ಬೆಂಗಳೂರು: ಚಂದ್ರಯಾನ–2 ಯೋಜನೆಯಡಿ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ) ಕಳೆದ ವರ್ಷ ಉಡಾವಣೆ ಮಾಡಿದ್ದ ಆರ್ಬಿಟರ್ ಚಂದ್ರನಲ್ಲಿ ಒಂದು ವರ್ಷ ಪೂರೈಸಿದೆ.
‘ಚಂದ್ರಯಾನ–2 ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರೈಸಿದೆ. 2019ರ ಆಗಸ್ಟ್ 20ರಂದು ಆರ್ಬಿಟರ್ ಅನ್ನು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು’ ಎಂದು ಇಸ್ರೊ ಗುರುವಾರ ಟ್ವೀಟ್ ಮಾಡಿದೆ.
2019ರ ಜುಲೈ 22ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ, ಎಂಟು ವೈಜ್ಞಾನಿಕ ಸಾಧನಗಳನ್ನು ಹೊಂದಿರುವ ಆರ್ಬಿಟರ್ ಯಶಸ್ವಿಯಾಗಿ ಕಕ್ಷೆ ಸೇರಿತ್ತು.
‘ಆರ್ಬಿಟರ್‌ನಲ್ಲಿರುವ ಎಲ್ಲ ಉಪಕರಣಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಚಂದ್ರನ ಸುತ್ತ 4400ಕ್ಕೂ ಹೆಚ್ಚುಸುತ್ತನ್ನು ಪೂರ್ಣಗೊಳಿಸಿದೆ’ ಎಂದೂ ಇಸ್ರೊ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.