ADVERTISEMENT

ಮಂಗಳನ ಅಂಗಳದಲ್ಲಿ ಜೈವಿಕಾಂಶ ಇವೆಯಾ? ಏನು ಹೇಳುತ್ತವೆ ಅಧ್ಯಯನ

ನೇಸರ ಕಾಡನಕುಪ್ಪೆ
Published 21 ಸೆಪ್ಟೆಂಬರ್ 2022, 0:30 IST
Last Updated 21 ಸೆಪ್ಟೆಂಬರ್ 2022, 0:30 IST
ಮಂಗಳ
ಮಂಗಳ   

ಅನ್ಯಗ್ರಹಗಳಲ್ಲಿ ಜೀವಶೋಧದ ಕುತೂಹಲದ ಹಿಂದೆ ಮಾನವನ ಸ್ವಾರ್ಥವಿದೆ. ಭೂಮಿಯಲ್ಲಿ ಸಂಪನ್ಮೂಲಗಳು ಖಾಲಿಯಾಗುತ್ತ ಬಂದ ಹಾಗೆ ಮಾನವನಿಗೆ ಹೊಸದೊಂದು ಮನೆಯ ಅಗತ್ಯ ಒದಗಿ ಬಂದದ್ದೇ ಇದಕ್ಕೆ ಮುಖ್ಯ ಕಾರಣ. ಭೂಮಿಯನ್ನೇ ಹೋಲುವ ಇನ್ನೊಂದು ಗ್ರಹವೊಂದು ಸಿಕ್ಕರೆ ಅಲ್ಲಿ ಬಿಡಾರ ಹೂಡುವ ತವಕವದು. ಜೀವಶೋಧವನ್ನು ಅನ್ಯಗ್ರಹವೊಂದರಲ್ಲಿ ಮಾಡಿದ್ದೇ ಆದಲ್ಲಿ, ಮುಂದೊಂದು ದಿನ ತಾನೂ ಅಲ್ಲಿಗೆ ಗುಳೆ ಹೋಗಬಹುದು ಎನ್ನುವುದೇ ಇದರ ಹಿಂದಿನ ತರ್ಕ!

ಅನ್ಯಗ್ರಹ ಹಾಗೂ ಜೀವಶೋಧದ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ‘ನಾಸಾ’ ಈಗಾಗಲೇ ಹಲವು ಮೈಲುಗಳನ್ನು ತುಳಿದಿರುವುದು ಈಗ ಹೊಸ ವಿಚಾರವಲ್ಲ. ಹೊಸ ವಿಚಾರವೆಂದರೆ, ಮಂಗಳಗ್ರಹದ ಅಂಗದಳಲ್ಲಿ ಹಿಂದೊಮ್ಮೆ ಜೀವಪರಿಸರವಿತ್ತು, ಅಲ್ಲಿ ನದಿ, ಸರೋವರಗಳಿದ್ದವು ಎಂಬ ವಾದಕ್ಕೆ ಪುಷ್ಟಿ ಎಂಬಂತಹ ಮಹತ್ವದ ಸಂಶೋಧನೆಯನ್ನು ಕಳೆದ ವಾರವಷ್ಟೇ ‘ನಾಸಾ’ ಮಾಡಿರುವುದು. ನಾಸಾದ ‘ಪರ್ಸೀವರೆನ್ಸ್‌’ ವಾಹನವು 2021ರ ಫೆಬ್ರುವರಿ 18ರಿಂದ ಮಂಗಳನ ಅಂಗಳದಲ್ಲಿ ತಿರುಗಾಟ ನಡೆಸುತ್ತಾ ವಾತಾವರಣ ಹಾಗೂ ಮೇಲ್ಮೈ ಅಧ್ಯಯನವನ್ನು ನಡೆಸಿ ಸಾಕಷ್ಟು ದತ್ತಾಂಶವನ್ನು ಈಗಾಗಲೇ ಭೂಮಿಗೆ ಕಳುಹಿಸಿದೆ. ಆದರೆ, ಇದೇ ಮೊದಲ ಬಾರಿಗೆ ‘ಪರ್ಸೀವರೆನ್ಸ್‌’ ವಾಹನವು ಮಂಗಳನ ‘ಜೆಸೇರೋ’ ಕುಳಿಯಲ್ಲಿರುವ ‘ಸ್ಕಿನ್ನರ್‌’ ಪರ್ವತಶ್ರೇಣಿಯ ನೆಲವನ್ನು ಕೊರೆದು ಸೀಮೆಸುಣ್ಣದ ಗಾತ್ರದ ಎರಡು ಕಲ್ಲುಮಿಶ್ರಿತ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದೆ.

