ADVERTISEMENT

ಚುನಾವಣೆಯ ಕಣಕ್ಕಿಳಿದ ಎಐ!

ಕೃಷ್ಣ ಭಟ್ಟ
Published 25 ಜೂನ್ 2024, 23:40 IST
Last Updated 25 ಜೂನ್ 2024, 23:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಷ್ಟು ದಿನ ಯಾರದೋ ತಾಳಕ್ಕೆ ತಕ್ಕಂತೆ ಕುಣಿದು, ಎದುರಾಳಿಯನ್ನು ಮಣಿಸುವುದಕ್ಕೋ, ತಂತ್ರಗಾರಿಕೆಯನ್ನು ಮಾಡುವುದಕ್ಕೋ ನೆರವಾಗುತ್ತಿದ್ದ ‘ಎಐ’ ಮತ್ತು ‘ರೋಬೋಟ್‌’ಗಳು ಈಗ ಚುನಾವಣೆಯ ಕಣಕ್ಕೇ ನೇರವಾಗಿ ಇಳಿಯುತ್ತಿವೆ! ಇದೇನೂ ಊಹಿಸದ ಘಟನೆಯಲ್ಲ. ಏಕೆಂದರೆ, ‘ಬ್ಲ್ಯಾಕ್ ಮಿರರ್’ ಎಂಬ ಜನಪ್ರಿಯ ಸರಣಿಯಲ್ಲಿ ಇಂಥದ್ದೊಂದು ಸಾಧ್ಯತೆಯ ಬಗ್ಗೆ ಹೇಳಲಾಗಿತ್ತು. ಕೆಲವೇ ವರ್ಷಗಳ ಹಿಂದೆ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದ ಆ ಊಹೆಗೆ ಈಗ ಜೀವ ಬಂದಿದೆ.

ಇತ್ತೀಚೆಗೆ ಇಂಥ ಎರಡು ಘಟನೆಗಳು ನಡೆದವು. ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಮೇಯರ್ ಚುನಾವಣೆ ಸಮಯದಲ್ಲಿ ನಡೆದ ಮೊದಲ ಘಟನೆಯಲ್ಲಿ ವ್ಯೋಮಿಂಗ್‌ನ ಚೆಯೆನ್ನೆಯಲ್ಲಿ ವಿಕ್ಟರ್ ಮಿಲ್ಲರ್ ಎಂಬ ಅಭ್ಯರ್ಥಿ ತನ್ನ ಪರವಾಗಿ ಎಐ ರೋಬೋಟ್‌ ಅನ್ನು ಸ್ಫರ್ಧೆಗೆ ಇಳಿಸುತ್ತೇನೆ ಎಂದಿದ್ದರು. ಆದರೆ, ಎಐ ರೋಬೋಟ್‌ ಅಧಿಕೃತ ಮತದಾರ ಅಲ್ಲದ್ದರಿಂದ ಅದಕ್ಕೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಅವಕಾಶವನ್ನು ನಿರಾಕರಿಸಿದರು. ಇವರ ‘ವಿಕ್’ ಎಂಬ ಹೆಸರಿನ ಎಐ ರೋಬೋಟ್‌ ಬಗ್ಗೆ ಅಷ್ಟೇನೂ ಜನರು ತಲೆ ಕೆಡಿಸಿಕೊಂಡಿರಲಿಲ್ಲ. ಏಕೆಂದರೆ, ಅವರ ರೋಬೋಟ್‌ನಲ್ಲಿ ಹತ್ತಾರು ಸಮಸ್ಯೆಗಳಿದ್ದವು. ಅದಿನ್ನೂ ತನ್ನ ಹೆಸರನ್ನೂ ಸರಿಯಾಗಿ ಹೇಳಲು ಕಲಿತಿರಲಿಲ್ಲ.

