ADVERTISEMENT

ನಿಮಗೆ ಗೊತ್ತೆ? ಬೆಳಕಿನಿಂದಲೂ ಅನಿಲ ಉತ್ಪಾದನೆ ಸಾಧ್ಯ!

ನೇಸರ ಕಾಡನಕುಪ್ಪೆ
Published 11 ಸೆಪ್ಟೆಂಬರ್ 2024, 1:02 IST
Last Updated 11 ಸೆಪ್ಟೆಂಬರ್ 2024, 1:02 IST
   

ಜರ್ಮನಿಯ ಬಾನ್‌ ವಿಶ್ವವಿದ್ಯಾಲಯ ಹಾಗೂ ಕೈಸರ್‌ಸ್ಲಾಟರ್ನ್–ಲಾಂಡೌ ವಿಶ್ವವಿದ್ಯಾಲಯದ ಆನ್ವಯಿಕ ಭೌತವಿಜ್ಞಾನಿಗಳು ಬೆಳಕಿನಿಂದ ವಿಶೇಷ ಬಗೆಯ ಅನಿಲವೊಂದನ್ನು ತಯಾರಿಸಿದ್ದಾರೆ. ಇದುವರೆಗೆ ಬೆಳಕಿನಿಂದ ಅನಿಲವೊಂದನ್ನು ಉತ್ಪಾದಿಸಲು ಸಾಧ್ಯವಾಗಿರುವುದು ಇದೇ ಮೊದಲು ಎಂದು ವ್ಯಾಖ್ಯಾನಿಲಾಗಿದೆ.

ವಿಶ್ವಪ್ರಸಿದ್ಧ ‘ನೇಚರ್‌ ಫಿಸಿಕ್ಸ್‌’ ನಿಯತಕಾಲಿಕೆಯಲ್ಲಿ ವಿಜ್ಞಾನಿಗಳಾದ  ಫ್ರ್ಯಾಂಕ್ ವೇವಿಂಗರ್, ಜಾರ್ಜ್‌ ವಾನ್ ಫ್ರೇಮನ್ ಹಾಗೂ ಜೂಲಿಯನ್ ಶ್ಕಲ್ಸ್‌ ತಮ್ಮ ಸಿದ್ಧಾಂತವನ್ನು ಪ್ರಕಟಿಸಿದ್ದು, ಕ್ವಾಂಟಮ್ ವಿಜ್ಞಾನದ ಪರಿಣಾಮಗಳನ್ನು ಅರಿತುಕೊಳ್ಳುವಲ್ಲಿ ಈ ಅನಿಲವು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ವಿಶ್ಲೇಷಿಸಿದ್ದಾರೆ.

ಏನಿದು ಬೆಳಕಿನ ಅನಿಲ?

