ADVERTISEMENT

ಜೇಡನ ನೂಲಿನ ಬಟ್ಟೆ! ಹೊಸ ಅಧ್ಯಯನ

ಪ್ರಜಾವಾಣಿ ವಿಶೇಷ
Published 25 ಏಪ್ರಿಲ್ 2023, 18:38 IST
Last Updated 25 ಏಪ್ರಿಲ್ 2023, 18:38 IST
ಜೇಡನ ಬಲೆ
ಜೇಡನ ಬಲೆ   ಸಾಂದರ್ಭಿಕ ಚಿತ್ರ

ಅಮೃತೇಶ್ವರಿ ಬಿ.

ಜೇಡವು ತನ್ನ ದೇಹದಲ್ಲಿ ಒಂದು ರೀತಿಯ ಪ್ರೊಟೀನನ್ನು ಉತ್ಪಾದಿಸಿಕೊಂಡು ರೇಷ್ಮೆಎಳೆಯಂತಹ ನೂಲನ್ನು ಹೆಣೆದು, ಬಲೆಯನ್ನು ತಯಾರಿಸಿಕೊಳ್ಳುತ್ತದೆ. ಅದನ್ನು ತನ್ನ ಮೊಟ್ಟೆ-ಮರಿಗಳನ್ನು ರಕ್ಷಿಸಿಕೊಳ್ಳಲು, ಬೇಟೆಯನ್ನು ಹಿಡಿಯಲು ಹೀಗೆ ತನ್ನ ವಿವಿಧ ಅವಶ್ಯಕತೆಗಳಿಗೆ ಬಳಸಿಕೊಳ್ಳುತ್ತದೆ ಎನ್ನುವುದು ನಮ್ಮೆಲ್ಲರಿಗೂ ಗೊತ್ತು. ಆದರೆ ಪ್ರೊಟೀನು ಸಕ್ಕರೆ ಅಂಶಗಳಿಂದ ತಯಾರಾಗಿರುವ ಇದರ ಸದೃಢತೆ ಮತ್ತು ಬಲ ಉಕ್ಕಿಗೂ ಉತ್ತಮವಂತೆ. ಹರಿದರೂ ಹರಿಯದಂತೆ. ಇದು ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿತ್ತು. ಇದನ್ನು ಅಧ್ಯಯನ ಮಾಡಿ, ಅಷ್ಟೇ ಸದೃಢವಾದ ನೂಲನ್ನು ನಾವು ತಯಾರಿಸಬಹುದೇ ಎಂದು ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಹಾಗೂ ಸಂಶೋಧಕರಾದ ಫ್ಯುಜಾಂಗ್‌ ಜಾಂಗ್‌ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಹಾಗೆ ತಯಾರಿಸಿದ ನೂಲನ್ನು ಹತ್ತಿ, ಉಣ್ಣೆಯಂತೆ ಬಟ್ಟೆ ಉದ್ಯಮದಲ್ಲಿ ಬಳಸಿಕೊಳ್ಳಬಹುದೇ ಎಂದು ಪರೀಕ್ಷಿಸುವುದು ಇವರ ಉದ್ದೇಶವಾಗಿತ್ತು.