ADVERTISEMENT

ಆದರೆ, ಯುನೈಟೆಡ್ ಕಿಂಗ್ಡಮ್‌ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಒಂದು ಎಐ ಕಂಪನಿಯ ಸಿಇಒ ಸ್ಟೀವ್ ಎಂಡೆಕೋಟ್ ಅಲ್ಲಿನ ಸಂಸತ್ ಚುನಾವಣೆಗೆ ತನ್ನ ‘ಸ್ಟೀವ್’ ಎಂಬ ಹೆಸರಿನ ರೋಬೋಟ್‌ ಅನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಈ ರೋಬಾಟ್ರೋಬೋಟ್‌ ತುಂಬಾ ಜಾಣ. ಅದಕ್ಕೊಂದು ವೆಬ್‌ಸೈಟ್ ಇದೆ. ಸ್ಟೀವ್ ಹೆಸರಿನ ರೋಬೋಟ್‌ ಬಳಿ ಯಾವ ವಿಷಯಗಳನ್ನೂ ನೀವು ಕೇಳಬಹುದು. ಅದು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರ ಹೇಳುತ್ತದೆ. ತುಂಬಾ ಕಷ್ಟದ ವಿಷಯವನ್ನೂ ಸುಲಭ ವಿಷಯವನ್ನೂ ಅರ್ಥ ಮಾಡಿಕೊಂಡು ಮಾತನಾಡುತ್ತದೆ. ಇದು ಸುಧಾರಿತ ‘ಲ್ಯಾಂಗ್ವೇಜ್ ಮಾಡೆಲ್’ ಮತ್ತು ಅಪಾರ ಡೇಟಾಬೇಸ್‌ಗಳನ್ನು ಆಧರಿಸಿ ತಯಾರಾಗಿದೆ. ಹೀಗಾಗಿ, ಬಹುತೇಕ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಸಾಮರ್ಥ್ಯವನ್ನು ಹೊಂದಿದೆ. ಧ್ವನಿ ಮತ್ತು ಪಠ್ಯವಿಧಾನವೆರಡರಲ್ಲೂ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ರಾಜಕಾರಣಿಯ ಹಾಗೆಯೇ ಕೆಲವು ನೇರ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡುವುದೂ ಅದಕ್ಕೆ ಗೊತ್ತು!

ಈ ಸ್ಟೀವ್ ಎಐ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕಾನೂನಾತ್ಮಕವಾಗಿ ಇದೊಂದು ಸಮಸ್ಯೆಯೇನಲ್ಲ. ಏಕೆಂದರೆ, ಚುನಾವಣೆಗೆ ಸ್ಫರ್ಧಿಸುತ್ತಿರುವುದು ಅಧಿಕೃತವಾಗಿ ಸ್ಟೀವ್ ಎಂಬ ವ್ಯಕ್ತಿಯೇ ಆಗಿರುತ್ತಾರೆ. ರೋಬೋಟ್‌ ಎಂಬುದು ಅವರ ಪರ್ಸನಲ್ ಸೆಕ್ರೆಟರಿಯಾಗಿ ಕೆಲಸ ಮಾಡುತ್ತದೆಯಷ್ಟೇ! ಈಗಿನ ಎಲ್ಲ ದೇಶಗಳ ಕಾನೂನಿನ ಪ್ರಕಾರ, ಮತದಾರ ಅಲ್ಲದ ಒಬ್ಬ ವ್ಯಕ್ತಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ. ಎಐ ರೋಬೋಟ್‌ ಮತದಾರನಲ್ಲ. ಹೀಗಾಗಿ, ಈ ರೋಬೋಟ್‌ಗಳ ಹಿಂದೆ ಒಬ್ಬ ವ್ಯಕ್ತಿ ಇಲ್ಲದೇ ಇದ್ದರೆ, ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಒಂದು ವೇಳೆ ರೋಬೋಟ್‌ ಅನ್ನು ಮುಂದಿಟ್ಟುಕೊಂಡು ವ್ಯಕ್ತಿಯೊಬ್ಬ ಚುನಾವಣೆಗೆ ನಿಂತು ಗೆದ್ದು ಬಂದರೂ, ವ್ಯಕ್ತಿಯೇ ಗೆದ್ದು ಬಂದ ಹಾಗೆ!

ಈ ಅಭ್ಯರ್ಥಿ ಸ್ಟೀವ್ ಎಂಡೆಕೋಟ್ ಅವರ ಇ-ಅವತಾರದಿಂದ ಒಂದು ಅನುಕೂಲವಂತೂ ಇದೆ. ಚುನಾವಣೆಯಲ್ಲಿ ಗೆದ್ದು ಬಂದ ವ್ಯಕ್ತಿ ನಮ್ಮ ಕೈಗೆ ಸಿಗುವುದಿಲ್ಲ ಎಂಬ ಆರೋಪ ಕೇಳಿ ಬರಲು ಸಾಧ್ಯವೇ ಇಲ್ಲ. ಏಕೆಂದರೆ, ಅವನ ಪರವಾಗಿ ಅವನ ಸಹಾಯಕನಂತಿರುವ ಈ ಎಐ ರೋಬೋಟ್‌ ದಿನದ 24 ಗಂಟೆಯೂ ಕೈಗೆ ಸಿಗುತ್ತಾನೆ.

