‘ಚಂದ್ರಯಾನ 3’ ನೌಕೆ ಈ ಜುಲೈ 14ರಂದು ಭೂಮಿಯಿಂದ ಗಗನಕ್ಕೇರಿತಷ್ಟೆ. ಆ ವೇಳೆಯಲ್ಲಿ ಚಂದ್ರಯಾನ 3 ಹಾಗೂ ಅದನ್ನು ಉಡಾಯಿಸಿದ ದೈತ್ಯ ಎಲ್. ವಿ. ಎಂ. ರಾಕೆಟ್ – ಇವುಗಳನ್ನು ಕೇಂದ್ರೀಕೃತವಾಗಿಟ್ಟುಕೊಂಡ ವಿಷಯಗಳು ಪ್ರಮುಖ ಭಾರತೀಯ ಭಾಷೆಗಳಲ್ಲಿ ಹಾಗೂ ವಿದೇಶಿ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ವರದಿಯಾದವು. ನಂತರ ಮಾಧ್ಯಮಗಳ ಗಮನ ಬಹುಮಟ್ಟಿಗೆ ಅಂತರಿಕ್ಷದಲ್ಲಿ ಆ ನೌಕೆಯ ಕುತೂಹಲಕಾರಿಯಾದ ಕಕ್ಷಾ ಯಾನದತ್ತ ಹರಿಯಿತು. ಇಂದು ಆ ನೌಕೆ ಚಂದ್ರನ ಸುತ್ತಲಿನ ಒಂದು ಕೋಳಿಮೊಟ್ಟೆಯಾಕಾರದ ಕಕ್ಷೆಯನ್ನು ಸುರಕ್ಷಿತವಾಗಿ ಸೇರಿ ತನ್ನ ಕಕ್ಷೆಯ ಎತ್ತರವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುತ್ತಾ ಚಂದ್ರನ ಮೇಲೆ ಇಳಿಯಲು ಸಿದ್ಧವಾಗುತ್ತಿದೆ.
ಚಂದ್ರಯಾನ 3ರ ಇತ್ತೀಚಿನವರೆಗಿನ ಯಶಸ್ಸಿನಲ್ಲಿ ಆ ನೌಕೆ ಹಾಗೂ ಅದನ್ನು ಉಡಾಯಿಸಿದ ರಾಕೆಟ್ಟಿನೊಂದಿಗೇ ಮತ್ತೊಂದು ತಾಂತ್ರಿಕ ಅಂಶದ ಪಾತ್ರವೂ ಮಹತ್ತರವಾಗಿದೆ. ಆದರೆ ಅದು ತನ್ನ ಕೊಡುಗೆಗೆ ಅನುಗುಣವಾಗಿ ಪ್ರಚಾರವನ್ನು ಪಡೆಯದೇ ಆ ಕಾರಣದಿಂದಾಗಿ ಬಹುಮಟ್ಟಿಗೆ ಸಾಮಾನ್ಯ ಜನರ ಅರಿವಿಗೆ ಬರದೇ ಇಲ್ಲದಿರುವುದು ದುರದೃಷ್ಟ. ಆ ತಾಂತ್ರಿಕ ಅಂಶವೇ ಚಂದ್ರಯಾನ 3ರ ಭೂ ಸೌಲಭ್ಯಗಳು (ಗ್ರೌಂಡ್ ಫೆಸಿಲಿಟೀಸ್). ಭೂಮಿಯ ಸುತ್ತಲಿನ ಹಾಗೂ ಚಂದ್ರನ ಸುತ್ತಲಿನ ಕಕ್ಷೆಯಿಂದ, ಇಲ್ಲವೇ ಚಂದ್ರನ ಮೇಲ್ಮೈಯಿಂದ ಆ ನೌಕೆ ರೇಡಿಯೋ ತರಂಗಗಳ ರೂಪದಲ್ಲಿ ‘ಪಿಸುಗುಟ್ಟುವ’ (ವಿಸ್ಪರಿಂಗ್) ಅಮೂಲ್ಯವಾದ ವೈಜ್ಞಾನಿಕ ಮಾಹಿತಿಯನ್ನು ಪಡೆಯುವುದು ಹಾಗೂ ಅಗತ್ಯವಾದ ರೇಡಿಯೋ ಆಜ್ಞೆಗಳನ್ನು ನೌಕೆಗೆ ರವಾನಿಸುವುದು ಈ ಸೌಲಭ್ಯಗಳೇ.
