ನವದೆಹಲಿ: ಸುಲಭವಾಗಿ ರಾಸಾಯನಿಕ ಕ್ರಿಯೆಗಳಿಗೆ ಒಳಗಾಗುವ, ಅತ್ಯಂತ ಹಗುರವಾಗ ಲೋಹ ಲಿಥಿಯಂ. ನಿತ್ಯದ ಜೊತೆಗಾರನಾಗಿ ಸ್ಮಾರ್ಟ್‌ಗಳ ಬ್ಯಾಟರಿಗಳಲ್ಲಿ ಹಾಗೂ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳಲ್ಲಿ ಪ್ರಮುಖ ಅಂಶವಾಗಿರುವುದು ಲಿಥಿಯಂ. ಆದರೆ, ಇದು ಭೂಮಿಗೆ ಬಂದಿದ್ದಾರೂ ಎಲ್ಲಿಂದ? ದೀರ್ಘಕಾಲದಿಂದ ಬಿಡಿಸಲಾಗದ ವೈಜ್ಞಾನಿಕ ಒಗಟಾಗಿದ್ದ ಲಿಥಿಯಂ ಮೂಲವನ್ನು ಬೆಂಗಳೂರಿನ ಖಗೋಳ ಭೌತಶಾಸ್ತ್ರಜ್ಞರು ಬಿಡಿಸಿದ್ದಾರೆ.
1,370 ಕೋಟಿ ವರ್ಷಗಳ ಹಿಂದೆ ನಡೆದ ಮಹಾಸ್ಫೋಟದಲ್ಲಿ (ಬಿಗ್ ಬ್ಯಾಂಗ್) ಸೃಷ್ಟಿಯಾದ ಏಕೈಕ ಲೋಹ ಲಿಥಿಯಂ. 25 ಲಕ್ಷ ಡಿಗ್ರಿ ಕೆಲ್ವಿನ್ ಉಷ್ಣಾಂಶವಿರುವ ನಕ್ಷತ್ರಗಳು ಲಿಥಿಯಂ ಲೋಹವನ್ನು ಸಂಪೂರ್ಣ ನಾಶವಾಗಿಸಬಹುದು. ಹಾಗಾದರೆ, ಲಿಂಥಿಯಂ ಬಂದಿದ್ದಾರೂ ಎಲ್ಲಿಂದ ಎಂಬುದು ರಹಸ್ಯವಾಗಿಯೇ ಉಳಿದಿತ್ತು.
ತಾರಾಗಣದ 1,00,000 ನಕ್ಷತ್ರಗಳ ವೀಕ್ಷಣೆಯ ಮಾಹಿತಿಯನ್ನು ವಿಶ್ಲೇಷಿಸಿರುವ ಭಾರತೀಯ ಖಭೌತಶಾಸ್ತ್ರ ಸಂಸ್ಥೆಯ (ಐಐಎ) ಸಂಶೋಧಕರು, ಸೂರ್ಯನ ರೀತಿ ಕಡಿಮೆ ದ್ರವ್ಯರಾಶಿ (mass) ಹೊಂದಿರುವ ನಕ್ಷತ್ರಗಳು ಅವುಗಳ ಒಡಲಲ್ಲಿ ನಡೆಯುವ 'ಹೀಲಿಯಂ ಫ್ಲ್ಯಾಷ್' ಪ್ರಕ್ರಿಯೆಯಲ್ಲಿ ಲಿಥಿಯಂ ಉತ್ಪಾದಿಸುತ್ತವೆ. ನಕ್ಷತ್ರದ ಒಳಗೆ ಹೀಲಿಯಂ ಅನಿಲ ಅತಿ ಹೆಚ್ಚು ಉಷ್ಣಾಂಶಕ್ಕೆ ಒಳಗಾಗಿ ದೊಡ್ಡ ಪ್ರಮಾಣದ ಇಂಗಾಲವಾಗಿ ಪರಿವರ್ತನೆಯಾಗುವ ಪ್ರಕ್ರಿಯೆ ಹೀಲಿಯಂ ಫ್ಲ್ಯಾಷ್.
ಲಿಥಿಯಂ ಉತ್ಪಾದಿಸುವ ನಕ್ಷತ್ರಗಳ ದ್ರವ್ಯರಾಶಿ ಭೂಮಿಗೆ ಬೆಳಕಿನ ಮೂಲವಾಗಿರುವ ಸೂರ್ಯನಿಗಿಂತ ಎರಡು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಅಥವಾ ಎರಡು ಹೆಚ್ಚು ತೂಕ ಹೊಂದಿರುತ್ತವೆ. ವಿಜ್ಞಾನಿಗಳ ಸಂಶೋಧನಾ ವರದಿಯು ನೇಚರ್ ಆ್ಯಸ್ಟ್ರಾನಮಿಯಲ್ಲಿ ಸೋಮವಾರ ಪ್ರಕಟವಾಗಿದ್ದು, ನಾಲ್ಕು ದಶಗಳ ಹಿಂದಿನ ಸಿದ್ಧಾಂತವನ್ನು ಬದಿಗಿರಿಸಿದೆ. ಅದರ ಪ್ರಕಾರ ಶೇ 1ರಷ್ಟು ನಕ್ಷತ್ರಗಳು ಮಾತ್ರ ಲಿಥಿಮಿಯಂ ಉತ್ಪಾದಿಸುತ್ತವೆ ಎಂದು ಹೇಳಲಾಗಿತ್ತು. ಲಿಥಿಯಂ ಸೃಷ್ಟಿಯಾಗುವ ಪ್ರಕ್ರಿಯೆ ಕುರಿತು ಅಲ್ಪಸ್ವಲ್ಪ ವಿವರಗಳಷ್ಟೇ ತಿಳಿದು ಕೊಳ್ಳಲಾಗಿತ್ತು.
