ಮುಟ್ಟಿದರೆ ಮಿನುಗುವ, ತೊಟ್ಟರೆ ಝಗಝಗಿಸುವ ಬಟ್ಟೆ ಬರಲಿದೆಯಂತೆ! ಹೀಗೆಂದು ಈ ಬಟ್ಟೆಗೆ ಬ್ಯಾಟರಿ, ತಂತಿಗಳು ಯಾವುದೂ ಬೇಕಿಲ್ಲ. ನಮ್ಮ ದೇಹದ ಕಾಂತ ಹಾಗೂ ವಿದ್ಯುತ್ತನ್ನೇ ಬಳಸಿಕೊಂಡು ಫಕ್ಕನೆ ಮಿನುಗುತ್ತದೆ. ಹೀಗೊಂದು ನಾರನ್ನು ಚೀನಾದ ದೊಂಗ್ವಾ ವಿಶ್ವವಿದ್ಯಾನಿಲಯದ ವಸ್ತುವಿಜ್ಞಾನಿ ಹೊಂಗ್ಶಿ ವಾಂಗ್ ಮತ್ತು ಸಂಗಡಿಗರು ಸಿದ್ಧಪಡಿಸಿದ್ದಾರೆ. ಮುಟ್ಟಿದರೆ, ಮುಟ್ಟಿದ ಜಾಗದಲ್ಲಿ ಇದು ಮಿನುಗುತ್ತದೆ. ಧರಿಸಿದ್ದರೆ, ಎಲ್ಲೆಲ್ಲ ದೇಹವನ್ನು ತಾಕುತ್ತದೆಯೋ ಅಲ್ಲೆಲ್ಲ ಬೆಳಕನ್ನು ಚೆಲ್ಲುತ್ತದೆಯಂತೆ. ‘ಇಂಟೆಲಿಜೆಂಟ್ ನಾರು’ ಅಥವಾ ‘ಐ-ನಾರು’ ಎಂದು ಹೆಸರನ್ನು ಪಡೆದಿರುವ ಇದು ಧರಿಸಬಲ್ಲ ಇಲೆಕ್ಟ್ರಾನಿಸಕ್ಸ್ ತಂತ್ರಜ್ಞಾನಕ್ಕೆ ಹೊಸದೊಂದು ತಿರುವನ್ನು ನೀಡಲಿದೆಯಂತೆ.
ಧರಿಸುವ ಇಲೆಕ್ಟ್ರಾನಿಕ್ಸ್ ಬಗ್ಗೆ ಇತ್ತೀಚೆಗೆ ಆಸಕ್ತಿ ಬಹಳಷ್ಟು. ಚರ್ಮದಂತೆ ದೇಹಕ್ಕೆ ಅಂಟಿಸಬಹುದಾದ ಇಲೆಕ್ಟ್ರಾನಿಕ್ಸ್, ಬಟ್ಟೆಯಲ್ಲಿ ಹುದುಗಿಸಿದ ಸರ್ಕೀಟುಗಳು, ಕಿವಿಯೋಲೆ, ಕೈಗಡಿಯಾರಗಳಲ್ಲಿ ಹುದುಗಿಸಬಹುದಾದ ಸೂಕ್ಷ್ಮಸಾಧನಗಳು ಮೊದಲಾದವುಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ನಮ್ಮ ಹೃದಯದ ಬಡಿತ, ರಕ್ತದೊತ್ತಡ ಹಾಗೂ ಆಕ್ಸಿಜನ್ ಪ್ರಮಾಣವನ್ನು ಅಳೆಯುವ ಸ್ಮಾರ್ಟ್ ವಾಚುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.
