ಕನ್ನಡಿಯಲ್ಲಿನ ತನ್ನ ಬಿಂಬವನ್ನು ಕಂಡ ಮೀನು ಅದು ತನ್ನದೇ ಚಿತ್ರವೆಂದು ಗುರುತಿಸಿತಂತೆ! ಹಾಗೆಯೇ ಅಪರಿಚಿತ ದೇಹದೊಂದಿಗೆ ಜೋಡಿಸಿದ್ದ ತನ್ನದೆ ಮುಖವನ್ನೂ ಗುರುತಿಸಿತಂತೆ. ಆದರೆ ತನ್ನದೇ ದೇಹದೊಂದಿಗೆ ಬೇರೆ ಮುಖವಿದ್ದ ಚಿತ್ರವನ್ನು ಮಾತ್ರ ಗುರುತಿಸಲು ಸಾಧ್ಯವಾಗಲಿಲ್ಲ.
ಮಾನವನು ಇಡೀ ಜೀವಸಂಕುಲದ ಒಂದು ವಿಶೇಷ ಜೀವಿ ಎಂದರೆ ಅತಿಶಯೋಕ್ತಿಯೇನಲ್ಲ. ಆಹಾರಶೈಲಿ, ಆಹಾರ ಉತ್ಪಾದನೆ, ಉಡುಗೆ–ತೊಡುಗೆ, ವಾಸಕ್ಕೆ ಮನೆ, ಸಾರಿಗೆ–ಸಂಪರ್ಕ – ಹೀಗೆ ಹಲವು ಸೌಕರ್ಯಗಳನ್ನು ಮಾಡಿಕೊಂಡು ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳುತ್ತಲೇ ಬರುತ್ತಿರುವ ಮನುಷ್ಯನಿಗೆ ಮತ್ತಾವ ಪ್ರಾಣಿ ಸಾಟಿಯಾಗಬಲ್ಲದು ಹೇಳಿ? ಜೊತೆಗೆ ನಿರಂತರ ಜ್ಞಾನಾರ್ಜನೆಯಲ್ಲಿ ತೊಡಗಿ, ಹೊಸ ಹೊಸ ವಿದ್ಯೆಗಳನ್ನು ಕಲಿತು ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುತ್ತಲೇ ತನ್ನ ಬುದ್ಧಿಶಕ್ತಿಯನ್ನು ಮೆರೆಯುತ್ತಿದ್ದಾನೆ. ಇದಕ್ಕೆ ಕಾರಣ ಮನುಷ್ಯನಿಗೆ ದಕ್ಕಿರುವ ಮೆದುಳು ಹಾಗೂ ಅದರ ವಿಶೇಷ ಸಾಮರ್ಥ್ಯ.
ಇತರೆ ಪ್ರಾಣಿಗಳಂತೆಯೇ ಊಟ, ನಿದ್ರೆ, ಸಂತಾನೋತ್ಪತ್ತಿ, ಮರಣ ಎನ್ನುವ ನಾಲ್ಕೇ ಹಂತಗಳಲ್ಲಿ ಜೀವನ ಕಳೆಯುತ್ತಿದ್ದ ಮನುಷ್ಯನ ಮೆದುಳು ವಿಕಾಸವಾಗುತ್ತಲೇ ತನ್ನ ಬಗ್ಗೆ ತಾನು ಅರಿಯುವುದು ಕಲಿತ, ತಾನು ಹೇಗೆ ಕಾಣಿಸುತ್ತೇನೆ ಎಂದು ಕಲ್ಪಿಸಿಕೊಂಡ. ತನ್ನ ಅಂದಾಜನ್ನು ಖಚಿತಪಡಿಸಿಕೊಂಡ. ಆಗಲೇ ಜಗತ್ತಿಗೆ ದರ್ಪಣದ ದರ್ಶನವಾಯಿತು. ಈ ರೀತಿಯ ಮೆದುಳಿನ ನಿರಂತರ ವಿಕಾಸವೇ ನಮ್ಮ ಇಂದಿನ ಅದ್ಭುತ ಜೀವನಶೈಲಿಗೆ ಹಾಗೂ ಬೇರೆಲ್ಲಾ ಪ್ರಾಣಿಗಳ ಮೇಲೆ ನಿಯಂತ್ರಣವನ್ನು ಹೊಂದಲು ಕಾರಣ.