'ಹೀಲಿಯಂ ಫ್ಲ್ಯಾಷ್ ಪ್ರಕ್ರಿಯೆ ನಡೆಯುವ ಕಡಿಮೆ ದ್ರವ್ಯರಾಶಿ ಹೊಂದಿರುವ ನಕ್ಷತ್ರಗಳಲ್ಲಿ ಲೀಥಿಯಂ ಉತ್ಪಾದನೆಯಾಗುತ್ತದೆ ಎಂಬುದನ್ನು ನಮ್ಮ ಅನ್ವೇಷಣೆ ತಿಳಿಸುತ್ತಿದೆ. ನಕ್ಷತ್ರಗಳು ಜೀವಿತಾವಧಿಯಲ್ಲಿ ಲಿಥಿಯಂನ್ನು ನಾಶಪಡಿಸುತ್ತವೆ ಎಂಬ ಹಿಂದಿನ ಯೋಚನೆಗಳಿಗೆ ಈ ಅನ್ವೇಷಣೆ ಸವಾಲೊಡ್ಡಿದೆ. ಭವಿಷ್ಯದಲ್ಲಿ ಸೂರ್ಯ ಸಹ ಲಿಥಿಯಂ ಉತ್ಪಾದಿಸಲಿದೆ ಎಂಬುದನ್ನೂ ನಮ್ಮ ಅಧ್ಯಯನವು ಸೂಚಿಸುತ್ತದೆ. ಈ ಬಗ್ಗೆ ಹಿಂದಿನ ಯಾವುದೇ ಮಾದರಿಗಳಲ್ಲಿ ಊಹಿಸಲಾಗಿಲ್ಲ...' ಎಂದು ಐಐಎ ಪ್ರೊಫೆಸರ್ ಬಿ.ಈಶ್ವರ್ ರೆಡ್ಡಿ ಹೇಳಿದ್ದಾರೆ.
ಭೌತಿಕ ಜಗತ್ತಿನಲ್ಲಿ ಕಾಲಕ್ರಮೇಣ ಲಿಥಿಯಂ ಅಂಶ ನಾಲ್ಕು ಪಟ್ಟು ಹೆಚ್ಚಾಗಿದೆ. ಇತರೆ ಮೂಲಧಾತುಗಳಿಗೆ ಹೋಲಿಸಿದರೆ ಇದು ಅಲ್ಪ ಪ್ರಮಾಣದ್ದಾಗಿದೆ. ಇಂಗಾಲ, ನೈಟ್ರೊಜನ್, ಆಕ್ಸಿಜನ್ ಹಾಗೂ ನಿಕಲ್ ಸೇರಿ ಮೂಲಧಾತುಗಳು ಲಕ್ಷಾಂತರ ಪಟ್ಟು ಹೆಚ್ಚಳವಾಗಿವೆ.
'ಲಿಥಿಯಂ ಉತ್ಪತ್ತಿಯಾಗುತ್ತಿದ್ಧಂತೆ ಅದು ನಾಶವಾಗುತ್ತದೆ ಎಂಬುದು ನಾಲ್ಕು ದಶಗಳಿಂದ ಬಿಡಿಸಲಾಗದ ಬಹು ದೊಡ್ಡ ಒಗಟಾಗಿ ಉಳಿದಿತ್ತು' ಎಂದು ಈಶ್ವರ್ ರೆಡ್ಡಿ ಹೇಳಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್, ಆಸ್ಟ್ರೇಲಿಯಾದ ಮೊನಾಶ್ ಯೂನಿವರ್ಸಿಟಿ, ಮತ್ತು ಪ್ರಿನ್ಸ್ಟನ್‌ನ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಸಹಯೋಗದೊಂದಿಗೆ ಬೆಂಗಳೂರಿನ ಖಭೌತಶಾಸ್ತ್ರಜ್ಞರು ಖಗೋಳದಲ್ಲಿ ಲಿಥಿಯಂ ಮೂಲವನ್ನು ತಿಳಿದುಕೊಳ್ಳುವ ಜೊತೆಗೆ ಅದರ ಉತ್ಪತ್ತಿಯ ಪ್ರಕ್ರಿಯೆ ವಿವರಣೆಗಳನ್ನೂ ಪ್ರಸ್ತಾಪಿಸಿದ್ದಾರೆ.
ಗರಿಷ್ಠ ಮಟ್ಟದ ಉಷ್ಣಾಂಶವಿರುವ ನಕ್ಷತ್ರಗಳಲ್ಲಿ ಲಿಥಿಯಂ ಹೇಗೆ ಉಳಿದುಕೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮತ್ತೊಂದು ಸವಾಲು ಈಗ ವಿಜ್ಞಾನಿಗಳ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.