ADVERTISEMENT

‘ಚಂದ್ರಯಾನ–3’ಕ್ಕೆ ಇಸ್ರೊ ಸಿದ್ಧತೆ: ಮುಂದಿನ ವರ್ಷ ನವೆಂಬರ್‌ನಲ್ಲಿ ಲ್ಯಾಂಡಿಂಗ್‌?

ಇಸ್ರೊ ಮೂಲಗಳಿಂದ ಮಾಹಿತಿ

ಪಿಟಿಐ
Published 14 ನವೆಂಬರ್ 2019, 10:17 IST
Last Updated 14 ನವೆಂಬರ್ 2019, 10:17 IST
‘ಚಂದ್ರಯಾನ–3’ ಯೋಜನೆಗೆ ಸಿದ್ಧತೆ ಆರಂಭಿಸಿದ ಇಸ್ರೊ
‘ಚಂದ್ರಯಾನ–3’ ಯೋಜನೆಗೆ ಸಿದ್ಧತೆ ಆರಂಭಿಸಿದ ಇಸ್ರೊ    

ಬೆಂಗಳೂರು:ಚಂದ್ರನ ಅಂಗಳದಲ್ಲಿ ಮೃದು ನೆಲಸ್ಪರ್ಶಕ್ಕೆ (ಸಾಫ್ಟ್‌ ಲ್ಯಾಂಡಿಂಗ್‌) ಇನ್ನೊಂದು ಬಾರಿ ಪ್ರಯತ್ನಿಸಲಾಗುವುದು. ಬಹುಶಃ ಮುಂದಿನ ವರ್ಷ ನವೆಂಬರ್‌ನಲ್ಲಿ‘ಚಂದ್ರಯಾನ–3’ ಯೋಜನೆ ಸಾಕಾರಗೊಳ್ಳಬಹುದು ಎಂದು ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ಮೂಲಗಳು ಗುರುವಾರ ತಿಳಿಸಿವೆ.

‘ಚಂದ್ರಯಾನ–3’ ಯೋಜನೆ ಬಗ್ಗೆ ವರದಿ ಸಿದ್ಧಪಡಿಸಲುಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರದ ನಿರ್ದೇಶಕ ಎಸ್.ಸೋಮನಾಥ್ ಸಮಿತಿಯನೇತೃತ್ವ ವಹಿಸಿದ್ದಾರೆ.

ಸಮಿತಿಯ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ. ಮುಂದಿನ ವರ್ಷದ ಅಂತ್ಯದ ಒಳಗೆ ಯೋಜನೆ ಸಿದ್ಧಪಡಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

‘ನವೆಂಬರ್‌ ತಿಂಗಳು ಉಪಗ್ರಹ ಉಡಾವಣೆಗೆ ಸೂಕ್ತ ಸಮಯವಾಗಿದೆ. ರೋವರ್ ಮತ್ತು ಲ್ಯಾಂಡರ್‌ಗಳ ಲ್ಯಾಂಡಿಂಗ್ ಬಗ್ಗೆ ಈ ಬಾರಿ ಹೆಚ್ಚು ಗಮನಹರಿಸಲಾಗುವುದು. ‘ಚಂದ್ರಯಾನ–2’ರ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಳ್ಳಲಾಗುವುದು’ ಎಂದುಇಸ್ರೊ ಮೂಲಗಳು ಹೇಳಿವೆ.

ಸುಳಿವು ನೀಡಿದ್ದ ಶಿವನ್:‘ಚಂದ್ರಯಾನ 2’ ಇಸ್ರೊ ಕನಸಿನ ಅಂತ್ಯವಲ್ಲ. ಭವಿಷ್ಯದಲ್ಲಿ ಮತ್ತೆ ‘ಸಾಫ್ಟ್‌ ಲ್ಯಾಂಡಿಗ್‌’ಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಇತ್ತೀಚೆಗೆ ದೆಹಲಿಯಲ್ಲಿ ಹೇಳಿದ್ದರು.

ಐಐಟಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ 50ನೇ ವರ್ಷದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ್ದ ಅವರು, ‘ಈಗ ನಾವು ವಿಫಲರಾಗಿರಬಹುದು. ಆದರೆ ಈಗ ಮಾಡಿರುವ ಪ್ರಯತ್ನದಿಂದ ಭವಿಷ್ಯದಲ್ಲಿ ಈ ಯೋಜನೆ ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲ ಮೌಲ್ಯಯುತವಾದ ದತ್ತಾಂಶಗಳು ಸಂಗ್ರಹವಾಗಿವೆ. ಇವುಗಳನ್ನು ಬಳಸಿಕೊಂಡು ಮತ್ತೆ ಸಾಫ್ಟ್‌ ಲ್ಯಾಂಡಿಂಗ್‌ಗೆ ಇಸ್ರೊ ಪ್ರಯತ್ನಿಸಲಿದೆ’ ಎಂದು ಹೇಳಿದ್ದರು.

ಸೆಪ್ಟೆಂಬರ್ 7ರಂದು ‘ಚಂದ್ರಯಾನ–2’ ಇನ್ನೇನು ಯಶಸ್ವಿಯಾಯಿತು ಎನ್ನುವಾಗ, ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆ ಇಳಿಸುವ ಇಸ್ರೊ ಪ್ರಯತ್ನ ವಿಫಲವಾಗಿತ್ತು. ಬಳಿಕ, ವಿಕ್ರಂ ಲ್ಯಾಂಡರ್ ರಭಸದಿಂದ ಚಂದ್ರನ ನೆಲದ ಮೇಲೆ ಕುಸಿದ ವಿಚಾರ ತಿಳಿದುಬಂದಿತ್ತು. ಇನ್ನಂದೂ ಆ ನೌಕೆ ಜತೆ ಸಂಪರ್ಕ ಸಾಧಿಸುವುದು ಸಾಧ್ಯವಿಲ್ಲ ಎಂದು ಇಸ್ರೊದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.