿಂತಲೂ ಹೆಚ್ಚಿನ ಶಬ್ದಗಳನ್ನು ಆಲಿಸುವ ಶಕ್ತಿ ಮನುಷ್ಯನಿಗೆ ಇಲ್ಲ. ಇವನ್ನೇ ‘ಅಲ್ಟ್ರಾಸೋನಿಕ್’ ಶಬ್ದವೆಂದು ಕರೆಯುವುದು. ಈ ಬಗೆಯ ಶಬ್ದಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಅಲ್ಟ್ರಾಸೌಂಡ್‌ ಇಮೇಜಿಂಗ್. ಶಬ್ದದಿಂದ ದೇಹದೊಳಗಿನ ಅಂಗಗಳ ಚಿತ್ರಗಳನ್ನೂ ನೋಡಲು ಸಾಧ್ಯ ಎಂಬ ವಿಶೇಷ ತಂತ್ರಜ್ಞಾನವಿದು. ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿಯಂಥ ಕ್ಷೇತ್ರಗಳಲ್ಲೂ ಇದರ ಬಳಕೆ ಇದೆ. ಈ ಬಗೆಯ ಶಬ್ದಗಳ ನಿಖರತೆ ಹೆಚ್ಚು. ಅಂದರೆ, ಈ ಬಗೆಯ ಶಬ್ದಗಳು ಚಲಿಸುವ ಕಂಪನಾಂಕ ನಷ್ಟವಾಗುವುದಿಲ್ಲ. ಅಂದರೆ, ಅವು ಚಲಿಸುತ್ತಿರುವ ಅಡೆತಡೆಗಳು ಉಂಟಾದರೆ ಅವು ಪ್ರತಿಫಲವಾಗಿ ವಾಪಸಾಗುವಾಗ ಪೂರ್ಣ ಪ್ರಮಾಣದಲ್ಲಿ ತಲುಪುತ್ತವೆ. ಈ ತಂತ್ರಜ್ಞಾನವನ್ನು ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿ ಆಯಾ ಗೋಲ್ಡ್ ಸ್ಟೀನ್ ನೇತೃತ್ವದ ತಂಡವು ಜಿಪಿಎಸ್‌ಗೆ ಅಳವಡಿಸಿದೆ. ಈ ಸಂಶೋಧನೆಯನ್ನು ಪ್ರತಿಷ್ಠಿತ ‘ಸೈನ್ಸ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

ಏನಿದು ತಂತ್ರಜ್ಞಾನ?

ಇಸ್ರೇಲಿನ ಹುಲಾ ಕಣಿವೆಯಲ್ಲಿ ಮಾತ್ರ ಸಿಗುವ ‘ಕ್ಹುಲ್ಸ್‌ ಬಾವಲಿ’ಗಳನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ. ಇವು ಗಾತ್ರದಲ್ಲಿ ತೀರಾ ಸಣ್ಣವಿದ್ದು, ಕೇವಲ 6 ಗ್ರಾಂ ತೂಗುತ್ತವೆ. ಈ ಕಣಿವೆಗಳು ಎಷ್ಟು ಆಳವಾಗಿವೆ ಎಂದರೆ, ರಾತ್ರಿಯಿರಲಿ, ಹಗಲಿನಲ್ಲೂ ಸೂರ್ಯನ ಬೆಳಕು ತಾಗುವುದಿಲ್ಲ. ಈ ಬಾವಲಿಗಳು ಗುಂಪು ಸಂವಹನ ನಡೆಸುತ್ತಾ, ತಾವು ಹೊರಡಿಸುವ ಅಲ್ಟ್ರಾಸೌಂಡ್‌ ಶಬ್ದಗಳ ಪ್ರತಿಫಲನವನ್ನು ಗಮನಿಸಿ ಸುಮಾರು 3 ಕಿಲೊಮೀಟರ್ ದೂರವನ್ನು ಕ್ರಮಿಸಿ ವಾಪಸಾಗುವುದನ್ನು ಆಯಾ ಗೋಲ್ಡ್ ಸ್ಟೀನ್ ಅವರ ತಂಡವು ಸುಮಾರು 2 ವರ್ಷಗಳ ಕಾಲ ಅತಿ ಸೂಕ್ಷ್ಮವಾಗಿ ಗಮನಿಸಿದೆ. ಇವರ ಈ ಸಂಶೋಧನೆಯನ್ನು ಎರಡು ಪ್ರಮುಖ ವಿಚಾರಗಳನ್ನು ವಿಜ್ಞಾನಿಗಳು ಕಲಿತುಕೊಂಡಿದ್ದಾರೆ. ಅಲ್ಟ್ರಾಸೌಂಡ್‌ ಶಬ್ದಗಳ ಪ್ರತಿಫಲನವನ್ನು ಗ್ರಹಿಸಿ ಸಂಚರಿಸುವ ಗುಣ ಒಂದಾದರೆ, ಬಾವಲಿಗಳ ನಡುವೆ ನಡೆಯುವ ಗುಂಪು ಸಂವಹನ ಕ್ರಿಯೆ. ಇದನ್ನು ‘ಕಲೆಕ್ಟಿವ್ ಇಂಟೆಲಿಜೆನ್ಸ್’ (‘ಗುಂಪುಬುದ್ಧಿಮತ್ತೆ’) ಎಂದು ಕರೆಯಲಾಗುತ್ತದೆ. ಈ ಎರಡೂ ಸಾಮರ್ಥ್ಯವನ್ನು ಬಳಸಿಕೊಂಡು ಅತ್ಯಂತ ನಿಖರವಾಗಿ ತಾವು ತಲುಪಬಹುದಾದ ಜಾಗವನ್ನು ಈ ಬಾವಲಿಗಳು ತಲುಪುತ್ತವೆ ಎಂಬ ವಿಚಾರ ತಿಳಿದಿದೆ. ಇದೇ ಸಾಮರ್ಥ್ಯದಿಂದಾಗಿ ಕೇವಲ 3 ಕಿಲೋಮೀಟರ್‌ ದೂರ ಮಾತ್ರವಲ್ಲದೇ, ಅದನ್ನು ಗುಂಪು ಬುದ್ಧಿಮತ್ತೆಯ ಸಹಾಯದಿಂದ ಹಲವು ಕಿಲೋಮೀಟರ್‌ಗಳವರೆಗೂ ವಿಸ್ತರಿಸಬಹುದಾದ ಜಾಲವನ್ನೂ ಈ ಬಾವಲಿಗಳು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಪತ್ತೆಯಾಗಿದೆ.

