ADVERTISEMENT

ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಪಿಟಿಐ
Published 15 ಆಗಸ್ಟ್ 2020, 2:48 IST
Last Updated 15 ಆಗಸ್ಟ್ 2020, 2:48 IST
ಚಂದ್ರಯಾನ–2 ಉಪಗ್ರಹ ಸೆರೆ ಹಿಡಿದಿರುವ ವಿಕ್ರಮ್‌ ಸಾರಾಭಾಯಿ ಹೆಸರಿನ ಕುಳಿಯ ಚಿತ್ರ
ಚಂದ್ರಯಾನ–2 ಉಪಗ್ರಹ ಸೆರೆ ಹಿಡಿದಿರುವ ವಿಕ್ರಮ್‌ ಸಾರಾಭಾಯಿ ಹೆಸರಿನ ಕುಳಿಯ ಚಿತ್ರ    

ಚಂದ್ರಯಾನ–2 ಉಪಗ್ರಹವು ಚಂದ್ರನ ಮತ್ತು ಅದರ ಮೇಲಿರುವ ಕುಳಿಗಳ ಚಿತ್ರಗಳನ್ನು ಸೆರೆ ಹಿಡಿದು ರವಾನಿಸಿದೆ. ಇದರಲ್ಲಿ ಒಂದು ಕುಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ‘ವಿಕ್ರಮ್‌ ಸಾರಾಭಾಯಿ’ ಅವರ ಹೆಸರು ಇಡಲಾಗಿದೆ.

‘ಸಾರಾಭಾಯಿ ಅವರ ಜನ್ಮ ಶತಮಾನೋತ್ಸವ ಆಗಸ್ಟ್ 12ಕ್ಕೆ ಪೂರ್ಣಗೊಂಡಿದೆ. ಮೇರು ವಿಜ್ಞಾನಿಗೆ ಇದು ಕೃತಜ್ಞತೆ ಸಲ್ಲಿಕೆ,’ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ಇಲಾಖೆ ನೇರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯದ ಅಡಿಯಲ್ಲೇ ಬರುತ್ತದೆ.

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ್-2 ಆರ್ಬಿಟರ್ ಮೂಲಕ 'ಸಾರಾಭಾಯ್ ಸೆಂಟರ್‌'ನ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಘೋಷಿಸುವ ಮೂಲಕ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಪ್ರಯತ್ನಿಸಲಾಗಿದೆ’ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಅಪೊಲೊ 17 ಮತ್ತು ಲೂನಾ 21 ಲ್ಯಾಂಡರ್‌ಗಳು ಇಳಿದಿದ್ದ ಜಾಗದಿಂದ ಪೂರ್ವಕ್ಕೆ 250–300 ಕಿ.ಮೀ ದೂರದಲ್ಲಿ ವಿಕ್ರಮ್‌ ಸಾರಾಭಾಯಿ ಕೇಂದ್ರವಿದೆ.

ಚಂದ್ರಯಾನ–2 ಟೆರಾಯ್ನ್‌ ಮ್ಯಾಪಿಂಗ್‌ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದಿರುವ ವಿಕ್ರಮ್‌ ಸಾರಾಭಾಯಿ ಕೇಂದ್ರದ ಈ ಚಿತ್ರಗಳು 3ಡಿ ಆಗಿದೆ ಎಂದು ಇಸ್ರೋ ಹೇಳಿದೆ. ಕುಳಿಯು 1.7 ಕಿಲೋಮೀಟರ್ ಆಳವನ್ನು ಹೊಂದಿದ್ದು, ಅದರ ಗೋಡೆಗಳ ಇಳಿಜಾರು 25 ರಿಂದ 35 ಡಿಗ್ರಿಗಳಷ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಲಾವಾದಿಂದ ತುಂಬಿದ ಚಂದ್ರನ ಪ್ರದೇಶದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ಅಧ್ಯಯನಗಳು ನೆರವಾಗಲಿವೆ ಎಂದು ಎಂದು ಇಸ್ರೋ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.