ಮೊದಲಿಗೆ ಜಾಂಗ್‌ ಬ್ಯಾಕ್ಟೀರಿಯಾವನ್ನು ಬಳಸಿಕೊಂಡು ನೂಲನ್ನು ತಯಾರಿಸಿ ಅದರ ಸದೃಢತೆಯನ್ನೂ ವರ್ಧಿಸಲು ಪ್ರಯತ್ನಿಸಿದ್ದಾರೆ. ಜೇಡನಂತೆ ನಾವೂ ಅದೇ ಪ್ರೊಟೀನು ಸಕ್ಕರೆ ಅಮೈನೋ–ಆಮ್ಲಗಳನ್ನು ಸೇರಿಸಿ ನೂಲನ್ನು ಎಣೆಯುವುದರಲ್ಲಿಯಂತು ವಿಜಯ ಸಾಧಿಸಿದ್ದಾರೆ. ಆದರೆ ಅದರ ಇಳುವರಿ ಹಾಗೂ ದೃಢತೆ ಅವರು ಆಶಿಸಿದಂತೆ ಇರಲಿಲ್ಲ. ಪ್ರತಿ ವರ್ಷವೂ ಸುಮಾರು ಒಂದು ಸಾವಿರ ಕೋಟಿ ಉಡುಪುಗಳನ್ನು ನಾವು ಉತ್ಪಾದಿಸುತ್ತಿರುವ ನಾವು ಸುಮಾರು ಹತ್ತು ಕೋಟಿ ತ್ಯಾಜ್ಯವನ್ನೂ ಪರಿಸರಕ್ಕೆ ನೀಡುತ್ತಿದ್ದೇವೆ. ಇಂತೆಡೆಗಳಲ್ಲಿ ನವೀಕರಿಸಬಹುದಾದ ಹಾಗೂ ಪರಿಸರಕ್ಕೆ ಹಾನಿಕಾರಕವಲ್ಲದ ಸಾವಯವ ಕಚ್ಚಾವಸ್ತುಗಳಿಗೆ ಬೇಡಿಕೆ ಹೆಚ್ಚು. ಹಾಗಾಗಿ ಬಟ್ಟೆ ಉದ್ಯಮದಲ್ಲಿ ಈ ಸಾವಯವ ನೂಲನ್ನು ಬಳಸಿಕೊಳ್ಳಬೇಕೆಂದರೆ ಉತ್ತಮ ಇಳುವರಿ ಅತ್ಯವಶ್ಯಕ. ಇದಕ್ಕಾಗಿ ನಿರಂತರವಾಗಿ ಶ್ರಮಿಸಿದ ಜಾಂಗ್‌ ಹೊಸ ತಂತ್ರವೊಂದನ್ನು ಪತ್ತೆ ಮಾಡಿದ್ದಾರೆ. ಅದುವೇ ಕೃತಕವಾಗಿ ತಯಾರಿಸಿಕೊಂಡಿರುವ ನೂಲಿಗೆ ಬ್ಯಾಕ್ಟೀರಿಯಾದಿಂದ ಉತ್ಪಾದಿಸಿದ ಪ್ರೊಟೀನನ್ನು ಕೂಡಿಸುವುದು.

ADVERTISEMENT

ನೈಸರ್ಗಿಕ ಪ್ರೊಟೀನುಗಳು ಅಷ್ಟು ಬಲವಾಗಿರಲು ಕಾರಣ ಪ್ರೊಟೀನುಗಳ ಉದ್ದನೆಯ ಪುನರಾವರ್ತಿತ ಸಂಯೋಜನೆ. ಇದೇ ರೀತಿಯ ಪುನರಾವರ್ತಿತ ಸಂಯೋಜನೆಯನ್ನು ನಾವು ಬಳಸುವ ಬ್ಯಾಕ್ಟೀರಿಯಾಗಳಿಂದ ನಿರೀಕ್ಷಿಸಲಾಗುವುದಿಲ್ಲ ಎನ್ನುತ್ತಾರೆ, ಜಾಂಗ್.‌ ಹಾಗಾಗಿಯೇ ಪ್ರೊಟೀನಿನ ಪುನರಾವರ್ತಿತ ಜೋಡಣೆಯಲ್ಲದೇ ಬೇರೆ ವಿಧಾನವಿದೆಯೇ ಎಂದು ನೋಡಿದ್ದಾರೆ. ಪ್ರೊಟೀನು ಸರಣಿಯ ಕ್ರಮವನ್ನು ವ್ಯತ್ಯಾಸ ಮಾಡಿ ನೂಲಿನ ಎಳೆಯೊಡನೆ ಕೂಡಿಸಿದಾಗ ಗಟ್ಟಿಯಾದ ಎಳೆಗಳು ತಯಾರಾದುವೇ ಎಂದು ಪರೀಕ್ಷಿಸಿದ್ದಾರೆ. ಅದಕ್ಕೆ ಇವರು ಬಳಸಿರುವುದು ಮಸೆಲ್‌ ಫೂಟ್‌ ಪ್ರೊಟೀನು.