ಬಾವಲಿಗಳ ಈ ಸಾಮರ್ಥ್ಯ ನಮಗೆ ಸ್ಫೂರ್ತಿಯಾಗಿದೆ ಎಂದು ವಿಜ್ಞಾನಿ ಆಯಾ ಹೇಳಿದ್ದಾರೆ. ‘ಬಯೋ ಮಿಮಿಕ್ರಿ’ (‘ಜೈವಿಕ ನಕಲು’) ಈಗಾಗಲೇ ಲೆಕ್ಕವಿಲ್ಲದಷ್ಟು ತಂತ್ರಜ್ಞಾನಗಳ ಸಂಶೋಧನೆಗೆ ಅನುವು ಮಾಡಿಕೊಟ್ಟಿದೆ. ಬಾವಲಿಗಳ ಈ ಗುಣವನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂಗೆ ಅಳವಡಿಸಿ ನಿಖರ ಜಾಗವನ್ನು ಪತ್ತೆಮಾಡಬಹುದಾಗಿದೆ. ಹಾಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಉಪಗ್ರಹ ಆಧಾರಿತವಾಗಿ ನಡೆಯುತ್ತಿದೆ. ಅದಕ್ಕೆ ಇಂಟರ್ನೆಟ್ ಸಂಪರ್ಕ ಇರಲೇಬೇಕೆಂದೇನೂ ಇಲ್ಲ. ಆದರೆ, ಇಂಟರ್ನೆಟ್‌ ಇದ್ದರೆ ಬಳಕೆ ಹೆಚ್ಚು ಸುಧಾರಿತವಾಗಿ ಇರುತ್ತದೆ. ಈ ಹೊಸ ತಂತ್ರಜ್ಞಾನವಿದ್ದರೆ, ಉಪಗ್ರಹ ಆಧಾರಿತ ತಂತ್ರಜ್ಞಾನವೇ ಇರುವುದಿಲ್ಲ ಎನ್ನುವುದು ವಿಜ್ಞಾನಿಗಳ ವಾದ.

ಅಂದರೆ, ವಾಹನಗಳಲ್ಲಿ ಈ ಹೊಸ ಸೋನಾರ್ ಸಾಧನವನ್ನು ಅಳವಡಿಸಿ ಅಲ್ಟ್ರಾಸೌಂಡ್ ಹೊರಡಿಸುವಂತೆ ಮಾಡುವುದು. ಈ ಶಬ್ದವು ಪ್ರತಿಫಲಿಸಿ ಮರಳಿದಾಗ ಅದರ ಮೂಲಕ ಸ್ಥಳಗಳನ್ನು ಗ್ರಹಿಸುವುದು. ಜೊತೆಗೆ, ಈ ತಂತ್ರಜ್ಞಾನವು ಗುಂಪು ಬುದ್ಧಿಮತ್ತೆಯನ್ನೂ ಹೊಂದಿರುವ ಕಾರಣ, ಒಂದು ಸಂಪರ್ಕ ಜಾಲ ಸೃಷ್ಟಿಯಾಗುತ್ತದೆ. ಅದರ ಮೂಲಕ ಸ್ಥಳಪತ್ತೆಯ ವ್ಯಾಪ್ತಿಯನ್ನು ಹೆಚ್ಚಿಸುವುದು. ಇದಕ್ಕೆ ಉಪಗ್ರಹ ಅಥವಾ ಇಂಟರ್ನೆಟ್‌ ಎರಡೂ ಬೇಡ ಎನ್ನುವುದು ವಿಜ್ಞಾನಿಗಳ ವಾದ. ಆದರೂ, ಈ ತಂತ್ರಜ್ಞಾನಕ್ಕೆ ಕೆಲವು ಮಿತಿಗಳಿವೆ. ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಿದ್ದು, ಈ ತಂತ್ರಜ್ಞಾನ ಕೆಲಸ ಮಾಡಬಹುದು. ಆದರೆ, ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ವಿರಳವಾಗಿರುವ ಸ್ಥಳಗಳಲ್ಲಿ ಈ ತಂತ್ರಜ್ಞಾನ ನಿಖರವಾಗಿ ಕಾರ್ಯನಿರ್ವಹಿಸಬಹುದೇ ಎಂಬ ವಿಮರ್ಶೆ ಈಗಾಗಲೇ ಹೊರಬಿದ್ದಿದೆ. ಈಗಾಗಲೇ ಚಾಲ್ತಿಯಲ್ಲಿ ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಂ ಜೊತೆಗೆ, ಇದೊಂದು ಹೆಚ್ಚುವರಿ ತಂತ್ರಜ್ಞಾನವಾಗಿ ಸೇರ್ಪಡೆಯಾಗುವುದು ಸೂಕ್ತ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.