ADVERTISEMENT

ಚಂದ್ರನ ಮೇಲೆ ಕುಡಿಯೊಡೆದ ಹಸಿರು

ಚೀನಾವು ನೌಕೆಯೊಳಗೆ ಕಳುಹಿಸಿದ್ದ ಹತ್ತಿ ಬೀಜದಲ್ಲಿ ಮೊಳಕೆ

ಏಜೆನ್ಸೀಸ್
Published 16 ಜನವರಿ 2019, 10:09 IST
Last Updated 16 ಜನವರಿ 2019, 10:09 IST
ಚಂದ್ರನ ಮೇಲ್ಮೈನಲ್ಲಿ ಇಳಿದ ಚೀನಾದ ನೌಕೆಯಲ್ಲಿ ಕುಡಿಯೊಡೆದ ಚಿಗುರು
ಚಂದ್ರನ ಮೇಲ್ಮೈನಲ್ಲಿ ಇಳಿದ ಚೀನಾದ ನೌಕೆಯಲ್ಲಿ ಕುಡಿಯೊಡೆದ ಚಿಗುರು   

ಬೀಜಿಂಗ್:ಚೀನಾ ಇತ್ತೀಚೆಗೆ ಚಂದ್ರನ ಅಧ್ಯಯನಕ್ಕಾಗಿ ಕಳುಹಿಸಿರುವ ಕಳುಹಿಸಿರುವ ಚಾಂಗ್‌’ಇ–4 ಶೋಧಕ ನೌಕೆ ಹೊತ್ತೊಯ್ದಿರುವ ಬೀಜಗಳಲ್ಲಿ ಹತ್ತಿಯ ಬೀಜ ಚಿಗುರೊಡೆದಿದೆ.ಇದೇ ಮೊದಲ ಬಾರಿಗೆ ಚಂದ್ರನ ವಾತಾವರಣದಲ್ಲಿ ಸಸ್ಯ ಮೂಲವೊಂದು ಬೆಳವಣಿಗೆ ಕಂಡಂತಾಗಿದೆ.

ನೌಕೆಯು ಚಂದ್ರನತ್ತ ಪ್ರಯಾಣ ಬೆಳೆಸಿದಾಗ ಬೀಜದಲ್ಲಿ ಮೊಳಕೆ ಕಾಣಿಸಿಕೊಂಡಿತ್ತು. ಅದು ಚಂದ್ರನ ಅಂಗಳ ಪ್ರವೇಶಿಸಿದ ಬಳಿಕ ಮೊಳಕೆಯಲ್ಲಿ ಹಸಿರು ಎಲೆಗಳ ಚಿಗುರು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಚಂದ್ರನ ಕತ್ತಲು ಭಾಗದಲ್ಲಿ ಲ್ಯಾಂಡ್ ಆಗಿದ್ದ ಚೀನಾದ ಮಹತ್ವಾಕಾಂಕ್ಷಿ ಚಾಂಗ್ ಇ–4 ನೌಕೆಯಲ್ಲಿ ಸಸ್ಯ ಬೆಳೆಯುವ ಸವಲತ್ತು ಕಲ್ಪಿಸಲಾಗಿತ್ತು. ಗಾಳಿ, ನೀರು ಹಾಗೂ ಮಣ್ಣು ಇರುವ 7 ಇಂಚಿನ ಡಬ್ಬಿಯೊಂದನ್ನು ತಯಾರಿಸಿ ಅದರಲ್ಲಿ ಹತ್ತಿ, ಆಲೂಗಡ್ಡೆ ಹಾಗೂ ಇತರೆ ಬೀಜಗಳನ್ನು ನೆಡಲಾಗಿತ್ತು. ಮೊಳಕೆ ಬಂದಿರುವ ಚಿತ್ರಗಳನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ.

