ADVERTISEMENT

ಜೇಮ್ಸ್‌ ಟೆಲಿಸ್ಕೋಪ್‌ ಸೆರೆಹಿಡಿದ ಅಮೋಘ ಆಕಾಶಕಾಯಗಳ ಚಿತ್ರ ಬಿಡುಗಡೆ ಮಾಡಿದ ನಾಸಾ

ಖಗೋಳವಿಜ್ಞಾನದಲ್ಲಿ ಹೊಸ ಶಕೆ: ನಾಸಾ ಬಣ್ಣನೆ

ಏಜೆನ್ಸೀಸ್
Published 13 ಜುಲೈ 2022, 13:09 IST
Last Updated 13 ಜುಲೈ 2022, 13:09 IST
ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಕಳುಹಿಸಿರುವ ನೀಹಾರಿಕೆಯೊಂದರ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಕಳುಹಿಸಿರುವ ನೀಹಾರಿಕೆಯೊಂದರ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ನಾನಾ ಗೊಡ್ಡಾರ್ಡ್ ಗಗನನೌಕೆ ಕೇಂದ್ರ, ಅಮೆರಿಕ (ಎಎಫ್‌ಪಿ): ನಾಸಾದ ಜೇಮ್ಸ್‌ ವೆಬ್ ಬಾಹ್ಯಾಕಾಶ ದೂರದರ್ಶಕವು ಕೋಟ್ಯಂತರ ಮೈಲುಗಳ ದೂರದಲ್ಲಿರುವ, ನಕ್ಷತ್ರಗಳು, ನೀಹಾರಿಕೆಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಚಿತ್ರಗಳನ್ನು ಕಳುಹಿಸಿದೆ. ಈ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ.

ಈ ಬೆಳವಣಿಗೆಯು ಖಗೋಳವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆ, ಸಂಶೋಧನೆಗೆ ನಾಂದಿ ಹಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆಗ ತಾನೆ ಸೃಷ್ಟಿಯಾಗಿರುವ ನಕ್ಷತ್ರಗಳಲ್ಲಿ ಪ್ರಪಾತಗಳಂತೆ ಕಾಣುವ ರಚನೆಗಳ, ಲಯಬದ್ಧವಾಗಿ ‘ನೃತ್ಯ’ದಲ್ಲಿ ತೊಡಗಿರುವಂತೆ ಕಂಡುಬರುವ ತಾರೆಗಳ ಸಮೂಹದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದ್ದು, ಖಗೋಳಪ್ರಿಯರ ಕುತೂಹಲ ಹೆಚ್ಚಿಸಿದೆ.

ADVERTISEMENT

‘ಬಾಹ್ಯಾಕಾಶ ದೂರದರ್ಶಕ ಕಳಿಸಿರುವ ಪ್ರತಿಯೊಂದು ಚಿತ್ರವೂ ಹೊಸ ಆವಿಷ್ಕಾರವೇ ಆಗಿದೆ. ಪ್ರತಿಯೊಂದು ಚಿತ್ರವು ಮಾನವರು ಕಾಣದ ಬ್ರಹ್ಮಾಂಡ ಕುರಿತ ಹೊಸ ನೋಟ ನೀಡುತ್ತದೆ’ ಎಂದು ನಾಸಾ ಆಡಳಿತಾಧಿಕಾರಿ ಬಿಲ್‌ ನೆಲ್ಸನ್‌ ಹೇಳಿದ್ದಾರೆ.

‘ಚಿತ್ರಗಳು ಸುಂದರವಾಗಿವೆ. ವಿಜ್ಞಾನ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿರುವ ಅಚ್ಚರಿಗಳನ್ನು ಅವು ತೋರುತ್ತವೆ. ನಾವು ಇನ್ನೂ ಗುರುತಿಸಲಾಗದ ಅನೇಕ ಸಂಗತಿಗಳನ್ನು ಈ ಚಿತ್ರಗಳು ಒಳಗೊಂಡಿವೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಬಾಹ್ಯಾಕಾಶವಿಜ್ಞಾನಿ ಜಾನ್‌ ಮಾಥರ್ ಹೇಳಿದ್ದಾರೆ.

ಆಕಾಶಕಾಯಗಳ ಅಧ್ಯಯನಕ್ಕಾಗಿ ನಾಸಾ ಈ ಜೇಮ್ಸ್‌ ವೆಬ್ ಸ್ಪೇಸ್‌ ಟೆಲಿಸ್ಕೋಪ್‌ಅನ್ನು ಒಳಗೊಂಡ ಖಗೋಳ ವೀಕ್ಷಣಾಲಯವನ್ನು ₹ 79 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಕೋಟ್ಯಂತರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿನ ಆಕಾಶಕಾಯಗಳ ವೀಕ್ಷಣೆಗೆ ಇಲ್ಲಿ ಶಕ್ತಿಶಾಲಿಯಾದ ‘ಇನ್‌ಫ್ರಾರೆಡ್‌ ಕ್ಯಾಮೆರಾ’ಗಳನ್ನು ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.