ಜನರು ತಮ್ಮ ಸಮಸ್ಯೆಗಳನ್ನು ಈ ರೋಬೋಟ್‌ ಬಳಿ ಹೇಳಿಕೊಳ್ಳಬಹುದು. ಪರಿಹಾರ ಸಿಗುತ್ತದೆಯೋ ಅಥವಾ ಇಲ್ಲವೋ, ಸಮಾಧಾನವಂತೂ ಸಿಗುತ್ತದೆ! ಇದು ಮತದಾರರು ಮತ್ತು ಸ್ಪರ್ಧಿಯ ಮಧ್ಯೆ ಒಂದು ನಿರಂತರ ಮಾತುಕತೆಗೆ ಅನುಕೂಲ ಮಾಡಿಕೊಡುತ್ತದೆ. ಆದರೆ, ಈ ಮಾಹಿತಿಯನ್ನು ಅದು ಜಾರಿಗೆ ತರುವುದಕ್ಕೆ ಎಂದು ತನ್ನ ಮಾಲೀಕನಿಗೆ ಕಳುಹಿಸುತ್ತದೆಯೇ ಎಂಬುದು ಇನ್ನೂ ಗೊತ್ತಿಲ್ಲ. ಒಂದು ವೇಳೆ ಸ್ಟೀವ್ ಗೆದ್ದು ಬಂದರೆ, ಇಂಥದ್ದನ್ನೆಲ್ಲ ಅಪ್ಡೇಟ್ ಮಾಡಬಹುದೇನೋ!

ಸದ್ಯ, ಇಂಥದ್ದೊಂದು ಪರಿಕಲ್ಪನೆ ಇನ್ನೂ ಆರಂಭಿಕ ಹಂತದಲ್ಲೇ ಇದೆ. ಈವರೆಗೆ ಚುನಾವಣೆಯ ಪ್ರಚಾರಕ್ಕೆ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಅನ್ನು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಬಳಸಿಕೊಳ್ಳುತ್ತಿದ್ದರು. ಆದರೆ, ಈಗ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಎಐ ಅನ್ನೇ ಮುಖ್ಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಚುನಾವಣೆ ಮುಗಿದ ನಂತರ, ಎಂದರೆ ಅಭ್ಯರ್ಥಿ ಗೆದ್ದ ಮೇಲೆ ಎಐ ಅನ್ನು ಬಳಸಿಕೊಳ್ಳುವ ವಿಷಯದಲ್ಲಿ ಗೆದ್ದ ವ್ಯಕ್ತಿ ಎಷ್ಟು ಚುರುಕಾಗಿದ್ದಾನೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ, ಜನರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಎಐ ಅನ್ನು ಅಭ್ಯರ್ಥಿ ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬುದು ಅತ್ಯಂತ ಮುಖ್ಯ ವಿಷಯವಂತೂ ಹೌದು. ಜನರಿಗೆ ಬೇಕಾದ್ದೂ, ಉಪಯೋಗವಾಗುವುದು ಕೂಡ ಇದೇ ವಿಷಯ. ಚುನಾವಣೆಗೂ ಮುನ್ನ, ಪ್ರಚಾರದಲ್ಲಿ ಈಗಾಗಲೇ ಎಐ ಬಳಕೆ ಬಹುತೇಕ ತಾರಕಕ್ಕೇರಿದೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಬಳಕೆ ಮಾಡಿಕೊಂಡು ಪ್ರಚಾರದ ಅಭಿಯಾನಗಳನ್ನು ನಡೆಸುತ್ತವೆ. ಆದರೆ, ಒಮ್ಮೆ ಚುನಾವಣೆ ಪ್ರಚಾರ ಮುಗಿದಮೇಲೆ ಎಐ ಬಳಕೆ ನಿಂತುಹೋಗುತ್ತದೆ.

ಎಐ ಬಳಕೆ ಅಭ್ಯರ್ಥಿಯೊಬ್ಬನಿಗೆ ಅಥವಾ ಜನಪ್ರತಿನಿಧಿಯೊಬ್ಬನಿಗೆ ತಾನು ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದಕ್ಕೆ ಸಹಾಯ ಮಾಡುವುದಂತೂ ಹೌದು. ಆದರೆ, ಸದ್ಯದ ಮಟ್ಟಿಗಂತೂ ಎಐ ಸ್ವತಂತ್ರವಾಗಿ ಜನರನ್ನು ಪ್ರತಿನಿಧಿಸುವುದು ಸಾಧ್ಯವಿಲ್ಲ. ಎಂದರೆ ಮಾನವಅಭ್ಯರ್ಥಿ ಇಲ್ಲದೇ ಸ್ವತಂತ್ರವಾಗಿ ಚುನಾವಣೆಗೆ ಸ್ಫರ್ಧಿಸಲು ಕಾನೂನು ಅನುಮತಿ ಯಾವ ದೇಶದಲ್ಲೂ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ, ಮನುಷ್ಯನ ಬೆಂಬಲ ಇಲ್ಲದೇ ಎಐ ಸ್ಫರ್ಧಿಸಲು ಅವಕಾಶ ಸಿಗುವುದಿಲ್ಲ ಎಂದೇನೂ ಹೇಳುವುದಕ್ಕೆ ಸಾಧ್ಯವಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.