ಇಲ್ಲಿ ಸಂಶೋಧನೆಯ ಮಹತ್ವವಿರುವುದು ಈ ಬಗೆಯ ಮಾದರಿಯ ಸಂಗ್ರಹಣೆಯಲ್ಲ. ನಾಸಾ ಈ ಹಿಂದೆಯೂ ಇದೇ ಬಗೆಯ ಮಾದರಿಗಳನ್ನು ಹಲವು ಬಾರಿ ಸಂಗ್ರಹಿಸಿದೆ. ಆದರೆ, ಈ ಬಾರಿಯ ಸಂಗ್ರಹಣೆ ಬಹುವಿಶೇಷವಾಗಿದೆ. ಈಗ ದೊರೆತಿರುವ ಮಾದರಿಯು ಮಂಗಳನ ಅಂಗಳದಲ್ಲಿ ಜೀವ ಪೋಷಣೆಗೆ ಅಗತ್ಯವಾದ ಸಾಕಷ್ಟು ಅಂಶಗಳು ಇರುವುದನ್ನು ಸಾಬೀತುಗೊಳಿಸಿದೆ. ನಾಸಾ ಇದನ್ನು ಹೀಗೆ ವ್ಯಾಖ್ಯಾನಿಸಿದೆ: ‘ಪರ್ಸೀವರೆನ್ಸ್‌ ಸಂಗ್ರಹಿಸಿರುವ ಮಾದರಿಯಿಂದ ಮಂಗಳನ ಅಂಗಳದಲ್ಲಿ ಹಿಂದೊಮ್ಮೆ ಜೀವವಿತ್ತು ಎಂದು ಹೇಳಲಾಗದು. ಅಥವಾ ಮಾದರಿಯಲ್ಲಿ ಜೀವಿಗಳ ಅವಶೇಷಗಳಿಗೆ ಎಂದೂ ಹೇಳಲಾಗದು. ಆದರೆ, ಜೀವಪೋಷಣೆಗೆ ಅಗತ್ಯವಾದ ಜೈವಿಕ ಅಂಶಗಳು ಮಂಗಳನ ಮಣ್ಣಿನಲ್ಲಿವೆ’ ಎಂದು ಹೇಳಿಕೆ ನೀಡಿರುವುದು ಬಹುದೊಡ್ಡ ಸಂಶೋಧನೆಯೆಂದೇ ಹೇಳಬಹುದು.

ADVERTISEMENT

ಏನಿದು ಸಂಶೋಧನೆ?