ಇದರೊಂದಿಗೇ ಈ ಭೂ ಸೌಲಭ್ಯಗಳು ಅಂತರಿಕ್ಷದಲ್ಲಿ ಚಂದ್ರಯಾನ 3ರ ಸ್ಥಾನ, ಕಕ್ಷೆ, ಪಥ – ಇವುಗಳನ್ನು ವಿಜ್ಞಾನಿಗಳು ಅತ್ಯಂತ ನಿಖರವಾಗಿ ಲೆಕ್ಕ ಹಾಕುವುದನ್ನು, ಚಂದ್ರಯಾನ 3ರ ‘ಆರೋಗ್ಯವನ್ನು ತಪಾಸಣೆ ಮಾಡುವುದನ್ನು’ ಸಾಧ್ಯಮಾಡುತ್ತವೆ; ಆ ಮೂಲಕ ಯಾನದ ಮುಂದಿನ ಹಂತವನ್ನು ಎಚ್ಚರಿಕೆಯಿಂದ ಯೋಜಿಸುವುದನ್ನು ಸಾಧ್ಯಮಾಡುತ್ತವೆ; ನೌಕೆಯಿಂದ ಪಡೆದ ವೈಜ್ಞಾನಿಕ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿಡುತ್ತವೆ.
ಆ ಸೌಲಭ್ಯಗಳ ಪೈಕಿ ಬೆಂಗಳೂರಿನ ಸಮೀಪದ ಬ್ಯಾಲಾಳುವಿನಲ್ಲಿರುವ ‘ಭಾರತೀಯ ಕಡು ಅಂತರಿಕ್ಷ ಜಾಲ’ (‘ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್’) ಹಾಗೂ ಚಂದ್ರಯಾನ 3 ಅಭಿಯಾನದ (ಮಿಷನ್) ಕೇಂದ್ರ ನರಮಂಡಲದಂತಿರುವ ಪೀಣ್ಯಾದಲ್ಲಿನ ಅದರ ನಿಯಂತ್ರಣಾ ಕೇಂದ್ರ ‘ಮಾಕ್ಸ್’ – ಇವುಗಳ ಸಮರ್ಥ ಕಾರ್ಯನಿರ್ವಹಣೆ ಚಂದ್ರಯಾನ 3 ನೌಕೆಯು ತನ್ನನ್ನು ಹಾರಿಬಿಟ್ಟ ಉದ್ದೇಶವನ್ನು ಸುಗಮವಾಗಿ ಸಾಧಿಸುವುದಕ್ಕೆ ಕಾರಣವಾಗುತ್ತದೆ.
ದೊಡ್ಡ ಆಲದ ಮರವಿರುವ ರಾಮೋಹಳ್ಳಿಯಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿರುವ ‘ಭಾರತೀಯ ಕಡು ಅಂತರಿಕ್ಷ ಜಾಲ’ದ (‘ಕಡು ಅಂತರಿಕ್ಷ’ ಎಂಬುದು ಭೂಮಿಯಿಂದ ಸುಮಾರು ಒಂದು ಲಕ್ಷ ಕಿಲೋಮೀಟರ್‌ಗಳಿಗಿಂತ ದೂರವಿರುವ ಪ್ರದೇಶ) ನೆಲೆಯಲ್ಲಿ 32 ಮೀಟರ್ ಹಾಗೂ 18 ಮೀಟರ್ ಅಗಲವಿರುವ ಎರಡು ಬೃಹತ್ ಬಾಣಲೆಯಾಕಾರದ ಸಂಪರ್ಕ ಆಂಟೆನಾಗಳಿವೆ. ಆ ಪೈಕಿ 32 ಮೀಟರ್ ಆಂಟೆನಾವನ್ನು ಭಾರತೀಯ ಎಂಜಿನಿಯರಿಂಗ್‌ನ ಒಂದು ಅದ್ಭುತ ಎನ್ನಬಹುದು.
