ಜೀವಜಲ ಪೂರೈಸಲು ಅರಬ್ ದೇಶಗಳೂ ಒಳಗೊಂಡಂತೆ ಅಭಿವೃದ್ಧಿ ಹೊಂದಿದ ದೇಶಗಳು ನಿರ್ಲವಣೀಕರಣದ ಮೊರೆಹೋಗುತ್ತಿವೆ. ಸಮುದ್ರದ ನೀರಿನ ಲವಣ ಬೇರ್ಪಡಿಸಿ ಕುಡಿಯಲು, ಕೃಷಿಗೆ ನೀರು ಬಳಸುವ ಈ ಮಾರ್ಗೋಪಾಯ ಪಾರಿಸರಿಕ ಸವಾಲುಗಳನ್ನು ಮುಂದಿಟ್ಟಿದೆ.
ಜಗತ್ತಿನ ಅತ್ಯಂತ ಒಣಭೂಮಿ ಹೊಂದಿರುವ ದೇಶಗಳ ಪೈಕಿ ಸೌದಿ ಅರೇಬಿಯಾ ಕೂಡ ಒಂದಾಗಿದೆ. ಇಲ್ಲಿ ನದಿ, ಸರೋವರ, ಕೆರೆಗಳಿಲ್ಲ. ಬೀಸುವ ಗಾಳಿಯಲ್ಲೂ ತೇವಾಂಶವಿಲ್ಲ. ಬಹಳ ಅಪರೂಪಕ್ಕೆ ಎಲ್ಲೋ ಒಂದೊಂದು ಓಯಸಿಸ್‌ಗಳು ಕಾಣಸಿಗುತ್ತವೆ. ಈ ಪರಿಸ್ಥಿತಿ ಸೌದಿ ಅರೇಬಿಯಾದಲ್ಲಿ ಮಾತ್ರವಲ್ಲ ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲೂ ಕಾಣುತ್ತದೆ. ಸುಮಾರು ಆರೂವರೆ ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಅರೇಬಿಯಾ ಮರುಭೂಮಿಯುದ್ದಕ್ಕೂ ಜೀವಜಲದ ಅಭಾವ ಕಂಡುಬರುತ್ತದೆ.
1971ರಲ್ಲಿ ಕೇವಲ 60 ಲಕ್ಷ ಜನಸಂಖ್ಯೆ ಇದ್ದ ಸೌದಿ ಅರೇಬಿಯಾದಲ್ಲಿ ಈಗ ಜನಸಂಖ್ಯೆ ನಾಲ್ಕು ಕೋಟಿ ದಾಟಿದೆ. ನೀರಿನ ಭದ್ರತೆ , ಅಮೂಲ್ಯ ಜಲ ಸಂಪನ್ಮೂಲಕ್ಕಾಗಿ ಅರಬ್ ದೇಶಗಳು ಒಂದು ಸಾಹಸಕ್ಕೆ ಕೈ ಹಾಕಿವೆ. ಅದೇ ‘ನಿರ್ಲವಣೀಕರಣ ತಂತ್ರಜ್ಞಾನ’ (desalination technology). ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ಬೇರ್ಪಡಿಸಿ, ಕುಡಿಯಲು ಹಾಗೂ ಕೃಷಿ ಚಟುವಟಿಕೆ ನಡೆಸಲು ಯೋಗ್ಯವಾದ ನೀರನ್ನು ಪೂರೈಸುವ ಭಗೀರಥ ಪ್ರಯತ್ನ ಇದಾಗಿದೆ. ಈ ನಿರ್ಲವಣೀಕರಣ ಪ್ರಕ್ರಿಯೆಗಾಗಿ ಅರಬ್ ದೇಶಗಳು ಊಹೆಗೂ ನಿಲುಕದಷ್ಟು ಹಣ ಖರ್ಚು ಮಾಡುತ್ತಿವೆ. 2023ರ ಸೌದಿ ಸರ್ಕಾರದ ಅಧಿಕೃತ ಗೆಝೆಟಿಯರ್ ಪ್ರಕಾರ ವಾರ್ಷಿಕ 40 ಶತಕೋಟಿ ಡಾಲರ್‌ನಷ್ಟು (3.32 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು) ಹಣವನ್ನು ಈ ತಂತ್ರಜ್ಞಾನಕ್ಕೆ ಖರ್ಚು ಮಾಡಲಾಗುತ್ತಿದೆ.