ಮನುಷ್ಯನ ಕಲಿಕಾ ಹಾಗೂ ಕಲ್ಪನಾ ಸಾಮರ್ಥ್ಯ ಬೇರೆ ಪ್ರಾಣಿಗಳಿಗಿಂತ ವಿಶೇಷ, ಭಿನ್ನ ಹಾಗೂ ಸಂಕೀರ್ಣ; ಅವನು ವಿಜ್ಞಾನವನ್ನು ಕಲಿತ, ತಂತ್ರಜ್ಞಾನಗಳನ್ನು ಆವಿಷ್ಕರಿಸಿದ. ಬದುಕು ಸುಗಮವಾಯಿತು. ಮುಂದೆ ಇಷ್ಟೆಲ್ಲಾ ಯೋಚಿಸಬಲ್ಲ ಮನುಷ್ಯನಿಗೆ ತನ್ನಂತೆಯೇ ಯೋಚಿಸುವ, ಕಲ್ಪಸಿಕೊಳ್ಳಬಲ್ಲ ಹಾಗೂ ಕಲಿಯುವ ಶಕ್ತಿ ಹಾಗೂ ಮೆದುಳು ಬೇರಾವ ಜೀವಿಗಿದೆ ಎಂದು ತಿಳಿಯುವ ಕುತೂಹಲ ಉಂಟಾಯಿತು. ಹಾಗಾಗಿ ಬೇರೆ ಬೇರೆ ಪ್ರಾಣಿಗಳನ್ನು ಅಧ್ಯಯನ ಮಾಡತೊಡಗಿದ. ಆಗ ತಿಳಿಯಿತು ಮಾನವನ ಹಳೆಯ ನೆಂಟರಾದ ಚಿಂಪಾಂಜಿ-ಮಂಗಗಳಿಗೂ ತಾವು ಹೇಗಿದ್ದೇವೆ ಎಂದು ಕಲ್ಪಿಸಿಕೊಳ್ಳುವ, ತಮ್ಮನ್ನು ಗುರುತಿಸಿಕೊಳ್ಳುವ ಸಾಮರ್ಥ್ಯವಿದೆ ಎಂದು. ಅರ್ಥಾತ್ ಅವುಗಳೂ ಕನ್ನಡಿಯಲ್ಲಿ ಕಾಣುವ ಬಿಂಬ ತನ್ನದೇ ಎಂದು ಅರ್ಥಮಾಡಿಕೊಳ್ಳಬಲ್ಲವಂತೆ. ಕನ್ನಡಿಯಲ್ಲಿ ನೋಡುವ ಮುಂಚೆ ಬಹುತೇಕ ತಾನು ಹೇಗಿದ್ದೇನೆ ಎನ್ನುವ ಅಂದಾಜು ನಮಗಿರುತ್ತದೆ. ಇತರೆ ಪ್ರಾಣೀಗಳಿಗೂ ಇರುತ್ತದೆಯೇ? ಒಂದು ವೇಳೆ ಅವುಗಳಿಗೆ ದರ್ಪಣ ಹಿಡಿದರೆ ತಮ್ಮನ್ನು ನೋಡಿಕೊಂಡು ಯಾರೆಂದು ಭಾವಿಸುತ್ತವೆ? ಹೇಗೆ ಪ್ರತಿಕ್ರಿಯಿಸುತ್ತವೆ? ಈ ಪ್ರಶ್ನೆಗಳು ಜಪಾನಿನ ಒಸಾಕ ವಿಶ್ವವಿದ್ಯಾನಿಲಯದ ಸಂಶೋಧಕರ ಕುತೂಹಲವಾಗಿತ್ತು.
ತಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ಮೆಸನೋರಿ ಕೊಡ ಮತ್ತು ಸಂಗಡಿಗರು ಆರಿಸಿಕೊಂಡಿದ್ದು ಲ್ಯಾಬ್ರೊಯಿಡೀಸ್ ಡಿಮಿಡಿಯೇಟಸ್ ಎನ್ನುವ ಮಡಿವಾಳ ಮೀನು. ಇವುಗಳಿಗೆ ಮನುಷ್ಯರಂತೆಯೇ ಕನ್ನಡಿ ನೋಡಿದಾಗ ಅಲ್ಲಿ ಕಾಣುವುದು ತಮ್ಮದೇ ಚಿತ್ರವೆಂದು ತಿಳಿಯುತ್ತದಂತೆ. ಇತರೆ ಪ್ರಾಣಿಗಳು ಹೇಗೆ ಅವುಗಳ ಪ್ರತಿಬಿಂಬವನ್ನು ಗುರುತಿಸಬಲ್ಲವು ಎನ್ನುವುದನ್ನು ತಮ್ಮ ಸಂಶೋಧನೆಯ ಮೂಲಕ ಸಾಬೀತುಪಡಿಸಿದ್ದಾರೆ ಕೊಡ ಮತ್ತು ಸಂಗಡಿಗರು.
ಮನುಷ್ಯರು ಭಾವಚಿತ್ರವನ್ನು ಅದು ತಮ್ಮದೋ ಅಥವಾ ಇತರದ್ದೋ ಎಂದು ಬಹಳ ಸುಲಭವಾಗಿ ಪತ್ತೆ ಮಾಡಬಲ್ಲರು. ಮನದಲ್ಲಿ ಈಗಾಗಲೇ ದಾಖಲಾಗಿರುವ ಅಂಶಗಳನ್ನು ಅಂದಾಜಿಸಿ ಕನ್ನಡಿ ಅಥವಾ ಛಾಯಾಚಿತ್ರದಲ್ಲಿರುವ ಮುಖಗಳನ್ನು ಗುರುತಿಸಬಲ್ಲರು. ಹಾಗಾಗಿ ಈ ಭಾವಚಿತ್ರಗಳು ಅಥವಾ ಚಿತ್ರಪಟಗಳು ಪ್ರಾಣಿಗಳ ಮೆದುಳಿನ ಗ್ರಹಿಕೆ, ಕಲಿಕೆ, ಜ್ಞಾಪಕಶಕ್ತಿ, ಆಲೋಚನಾ ಶಕ್ತಿ, ಭಾವನೆಗಳು ಮತ್ತು ಅರಿವಿನ ಮಟ್ಟವನ್ನು ಪರೀಕ್ಷಿಸಲು ಉತ್ತಮ ಸಾಧನಗಳಾಗುತ್ತವೆ. ಆದರೆ ವಿಡಿಯೋಗಳಂತೆ ಇವುಗಳಲ್ಲಿ ಚಲನೆ ಇಲ್ಲದಿರುವುದು ಪ್ರಾಣಿಗಳಿಗೆ ಮೊದಲ ಹಂತದಲ್ಲಿ ಅದು ತಾವೇ ಎಂದು ಗುರುತಿಸುವುದು ಕಷ್ಟವಾಗಬಹುದು ಹಾಗೂ ಅವುಗಳ ಪ್ರತಿಕ್ರಿಯೆಯನ್ನು ಅರಿಯುವುದು ನಮಗೂ ಅಸಾಧ್ಯ. ಆದರೆ ಡಿಮಿಡಿಯೇಟಸ್ ಮಡಿವಾಳ ಮೀನುಗಳು ಬೇರೆ ಮೀನುಗಳು, ಕೆಲವೊಮ್ಮೆ ಮನುಷ್ಯರ ಮುಖಗಳನ್ನು ಆಗಿಂದಾಗ್ಗೆ ನೋಡಿದ್ದೇ ಆದರೆ ಸುಲಭವಾಗಿ ಪತ್ತೆ ಮಾಡುತ್ತವೆಯಂತೆ. ಹಾಗಾಗಿ ಇವು ಮನುಷ್ಯನಲ್ಲದೇ ಇತರೆ ಯಾವ ಪ್ರಾಣಿಗಳು ಬಿಂಬವನ್ನು ನೋಡಿದಾಗ ಹೇಗೆ ವರ್ತಿಸುತ್ತವೆ ಎಂದು ಅಧ್ಯಯನ ಮಾಡಲು ಉತ್ತಮ ಮಾದರಿಗಳಾಗಿವೆಯಂತೆ.
