ಬೆಂಗಳೂರು: ಚಂದ್ರನ ಅಂಗಳಕ್ಕಿಳಿದ ರೋವರ್ ಪ್ರಜ್ಞಾನ್ ತನ್ನ ಕಾರ್ಯ ಮುಂದುವರಿಸಿದೆ. ಈಗಾಗಲೇ ಚಂದ್ರನ ಮೇಲೆ ಆಮ್ಲಜನಕ ಧಾತು ಇದೆ ಎನ್ನುವುದನ್ನು ಪತ್ತೆ ಮಾಡಿದೆ.
ರೋವರ್ ಚಲನೆಯ ಮತ್ತೊಂದು ವಿಡಿಯೊವನ್ನು ಎಕ್ಸ್ (ಟ್ವಿಟರ್)ನಲ್ಲಿ ಇಸ್ರೊ ಹಂಚಿಕೊಂಡಿದೆ.
ಬೆಂಗಳೂರಿನ ಇಸ್ರೊ ಕೇಂದ್ರದಿಂದ ರೋವರ್‌ಗೆ ಕಮಾಂಡ್‌ಗಳನ್ನು ನೀಡಲಾಗುತ್ತಿದೆ. ಮುಂದಿನ ವಾರ ಅಂದರೆ ಚಂದ್ರನಲ್ಲಿ ರಾತ್ರಿಯಾಗುವ ಮುನ್ನ ಹುಡುಕಾಟವನ್ನು ಪೂರ್ತಿಗೊಳಿಸಲು ರೋವರ್ ಚಂದ್ರನ ಮೇಲ್ಮೈಯನ್ನು ಆವರಿಸಿರುವ ಅನೇಕ ಕುಳಿ, ಕಲ್ಲುಗಳನ್ನು ತಪ್ಪಿಸಲು ಜಾಗವನ್ನು ಹುಡುಕುತ್ತಿದೆ. ಅದಕ್ಕಾಗಿ ರೋವರ್ ಅನ್ನು ಸುರಕ್ಷಿತ ಮಾರ್ಗಕ್ಕೆ ತಿರುಗಿಸಲಾಗಿದೆ. ಅದರ ದೃಶ್ಯವು ಲ್ಯಾಂಡರ್‌ನಲ್ಲಿನ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಈ ದೃಶ್ಯಕ್ಕೆ ಇಸ್ರೊ, ‘ಪುಟ್ಟ ಮಗುವೊಂದು (ರೋವರ್) ಚಂದಮಾಮನ ಮೇಲೆ ಕುಣಿಯುತ್ತ ಆಟವಾಡುತ್ತಿದ್ದು, ಅಮ್ಮ (ಲ್ಯಾಂಡರ್) ಅದನ್ನು ಪ್ರೀತಿಯಿಂದ ನೋಡುವಂತಿದೆ’ ಎಂದು ಕ್ಯಾಪ್ಶನ್ ನೀಡಿದೆ.
ಪ್ರಜ್ಞಾನ್‌ನಲ್ಲಿರುವ ಲಿಬ್ಸ್ (ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೊಸ್ಕೋಪ್) ಉಪಕರಣವು ನಿರೀಕ್ಷೆಯಂತೆ ಅಲ್ಯುಮಿನಿಯಂ(ಎಎಲ್), ಕ್ಯಾಲ್ಷಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಧಾತುಗಳನ್ನು ಪತ್ತೆ ಮಾಡಿದೆ. ಈ ಲಿಬ್ಸ್ ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ– ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.