ಇವಕ್ಕಿಂತಲೂ ಸೂಕ್ಷ್ಮವಾದ ಸೆನ್ಸಾರುಗಳಿರುವ ಸಾಧನಗಳನ್ನು ತಯಾರಿಸಿದರೆ ಮಿದುಳಿನ ಚಟುವಟಿಕೆಗಳನ್ನು ಗಮನಿಸುವ ‘ಇಇಜಿ’, ಹೃದಯ ಹಾಗೂ ಶ್ವಾಸಕೋಶದ ಚಟುವಟಿಕೆಗಳ ಮೇಲೆ ಕಣ್ಗಾವಲಿಡುವ ಧರಿಸುವ ಬಟ್ಟೆಗಳನ್ನು ತಯಾರಿಸುವ ಉದ್ದೇಶ ತಂತ್ರಜ್ಞರಿಗೆ ಇದೆ. ಇದಕ್ಕೊಂದು ದೊಡ್ಡ ತೊಡಕಿದೆ. ಇದುವರೆವಿಗೂ ಸಿದ್ಧಪಡಿಸಿರುವ ಇಂತಹ ಎಲ್ಲ ಸಾಧನಗಳಿಗೂ ಬ್ಯಾಟರಿ ಬೇಕೇ ಬೇಕು. ಪುಟ್ಟದಾದರೂ ಗಟ್ಟಿಯಾದ ಬ್ಯಾಟರಿಯನ್ನು ಹುದುಗಿಸದೆ ನಿರ್ವಾಹವಿಲ್ಲ. ಹಾಗೆಯೇ ಇಲೆಕ್ಟ್ರಾನಿಕ್ ಸರ್ಕೀಟುಗಳನ್ನು ರೂಪಿಸಲು ಬಳಸುವ ತಂತಿಗಳೂ ಗಟ್ಟಿಯೇ. ಹೀಗಾಗಿ ಇಂತಹ ಸಾಧನಗಳು ಅಲ್ಪ ಸ್ವಲ್ಪ ಬಳುಕಬಲ್ಲವೇ ಹೊರತು, ಹತ್ತಿಯ ಬಟ್ಟೆಯಂತೆ ಬೇಕಾದ ಆಕಾರಕ್ಕೆ ಬಾಗುವಂಥವಲ್ಲ. ಹೊಲಿಯಲು ಒಗ್ಗುವಂಥವೂ ಅಲ್ಲ. ಏನಿದ್ದರೂ ಎಲ್ಲೋ ಒಂದಿಷ್ಟು ತೇಪೆ ಹಚ್ಚಿದಂತೆ ಬಟ್ಟೆಯ ಮೇಲೆ ಅಥವಾ ಬ್ಯಾಂಡೇಜಿನಂತೆ ಚರ್ಮದ ಮೇಲೆ ಅಂಟಿಸಿಕೊಳ್ಳಬಹುದಷ್ಟೆ. ಜೊತೆಗೆ ಬಳುಕುವಂತೆ ಇವನ್ನು ತಯಾರಿಸಬೇಕಾದರೆ, ವಿವಿಧ ಬಗೆಯ ವಸ್ತುಗಳನ್ನು ಜೋಡಿಸಬೇಕಾಗುತ್ತದೆ. ಆದರೆ ವಾಂಗ್ ತಂಡ ತಯಾರಿಸಿರುವ ಐನಾರು ಐನಾತಿ ಬಟ್ಟೆ. ಒಂದೇ ನಾರು ಬ್ಯಾಟರಿಯೂ ಆಗುತ್ತದೆ; ಸರ್ಕೀಟಿನ ತಂತಿಯೂ ಆಗುತ್ತದೆ ಹಾಗೂ ವಿದ್ಯುತ್ತಿನಿಂದ ಹೊಳೆಯುವ ಬಲ್ಬೂ ಆಗುತ್ತದೆ. ಇದಕ್ಕೆ ಬ್ಯಾಟರಿ ಬೇಕೇ ಇಲ್ಲ. ನಮ್ಮ ದೇಹ ವಿದ್ಯುತ್ತಿಗೆ ಹಾಗೂ ರೇಡಿಯೋ ತರಂಗಗಳಂತಹ ವಿಕಿರಣಗಳಿಗೆ ಪ್ರತಿಕ್ರಯಿಸುವ ರೀತಿಯನ್ನೇ ಬಳಸಿಕೊಂಡು ಐನಾರನ್ನು ಈ ತಂಡ ಸಿದ್ಧಪಡಿಸಿದೆ.
