ಆಗಸದಲ್ಲಿ ನಡೆಯುತ್ತಿರುವ ಸೃಷ್ಟಿ ವೈಚಿತ್ರ್ಯವನ್ನು ಆನಂದಿಸುವ ಭಾಗ್ಯ ಜಗತ್ತಿನಾದ್ಯಂತದ ಗಣಿತ ತಜ್ಞರು, ಖಭೌತ ವಿಜ್ಞಾನಿಗಳಿಗೆ ಅಷ್ಟೇ ಅಲ್ಲ, ಹವ್ಯಾಸಿ ಖಗೋಳ ವೀಕ್ಷಕರಿಗೆ ಈ ಜುಲೈ- ಆಗಸ್ಟ್ ತಿಂಗಳು ಒದಗಿಸಿಕೊಟ್ಟಿದೆ. ನಿಯೊವೈಸ್ ಎಂಬ ಹೆಸರಿನ ಧೂಮಕೇತು ಈ ಅವಧಿಯಲ್ಲಿ ಪ್ರತಿನಿತ್ಯ ಸಂಜೆಯ ಹೊತ್ತು ಆಗಸದಲ್ಲ್ಲಿ ಕಾಣಿಸಿಕೊಳ್ಳುತ್ತಿದೆ. ಉತ್ತರ ಗೋಳಾರ್ಧದ ದೇಶಗಳಲ್ಲಿ ಹೆಚ್ಚು ಸ್ಪಷ್ಟ ನೋಟ ಸಿಗುವುದಾದರೂ ನಮ್ಮಲ್ಲಿ ಧೂಳುರಹಿತ, ಮೋಡರಹಿತ ಹಾಗೂ ಪೇಟೆ ಪಟ್ಟಣಗಳ ಬೆಳಕಿನ ಮಾಲಿನ್ಯವಿರದ ಎತ್ತರದ ಸ್ಥಳಗಳಲ್ಲಿ ಬರಿಯ ಕಣ್ಣಿಗೆ ಕೂಡ ಅದು ಕಾಣುತ್ತದೆ.
ಸಾಮಾನ್ಯವಾಗಿ ಸೂರ್ಯ, ಚಂದ್ರ, ಮತ್ತಿತರ ಆಕಾಶಕಾಯಗಳು ದುಂಡಗಿನ ಆಕಾರದಲ್ಲಿ ಕಾಣಿಸುತ್ತವಷ್ಟೆ? ಪುರಾತನ ದಿನಗಳಲ್ಲಿ ಬಿಳಿಯ ಉದ್ದ ಬಾಲದ ಆಕಾರವೊಂದು ಬಾನಿನಲ್ಲಿ ಗೋಚರಿಸಿದಾಗ ಬೆದರಿದ ಜನತೆ ಅಂದಿನ ದಿನಗಳಲ್ಲಿ ನಡೆದ ಯುದ್ಧ, ಸಾವು, ಬರಗಾಲ ಇತ್ಯಾದಿ ವಿದ್ಯಮಾನಗಳಿಗೆ ತಳಕು ಹಾಕಿ ಅದೊಂದು ಅನಿಷ್ಟ ಎಂದು ಬಹುಶಃ ಭಾವಿಸಿದ್ದಿರಬೇಕು. ಪ್ರಾಚೀನ ಮುಂಗೋಲಿಯಾ ಜನರಿಗೆ ಧೂಮಕೇತು ಉದ್ದ ಕೂದಲಿನ ದುಃಖಿಸುತ್ತಿರುವ ‘ದೆವ್ವದ ಮಗಳಾ’ಗಿ, ಯೂರೋಪ್‌ನ ಕೆಲವರಿಗೆ ಝಳಪಿಸುತ್ತಿರುವ ಖಡ್ಗವಾಗಿ, ಭಾರತದಲ್ಲಿ ಅಪಶಕುನದ ಚಿಹ್ನೆಯಾಗಿ, ಸ್ಪೇನಿನಲ್ಲಿ ಎರಡು ತಾರೆಗಳನ್ನು ಭೂಮಿಗೆ ಎಸೆದು ಜಲಪ್ರವಾಹ ಉಂಟುಮಾಡುತ್ತಿದ್ದ ದೇವರಾಗಿ ಕಂಡುಬಂದಿತ್ತು. ಚೀನಾ ದೇಶದಲ್ಲಿ ಮಾತ್ರ ‘ಉದ್ದ ಬಾಲದ ಬೇಟೆಗಾರ ಹಕ್ಕಿ’, ‘ಪೊರಕೆ ನಕ್ಷತ್ರ’, ‘ಕೆಟ್ಟ ನಕ್ಷತ್ರ’ ಎಂದೆಲ್ಲ ತೆಗಳಿದರೂ ಪಶ್ಚಿಮದ ದೇಶಗಳಿಗೆ ವ್ಯತಿರಿಕ್ತವಾಗಿ ನೂರಾರು ಧೂಮಕೇತುಗಳ ಆಗುಹೋಗುಗಳ ಕುರಿತು ಶಿಸ್ತುಬದ್ಧ ವ್ಯಾಸಂಗ ಹಾಗೂ ದಾಖಲಾತಿ ಕಾರ್ಯ ನಡೆಯಿತು. ಇಂದಿನ ಶೋಧಗಳಿಗೆಲ್ಲ ಅದೇ ಮೂಲ ಆಕರವಾಗಿದೆ.
