ADVERTISEMENT

ಚಂದ್ರನ ದಕ್ಷಿಣ ಧ್ರುವ; ವಿಜ್ಞಾನಿಗಳ ಪಾಲಿನ ಕುತೂಹಲದ ಗಣಿ

ಇಸ್ರೊ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 12:09 IST
Last Updated 20 ಆಗಸ್ಟ್ 2019, 12:09 IST
   

ಬೆಂಗಳೂರು: ಈಗಾಗಲೇ ಚಂದ್ರನ ಕಕ್ಷೆ ಸೇರಿರುವದೇಶೀಯ ನಿರ್ಮಿತ ‘ಚಂದ್ರಯಾನ 2‘ ಶೋಧಕ ಗಗನನೌಕೆಯು ಮುಂದಿನ ಹದಿನೆಂಟನೆಯ ದಿನ(ಸೆ.7) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಶೋಧಕ ನೌಕೆ ಇಳಿಯಲಿರುವುದು ಜಗತ್ತಿನ ಗಮನ ಸೆಳೆದಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿನ ಶೋಧ ಕಾರ್ಯದ ಬಗ್ಗೆ ತಿಳಿಯಲು ವಿಶ್ವದ ಹಲವು ರಾಷ್ಟ್ರಗಳು ಕುತೂಹಲದಿಂದ ಕಾದಿವೆ. ಇದೇ ಭಾಗದಲ್ಲಿ ಇಸ್ರೊ ವಿಕ್ರಂ ಲ್ಯಾಂಡರ್‌ನ್ನು ಸುರಕ್ಷಿತವಾಗಿ ನೆಲದ ಮೇಲೆ ಇಳಿಸಲು ಸಜ್ಜಾಗಿದೆ. ಲ್ಯಾಂಡರ್‌ ಒಳಗಿರುವ ಪ್ರಜ್ಞಾನ್‌ ರೋವರ್‌ ಚಂದ್ರನ ಅಂಗಳದಲ್ಲಿ ಸಂಚರಿಸಿ ಶೋಧ ನಡೆಸಲಿದೆ.

ಏನು ದಕ್ಷಿಣ ಧ್ರುವದ ವಿಶೇಷ?

ADVERTISEMENT

* ಕೋಟ್ಯಂತರ ವರ್ಷಗಳಿಂದ ಈ ಭಾಗದ ಕುಳಿಗಳ ಮೇಲೆ ಸೂರ್ಯನ ಬೆಳಕಿನ ಸ್ಪರ್ಶವಾಗಿಲ್ಲ. ಇದರಿಂದಾಗಿ ಸೌರವ್ಯೂಹ ಸೃಷ್ಟಿ ರಹಸ್ಯದ ದಾಖಲೆಗಳನ್ನು ಈ ಪ್ರದೇಶ ಕಾಪಿಟ್ಟುಕೊಂಡಿರುವ ಸಾಧ್ಯತೆ ಹೇರಳವಾಗಿದೆ ಎಂಬುದು ವಿಜ್ಞಾನಿಗಳ ನಂಬಿಕೆ.

* ಇಲ್ಲಿ ಸದಾ ನೆರಳು ಆವರಿಸಿಕೊಂಡಿರುವುದರಿಂದ ನೆಲದ ಕುಳಿಗಳಲ್ಲಿ 1000 ಲಕ್ಷ ಟನ್‌ ನೀರಿನ ಸಂಗ್ರಹ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

* ನೆಲದ ಪದರದಲ್ಲಿ ಹೈಡ್ರೋಜನ್‌, ಅಮೋನಿಯಾ, ಮಿಥೇನ್, ಸೋಡಿಯಂ, ಪಾದರಸ ಹಾಗೂ ಬೆಳ್ಳಿ ಅಂಶಗಳನ್ನು ಒಳಗೊಂಡ ನೈಸರ್ಗಿಕ ಸಂಪನ್ಮೂಲಗಳಿರುವ ಸಾಧ್ಯತೆ.

* ಮುಂದಿನ ಬಾಹ್ಯಾಕಾಶ ಶೋಧಗಳಿಗೆ ಚಂದ್ರನ ಮೇಲಿನ ಈ ಭಾಗವು ಇಳಿದು ಹೊರಡುವ ನಿಲ್ದಾಣವಾಗಿ ಬಳಕೆಯಾಗಬಹುದು.

ಸಾವಿರ ಕೋಟಿ ರೂಪಾಯಿಗೂ ಕಡಿಮೆ ವೆಚ್ಚದ ‘ಚಂದ್ರಯಾನ 2‘ರಲ್ಲಿ ಸಂಪೂರ್ಣ ದೇಶೀಯ ನಿರ್ಮಿತ ತಂತ್ರಜ್ಞಾನದ ಬಳಕೆಯಾಗಿದೆ. ಇದೇ ಮೊದಲ ಬಾರಿಗೆ ದೇಶೀಯ ನಿರ್ಮಿತ ತಂತ್ರಜ್ಞಾನದಿಂದ ಚಂದ್ರನ ನೆಲದ ಮೇಲೆ ಶೋಧ ಕಾರ್ಯ ನಡೆಯಲಿದೆ. ಚಂದ್ರನ ಅಂಗಳದಲ್ಲಿ ಇಳಿಯಲಿರುವ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

2008ರ ಅಕ್ಟೋಬರ್‌ನಲ್ಲಿ ಇಸ್ರೊ ಚಂದ್ರಯಾನ–1ರ ಮೂಲಕ ಚಂದ್ರನ ಮೇಲ್ಮೈ ಶೋಧಕಾರ್ಯ ನಡೆಸಿತ್ತು. 2009ರ ಆಗಸ್ಟ್‌ ವರೆಗೂ ಚಂದ್ರಯಾನ 1 ಕಾರ್ಯನಿರ್ವಹಿಸಿತ್ತು. 2019ರ ಜುಲೈ 22ರಂದು ’ಚಂದ್ರಯಾನ 2‘ ಉಡಾವಣೆಯಾಗಿತ್ತು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.