ಐನಾರು ವಾಸ್ತವವಾಗಿ ಮೂರು ಪದರಗಳಿರುವ ತಂತಿ ಎನ್ನಬಹುದು. ಸುಮಾರು ಮುನ್ನೂರು ನ್ಯಾನೊಮೀಟರು ದಪ್ಪ. ಅಂದರೆ ನಮ್ಮ ತಲೆಗೂದಲಿನ ನಾಲ್ಕುಪಟ್ಟು ದಪ್ಪ. ಕಸೂತಿಗೆ ಬಳಸುವ ನೂಲಿನಷ್ಟು ದಪ್ಪ ಎನ್ನಿ. ಇದರ ಒಳಭಾಗದಲ್ಲಿ ಬೆಳ್ಳಿಯ ನ್ಯಾನೊಕಣಗಳನ್ನು ಲೇಪಿಸಿದ ನೈಲಾನ್ ನೂಲಿದೆ. ಇದು ವಿದ್ಯುತ್ಕಾಂತೀಯ ತರಂಗಗಳನ್ನು, ಅಂದರೆ ರೇಡಿಯೊ ತರಂಗಗಳನ್ನು ಗ್ರಹಿಸಿ, ವಿದ್ಯುತ್ ಉತ್ಪಾದಿಸುವ ಆಂಟೆನಾ. ಥೇಟ್ ಫೋನಿನೊಳಗೆ ಇರುವ ಆಂಟೆನಾ ಥರ. ಅದರ ಮೇಲೆ, ಅಂದರೆ ನಡುವಿನ ಪದರದಲ್ಲಿ ಹೀಗೆ ಉತ್ಪಾದನೆಯಾದ ವಿದ್ಯುತ್ತು ಅಥವಾ ಛಾರ್ಜನ್ನು ಹಿಡಿದಿಟ್ಟುಕೊಳ್ಳುವ ಡೈ–ಇಲೆಕ್ಟ್ರಿಕ್ ಲೇಪವಿದೆ. ಬೇರಿಯಂಟೈಟಾನಿಯಂ ಆಕ್ಸೈಡನ್ನು ಮೃದುವಾದ ಮೇಣದಂತಹ ರೆಸಿನ್ನಿನೊಂದಿಗೆ ಬೆರೆಸಿ ಇದನ್ನು ರೂಪಿಸಿದ್ದಾರೆ. ಇದರ ಮೇಲ್ಗಡೆ ವಿದ್ಯುತ್ ಹರಿದರೆ ಮಿನುಗುವ ದ್ಯುತಿಸ್ಫುರಣ ಪದರವಿದೆ. ಸತುವಿನ ಸಲ್ಫೈಡು ಮತ್ತು ತಾಮ್ರವನ್ನು ರೆಸಿನ್ನಿನಲ್ಲಿ ಬೆರೆಸಿ ಇದನ್ನು ತಯಾರಿಸಿದ್ದಾರೆ. ಹೀಗೆ ಮೃದುವಾದ ನಾರು ತಯಾರಾಗಿದೆ. ಇದು ಏಕಕಾಲದಲ್ಲಿ ವಿದ್ಯುತ್ಕಾಂತೀಯ ತರಂಗಗಳನ್ನು ಗ್ರಹಿಸುವ ಆ್ಯಂಟೆನಾ, ಹಾಗೂ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಪಾಸಿಟರ್ ಮತ್ತು ಅದನ್ನು ಹರಿಯಗೊಟ್ಟು ಮಿನುಗುವ ದ್ಯುತಿಸ್ಫುರಕವೂ ಆಗಿದೆ.
