ADVERTISEMENT

CSIR Survey: ಧೂಮಪಾನಿ ಮತ್ತು ಸಸ್ಯಾಹಾರಿಗಳಿಗೆ ಕೊರೊನಾ ವೈರಸ್ ಹಾವಳಿ ಕಡಿಮೆ!

ಪಿಟಿಐ
Published 17 ಜನವರಿ 2021, 16:59 IST
Last Updated 17 ಜನವರಿ 2021, 16:59 IST
ಧೂಮಪಾನಿಗಳಿಗೆ ವೈರಸ್ ಸಮಸ್ಯೆಯಿಲ್ಲ!
ಧೂಮಪಾನಿಗಳಿಗೆ ವೈರಸ್ ಸಮಸ್ಯೆಯಿಲ್ಲ!   

ನವದೆಹಲಿ: ಸಸ್ಯಾಹಾರಿಗಳು ಮತ್ತು ಧೂಮಪಾನಿಗಳಿಗೆ ಕೊರೊನಾ ವೈರಸ್ ಹಾವಳಿ ಅಷ್ಟೇನು ಕಾಡುವುದಿಲ್ಲ ಎಂದು 'ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್' (ಸಿಎಸ್‌ಐಆರ್) ನಡೆಸಿದ ನೂತನ ಅಧ್ಯಯನ ವರದಿ ಹೇಳಿದೆ.

ಸಿಎಸ್‌ಐಆರ್ ದೇಶಾದ್ಯಂತ 40 ವಿವಿಧ ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ. ಅದರ ಪ್ರಕಾರ, ‘ಒ’ ರಕ್ತದ ಗುಂಪು ಹೊಂದಿರುವವರು ಮತ್ತು ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೋವಿಡ್ 19 ಹಾವಳಿ ಅಷ್ಟೇನೂ ಬಾಧಿಸುವುದಿಲ್ಲವಂತೆ. ಆದರೆ ‘ಬಿ’ ಮತ್ತು ‘ಎಬಿ’ ರಕ್ತದ ಗುಂಪು ಹೊಂದಿರುವವರಿಗೆ ಕೊರೊನಾ ವೈರಸ್ ಹಾವಳಿ ಅಧಿಕವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.

ಸಿಎಸ್‌ಐಆರ್ ಅಧ್ಯಯನ ಕೈಗೊಳ್ಳಲು 10,427 ವಯಸ್ಕರನ್ನು ಸಂದರ್ಶಿಸಿದೆ. ಅದರಲ್ಲೂ ಸಿಎಸ್‌ಐಆರ್ ಪ್ರಯೋಗಾಲಯಗಳಲ್ಲಿ ದುಡಿಯುವರು, ಅವರ ಕುಟುಂಬ ಸದಸ್ಯರು ಸ್ವಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಈ ಪೈಕಿ ಹಲವರನ್ನು ಸತತ ಆರು ತಿಂಗಳ ಕಾಲ ಸಂದರ್ಶಿಸಿ ಪರಿಶೀಲಿಸಲಾಗಿದೆ.

ADVERTISEMENT

ಧೂಮಪಾನಿಗಳಿಗೆ ವೈರಸ್ ಸಮಸ್ಯೆಯಿಲ್ಲ!

ಸಿಎಸ್‌ಐಆರ್ ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ ಧೂಮಪಾನಿಗಳು ಕೂಡ ಇದ್ದು, ಅವರಿಗೆ ವೈರಸ್ ಹಾವಳಿ ಅಷ್ಟೇನೂ ಸಮಸ್ಯೆಯಾಗಿಲ್ಲ ಎಂದಿದೆ. ಅಲ್ಲದೆ, ಇಟಲಿ, ನ್ಯೂಯಾರ್ಕ್ ಮತ್ತಿ ಚೀನಾ, ಫ್ರಾನ್ಸ್‌ನಲ್ಲಿ ಕೂಡ ಇದೇ ಮಾದರಿಯಲ್ಲಿ ಅಧ್ಯಯನ ನಡೆಸಲಾಗಿದ್ದು, ಅಲ್ಲಿ ಕೂಡ ಧೂಮಪಾನಿಗಳು ವೈರಸ್ ಹಾವಳಿಗೆ ತುತ್ತಾಗಿರುವುದು ಕಡಿಮೆ ಎಂದು ವರದಿ ಹೇಳಿದೆ. ವಿವಿಧ ವಯೋಮಾನ, ಭೌಗೋಳಿಕ ಭಿನ್ನತೆ, ಉದ್ಯೋಗ ಮತ್ತು ಹವ್ಯಾಸ, ಅಭ್ಯಾಸ, ವೈದ್ಯಕೀಯ ವರದಿ ಹೀಗೆ ವಿವಿಧ ಅಂಶಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಿಎಸ್‌ಐಆರ್ ಹೇಳಿದೆ.

ಅಲ್ಲದೆ, ಖಾಸಗಿ ವಾಹನ ಬಳಕೆ, ಕಡಿಮೆ ಜನಜಂಗುಳಿಯ ಪ್ರದೇಶಗಳಲ್ಲಿ ಕೆಲಸ ಮತ್ತು ಸಂಚಾರ ಕೂಡ ವೈರಸ್ ಹಾವಳಿ ಹರಡುವುದನ್ನು ತಡೆದಿದೆ ಎಂದು ಸಿಎಸ್‌ಐಆರ್ ಅಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.