ಇದನ್ನು ಖಚಿತಪಡಿಸಿಕೊಳ್ಳಲು ಕೊಡ ಮತ್ತು ಸಂಗಡಿಗರು ಈ ಮೀನುಗಳಿಗೆ ಕನ್ನಡಿ ಪರೀಕ್ಷೆಯನ್ನು ನೀಡಿದ್ದಾರೆ. ಇವು ಅತ್ಯುತ್ತಮ ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣವೂ ಆಗಿವೆ. ಮೊದಲಿಗೆ ಸುಮಾರು 26 ಹೆಣ್ಣು ಮಡಿವಾಳ ಮೀನುಗಳನ್ನು ಹಿಡಿದು ತಂದು ಪ್ರತಿಯೊಂದನ್ನೂ ಪ್ರತ್ಯೇಕ ಅಕ್ವೇರಿಯಂನಲ್ಲಿ ಇರಿಸಿದ್ದಾರೆ. ಒಂದು ವಾರದ ನಂತರ ಅಂದರೆ ಅವು ಗಾಜಿನ ಪೆಟ್ಟಿಗೆಗೆ ಹೊಂದಿಕೊಂಡ ಮೇಲೆ ಪ್ರಯೋಗಗಳನ್ನು ಆರಂಭಿಸಿದ್ದಾರೆ. ಗಾಜಿನ ಪೆಟ್ಟಿಗೆಯ ಒಂದು ಕಡೆಗೆ ಉತ್ತಮ ಗುಣಮಟ್ಟದ ಕನ್ನಡಿಯನ್ನು ಇರಿಸಿಲಾಗಿತ್ತು. ಅವುಗಳ ಎಲ್ಲಾ ಚಲನವಲನಗಳನ್ನು ವೀಡಿಯೋ ಮಾಡಿಕೊಳ್ಳಲಾಯಿತು. ಅವುಗಳ ಪ್ರತಿಕ್ರಿಯೆಯನ್ನು ಗಮನಿಸಿದವರೇ ಮೂರು ಹಂತಗಳಲ್ಲಿ ವಿವರಿಸುತ್ತಾರೆ ಕೊಡ. ಮೊದಲಿಗೆ, ಪ್ರತಿಬಿಂಬವನ್ನು ಕಂಡೊಡನೆ ಆಕ್ರಮಣಕಾರಿಯಾಗಿ ವರ್ತಿಸಿದುವುಂತೆ. ಮತ್ತೊಂದು ಮೀನು ತನ್ನ ಜಾಗಕ್ಕೆ ಬಂದಿದೆ ಎನ್ನುವಂತೆ ಕಚ್ಚಿ, ದಾಳಿಮಾಡಲು ಮುನ್ನುಗ್ಗಿದುವಂತೆ. ಸ್ವಲ್ಪ ಸಮಯದ ನಂತರ ಶಾಂತವಾಗಿ ನಾವು ಹೊಸಬರನ್ನು ನೋಡಿ ಆಶ್ಚರ್ಯ ಅಥವಾ ವಿಚಿತ್ರವಾಗಿ ನೋಡುವಂತೆ, ವಿಲಕ್ಷಣವಾಗಿ ವರ್ತಿಸಿದುವಂತೆ. ಕೊನೆಗೆ ತಮ್ಮದೇ ಬಿಂಬವಿರಬಹುದೇನೋ ಎನ್ನವುದು ಅರ್ಥವಾದಂತೆ ನಡೆದುಕೊಳ್ಳುತ್ತಿದ್ದುವಂತೆ. ಸುಮಾರು ಐದು ದಿನಗಳಾಗುತ್ತಿದ್ದಂತೆ ಏನೋ ಅರಿವಿಗೆ ಬಂದಂತೆ ದಾಳಿ ಮಾಡುವ ಹಾಗೂ ವಿಲಕ್ಷಣ ವರ್ತನೆಯನ್ನು ನಿಲ್ಲಿಸಿ, ಪುಟ್ಟಮಕ್ಕಳು ಕನ್ನಡಿಯ ಮುಂದೆ ನಲಿಯುವ ಹಾಗೆ ತಮ್ಮದೇ ಮುಖ, ದೇಹ, ಹಾವಭಾವಗಳನ್ನು ಗಮನಿಸತೊಡಗಿದುವಂತೆ. ಎಂಟನೇ ದಿನ ‘ಮಿರರ್ ಮಾರ್ಕ್ ಟೆಸ್ಟ್’ ಎನ್ನುವ ಮತ್ತೊಂದು ಪರೀಕ್ಷೆಗೆ ಮೀನುಗಳನ್ನು ಒಡ್ಡಲಾಯಿತು. ಅವುಗಳ ಕೊರಳಿಗೆ ಕಂದುಬಣ್ಣದ ಎಲಾಸ್ಟಿಕ್ ಪಟ್ಟಿಯೊಂದನ್ನು ಕಟ್ಟಿ ಪುನಃ ಕನ್ನಡಿಯಲ್ಲಿನ ಅವುಗಳ ಪ್ರತಿಬಿಂಬಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ನೋಡಿದರು. ಇದರ ಫಲಿತಾಂಶಗಳ ಪ್ರಕಾರವೂ ಮೀನುಗಳು ತಮ್ಮ ಸ್ವಪರಿಚಯವನ್ನು ಮರೆತಿರಲಿಲ್ಲ. ವಿಚಿತ್ರವಾಗಿ ವರ್ತಿಸಲಿಲ್ಲ. ಅರ್ಥಾತ್ ಪರೀಕ್ಷೆಯಲ್ಲಿ ಮೀನುಗಳು ಉತ್ತೀರ್ಣ!