350 ಟನ್ ತೂಕದ ಈ ಆಂಟೆನಾವನ್ನು ನಮ್ಮ ದೇಶದಲ್ಲೇ ಅತ್ಯಂತ ನಿಖರವಾಗಿ ನಿರ್ಮಿಸಲಾಗಿದ್ದು ಸೂಕ್ಷ್ಮತೆ ಅದರ ಮುಖ್ಯ ಗುಣವಿಶೇಷವಾಗಿದೆ. ಚಂದ್ರಯಾನ 1, 2 ಮತ್ತು 3 ಹಾಗೂ ಮಂಗಳಯಾನ ನೌಕೆಗಳ ಕಾರ್ಯಕ್ರಮಗಳ ನಡುವೆ ಉತ್ತಮವಾದ ಸೇವೆಯನ್ನು ನೀಡಿರುವ ಹಾಗೂ ನೀಡುತ್ತಿರುವ ಈ ತಾಂತ್ರಿಕ ಸಾಧನದ ನಿರ್ಮಾಣದ ನೇತೃತ್ವವನ್ನು ವಹಿಸಿದ್ದವರು ಕನ್ನಡಿಗರಾದ ದಿವಂಗತ ಎಸ್. ಕೆ. ಶಿವಕುಮಾರ್ ಅವರು.
ಲಕ್ಷಾಂತರ ಇಲ್ಲವೇ ಕೋಟ್ಯಂತರ ಕಿಲೋಮೀಟರ್ ದೂರದಿಂದ ರೋಬಾಟ್ ಅಂತರಿಕ್ಷ ನೌಕೆಗಳು ‘ಪಿಸುಗುಟ್ಟುವ’ ಮಾಹಿತಿಯನ್ನು ಹೊತ್ತ ರೇಡಿಯೋ ತರಂಗಗಳು ಭೂಮಿಯನ್ನು ತಲುಪುವ ಹೊತ್ತಿಗೆ ಊಹಿಸಲಾಗದಷ್ಟು ಕ್ಷೀಣವಾಗಿರುತ್ತವೆ. ಸುತ್ತಲೂ ಪಸರಿಸಿರುವ ರೇಡಿಯೋ ಗದ್ದಲದಿಂದ ಅವುಗಳನ್ನು ‘ಹೆಕ್ಕಿ’ ತೆಗೆಯುವುದು ಅತ್ಯಂತ ಪ್ರಯಾಸಕರವಾದ ಕೆಲಸವೇ ಸರಿ. ಅದಕ್ಕಾಗಿ ಆ ಬೃಹತ್ ಆಂಟೆನಾದಲ್ಲಿ ‘ಏಳು ಕನ್ನಡಿಗಳನ್ನು ಉಳ್ಳ’ ಒಂದು ವಿಶೇಷ ವ್ಯವಸ್ಥೆ ನೌಕೆಯಿಂದ ಬಂದ ಕ್ಷೀಣವಾದ ರೇಡಿಯೋ ತರಂಗಗಳನ್ನು ಪಡೆದು, ಅವುಗಳ ಶಕ್ತಿಯನ್ನು ವೃದ್ಧಿಸುತ್ತದೆ. ನಂತರ ಆ ತರಂಗಗಳ ಮೇಲೆ ಸವಾರಿ ಮಾಡಿಬಂದ ವೈಜ್ಞಾನಿಕ ಮಾಹಿತಿಯನ್ನು