ನೀರಿನ ಆಳದಲ್ಲಿ ಇರುವ ಮಸೆಲ್‌ ಎನ್ನುವ ಮೃದ್ವಂಗಿಗಳು ಕಲ್ಲುಬಂಡೆಗಳಿಗೆ ಅಂಟಿಕೊಂಡಿರಲು ತಮ್ಮ ಕಾಲುಗಳಲ್ಲಿ ಒಂದು ಬಗೆಯ ಪ್ರೊಟೀನನ್ನು ಸ್ರವಿಸುತ್ತವೆ. ಈ ಪ್ರೊಟೀನು ಬಲವಾಗಿ ಬೆಸೆದುಕೊಳ್ಳಬಲ್ಲದು. ಇದನ್ನು ಅನುಸರಿಸಿದ ಜಾಂಗ್‌ ಮತ್ತು ಸಂಗಡಿಗರು ತಮ್ಮ ಪ್ರಯೋಗಾಲಯದಲ್ಲಿ ಬ್ಯಾಕ್ಟೀರಿಯಾವನ್ನು ಬಳಸಿಕೊಂಡು ಇದೇ ರೀತಿಯ ಪ್ರೊಟೀನನ್ನು ಉತ್ಪಾದಿಸಿದ್ದಾರೆ. ಈ ಪ್ರೊಟೀನನ್ನು ಈಗಾಗಲೇ ಕೃತಕವಾಗಿ ತಯಾರಿಸಿರುವ ನೂಲಿನ ಎರಡೂ ಬದಿಗಳಲ್ಲಿ ಪುನರ್‌ ಸಂಯೋಜಿಸಿದ್ದಾರೆ. ಇದು ಕೇವಲ ಪುನರ್‌ ಸಂಯೋಜಿತ ಕೃತಕ ನೂಲಿಗಿಂತಲೂ ಎಂಟು ಪಟ್ಟು ಸದೃಢ ಹಾಗೂ ಗಟ್ಟಿ. ಸುಲಭವಾಗಿ ಹರಿಯಲಾಗುವುದೂ ಇಲ್ಲ. ಬಲು ಹಗುರವೂ ಹೌದು ಮತ್ತು ಉಡುಪು ತಯಾರಿಸಲು ಸೂಕ್ತವೂ ಎನ್ನುತ್ತಾರೆ, ಜಾಂಗ್.‌ ಇವರು ಒಂದು ಲೀಟರು ಬ್ಯಾಕ್ಟೀರಿಯಾ ಕಲ್ಚರಿನಿಂದ ಸುಮಾರು ಎಂಟು ಗ್ರಾಂನಷ್ಟು ಪ್ರೊಟೀನು ಇಳುವರಿಯನ್ನು ತೆಗೆದಿದ್ಧಾರೆ. ಹಾಗಾಗಿ ಬಟ್ಟೆ ಉತ್ಪಾದನೆಯ ಯಶಸ್ಸನ್ನು ಪರೀಕ್ಷಿಸುವಷ್ಟು ಇಳುವರಿಯನ್ನು ಬ್ಯಾಕ್ಟಿರಿಯಾದಿಂದ ಪಡೆದುಕೊಂಡಿರುವುದು ಜಾಂಗ್‌ ಅವರ ಮೊದಲ ಸಾಧನೆ. ಜೊತೆಗೆ ಇದೇ ಪ್ರೊಟೀನನ್ನು ಇತರೆ ಬಯೋಮೆಡಿಕಲ್‌ ಉಪಯೋಗಗಳಿಗಾಗಿ ಅಂಟಿಕೊಳ್ಳುವ ವಸ್ತುಗಳಾಗಿಯೂ ಬಳಸುಬಹುದೇ ಎಂದು ನೋಡಿದ್ದಾರೆ.

