ಕೇಪ್ ಕೆನವೆರಲ್ (ಅಮೆರಿಕ): ಇದೇ ಮೊದಲ ಬಾರಿಗೆ ಮಂಗಳ ಗ್ರಹದ ಮೇಲ್ಮೆಯಲ್ಲಿ ಚಲಿಸುವ ಶಬ್ದವನ್ನು ಸೆರೆ ಹಿಡಿಯುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸಿವಿಯರೆನ್ಸ್ ರೋವರ್ ಯಶಸ್ವಿಯಾಗಿದೆ. ಅಲ್ಲದೆ ಈ ಶಬ್ದವನ್ನು ಭೂಮಿಯಲ್ಲಿರುವ ನಾಸಾದ ಕೇಂದ್ರಕ್ಕೆ ರವಾನಿಸಿದೆ.
ಇತ್ತೀಚೆಗಷ್ಟೇ ಕೆಂಪು ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್, ಮೊದಲ ಟೆಸ್ಟ್ ಡ್ರೈವ್ ಯಶಸ್ವಿಯಾಗಿ ನಡೆಸಿತ್ತು. ಈಗ ಇದೇ ಮೊದಲ ಬಾರಿಗೆ ಮಂಗಳ ಗ್ರಹದ ಕುಳಿಯಲ್ಲಿ ಸಂಚರಿಸುವಾಗ ರೆಕಾರ್ಡ್ ಮಾಡಿರುವ ಶಬ್ದವನ್ನು ರವಾನಿಸಿದೆ.
ಒರಟಾದ ಹಾಗೂ ಕರ್ಕಶವಾದ ಶಬ್ದವನ್ನು ಪರ್ಸಿವಿಯರೆನ್ಸ್ ರೋವರ್ ರವಾನಿಸಿದ್ದು, ಅದನ್ನು ಪತ್ತೆ ಹಚ್ಚಲು ಎಂಜಿನಿಯರ್‌ಗಳು ಪ್ರಯತ್ನಿಸುತ್ತಿದ್ದಾರೆ ಎಂದು ನಾಸಾ ತಿಳಿಸಿದೆ.
ಮಂಗಳ ಗ್ರಹದಲ್ಲಿ ಜೀವಿಗಳ ಕುರುಹು ಪತ್ತೆ ಹಚ್ಚುವ ಸಲುವಾಗಿ ನಾಸಾವು ಅತ್ಯಾಧುನಿಕ ಪರ್ಸಿವಿಯರೆನ್ಸ್ ರೋವರ್ ಅನ್ನು ಮಂಗಳ ಗ್ರಹಕ್ಕೆ ರವಾನಿಸಿತ್ತು. ಕೆಂಪು ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳ ಕುರುಹುಗಳ ಪತ್ತೆ ಜೊತೆಗೆ ಅಲ್ಲಿನ ಮಣ್ಣು-ಕಲ್ಲು ಮಾದರಿಗಳನ್ನು ತರುವ ಮಹತ್ವಾಕಾಂಕ್ಷೆ ಯೋಜನೆಯನ್ನು ಹೊಂದಿದೆ.
2020 ಜುಲೈ 30ರಂದು ಫ್ಲಾರಿಡಾದ ಉಡ್ಡಯನ ಕೇಂದ್ರದಿಂದ ಪರ್ಸಿವಿಯರೆನ್ಸ್ ರೋವರ್ ಹೊಂದಿರುವ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಸುದೀರ್ಘ 203 ದಿನಗಳ ಪ್ರಯಾಣದ ಬಳಿಕ 2021 ಫೆಬ್ರುವರಿ 18ರಂದು , ಪರ್ಸಿವಿಯರೆನ್ಸ್ ರೋವರ್, ಮಂಗಳನ ಅಂಗಳಕ್ಕಿಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.