ನಾಸಾ ಪರ್ಸೀವರೆನ್ಸ್ ವಾಹನವನ್ನು ನಿರ್ಮಾಣ ಮಾಡುವಾಗಲೇ ‘ಶೆರ್ಲಾಕ್‌’ ಎಂಬ ಬೈರಿಗೆಯನ್ನು ವಿಶೇಷವಾಗಿ ನಿರ್ಮಿಸಿ ಅದನ್ನು ವಾಹನಕ್ಕೆ ಅಳವಡಿಸಲಾಗಿತ್ತು. ಮಂಗಳನ ಅಂಗಳದ ಮೇಲೆ ಪರ್ಸೀವರೆನ್ಸ್ ಇಳಿದು ಸಾಕಷ್ಟು ತಿರುಗಾಟ ನಡೆಸುವವರೆಗೆ ಈ ಬೈರಿಗೆಯನ್ನು ಚಾಲೂಗೊಳಿಸಿರಲಿಲ್ಲ. ಆದರೆ, ಪರ್ಸೀವರೆನ್ಸ್ ವಾಹನವು ಸಾಕಷ್ಟು ದತ್ತಾಂಶವನ್ನು ಭೂಮಿಗೆ ರವಾನೆ ಮಾಡಿ, ದತ್ತಾಂಶದ ತೀವ್ರ ಸಂಶೋಧನೆಯ ಬಳಿಕ ಶೆರ್ಲಾಕ್‌ ತನ್ನ ಅಸಲಿ ಕಾರ್ಯ ಶುರು ಮಾಡಿದೆ. ಮಂಗಳ ಅಂಗಳದಲ್ಲಿ ಗರಿಷ್ಠ ಉಷ್ಣಾಂಶ ಹಾಗೂ ಬರಡು ನೆಲವನ್ನು ಕೊರೆಯುವಂತೆ ಸದೃಢವಾಗಿ ಶೆರ್ಲಾಕ್‌ ಬೈರಿಗೆಯನ್ನು ಸಿದ್ಧಪಡಿಸಲಾಗಿದೆ.

ನಾಸಾ ಹೇಳಿದ ಕೆಲಸವನ್ನು ಶೆರ್ಲಾಕ್ ಅಚ್ಚುಕಟ್ಟಾಗಿ ಮುಗಿಸಿದೆ. ‘ಸ್ಕಿನ್ನರ್‌’ ಪರ್ವತಶ್ರೇಣಿಯ ನೆಲದಲ್ಲಿ ಸುಮಾರು 100 ನೀಲನಕ್ಷೆಗಳನ್ನು ತಯಾರಿಸಿ ಅವುಗಳಲ್ಲಿ ಕೇವಲ ಎರಡು ಜಾಗಗಳಲ್ಲಿ ಮಾತ್ರ ರಂಧ್ರವನ್ನು ಕೊರೆದು ಮಾದರಿ ಸಂಗ್ರಹಿಸಿದೆ.

ಏನಿದೆ ಈ ಮಾದರಿಗಳಲ್ಲಿ?

ನಾಸಾ ಈ ಕುರಿತು ಕೇವಲ ಒಂದು ವಾಕ್ಯದ ಹೇಳಿಕೆಯನ್ನು ಮಾತ್ರ ನೀಡಿದೆ. ಆದರೆ, ಈ ಹೇಳಿಕೆಯು ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಹೊಸ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಟ್ಟಿದೆ. ‘ಶೆರ್ಲಾಕ್‌ ಸಂಗ್ರಹಿಸಿರುವ ಮಾದರಿಯಲ್ಲಿ ಜೈವಿಕ (ಆರ್ಗಾನಿಕ್) ಅಂಶಗಳಿವೆ’ ಎಂದು ನಾಸಾ ಹೇಳಿದೆ. ಆದರೆ, ನಾಸಾ ಅತಿ ಸ್ಪಷ್ಟವಾಗಿ, ‘ಜೈವಿಕ ಎಂದರೆ ಜೀವವಲ್ಲ’ ಎಂದೂ ಹೇಳಿದೆ. ನಾಸಾದ ಪ್ರಕಾರ ‘ಜೈವಿಕ ಎಂದರೆ ನೀರು ಹಾಗೂ ಕಲ್ಲು–ಮಣ್ಣುಗಳ ಪರಸ್ಪರ ಬೆರೆಯುವ ನೈಸರ್ಗಿಕ ಕ್ರಿಯೆಯಿಂದ ಆಗುವ ಉತ್ಪತ್ತಿ’. ಹಾಗಾಗಿ, ಈ ಹೇಳಿಕೆಗಳನ್ನು ಯಾವ ರೀತಿ ಅರ್ಥೈಸಬೇಕು ಎಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆ. ಒಂದು ಕಾಲದಲ್ಲಿ ಮಂಗಳನ ಅಂಗಳದ ಮೇಲೆ ನೀರು ಹರಿದಿತ್ತು ಎಂಬ ವಾದಕ್ಕೆ ಬಲವಾದ ಸಾಕ್ಷಿಯಂತೂ ಈ ಸಂಶೋಧನೆಯಿಂದ ದೊರೆತಂತಾಗಿದೆ.

