ಬೆಂಗಳೂರು: ಚಂದ್ರಯಾನ–2 ನೌಕೆಯು ಮಂಗಳವಾರ ಬೆಳಿಗ್ಗೆ ಚಂದ್ರನ ಇನ್ನಷ್ಟು ಸನಿಹಕ್ಕೆ ಸರಿಯಲಿದೆ. ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಏರಿಸುವ ಕೆಲಸ ಬೆಳಿಗ್ಗೆ 8.30–9.30ರ ನಡುವೆ ನಡೆಯಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಚಂದ್ರಯಾನ ಯೋಜನೆಯಲ್ಲಿ ಇದೊಂದು ಮಹತ್ವದ ಮೈಲುಗಲ್ಲು.
ಇದೊಂದು ಸವಾಲಿನ ಕಾರ್ಯಾಚರಣೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಕಕ್ಷೆ ಬದಲಾವಣೆ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಚಂದ್ರನ ನಿಗದಿತ ಕಕ್ಷೆಗೆ ನೌಕೆಯು ತಲುಪುವುದಕ್ಕೆ ಇನ್ನೂ ನಾಲ್ಕು ಕಾರ್ಯಾಚರಣೆ ನಡೆಸಬೇಕಿದೆ. ಅಂತಿಮವಾಗಿ, ಚಂದ್ರನ ಧ್ರುವ ಪ್ರದೇಶಕ್ಕೆ ಸುಮಾರು 100 ಕಿ.ಮೀ. ಹತ್ತಿರದ ಕಕ್ಷೆಗೆ ನೌಕೆಯು ಸೇರಲಿದೆ ಎಂದು ಇಸ್ರೊ ಹೇಳಿದೆ.
ಚಂದ್ರಯಾನ–2 ನೌಕೆಯನ್ನು ಜುಲೈ 22ರಂದು ಉಡ್ಡಯನ ಮಾಡಲಾಗಿತ್ತು. ಚಂದ್ರ ಕಕ್ಷೆಗೆ ವರ್ಗಾವಣೆಯಾಗುವ ದಿಕ್ಕಿನಲ್ಲಿ ನೌಕೆಯು ನಿಗದಿಯಂತೆಯೇ ಸಂಚರಿಸುತ್ತಿದೆ ಎಂದು ಆ. 14ರಂದು ಇಸ್ರೊ ಹೇಳಿತ್ತು.
ಬೆಂಗಳೂರಿನಲ್ಲಿರುವ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ನೌಕೆಯ ಮೇಲೆ ನಿರಂತರ ನಿಗಾ ಇರಿಸಿದೆ. ಬೆಂಗಳೂರು ಸಮೀಪದ ಬ್ಯಾಳಾಲು ಇಂಡಿಯನ್ ಡೀಪ್ ಸ್ಪೇಸ್‌ನೆಟ್‌ವರ್ಕ್ (ಐಡಿಎಸ್‌ಎನ್) ಇದಕ್ಕೆ ಸಹಕಾರ ನೀಡುತ್ತಿದೆ.
ಚಂದ್ರಯಾನ–2 ಚಂದ್ರನಿಗೆ ಸಂಬಂಧಿಸಿ ಇಸ್ರೊ ಕೈಗೆತ್ತಿಕೊಂಡಿರುವ ಎರಡನೇ ಯೋಜನೆ. ಈ ಬಾರಿ, ಈವರೆಗೆ ಯಾರೂ ಶೋಧಿಸದ ದಕ್ಷಿಣ ಧ್ರುವದ ಬಗ್ಗೆ ಗಮನ ಕೇಂದ್ರೀಕರಿಸಲಾಗುವುದು.
ಚಂದ್ರನ ಮೇಲೆ ನೀರಿನ ಅಂಶ ಇರುವುದರ ಬಗ್ಗೆ ಚಂದ್ರಯಾನ–1 ಶೋಧ ನಡೆಸಿತ್ತು. ಈ ಶೋಧವನ್ನು ಚಂದ್ರಯಾನ–2 ಇನ್ನಷ್ಟು ಮುಂದಕ್ಕೆ ಒಯ್ಯಲಿದೆ.
ಮುಖ್ಯಾಂಶಗಳು
* ವಿಕ್ರಮ್ ಲ್ಯಾಂಡರ್ ಸೆ. 2ರಂದು ನೌಕೆಯಿಂದ ಬೇರ್ಪಡಲಿದೆ
* ಸೆ. 7ರಂದು ಚಂದ್ರನ ಅಂಗಳಕ್ಕೆ ಇಳಿಯಲಿದೆ
* ಎರಡು ಕಾರ್ಯಾಚರಣೆ ಮೂಲಕ ಇದನ್ನು ಇಳಿಸಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.