ಜಾಂಗ್‌ ತಯಾರಿಸಿರುವ ಕೃತಕ ನೂಲು ಅಗ್ಗವಾದ ಹಾಗೂ ಬೇಕಾದಂತೆ ವಿನ್ಯಾಸ ಮಾಡಿಕೊಂಡಿರುವ ಬ್ಯಾಕ್ಟೀರಿಯಾದ ಸಹಾಯದಿಂದ ಸಿದ್ದಪಡಿಸಿರುವುದರಿಂದ, ಇದು ಪೆಟ್ರೋಲಿಯಂ ಉತ್ಪನ್ನಗಳಾದ ನೈಲಾನ್‌ ಮತ್ತು ಪಾಲಿಯಿಸ್ಟರಿನಂತಹ ನೂಲುಗಳಿಗೆ ಉತ್ತಮ ಪರ್ಯಾಯವಾಗಬಹುದು ಎನ್ನುವುದು ಸಂತಸದ ವಿಷಯ. ಇದು ನವೀಕರಿಸಬಹುದಾದ ಹಾಗೂ ಸುಲಭವಾಗಿ ವಿಘಟನೆಯೂ ಆಗಬಲ್ಲಂತಹ ನೂಲಾಗಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು.

ಕೃತಕ ಜೀವವಿಜ್ಞಾನದಲ್ಲಿ ಇಂತಹ ಪ್ರೊಟೀನುಗಳ ಸರಣಿಯನ್ನು ಬೇಕಾದ ಹಾಗೆ ವಿನ್ಯಾಸ ಮಾಡಿಕೊಳ್ಳುವ ಅವಕಾಶಗಳಿರುವುದರಿಂದ ನಿಸರ್ಗವನ್ನೇ ಅನುಸರಿಸಿಕೊಂಡು ಅವಶ್ಯಕತೆಗೆ ತಕ್ಕಂತಹ ವಸ್ತುಗಳನ್ನು ಸೃಷ್ಟಿಸಿಕೊಳ್ಳಬಹುದು. ಹೀಗೆ ತಯಾರಾದ ವಸ್ತುಗಳು ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳಿಗಿಂತಲೂ ಬಹುಮುಖವಾದವು ಎನ್ನುತ್ತಾರೆ, ಜಾಂಗ್. ಮತ್ತು ಮುಂದಿನ ದಿನಗಳಲ್ಲಿ ಉತ್ಪನ್ನ ಹಾಗೂ ಮಾರುಕಟ್ಟೆಗೆ ಸೂಕ್ತವಾದಂತೆ ಬದಲಾವಣೆಗಳನ್ನು ತರಬಹುದಾದಂತಹ ನೂಲುಗಳನ್ನು ಸಿದ್ದಪಡಿಸುವತ್ತ ಸಂಶೋಧನೆಯನ್ನು ಮುಂದುವರೆಸುತ್ತಾರಂತೆ.

ಅಂತೂ ಹತ್ತಿ, ಉಣ್ಣೆ ಬಟ್ಟೆಗಳ ಜೊತೆಗೆ ಹೊಸದೊಂದು ಜೈವಿಕ ನೂಲಿನ ಬಟ್ಟೆಯೊಂದು ತಯಾರಾಗುವ ಕಾಲ ಸನ್ನಿಹಿತವಾಯಿತು. ಬಟ್ಟೆ ಉದ್ಯಮದಿಂದಾಗುವ ಪರಿಸರ ಹಾನಿಯನ್ನು ತಪ್ಪಿಸುವ ಹೊಸ ಮಾರ್ಗವೊಂದು ಪತ್ತೆಯಾಯಿತೆನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.