ಮಹತ್ತರವಾದ ಸುಳಿವು

ಇದರ ಬೆನ್ನಲ್ಲೇ ನಾಸಾ ಮಹತ್ತರವಾದ ಮತ್ತೊಂದು ಸುಳಿವನ್ನೂ ಈ ಸಂಶೋಧನೆಯ ಬೆನ್ನಲ್ಲೇ ನೀಡಿದೆ. ಸಂಗ್ರಹವಾಗಿರುವ ಈ ಮಾದರಿಗಳನ್ನು ಭೂಮಿಗೆ ತಂದು ಇಲ್ಲಿನ ಅನೇಕ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸಲಾಗುವುದು ಎಂದು ಅಧಿಕೃತ ಹೇಳಿಕೆ ನೀಡಿದೆ. ಇದು ನಾಸಾ ಇತಿಹಾಸದಲ್ಲೇ ಅತಿ ದೊಡ್ಡ ಹೆಜ್ಜೆಗೆ ಮುನ್ನುಡಿ. ಏಕೆಂದರೆ, ಇದುವರೆಗೂ ಮಂಗಳನ ಅಂಗಳದ ಮೇಲೆ ಮಾನವ ನಿರ್ಮಿತ ವಾಹನಗಳು ಇಳಿದಿವೆಯೇ ಹೊರತು, ಮಾನವ ಇಳಿದಿಲ್ಲ. ತಕ್ಷಣವೇ ಇಳಿಯುವ ಸಾಧ್ಯತೆಗಳೂ ಕಡಿಮೆ; ಯಂತ್ರಗಳೇ ಈ ಮಾದರಿಯನ್ನು ಸಂಗ್ರಹಿಸಿ ಅಂತರಿಕ್ಷ ವಾಹನದ ಮೂಲಕ ವಾಪಸ್ಸು ಭೂಮಿಗೆ ಕಳುಹಿಸಬಹುದು.

ಆದರೂ, ಅದು ಮಹತ್ವದ ಸಾಧನೆಯೇ. ಏಕೆಂದರೆ, ಇದುವರೆಗೂ ಮಂಗಳನ ಅಂಗಳದಿಂದ ಯಾವುದೇ ಮಾನವ ನಿರ್ಮಿತ ಅಂತರಿಕ್ಷ ವಾಹನವು ಭೂಮಿಗೆ ವಾಪಸಾಗಿಲ್ಲ. ಭವಿಷ್ಯದಲ್ಲಿ ಅಂತಹ ವಾಹನವೊಂದು ಮಾದರಿ ಹೊತ್ತು ಭೂಮಿಗೆ ಮರಳುತ್ತದೆ ಎನ್ನುವುದಾದರೆ, ಸೀಮೆಸುಣ್ಣ ಗಾತ್ರದ ಮಾದರಿಯನ್ನು ಮಾತ್ರ ಹೊತ್ತಂತೂ ಬರುವುದಿಲ್ಲ. ಸಾಕಷ್ಟು ಇತರ ಮಾದರಿಗಳೂ ಖಂಡಿತವಾಗಿಯೂ ಇರುತ್ತವೆ. ಸದ್ಯಕ್ಕಂತೂ ಈ ಮಾದರಿಗಳು ‘ಪರ್ಸೀವರೆನ್ಸ್‌’ ವಾಹನದ ಹೊಟ್ಟೆಯ ಭಾಗದಲ್ಲಿ ಸುರಕ್ಷಿತವಾಗಿ ಕುಳಿತಿವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.