ADVERTISEMENT

ಕೇಳಲು ಕೊಂಚ ವಿಚಿತ್ರ ಎನ್ನಬಹುದಾದ ಸಂಗತಿಯಿದು. ಏಕೆಂದರೆ ಬೆಳಕಿಗೆ ಭೌತಿಕವಾದ ಆಕಾರ ಇರುವುದಿಲ್ಲ. ಅಗಲ, ಉದ್ದ ಹಾಗೂ ಆಳವಿರುವ 3–ಡಿ ಭೌತಿಕ ಸ್ವರೂಪ ಬೆಳಕಿಗೆ ಇರುವುದಿಲ್ಲವಾದರೂ ಈ ಮೂರೂ ಆಯಾಮಗಳನ್ನು ತಲುಪಬಲ್ಲ ಶಕ್ತಿ ಬೆಳಕಿಗೆ ಇದೆ. ಹಾಗಾಗಿ, ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಸಾಪೇಕ್ಷತಾ ಸಿದ್ಧಾಂತದಲ್ಲಿ ಬೆಳಕು ಶಕ್ತಿಯ ಪಾತ್ರವನ್ನು ತುಂಬಿ ಮಹತ್ತರವಾದ ಸ್ಥಾನವನ್ನು ವಹಿಸಿದೆ. ಇನ್ನು ಕ್ವಾಂಟಮ್ ವಿಜ್ಞಾನವು ಧಾತು ಹಾಗೂ ಶಕ್ತಿಯ ಅಧ್ಯಯನವಾಗಿರುವ ಕಾರಣ, ಅನ್ಯಗ್ರಹ, ಪ್ರಪಂಚಗಳನ್ನು ಅನ್ವೇಷಿಸುವಲ್ಲಿ, ಬಳಿಕ ವಿಶ್ಲೇಷಿಸುವಲ್ಲಿ ಬೆಳಕು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಜರ್ಮನಿಯ ಬಾನ್‌ ವಿಶ್ವವಿದ್ಯಾಲಯ ಹಾಗೂ ಕೈಸರ್‌ಸ್ಲಾಟರ್ನ್–ಲಾಂಡೌ ವಿಶ್ವವಿದ್ಯಾಲಯದ ಆನ್ವಯಿಕ ಭೌತವಿಜ್ಞಾನಿಗಳು ಬೆಳಕಿಗೆ ಭೌತಿಕ ಆಕಾರವನ್ನು ನೀಡುವ ಪ್ರಯತ್ನವನ್ನು ಮಾಡಿದ್ದು, ತಮ್ಮ ಉತ್ಪನ್ನಕ್ಕೆ ಒಂದು ಆಯಾಮದ ಅನಿಲ ಎಂದು ಹೆಸರಿಟ್ಟಿದ್ದಾರೆ. ಈ ಬೆಳಕಿನ ಅನಿಲವನ್ನು ಈ ಪ್ರಾತ್ಯಕ್ಷಿಕೆಯ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು. ನೀವು ಒಂದು ಈಜುಕೊಳದ ಪಕ್ಕ ನಿಂತಿದ್ದೀರ ಎಂದುಕೊಳ್ಳಿ. ಒಂದು ಪೈಪ್ ಮೂಲಕ ನೀರನ್ನು ಚಿಮ್ಮಿಸಿ ಈಜುಕೊಳದ ಒಳಕ್ಕೆ ಹಾಯಿಸುತ್ತೀರ ಎಂದುಕೊಳ್ಳಿ. ಆಗ ಈಜು ಕೊಳದಲ್ಲಿ ಪೈಪ್‌ನಿಂದ ನೀರು ಬೀಳುವ ಜಾಗದಲ್ಲಿ ಅಲೆಗಳು ಸೃಷ್ಟಿಯಾಗುತ್ತವೆ. ಈಜುಕೊಳದ ಗಾತ್ರದ ಆಧಾರದ ಮೇಲೆ ಈ ಅಲೆಗಳ ಗಾತ್ರವು ಕಿರಿದು ಅಥವಾ ಹಿರಿದಾಗಿರುತ್ತದೆ. ಈ ಪ್ರಕ್ರಿಯೆಯನ್ನು ನೀರಿನ ಬದಲು ಬೆಳಕಿಗೆ ಅನ್ವಯಿಸಿ ವಿಜ್ಞಾನಿಗಳು ಬೆಳಕಿನ ಅನಿಲ ಉತ್ಪಾದಿಸಿದ್ದಾರೆ.

