ಶ್ರೀಹರಿಕೋಟಾ(ಆಂಧ್ರಪ್ರದೇಶ): ಮಾನವ ಸಹಿತ ಗಗನಯಾನ ಪರೀಕ್ಷೆಯ ಉಡಾವಣೆ ಸಂದರ್ಭದಲ್ಲಿ ಉಡಾವಣಾ ನೌಕೆಯಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯನ್ನು ಪತ್ತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳ ಪ್ರಯೋಗ ಅಂತಿಮವಾಗಿ ಯಶಸ್ವಿಯಾಗಿದೆ.
ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ ಮಿಷನ್-1 (ಟಿವಿ-ಡಿ1 ಫ್ಲೈಟ್ ಟೆಸ್ಟ್) ಎಂದು ಹೆಸರಿಸಲಾದ ಮೊದಲ ಮಾನವ ಸಹಿತ ಗಗನಯಾನ ಪರೀಕ್ಷೆಯನ್ನು ಬೆಳಿಗ್ಗೆ 7.30ಕ್ಕೆ ನಿಗದಿಪಡಿಸಲಾಗಿತ್ತು. ಇದನ್ನು ಇಸ್ರೊ ತನ್ನ ಮೈಕ್ರೊಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶುಕ್ರವಾರ ಹೇಳಿತ್ತು. ಬೆಳಿಗ್ಗೆ ಇದನ್ನು ಅರ್ಧ ಗಂಟೆಗಳ ಕಾಲ ಮುಂದೂಡಿತು. ತಾಂತ್ರಿಕ ಸಮಸ್ಯೆ ಮುಂದುವರಿದ ಕಾರಣ ನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಅಂತಿಮವಾಗಿ ನೌಕೆಯಲ್ಲಿದ್ದ ತಾಂತ್ರಿಕ ದೋಷ ಪತ್ತೆಯಾಗಿದ್ದು, ಅದನ್ನು ಸರಿಪಡಿಸಲಾಗಿದೆ. 10 ಗಂಟೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಎಂದು ಇಸ್ರೊ ಹೇಳಿತು. ನಿಗದಿಯಂತೆ ಉಡ್ಡಯನಗೊಂಡ ರಾಕೇಟ್ 12 ಕಿ.ಮೀ. ಎತ್ತರಕ್ಕೆ ಹಾರಿದ ನಂತರ ಪೂರ್ವ ನಿರ್ಧಾರದಂತೆ ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ತಕ್ಷಣವೇ ಅದರೊಳಗಿದ್ದ ಗಗನಯಾನಿಗಳ ಮಾದರಿ ಹೊತ್ತ ಭಾಗವು ಸುರಕ್ಷಿತವಾಗಿ ನೌಕೆಯಿಂದ ಹೊರಬಂದಿತು.
ಗಗನಯಾನ ಮಿಷನ್‌ನ ಭಾಗವಾದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ ಪರೀಕ್ಷಾರ್ಥ ಪ್ರಯೋಗವಾದ ಇದರಲ್ಲಿ ಪ್ಯಾರಾಚೂಟ್‌ಗಳ ಮೂಲಕ ಬಂಗಾಳಕೊಲ್ಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಈ ಮಿಷನ್ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸುವ ಭಾರತದ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗಿದೆ.
3 ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ ಕಕ್ಷೆಗೆ ಮೂವರು ಸಿಬ್ಬಂದಿಯನ್ನು ಕಳುಹಿಸುವ ಮತ್ತು ಬಂಗಾಳಕೊಲ್ಲಿಯಲ್ಲಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಮಾನವ ಸಹಿತ ಬಾಹ್ಯಾಕಾಶ ಯಾನದ ಪ್ರಯೋಗವನ್ನು ಭಾರತ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.