ಅದರೊಂದಿಗೇ ಬಂದ ನೌಕೆಯ ಆರೋಗ್ಯವನ್ನು ಕುರಿತ ಮಾಹಿತಿಯಿಂದ ಪ್ರತ್ಯೇಕಿಸಲಾಗುತ್ತದೆ. ಆ ಬಳಿಕ ವೈಜ್ಞಾನಿಕ ಮಾಹಿತಿ ಬ್ಯಾಲಾಳುವಿನಲ್ಲೇ ಇರುವ ‘ದತ್ತಾಂಶಗಳ ಕೇಂದ್ರ’ದಲ್ಲಿ ಕ್ರಮಬದ್ಧವಾಗಿ ಸಂಗ್ರಹವಾಗುತ್ತದೆ. ಅದೇ ರೀತಿ ನೌಕೆಯ ಆರೋಗ್ಯವನ್ನು ಹಾಗೂ ಯಾನದ ವಿವರಗಳನ್ನು ಕುರಿತ ಮಾಹಿತಿ ಪೀಣ್ಯಾದಲ್ಲಿರುವ ಚಂದ್ರಯಾನ 3ರ ನಿಯಂತ್ರಣಾ ಕೇಂದ್ರಕ್ಕೆ (‘ಮಾಕ್ಸ್’) ಕ್ಷಣಾರ್ಧದಲ್ಲಿ ರವಾನೆಯಾಗುತ್ತದೆ. ಅಲ್ಲಿ ದಿನಕ್ಕೆ 24 ಗಂಟೆಗಳ ಕಾಲ ಕಣ್ಣಿಗೆ ಎಣ್ಣೆಹಾಕಿಕೊಂಡು ಚಂದ್ರಯಾನ 3ರ ಆರೋಗ್ಯದೊಂದಿಗೇ ಅದರ ಸ್ಥಾನ, ಕಕ್ಷೆ, ಪಥ, ಮುಂತಾದ ಯಾನದ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವ ವಿಜ್ಞಾನಿಗಳು ಚಂದ್ರಯಾನ 3ನ್ನು ದಕ್ಷವಾಗಿ ನಿಯಂತ್ರಿಸಲು ಸಮರ್ಥರಾಗುತ್ತಾರೆ. ಹೀಗಾಗಿ ಚಂದ್ರಯಾನ 3ರ ನಿಯಂತ್ರಣಾ ಕೇಂದ್ರವನ್ನು ಈ ಅಭಿಯಾನದ ಕೇಂದ್ರೀಯ ನರಮಂಡಲ ಎನ್ನಲು ಅಡ್ಡಿಯಿಲ್ಲ. ನೌಕೆಯ ಯಾನದ ನಡುವೆ ಮುಖ್ಯವಾದ ಕಾರ್ಯಗಳು ಜರಗುತ್ತಿರುವಾಗ ಆ ಕೇಂದ್ರದಲ್ಲಿನ ಚಟುವಟಿಕೆ ಜೇಮ್ಸ್ ಬಾಂಡ್ ಚಲನಚಿತ್ರಗಳ ಕೆಲವು ರೋಮಾಂಚಕಾರಿ ಸನ್ನಿವೇಶಗಳನ್ನು ನೆನಪಿಗೆ ತರುತ್ತದೆ.