ಎರಡು ವಿಧಾನಗಳು
ಸಾಮಾನ್ಯವಾಗಿ ನಿರ್ಲವಣೀಕರಣ ಪ್ರಕ್ರಿಯೆ ಎರಡು ರೀತಿ ನಡೆಯುತ್ತದೆ. ಮೊದಲನೆಯದು, ಸಾಂಪ್ರದಾಯಿಕ ವಿಧಾನ–Thermal desalination. ಇದರಲ್ಲಿ ಸಮುದ್ರದ ನೀರನ್ನು ಹೆಚ್ಚು ಶಾಖ ಕೊಟ್ಟು ಲವಣಾಂಶಗಳನ್ನು ಬೇರ್ಪಡಿಸುತ್ತಾರೆ. ಆದರೆ, ಈ ವಿಧಾನದಿಂದ ಲಭ್ಯವಾಗುವ ನೀರಿಗಿಂತ ದಹಿಸಲು ಬೇಕಾದ ಇಂಧನವೇ ಹೆಚ್ಚು ಖರ್ಚಾಗುತ್ತದೆ. ಸಮುದ್ರದ ನೀರನ್ನು ಕಾಯಿಸಿ ಲವಣಗಳನ್ನು ಬೇರ್ಪಡಿಸಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಅನ್ನು ಇಂಧನವನ್ನಾಗಿ ಉರಿಸಬೇಕಿದೆ. ಅರಬ್ ದೇಶಗಳಲ್ಲಿ ತೈಲ ಉತ್ಪಾದನೆ ಯಥೇಚ್ಛವಾಗಿದ್ದರೂ ಇಂಧನ ಉರಿಯುವಾಗ ನಿರಂತರವಾಗಿ ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ನಿರ್ಲವಣೀಕರಣದ ಎರಡನೆಯ ವಿಧಾನವನ್ನು ಹಿಮ್ಮುಖ ಸೂಕ್ಷ್ಮ ಅಭಿಸಾರಣ ಎನ್ನುತ್ತಾರೆ–Reverse osmosis. ಈ ವಿಧಾನದಲ್ಲಿ ಸಮುದ್ರದ ನೀರನ್ನು ಭಾರಿ ಒತ್ತಡಲ್ಲಿ ರಭಸವಾಗಿ ಹರಿಸಿ ಸೂಕ್ಷ್ಮಾತಿಸೂಕ್ಷ್ಮ ಪರದೆಯಲ್ಲಿ ಜರಡಿ ಹಿಡಿದು,
ನೀರು ಹೊರಬರುವಂತೆ ಮಾಡಿ ಉಪ್ಪಿನ ಅಂಶ ಬೇರ್ಪಡಿಸಲಾಗುತ್ತದೆ. ಹಿಮ್ಮುಖ ಸೂಕ್ಷ್ಮ ಅಭಿಸಾರಣ ವಿಧಾನದಿಂದ ಸಮುದ್ರದ ನೀರನ್ನು ನಿರ್ಲವಣೀಕರಣ ಮಾಡುವಾಗ ಗಂಭೀರ ಸಮಸ್ಯೆ ಸೃಷ್ಟಿ ಆಗುತ್ತಿದೆ. ಶುದ್ಧ ನೀರು ಬೇರ್ಪಡಿಸಿದ ನಂತರ ಉಳಿದ ನೀರು ಅತ್ಯಂತ ಹೆಚ್ಚು ಉಪ್ಪಿನ ಸಾಂದ್ರತೆ ಹೊಂದಿರುತ್ತದೆ. ಇದನ್ನು hyper saline brine ಎನ್ನುತ್ತಾರೆ. ಇದನ್ನು ಭೂಮಿಗೆ ಬಿಟ್ಟರೆ
ಭೂಮಿ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತದೆ. ಸಮುದ್ರಕ್ಕೆ ಬಿಟ್ಟರೆ ಹೆಚ್ಚು ಲವಣ ಸಾಂದ್ರ ನೀರು ಸಮುದ್ರದಲ್ಲಿನ ಜೀವ ಪರಿಸರ ವ್ಯವಸ್ಥೆಯನ್ನೇ ನಾಶಪಡಿಸುತ್ತದೆ. ಅತ್ಯಂತ ಹೆಚ್ಚಿನ ಉಪ್ಪಿನ ಅಂಶ ಇರುವ ನೀರು ಪುನಃ ಸಮುದ್ರಕ್ಕೆ ಸೇರಿದ ತಕ್ಷಣವೇ ಅದು ಅತಿಯಾದ ಸಾಂದ್ರತೆ ಕಾರಣದಿಂದ ಸಮುದ್ರದ ತಳ ಭಾಗ ತಲುಪಿ, ಆಮ್ಲಜನಕ ಕೂಡ ತಳ ಭಾಗ ಸೇರುತ್ತದೆ. ಆಗ ಅಲ್ಲಿನ ಜೀವ ಪರಿಸರ ವ್ಯವಸ್ಥೆ ನಶಿಸಿ, ಮತ್ತೊಂದು ಮೃತ ಸಮುದ್ರ (Dead sea) ರಚನೆ ಆಗುತ್ತದೆ.