ಒಂದು ಆಯುತಾಕಾರದ ಡಬ್ಬಿ ಅಥವಾ ಕೊಠಡಿಯೊಳಗೆ ಬೆಳಕಿನ ಕಿರಣವನ್ನು ನೀರವಾಗಿ ಬಿಡುತ್ತಾರೆ. ಡಬ್ಬಿ ಅಥವಾ ಕೊಠಡಿಯ ಗಾತ್ರದ ಆಧಾರದ ಮೇಲೆ ಬೆಳಕು ತಾಗುವ ಜಾಗದಲ್ಲಿ ಬೆಳಕಿನ ಅಲೆಗಳು ಏಳುತ್ತವೆ. ಈ ಅಲೆಗಳಿಗೆ ಒಮ್ಮುಖವಾದ ದಿಕ್ಕಿರುತ್ತದೆ. ಏಕೆಂದರೆ ಬೆಳಕು ಯಾವಾಗಲೂ ನೇರರೇಖೆಯಲ್ಲಿ ಚಲಿಸುತ್ತದೆ. ವಿಜ್ಞಾನಿಗಳು ಈ ಅಲೆಗಳ ಸ್ವರೂಪದ ಬೆಳಕನ್ನು ಶೇಖರಿಸಿ ಇರಿಸಿಕೊಳ್ಳಲು ಯಶಸ್ವಿಯಾಗಿದ್ದು, ಅದನ್ನು ಬೇಕಾದಾಗ ಬಳಸಿಕೊಳ್ಳಲೂ ಯಶಸ್ವಿಯಾಗಿದ್ದಾರೆ. ಹಾಗಾಗಿ, ಇದನ್ನು ಬೆಳಕಿನ ಅನಿಲ ಎಂದು ಕರೆದಿದ್ದಾರೆ.

ಬಳಕೆ ಎಲ್ಲಿ? ಹೇಗೆ?

ಈ ಬೆಳಕಿನ ಅನಿಲವನ್ನು ಭೌತವಿಜ್ಞಾನ ಕ್ಷೇತ್ರದಲ್ಲಿ ಬಳಸಿಕೊಳ್ಳಬಹುದಾಗಿದೆ. ಅದರಲ್ಲೂ ‘ಇನ್‌ಫ್ರಾರೆಡ್’ ದೂರದರ್ಶಕಗಳಲ್ಲಿ ಈ ‘ಬೆಳಕು–ಅನಿಲ’ವನ್ನು ಬಳಸಿಕೊಂಡಿದ್ದಾರೆ. ಈ ಅನಿಲವನ್ನು ಈ ದೂರದರ್ಶಕಗಳಿಂದ ಗಮನಿಸಬಹುದು. ಕೆಲವೊಮ್ಮೆ ಈ ಅನಿಲಗಳನ್ನು ಒಮ್ಮುಖವಾಗಿ ಕಳುಹಿಸಲೂಬಹುದು. ಅನಿಲವು ಚಲಿಸುವ ದಿಕ್ಕನ್ನು ಗಮನಿಸುವುದು ಹಾಗೂ ದಾಖಲಿಸುವುದು ಸಾಧ್ಯವಿದೆ. ಆದ್ದರಿಂದ ವಿವಿಧ ಬಗೆಯ ಆಕಾಶಕಾಯಗಳನ್ನು, ಅವುಗಳ ನಿಖರವಾದ ವಿಳಾಸ, ಆಳ, ಅಗಲ, ಗಾತ್ರಗಳನ್ನು ಲೆಕ್ಕ ಹಾಕಲು ಇದು ಸಹಾಯ ಮಾಡುತ್ತದೆ.

ಬಾಹ್ಯಾಕಾಶ ಅಧ್ಯಯನ ಮಾತ್ರವೇ ಅಲ್ಲದೇ ಸಮುದ್ರಗಳ ಅಧ್ಯಯನವೂ ಇದರಿಂದ ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ, ಸಮುದ್ರದ ನಿಖರವಾದ ಆಳ ಪತ್ತೆ ಹಚ್ಚಲು, ಸುನಾಮಿಯಂತಹ ಅಲೆಗಳನ್ನು ಅಧ್ಯಯನ ಮಾಡುವುದು, ಪತ್ತೆ ಹಚ್ಚುವುದು – ಹೀಗೆ ಮಾರುತಗಳ ವರ್ತಮಾನವನ್ನು ನೀಡಿ ಅನಾಹುತಗಳನ್ನು ತಪ್ಪಿಸಲೂ ಈ ಸಂಶೋಧನೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.