ಇವೆಲ್ಲವೂ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ ಆ್ಯಂಟೆನಾ ಹುಟ್ಟಿಸಿದ ವಿದ್ಯುತ್ತು ಸರ್ಕೀಟಿನಲ್ಲಿ ಹರಿಯಬೇಕು. ಸಾಮಾನ್ಯವಾಗಿ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಇದಕ್ಕಾಗಿ ಸೂಕ್ಷ್ಮವಾದ ತಂತಿಗಳಿಂದ ಸರ್ಕೀಟನ್ನು ರೂಪಿಸಿರುತ್ತಾರೆ. ಆದರೆ ವಾಂಗ್ ತಂಡ ನಮ್ಮ ದೇಹವನ್ನೇ ಈ ಸರ್ಕೀಟನ್ನು ಪೂರ್ಣಗೊಳಿಸಲು ಬಳಸಿಕೊಂಡಿದೆ. ನಮ್ಮ ದೇಹವು ವಿದ್ಯುತ್ತನ್ನು ಹರಿಯಗೊಡಬಲ್ಲುದಲ್ಲದೆ, ಕೆಪಾಸಿಟರಿನಂತೆ ಛಾರ್ಜನ್ನು ಸಂಗ್ರಹಿಸಿ ಇಟ್ಟುಕೊಳ್ಳಬಲ್ಲುದು. ಹಾಗೂ ಘರ್ಷಣೆಯಿಂದ ಛಾರ್ಜನ್ನು ಉತ್ಪಾದಿಸಬಲ್ಲುದು. ಹೀಗಾಗಿ ನಾರಿನಲ್ಲಿ ಇರುವ ಛಾರ್ಜು ದೇಹದ ಮೂಲಕ ಹರಿಯಬಲ್ಲುದು. ದೇಹದಲ್ಲಿ ಕೂಡಿಕೊಂಡದ್ದು ನಾರಿನೊಳಗೆ ಹರಿಯಬಲ್ಲುದು. ಹಾಗೆಯೇ ನಾರಿನಲ್ಲಿರುವ ಆ್ಯಂಟೆನಾ ಪರಿಸರದಲ್ಲಿರುವ ವಿದ್ಯುತ್ಕಾಂತೀಯ ತರಂಗಗಳನ್ನು ಗ್ರಹಿಸಬಲ್ಲುದು, ಮತ್ತು ದೇಹದಲ್ಲಿರುವ ವಿದ್ಯುತ್ ಕಾಂತೀಯ ಶಕ್ತಿಯನ್ನು ಪಸರಿಸಬಲ್ಲುದು. ಹೀಗೆ ಇದು ರೇಡಿಯೋವಿನಂತೆ ವಿದ್ಯುತ್ಕಾಂತೀಯ ಸಂಕೇತಗಳನ್ನು ಹುಟ್ಟಿಸಿ, ಗ್ರಹಿಸಬಲ್ಲುದು.
ಈ ಐನಾರನ್ನು ಮುಟ್ಟಿದರೆ ಸಾಕು, ನಾರಿನಲ್ಲಿರುವ ವಿದ್ಯುತ್ತು ಹೊರಗೆ ಹರಿದು, ಸರ್ಕೀಟು ಪೂರ್ಣವಾಗಿ, ಹೊರಪದರದಲ್ಲಿರುವ ಲೇಪ ಬೆಳಗುತ್ತದೆ. ಮೃದುವಾಗಿಯೂ, ಸೂಕ್ಷ್ಮವಾಗಿಯೂ ಇರುವುದರಿಂದ ಇದನ್ನು ಬಟ್ಟೆಯಂತೆ ನೇಯಬಹುದು. ದಾರದ ಉಂಡೆಗಳನ್ನಾಗಿ ಮಾಡಿ, ಹೊಲಿಗೆ ಯಂತ್ರದಲ್ಲಿ ಸೇರಿಸಿ ಬಟ್ಟೆಯಲ್ಲಿ ಎಂಬ್ರಾಯಿಡರಿ ಮಾಡಬಹುದು. ಚಾಪೆಯಂತೆ ಹೆಣೆದು ಬಟ್ಟೆಯಾಗಿಸಬಹುದು. ಅದೆಲ್ಲ ಸರಿ. ಉಪಯೋಗವೇನು ಎಂದಿರಾ? ವಾಂಗ್ ತಂಡ ಇದನ್ನು ಹಲವಾರು ರೀತಿಯಲ್ಲಿ ಬಳಸಬಹುದು ಎನ್ನುತ್ತದೆ.