ಅರೇಬಿಯನ್ ದೇಶಗಳು ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಚೀನಾ, ಇಂಗ್ಲೆಂಡ್, ಈಜಿಪ್ಟ್ ಸೇರಿದಂತೆ ಜಗತ್ತಿನಾದ್ಯಂತ 177 ದೇಶಗಳು ನಿರ್ಲವಣೀಕರಣ ತಂತ್ರಜ್ಞಾನ ಬಳಸಿಕೊಂಡು ಕುಡಿಯುವ ನೀರನ್ನು ಪಡೆಯುತ್ತಿವೆ.
ಪ್ರಸ್ತುತ 18,000ಕ್ಕೂ ಹೆಚ್ಚಿನ ನಿರ್ಲವಣೀಕರಣ ಘಟಕಗಳು ಪ್ರತಿನಿತ್ಯ ಸುಮಾರು ಒಂಬತ್ತೂವರೆ ಕೋಟಿ ಕ್ಯೂಬಿಕ್ ಮೀಟರ್‌ನಷ್ಟು ಕುಡಿಯುವ ನೀರು ತಯಾರಿಸುತ್ತಿವೆ. ಈ ತಂತ್ರಜ್ಞಾನ ಘಟಕಗಳಿಂದ ವಾರ್ಷಿಕ 7.6 ಕೋಟಿ ಟನ್‌ನಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರಬರುತ್ತಿದೆ. ಇದು ಹೀಗೆಯೇ ಮುಂದುವರಿದರೆ 2040ರ ಹೊತ್ತಿಗೆ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಅಂಶ.
ವಿಶ್ವದಲ್ಲೇ ಸೌದಿ ಅರೇಬಿಯಾ ದೇಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಿರ್ಲವಣೀಕರಣ ಘಟಕಗಳನ್ನು ಹೊಂದಿದೆ. ಸೌದಿ ಅರೇಬಿಯಾದ ಅಲ್-ಜುಬೆಲ್ ಪ್ರದೇಶದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ನಿರ್ಲವಣೀಕರಣ ಘಟಕದಿಂದ ಪ್ರತಿದಿನ ರಾಜಧಾನಿ ರಿಯಾದ್‌ಗೆ 14 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಕುಡಿಯುವ ನೀರನ್ನು ತಯಾರಿಸಿ ಪೂರೈಸಲಾಗುತ್ತಿದೆ.