‘ಚಂದ್ರಯಾನ 1’ ಚಂದ್ರನ ಮೇಲ್ಮೈಯನ್ನು 2008ರ ನವೆಂಬರ್ 14ರಂದು ಬೇಕಾಗಿಯೇ ಅಪ್ಪಳಿಸಿದ ಹಾಗೂ 2014ರ ಸೆಪ್ಟೆಂಬರ್ 24ರಂದು ಮಂಗಳ ಕಕ್ಷಾ ಅಭಿಯಾನದ ‘ಮಂಗಳಯಾನ’ ನೌಕೆ ಮಂಗಳಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದ ಚಾರಿತ್ರಿಕ ವೇಳೆಯಲ್ಲಿ ಆ ನೌಕೆಗಳ ನಿಯಂತ್ರಣ ನಡೆದದ್ದು ಈ ಕೇಂದ್ರದಿಂದಲೇ; ಅಮೆರಿಕ, ರಷ್ಯಾ, ಚೀನಾ, ಯೂರೋಪ್, ಜಪಾನ್, ಇವುಗಳಲ್ಲಿನ ನಿಯಂತ್ರಣಾ ಕೇಂದ್ರಗಳಲ್ಲಿರುವಂತಹ ಕಂಪ್ಯೂಟರ್ ಹಾಗೂ ಸಂಪರ್ಕ ಸಾಧನಗಳನ್ನು ಒಳಗೊಂಡ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಗಳು ಈ ಕೇಂದ್ರದಲ್ಲೂ ಇವೆ.
ಚಂದ್ರಯಾನ 3 ನೌಕೆ ಕೆಲವು ಸಮಯದಲ್ಲಿ ಭಾರತವಿರುವ ಭೂಭಾಗಕ್ಕೆ ಗೋಚರಿಸುವುದಿಲ್ಲ. ಆಗ ನಾವು ‘ನಾಸಾ’ದಂತಹ ಹೊರದೇಶದ ಅಂತರಿಕ್ಷ ಸಂಸ್ಥೆಗಳಿಗೆ ಸೇರಿದ ಭೂಸೌಲಭ್ಯಗಳಿಂದ ಸಹಾಯ ಪಡೆಯಬೇಕಾಗುತ್ತದೆ. ಅವುಗಳ ಜೊತೆ ನಂಬಲರ್ಹವಾದ ಹಾಗೂ ದಕ್ಷವಾದ ಸಂಪರ್ಕ ವ್ಯವಸ್ಥೆಗಳ ಮೂಲಕ ಈ ‘ಮಾಕ್ಸ್’ ನಿಯಂತ್ರಣಾ ಕೇಂದ್ರ ಜೋಡಿಸಲ್ಪಟ್ಟಿದೆ.
ನೌಕೆಯ ಆರೋಗ್ಯ ಹಾಗೂ ಯಾನದ ಬಗ್ಗೆ ಅರಿತ ನಂತರ ಈ ಕೇಂದ್ರದಲ್ಲಿರುವ ‘ಅಭಿಯಾನದ ನಿರ್ದೇಶಕರು’ ನೌಕೆ ಮಾಡಬೇಕಾದ ಕೆಲಸದ ಬಗ್ಗೆ ನಿರ್ಧರಿಸಿ ಅಲ್ಲಿಂದ ‘ಆಜ್ಞೆ’ಗಳನ್ನು ಬ್ಯಾಲಾಳುವಿನಲ್ಲಿರುವ ಆಂಟೆನಾಗೆ ರವಾನಿಸುತ್ತಾರೆ. ಆ ಆಜ್ಞೆಗಳನ್ನು ಆಂಟೆನಾವು ರೇಡಿಯೋ ತರಂಗಗಳ ಮೇಲೆ ಸವಾರಿಮಾಡುವಂತೆ ಪರಿವರ್ತಿಸಿ ಅದನ್ನು ಚಂದ್ರಯಾನ 3ಕ್ಕೆ ‘ಕೂಗಿ ಹೇಳುತ್ತದೆ’. ಅಂದರೆ ಅಪಾರವಾದ ಶಕ್ತಿಯಿಂದ ಆ ತರಂಗಗಳನ್ನು ಪ್ರಸಾರಮಾಡುತ್ತದೆ. ಹೀಗೆ ಭಾರತೀಯ ಕಡು ಅಂತರಿಕ್ಷ ಜಾಲದ 32 ಮೀಟರ್ ಬೃಹತ್ ಆಂಟೆನಾ ಚಂದ್ರಯಾನ 3ರ ‘ಪಿಸುಗುಡುವಿಕೆ’ಗೆ ಚುರುಕಾಗಿ ಕಿವಿಕೊಡುವುದಲ್ಲದೇ ಮಾಡಬೇಕಾಗಿರುವ ಕೆಲಸಗಳನ್ನೂ ಅದಕ್ಕೆ ‘ದೊಡ್ಡ ದನಿಯಲ್ಲಿ’ ಹೇಳುತ್ತದೆ.