ಇಂದು ಧೂಮಕೇತು ಕುರಿತಾದ ನಮ್ಮ ತಿಳಿವಳಿಕೆ ಬಹಳಷ್ಟು ಹೆಚ್ಚಿದೆ. ಅದರ ಮೂಲ, ಚಲನೆ, ಅಂತ್ಯದ ಬಗ್ಗೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಸೃಷ್ಟಿಯ ಆದಿಯ ಬಗ್ಗೆ ಕುರುಹುಗಳು ಸಿಗಬಹುದೇ ಎಂದು ದೂರದಲ್ಲಿ ಹಾರುವ ಧೂಮಕೇತು ಬಳಿ ಉಪಕರಣಗಳನ್ನು ಕಳುಹಿಸಿ ಕುಟ್ಟಿ, ಜಜ್ಜಿ ನಾಭಿಯನ್ನು ಬಗೆಯುವ ಪ್ರಯತ್ನವೂ ಹಲವು ಬಾರಿ ನಡೆದಿದೆ.
ಸೂರ್ಯನಿಂದ ಭೂಮಿ ಇರುವ 15 ಕೋಟಿ ಕಿ.ಮೀ. ಒಂದು ಖಗೋಳಮಾನಕ್ಕೆ ಸಮ. ಸೂರ್ಯನ ಪ್ರಭಾವ ನೂರು ಖಗೋಳಮಾನದಷ್ಟು ವಿಸ್ತೀರ್ಣದ ಒಂದು ಗೋಳದವರೆಗೆ ಅಧಿಕವಿದ್ದು ಅದರ ಹೊರಗೆ ಕಡಿಮೆಗೊಳ್ಳುತ್ತಾ ಹೋಗುತ್ತದೆ. ಅಲ್ಲಿ ನಮ್ಮ ರವಿಯ ಕಾಂತಿಯೂ ಕುಂದಿ, ಕಾತತ್ವ ಮತ್ತು ಗುರುತ್ವ ಬಲಗಳೂ ಕ್ಷೀಣಗೊಂಡಿವೆ.
ಸೌರಮಂಡಲದ ಎಂಟನೆಯ ಗ್ರಹ ನೆಪ್ಚೂನ್ ಆಚೆ ಕ್ಯೂಪರ್ ಪಟ್ಟಿ ಎಂಬ ಹೆಸರಿನ 30–50 ಖಗೋಳಮಾನದಷ್ಟು ಅಗಲದ ಬಿಡಿ ಕಾಯಗಳ ತಟ್ಟೆಯಿದೆ. ಹಾಗೇ ಇನ್ನೂ ಆಚೆ ಸೂರ್ಯಗೋಳದ ಹೊರವಲಯದಲ್ಲಿ ಮತ್ತೊಂದು 200–1000 ಖಗೋಳಮಾನದಷ್ಟು ಹರವಿನ ಬಿಡಿ ಕಾಯಗಳ ಗೋಳವಿದೆ, ಇದನ್ನು ಊರ್ತ್ ಮೋಡ ಎಂದು ಕರೆಯುತ್ತಾರೆ. ಅವೆರಡರಲ್ಲಿ ಇನ್ನೂ ಸೌರಮಂಡಲದ ನಿರ್ಮಾಣದ ನಂತರದ ಶತಶತ ಕೋಟಿ ಪುಟಾಣಿ ಉಳಿಕೆಗಳು ಇವೆ. ಅವುಗಳಲ್ಲಿ ಕೆಲವು ಸುತ್ತಲ ಯಾವುದೋ ನಕ್ಷತ್ರದ ಪ್ರಭಾವಕ್ಕೆ ಒಳಗಾಗಿ ಕ್ಷಣಮಾತ್ರದಲ್ಲಿ ಎದ್ದು ಹೊರಡುತ್ತವೆ, ಸೂರ್ಯಗೋಳದ ಅಂಚಿಗೆ ಬಂದಿದ್ದೇ ಗುರುತ್ವಕ್ಕೆ ಒಳಗಾಗಿ ಸೂರ್ಯನ ಬಳಿ ಧಾವಿಸುತ್ತವೆ. ಇವೇ ಧೂಮಕೇತುಗಳು.