ADVERTISEMENT

ಈವರೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಸ್ಯಗಳನ್ನು ಬೆಳೆಸಿ ಪರೀಕ್ಷಿಸಲಾಗಿದೆ, ಆದರೆ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಹಸಿರು ಚಿಗುರೊಡೆದಿದೆ. ಸುದೀರ್ಘ ಸಮಯ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಚಂದ್ರನ ಮೇಲೆ ಗಿಡಗಳನ್ನು ಬೆಳೆಸುವ ಪ್ರಯೋಗದಿಂದ ಅನುಕೂಲವಾಗಲಿದೆ. ಎರಡೂವರೆ ವರ್ಷಗಳ ದೀರ್ಘಾವಧಿಯ ಮಂಗಳಯಾನದಂತಹ ಬಾಹ್ಯಾಕಾಶ ಯೋಜನೆಗಳಲ್ಲಿ ಸಸ್ಯಗಳನ್ನು ಬೆಳೆಸುವ ಇಂಥ ಪ್ರಯೋಗದಿಂದ ಸಹಕಾರಿಯಾಗಲಿದೆ.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ತಮಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಬೆಳೆಸಿಕೊಳ್ಳುವುದು ಸಾಧ್ಯವಾದರೆ, ಆಹಾರದ ವ್ಯತ್ಯಯ ಅಥವಾ ಆಹಾರ ಪದಾರ್ಥಗಳಿಗಾಗಿಯೇ ಗಗನಯಾತ್ರಿಗಳು ಭೂಮಿಗೆ ಬರುವುದು ತಪ್ಪಲಿದೆ ಎಂದು ಬಿಬಿಸಿ ವರದಿ ಮಾಡಿದೆ.

ಚೀನಾದ 28 ವಿಶ್ವವಿದ್ಯಾಲಯಗಳು ವಿನ್ಯಾಸಗೊಳಿಸಿರುವ 18 ಸೆಂ.ಮೀ. ಉದ್ದದ 3 ಕೆ.ಜಿ. ತೂಕವಿರುವ ಜಾಡಿಯಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯೋಗ ನಡೆಯುತ್ತಿದೆ. ಚಂದ್ರನ ಮೇಲ್ಮೈ ಮೇಲೆ ಮಾನವರು ಮಾಡಿದ ಮೊಲದ ಜೈವಿಕ ಬೆಳವಣಿಗೆ ಪ್ರಯೋಗ ಇದು ಎಂದು ಚಾಂಗ್‌ಕ್ವಿಂಗ್ ವಿಶ್ವವಿದ್ಯಾಲಯದ ಕ್ಸಿ ಜೆನ್‌ಕ್ಸಿಂಗ್ ಅವರು ಹೇಳಿದ್ದಾರೆ. ಚೀನಾದ ಪುರಾಣಗಳಲ್ಲಿ ಚಂದ್ರನನ್ನು ದೇವರು ಎನ್ನಲಾಗಿದ್ದು, ಚಾಂಗ್ ಎಂಬ ಹೆಸರಿದೆ. ನೌಕೆಗೂ ಅದೇ ಹೆಸರಿಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್‌ಪವರ್ ಆಗುವ ಉದ್ದೇಶ ಹೊಂದಿರುವ ಚೀನಾ,ಜನವರಿ 3ರಂದು ಚಂದ್ರನ ಕತ್ತಲು ಪ್ರದೇಶದ ಮೇಲೆ ಚಾಂಗ್ ನೌಕೆಯನ್ನು ಇಳಿಸಿತ್ತು. ಭೂಮಿಗೆ ಕಾಣಿಸದ (ಚಂದ್ರನ ಮತ್ತೊಂದು ಪಾರ್ಶ್ವ) ಈ ಪ್ರದೇಶದಲ್ಲಿ ಮೊದಲ ಬಾರಿಗೆ ನೌಕೆ ಇಳಿಸಿದ ಹೆಗ್ಗಳಿಕೆ ಚೀನಾದ್ದು. ಇಂತಹ ಇನ್ನೂ ನಾಲ್ಕು ಯೋಜನೆಗಳನ್ನು ಚೀನಾ ಹಮ್ಮಿಕೊಂಡಿದ್ದು, ಈ ವರ್ಷಾಂತ್ಯಕ್ಕೆ ಕಾರ್ಯಗತಗೊಳ್ಳುವ ಸಾಧ್ಯತೆಯಿದೆ. ಚಂ‌ದ್ರನ ಅಂಗಳದ ಮಾದರಿಗಳನ್ನು ಭೂಮಿಗೆ ತರುವ ಯೋಜನೆಯೂ ಇದರಲ್ಲಿ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.