‘ನಿಯೋಮ್’ ಎಂಬ ಹೈಟೆಕ್ ನಗರ
ಭವಿಷ್ಯದ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ನಗರ ‘ನಿಯೋಮ್’ ನಿರ್ಮಿಸಲು ಸೌದಿ ಅರೇಬಿಯಾ ಈಗಾಗಲೇ 500 ಶತಕೋಟಿ ಡಾಲರ್‌ನಷ್ಟು ಹಣ ಖರ್ಚು ಮಾಡಿದೆ. ಆದರೆ, ಅಲ್ಲಿ ವಾಸ ಮಾಡಲಿರುವ 10 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲು ಮತ್ತೊಂದು ಬೃಹತ್ ನಿರ್ಲವಣೀಕರಣ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ. ಆದರೆ, ಇದು ರಿವರ್ಸ್ ಆಸ್ಮೊಸಿಸ್ ಅಥವಾ ಉಷ್ಣ ಘಟಕವಲ್ಲ. ಸೌರ ಶಕ್ತಿ ಬಳಸಿ ಸಮುದ್ರದ ನೀರನ್ನು ಗಾಜಿನ ದೊಡ್ಡ ದೊಡ್ಡ ಪೈಪುಗಳ ಮೂಲಕ ಸಾಗಿಸಿ ಬೃಹತ್ ಗಾತ್ರದ ಗಾಜಿನ ಹೊಂಡದಲ್ಲಿ ಬಿಟ್ಟು, ನೀರು ಸೂರ್ಯನ ಕಿರಣಗಳಿಂದ ಕುದಿಯುವ ಹಾಗೆ ಮಾಡಿ ದೊಡ್ಡ ಪೈಪುಗಳ ಮೂಲಕ ಬಿಸಿ ನೀರು ಹಬೆ ರೂಪದಲ್ಲಿ ಬೇರೆ ಕಡೆ ಸಂಗ್ರಹಗೊಳ್ಳುವ ಯೋಜನೆ ಇದು. ಹೆಚ್ಚು ಲವಣಯುಕ್ತ ನೀರನ್ನು ಎಲ್ಲಿ ಬಿಡಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.
ಏನೇ ಇರಲಿ, ಹೊಸ ಹೊಸ ಸಂಶೋಧನೆಗಳು ನಾಗರಿಕತೆಯ ಉಳಿವಿಗಾಗಿ ಪ್ರಯತ್ನಿಸಬೇಕು. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು, ಮರುಭೂಮಿಯಲ್ಲಿ ಹೆಚ್ಚು ಹೆಚ್ಚು ಅರಣ್ಯೀಕರಣ ಮಾಡುವ ಪ್ರಕ್ರಿಯೆಗೆ ಒತ್ತು ಕೊಡಬೇಕು. ನಿರ್ಲವಣೀಕರಣ ವಿಧಾನವು ಜೀವಜಲವನ್ನು ಪೂರೈಸುತ್ತಿದೆಯಾದರೂ, ಪರಿಸರಕ್ಕೆ ತಂದೊಡ್ಡುತ್ತಿರುವ ಅಪಾಯ ಬೇರೆಯದೇ ಸವಾಲನ್ನು ಮುಂದಿಡುತ್ತಿದೆ.
ಭಾರತದಲ್ಲೂ ನಿರ್ಲವಣೀಕರಣ
ಗಂಭೀರ ಪ್ರಮಾಣದ ಮಾಲಿನ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವ ನಿರ್ಲವಣೀಕರಣ ಘಟಕಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. 2000ನೇ ಇಸವಿಯಿಂದ ಇದುವರೆಗೂ ನಿರ್ಲವಣೀಕರಣ ಘಟಕಗಳ ಸಂಖ್ಯೆ ದುಪ್ಪಟ್ಟಾಗಿದೆ. ಜಗತ್ತಿನಾದ್ಯಂತ ಮೂರು ಕೋಟಿ ಜನರು ನಿರ್ಲವಣೀಕರಣ ಘಟಕದಿಂದ ಕುಡಿಯುವ ನೀರನ್ನು ಪಡೆಯುತ್ತಿದ್ದಾರೆ. ಭಾರತದಲ್ಲೂ ಲಕ್ಷ ದ್ವೀಪ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಗುಜರಾತ್ ತಮಿಳುನಾಡು ಹಾಗೂ ಮಹಾರಾಷ್ಟ್ರದ ಕರಾವಳಿ ತೀರ ಪ್ರದೇಶಗಳಲ್ಲಿ ನಿರ್ಲವಣೀಕರಣ ಘಟಕಗಳು ತಲೆಎತ್ತಿವೆ. ಚೆನ್ನೈ ನಗರಕ್ಕೆ ಪ್ರತಿದಿನ 63 ಲಕ್ಷ ಲೀಟರ್‌ನಷ್ಟು ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಮುಂಬೈ ಮಹಾನಗರಕ್ಕೂ ನಿರ್ಲವಣೀಕರಣ ಘಟಕದಿಂದ ಕುಡಿಯುವ ನೀರು ಪೂರೈಸಲು ಯೋಜನೆ ಸಿದ್ಧವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.