ಕ್ಯೂಪರ್ ಪಟ್ಟಿಯಿಂದ ಎದ್ದು ಬಂದವು ಅಲ್ಪಾವಧಿಯವು (ಸೂರ್ಯನನ್ನು ಪರಿಭ್ರಮಿಸಲು ಅವು ತೆಗೆದುಕೊಳ್ಳುವ ಸಮಯ), ಊರ್ತ್ ಮೋಡದಿಂದ ಚಿಮ್ಮಿಬಂದ ಧೂಮಕೇತುಗಳು ಸಾಮಾನ್ಯವಾಗಿ ದೀರ್ಘಾವಧಿಯವು.
ಅಧ್ಯಯನದ ಪ್ರಕಾರ ಶೀತಲ ನಗರಿಯಿಂದ ಸೂರ್ಯನಗರಿಯ ಒಳಪ್ರವೇಶಿಸುವ ಧೂಮಕೇತುಗಳೆಂದರೆ ಅಪಾರ ಪ್ರಮಾಣದ ನೀರಲ್ಲದೆ ಮಿಥೇನ್, ಇಥೇನ್, ಇಂಗಾಲದ ಮೊನಾಕ್ಸೈಡ್, ಹೈಡ್ರೋಜನ್ ಸಯನೈಡ್, ಅಮೋನಿಯ ಈ ಅನಿಲಗಳನ್ನು ಹಾಗೂ ಅಂತರಾಳದಲ್ಲಿ ಕಬ್ಬಿಣ, ನಿಕ್ಕೆಲ್, ಸೋಡಿಯಂ, ಕ್ಯಾಲ್ಸಿಯಂ, ಸಿಲಿಕಾನ್ ಈ ಲೋಹಗಳನ್ನು ಶೇಖರಿಸಿಟ್ಟುಕೊಂಡ ಹಿಮದ ಚೆಂಡು. ಸುಂಯ್ ಎಂದು ಒಳಪ್ರವೇಶಿಸಿದ ಧೂಮಕೇತುಗಳಲ್ಲಿ ಕೆಲವು ಸೂರ್ಯನಿಗೆ ನೇರವಾಗಿ ಢಿಕ್ಕಿ ಹೊಡೆದು ಆತ್ಮಾಹುತಿಗೆ ಒಳಗಾದರೆ, ಕೆಲವು ಸಮೀಪ ಹಾದು ದೀರ್ಘ ವೃತ್ತಾಕಾರದಲ್ಲಿ ಸುತ್ತು ಹಾಕತೊಡಗುತ್ತವೆ. ಪ್ರತಿಸಲ ಸೂರ್ಯನ ಬಳಿ ಬಂದಾಗಲೂ ಸೌರಶಾಖವು ಆ ಅನಿಲಗಳನ್ನು ಕಾಯಿಸುತ್ತದೆ, ಸೌರಮಾರುತ ಅನಿಲ ಮತ್ತು ಧೂಳಿನ ಕಣಗಳನ್ನು ಚದುರಿಸುತ್ತದೆ. ಒಳಗಿನ ಗಟ್ಟಿ ಗಡ್ಡೆಯ ಜೊತೆಗೇ ಅಂಟಿಕೊಂಡು ಅನಿಲ ಮತ್ತು ಧೂಳು ಬಾಲಗಳಾಗಿ ಹಾರುತ್ತಿರುತ್ತವೆ.