ಉದಾಹರಣೆಗೆ, ಕಿವುಡರು ಐನಾರಿನ ಬಟ್ಟೆಯನ್ನು ಧರಿಸಿ, ಅದರಲ್ಲಿಯೇ ಹುದುಗಿಸಿರುವ ಕೀಬೋರ್ಡಿನ ಮೂಲಕ ಎದೆಯ ಮೇಲೆ ತಮ್ಮ ಭಾವನೆಗಳನ್ನು ಟೈಪಿಸಿ ಪ್ರಕಟಿಸಬಹುದು. ಹೀಗೆ ಇಂಗ್ಲೀಷಿನ ಅಕ್ಷರಗಳನ್ನು ಪ್ರದರ್ಶಿಸುವ ಬಟ್ಟೆಯ ತುಣುಕುಗಳನ್ನು ವಾಂಗ್ ತಂಡ ಹೊಲಿದು ಸಿದ್ಧಪಡಿಸಿದೆ. ಮುಟ್ಟಿದರೆ ಬೆಳಗುವ ಕಸೂತಿಯನ್ನೂ ಇದು ಬಟ್ಟೆಯ ಮೇಲೆ ಮಾಡಿ ತೋರಿಸಿದೆ. ಐನಾರನ್ನು ಕೂಡಿಸಿ ನೇಯ್ದ ನೆಲಹಾಸು ಅಥವಾ ಕಂಬಳಿಯೇ ಮನೆಯ ದೀಪಗಳನ್ನು ಬೆಳಗಿಸುವ ಸ್ಮಾರ್ಟ್ ಕಾರ್ಪೆಟ್ಟು ಆಗಬಹುದು. ವೀಡಿಯೊ ಗೇಮುಗಳನ್ನು ಆಡಲು ಬಳಸುವ ಕೈಗವಸುಗಳನ್ನು ಇದರಿಂದಲೇ ರಚಿಸಬಹುದು. ಅಂತಹ ಗವುಸುಗಳಲ್ಲಿ ಚಿಪ್ಪುಗಳು ಇಲ್ಲದಿರುವುದರಿಂದ ತೊಳೆದು, ಒಣಗಿಸಿ ಮರುಬಳಸುವುದು ಸುಲಭ. ಸರ್ಕೀಟುಗಳೇ ಇಲ್ಲದ್ದರಿಂದ ದುರಸ್ತಿಯ ಸಂಕಟವೂ ಕಡಿಮೆ ಎನ್ನುತ್ತಾರೆ, ವಾಂಗ್.
ಎಲ್ಲಾ ಓಕೆ. ಆದರೆ ಇದನ್ನು ಒಗೆದಾಗ, ಇಸ್ತ್ರಿ ಮಾಡಿದಾಗ ಏನಾಗುತ್ತದೆ? ಎಷ್ಟು ದೀರ್ಘಕಾಲ ಬಾಳಿಕೆ ಬರುತ್ತದೆ? ಇವೆಲ್ಲವೂ ನಿರ್ಧಾರವಾದಾಗಷ್ಟೆ ಇದರ ಬಳಕೆ ಹೆಚ್ಚಬಹುದು ಎನ್ನುತ್ತದೆ ಈ ಸಂಶೋಧನೆಯ ವಿವರಗಳನ್ನು ಪ್ರಕಟಿಸಿರುವ ‘ಸೈನ್ಸ್’ ಪತ್ರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.