ಇದುವರೆಗೂ ಪ್ರತ್ಯೇಕವಾಗಿರಿಸಿದ್ದ ಮೀನುಗಳಿಗೆ ಒಂಬತ್ತನೇ ದಿನ ಅರಿವಳಿಕೆಯನ್ನು ನೀಡಿ, ಅವುಗಳ ಸಾಕಷ್ಟು ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು. ಅವುಗಳಿಂದ ನಂತರ ನಾಲ್ಕು ರೀತಿಯ ಭಾವಚಿತ್ರಗಳನ್ನು ತಯಾರಿಸಿದರು. ಪರೀಕ್ಷೆಗೊಳಪಡಿಸಿದ ಅದೇ ಮೀನುಗಳ ಸಾಮಾನ್ಯ ಚಿತ್ರ, ಪರಿಚಯವಿಲ್ಲದ ಒಂದು ಮೀನಿನ ಮುಖಕ್ಕೆ ಪರಿಚಯವಿಲ್ಲದ ಮತ್ತೊಂದು ಮೀನಿನ ದೇಹ, ಪರೀಕ್ಷೆ ಎದುರಿಸಿದ ಒಂದು ಮೀನಿನ ಮುಖ ಹಾಗೂ ಅಪರಿಚಿತ ದೇಹ ಮತ್ತು ಅಪರಿಚಿತ ಮುಖ ಹಾಗೂ ಪರಿಚಿತ ದೇಹ. ಹೀಗೆ ವಿವಿಧ ರೀತಿಯ ಛಾಯಾಚಿತ್ರಗಳು ತಯಾರಾದವು. ಈಗ ಅವನ್ನು ಪರೀಕ್ಷೆಗೆ ಒಳಪಡುವ ಮೀನಿರುವ ಗಾಜಿನ ಪೆಟ್ಟಿಗೆಯ ಮೇಲೆ ಹೊರಗಡೆ ಮೇಲ್ಭಾಗದಲ್ಲಿ ಇರಿಸಿದರು. ನಾಲ್ಕೂ ಬಗೆಯ ಛಾಯಾಚಿತ್ರಗಳನ್ನು ನಿಗಧಿತ ಅವಧಿಯ ಅಂತರದಲ್ಲಿ ಬದಲಾಯಿಸಿ ಮೀನಿಗೆ ಪ್ರದರ್ಶಿಸಲಾಯಿತು. ಆಗ ಮೀನು ತನ್ನ ಹಾಗೂ ಅಪರಿಚಿತ ಮೀನಿನ ಚಿತ್ರಗಳನ್ನು ಗುರುತಿಸುವುದನ್ನು ಸಂಶೋಧಕರು ಗಮನಿಸಿದ್ಧಾರೆ. ಈಗಾಗಲೇ ಕನ್ನಡಿಯಲ್ಲಿನ ತನ್ನ ಬಿಂಬವನ್ನು ಕಂಡಿದ್ದ ಮೀನು ತನ್ನದೇ ಚಿತ್ರವೆಂದು ಗುರುತಿಸಬಲ್ಲದು ಎಂದು ಅಭಿಪ್ರಾಯ ಪಟ್ಟಿದ್ದರು. ಅವು ಹಾಗೆಯೇ ನಡೆದುಕೊಂಡವಂತೆ ಹಾಗೂ ಅಪರಿಚಿತ ದೇಹದೊಂದಿಗೆ ಜೋಡಿಸಿದ್ದ ತನ್ನದೇ ಮುಖವನ್ನು ಗಮನಿಸಿದಾಗಲೂ ಅವು ಪರಿಚಯವಿದ್ದಂತೆಯೇ ವರ್ತಿಸುದುವಂತೆ. ಆದರೆ ತನ್ನದೇ ದೇಹದೊಂದಿಗೆ ಬೇರೆ ಮುಖವಿದ್ದ ಚಿತ್ರವನ್ನು