ಪ್ರತಿಬಾರಿಯೂ ಕರಗುತ್ತ, ಕ್ಷೀಣಿಸುತ್ತ ಕೊನೆಗೊಂದು ದಿನ ಧೂಮಕೇತು ಸಂಪೂರ್ಣ ಮಾಯವಾಗುತ್ತದೆ. 2009ರ ಕೊನೆಯಲ್ಲಿ ಆಗಸಕ್ಕೆ ಚಿಮ್ಮಿದ ಆವೆಗೆಂಪು ಬಣ್ಣದ ಕಾಯಗಳನ್ನು ಪತ್ತೆಹಚ್ಚುವ ನಾಸಾದ ಬಾಹ್ಯಾಕಾಶ ದೂರದರ್ಶಕ ನೌಕೆ ‘ವೈಸ್’. ಕಿರುಗ್ರಹಗಳು, ಧೂಮಕೇತುಗಳು, ಕ್ಷುದ್ರಗ್ರಹಗಳು ಇಂಥ ಕಾಯಗಳನ್ನು ಗುರುತಿಸುವ ಕೆಲಸ ಅದಕ್ಕೆ. ಈ ವರ್ಷ ಮಾಚ್ 27ರಂದು ಭೂಮಿಯಿಂದ 25 ಕೋಟಿ ಕಿ.ಮೀ. ದೂರದಲ್ಲಿ ಚುಕ್ಕೆಯಂತಿದ್ದ ಕಾಯವೊಂದು ಸೂರ್ಯನೆಡೆಗೆ ಹಾರಿ ಬರುತ್ತಿರುವುದನ್ನು ಅದು ಪತ್ತೆ ಹಚ್ಚಿತು. 31ಕ್ಕೆ ಅದೊಂದು ಧೂಮಕೇತು ಎಂದು ಖಚಿತಗೊಳಿಸಿ, ಏಪ್ರಿಲ್ ಒಂದರಂದು ಅದಕ್ಕೆ ನಿಯೊವೈಸ್ ಎಂದು ನಾಮಕರಣ ಮಾಡಲಾಯಿತು. ಜುಲೈ 3ರಂದು ಅದು ಸೂರ್ಯನಿಗೆ ಅತಿ ಸಮೀಪ ಅಂದರೆ ಸುಮಾರು ಐದು ಕೋಟಿ ಕಿಮೀ ತಲುಪಿತು. ಅಲ್ಲೇ ಮಾಯವಾಗಲಿಲ್ಲ, ಅಂದರೆ ಅದು ಸುಟ್ಟು ಭಸ್ಮವಾಗಲಿಲ್ಲ, ಪ್ರಖರ ಬೆಳಕಿನೊಡನೆ ವಿಜೃಂಭಿಸಿತು. ಸೂರ್ಯನನ್ನು ಬಳಸಿಕೊಂಡು ಮುಂದೆ ಮುಂದೆ ಸಾಗತೊಡಗಿತು. ಜುಲೈ 13ರ ವೇಳೆಗೆ ‘ಎರಡು ಬಾಲದ ಸರದಾರ’ ಗೋಚರವಾಯಿತು. ಒಂದು ಅನಿಲಗಳ ಅಯಾನುಗಳುಗಳು ತುಂಬಿದ ನೀಲಿ ಬಾಲ, ಮತ್ತೊಂದು ಧೂಳುಕಣಗಳ ಮಸುಕಾದ ಬಾಲ. ನಿಯೊವೈಸ್ ಕೇಂದ್ರನಾಭಿ ಸುಮಾರು ಐದು ಕಿ.ಮೀ. ಅಗಲದ್ದು ಎಂದು ಸೂರ್ಯನತ್ತ ಹೊರಟಿರುವ ಪಾರ್ಕರ್ ನೌಕೆ ಹಾಗೂ ಇನ್ನಿತರ ಬಾಹ್ಯಾಕಾಶ ನೌಕೆಯ ಕ್ಯಾಮೆರಾಗಳು ಖಚಿತಗೊಳಿಸಿವೆ.
ವರ್ಷದಲ್ಲಿ 20–25 ಧೂಮಕೇತುಗಳು ಸೌರಮಂಡಲದೊಳಕ್ಕೆ ನುಗ್ಗುತ್ತವೆ. ಕೆಲವು ಹಳೆಯವು, ಕೆಲವು ಹೊಸದು. ಬರಿಗಣ್ಣಿಗೆ ಅಷ್ಟೇ ಏಕೆ ದುರ್ಬೀನುಗಳಿಗೂ ಕಾಣುವಂಥವು ಅತಿ ಕಡಿಮೆ. ನಿಯೊವೈಸ್ ಪತ್ತೆ ಆದಾಗಿನಿಂದ ಅದರ ಚಲನೆಯ ಮೇಲೆ ಅನೇಕ ಭೂ ಮತ್ತು ಬಾಹ್ಯ ದೂರದರ್ಶಕಗಳು ಸತತ ಕಣ್ಣಿಟ್ಟಿವೆ.