ಬ್ಯಾಲಾಳುವಿನ ಸಂಕೀರ್ಣದಲ್ಲಿ ಇರುವ ಮತ್ತೊಂದು ಭೂನೆಲೆಯಾದ ‘ಭಾರತೀಯ ಅಂತರಿಕ್ಷ ದತ್ತಾಂಶಗಳ ಕೇಂದ್ರ’ದಲ್ಲಿ (ಇಂಡಿಯನ್ ಸ್ಪೇಸ್ ಸೈನ್ಸ್ ಡೇಟಾ ಸೆಂಟರ್) ನಮ್ಮ ಚಂದ್ರಯಾನ 1, 2 ಮತ್ತು 3, ಮಂಗಳಯಾನ, ಅಸ್ಟ್ರೋಸ್ಯಾಟ್, ಮುಂತಾದ ರೋಬಾಟ್ ಅಂತರಿಕ್ಷ ನೌಕೆಗಳು/ವೈಜ್ಞಾನಿಕ ಉಪಗ್ರಹಗಳು ಚಂದ್ರ, ಮಂಗಳಗ್ರಹ ಹಾಗೂ ಗ್ಯಾಲಕ್ಸಿಗಳಂತಹ ಆಕಾಶಕಾಯಗಳಿಗೆ ಸಂಬಂಧಿಸಿದಂತೆ ಕಳುಹಿಸಿದ ಮಾಹಿತಿಯನ್ನು ಜೋಪಾನವಾಗಿ, ಕ್ರಮಬದ್ಧವಾಗಿ ಜೋಡಿಸಿಡಲಾಗಿದೆ. ಇದರಿಂದಾಗಿ ಅವನ್ನು ಸಂಶೋಧಕರು ಯಾವಾಗ ಬೇಕಾದರೂ ಸುಲಭವಾಗಿ ತೆಗೆದು ವಿಶ್ಲೇಷಿಸಬಹುದು. ನಮ್ಮ ರೋಬಾಟ್ ನೌಕೆಗಳಿಂದ / ವೈಜ್ಞಾನಿಕ ಉಪಗ್ರಹಗಳಿಂದ ಬಂದು ಬ್ಯಾಲಾಳುವಿನ ದತ್ತಾಂಶಗಳ ಕೇಂದ್ರದಲ್ಲಿ ಕುಳಿತ ಅಮೂಲ್ಯವಾದ ವೈಜ್ಞಾನಿಕ ಮಾಹಿತಿಯನ್ನು ಭಾರತ ಹೊರಜಗತ್ತಿನ ಸಂಶೋಧಕರಿಗೂ ತೆರೆದಿಟ್ಟಿದೆ. ಇದು ಭಾರತದ ಸೌಜನ್ಯವಾಗಿರುವುದಲ್ಲದೇ ವಿಜ್ಞಾನದ ಮುನ್ನಡೆಗೆ ಭಾರತದ ಒಂದು ಪ್ರಮುಖ ಕೊಡುಗೆಯಾಗಿದೆ.
ಆಗಸ್ಟ್ 23ರಂದು ಚಂದ್ರನ ಮೇಲೆ, ಚಂದ್ರಯಾನ 3ರ ವಿಕ್ರಂ ಇಳಿಯುವ ಕೋಶ ಹಾಗೂ ಪ್ರಗ್ಯಾನ್ ‘ರೋವರ್’ ವಾಹನದಿಂದ ಬರುವ ಮಾಹಿತಿಯನ್ನು ಪಡೆಯಲು ಈ ಕೇಂದ್ರವಿಂದು ಸರ್ವವಿಧದಲ್ಲೂ ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.