ಅವುಗಳಿಗೆ ಗುರುತಿಸಲು ಸಾಧ್ಯವಾಗದೇ ಸೋತುಬಿಟ್ಟವಂತೆ. ಅರ್ಥಾತ್, ಅವುಗಳ ಮೆದುಳು ಮನುಷ್ಯನ ಮೆದುಳಿನಷ್ಟು ವಿಕಾಸವಾಗಿಲ್ಲವಾದ್ದರಿಂದ ಸಂಯುಕ್ತವಾದ ಸಂಕೀರ್ಣ ಚಿತ್ರಗಳನ್ನು ಗುರುತಿಸಾಗಲಿಲ್ಲ ಎನ್ನವುದು ಕೊಡ ಅವರ ಅಭಿಪ್ರಾಯ.
ನಮ್ಮಂತೆ ಅವುಗಳಿಗೆ ಸ್ವ-ಅರಿವಿಲ್ಲದಿದ್ದರೂ ಪ್ರತಿಬಿಂಬದಲ್ಲಿ ಕಾಣುವ ತನ್ನ ಹಾಗೂ ಪರಿಚಿತ ಮುಖಗಳನ್ನು ಅವು ನೆನಪಿಟ್ಟುಕೊಳ್ಳಬಲ್ಲವು, ತನ್ನದೇ ಎಂದು ಅರ್ಥಮಾಡಿಕೊಳ್ಳಬಲ್ಲವು. ಆದರೆ ಇವುಗಳ ಸ್ವ-ಅರಿವಿನ ಸಾಮರ್ಥ್ಯದ ಬಗ್ಗೆ ಇನ್ನೂ ತಿಳಿಯುವುದಿದೆ. ಹಾಗಾಗಿ ಇದು ಇತರೆ ಪ್ರಾಣಿಗಳ ಮೆದುಳಿನ ಗ್ರಹಿಕಾ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಅತ್ಯುತ್ತಮ ಅಡಿಪಾಯವಾಗಲಿದೆ ಎನ್ನುತ್ತಾರೆ, ಕೊಡ. ಅಂತೂ ಹೀಗೆ ದಿನೇ ದಿನೇ ಯಾವ ಯಾವ ಪ್ರಾಣಿಗಳ ಮೆದುಳಲ್ಲಿ ಕಲಿಯುವ, ಅರಿಯುವ ಹಾಗೂ ನೆನಪಿಡುವ ಶಕ್ತಿ ಇದೆ ಎನ್ನುವುದು ನಮಗೆ ತಿಳಿಯುತ್ತಲಿದೆ. ಈ ವಿಕಸನ ಕ್ರಿಯೆ ನಿರಂತರವೂ ಹೌದು. ಹಾಗೊಂದು ವೇಳೆ ನಾವಲ್ಲದೇ ಬೇರೆ ಪ್ರಾಣಿಗಳೂ ಬುದ್ದಿವಂತರಾಗಿಬಿಟ್ಟರೆ, ಆಲೋಚನೆ ಮಾಡುವಂತಾಗಿಬಿಟ್ಟರೆ ಮನುಷ್ಯನು ನಿಸರ್ಗದ ಎಲ್ಲಾ ಜೀವಿಗಳ ಮೇಲಿಟ್ಟಿರುವ ಹಿಡಿತಕ್ಕೆ ಏನಾದೀತೋ?
ಈ ಸಂಶೋಧನೆಯು ಇತ್ತೀಚೆಗೆ ‘ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ನಲ್ಲಿ ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.