ಹೇಲ್ ಬಾಪ್ ನಂತರದ ಪ್ರಖರ ಧೂಮಕೇತು ಇದು. ಜನಸಾಮಾನ್ಯರ ಗಮನ ಸೆಳೆದ ಹಾಗೂ ಸಾದಾ ದುರ್ಬೀನು, ದೂರದರ್ಶಕಗಳಿಗೆ ಮತ್ತು ಬರಿಗಣ್ಣಿಗೆ ಗೋಚರಿಸುತ್ತಿರುವ ನಿಯೊವೈಸ್ ‘ಅದ್ಭುತ ಧೂಮಕೇತು’ ವೇ ಎಂದು ವಿಜ್ಞಾನ ಸಮುದಾಯ ಹರ್ಷಿಸುತ್ತಿದೆ. ಬರಿಗಣ್ಣಿಗೆ ಹರಡಿದ, ಮಸುಕಾದ ಉದ್ದ ಒಂದೇ ಬಾಲ ಇದ್ದ ಹಾಗೆ ಕಂಡರೆ, ದುರ್ಬೀನು, ದೂರದರ್ಶಕಗಳಲ್ಲಿ ಕರಗಿದ ಅನಿಲಗಳ ನೀಲಿ ಬಾಲ ಮತ್ತು ಚದುರಿದ ಧೂಳಿನ ಕಣಗಳ ಬಾಲಗಳು ಪ್ರತ್ಯೇಕವಾಗಿ ಗೋಚರಿಸುತ್ತಿವೆ. ಅಮೆರಿಕ, ಕೆನಡಾ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ಇಡೀ ವಾರ ರಾತ್ರಿಯಿಡೀ ಗೋಚರಿಸಿದೆ. ಕೆನಡಾದ ಬಾನಿನಲ್ಲಿ ಜುಲೈ ಎಂಟರಂದು ಹಾಗೂ ವಾಷಿಂಗ್ಟನ್ ಬೆಟ್ಟದ ಬಾನಿನಲ್ಲಿ ಜುಲೈ 14 ರಂದು ಮಿಂಚಿದ ನಿಯೊವೈಸ್ ಚಿತ್ರ ಗಗನವೀಕ್ಷಕರ ಉತ್ಸಾಹವನ್ನು ಇಮ್ಮಡಿಸಿದೆ, ದಕ್ಷಿಣದ ಜನತೆ ಅಸೂಯೆ ಪಟ್ಟಿದ್ದೂ ಇದೆ! ನಮ್ಮ ದೇಶದ ಗುಜರಾತ್‌ನ ಜಾಮ್‌ನಗರದಲ್ಲಿ, ಒಡಿಶಾದ ಭುವನೇಶ್ವರದಲ್ಲಿ ಹಾಗೂ ಮೊನ್ನೆ ನಮ್ಮ ಶಿರಸಿಯ ಬಳಿಯ ಭೈರುಂಬೆಯಲ್ಲೂ ಆಸಕ್ತರು ನಿಯೊವೈಸ್ ವೀಕ್ಷಿಸಿದ ವರದಿಗಳು ಬಂದಿವೆ.
ಜುಲೈ 23ಕ್ಕೆ ಭೂಮಿಯ ಸಮೀಪ (ಹತ್ತಿರ ಅಂದರೂ 19 ಕೋಟಿ ಕಿ.ಮೀ. ದೂರದಲ್ಲಿ!) ಹಾದು, ಇನ್ನೂ ಅನೇಕ ದಿನಗಳವರೆಗೆ ಗೋಚರಿಸಲಿರುವ ನಿಯೊವೈಸ್ ಧೂಮಕೇತುವನ್ನು ಈ ಸಂಜೆ ನೋಡದಿದ್ದರೆ ಏನಾಗುತ್ತದೆ ಎಂದು ಆಲಸ್ಯಪಟ್ಟಿರಾ, ಮುಂದೆ 6800 ವರ್ಷಗಳ ನಂತರ ನಿಯೊವೈಸ್ ಭೂಮಿಯ ಬಳಿ ಬರೋದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.