ADVERTISEMENT

ಸಾವನ್ನು ಗೆದ್ದ ಗ್ರಹ - ಇದರ ಹೆಸರು ‘ಹಲ್ಲಾ’

ನೇಸರ ಕಾಡನಕುಪ್ಪೆ
Published 11 ಜುಲೈ 2023, 23:40 IST
Last Updated 11 ಜುಲೈ 2023, 23:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಕ್ಷತ್ರಗಳಿಗೂ ಹುಟ್ಟು–ಸಾವು ಇರುತ್ತದೆ ಎಂಬ ವಿಷಯ ನಮಗೆಲ್ಲಾ ತಿಳಿದಿದೆ ಅಲ್ಲವೇ? ಎಲ್ಲ ಜೀವಿಗಳಿಗೆ ಇರುವಂತೆ ನಕ್ಷತ್ರವೊಂದಕ್ಕೂ ಹುಟ್ಟು, ಬಾಲ್ಯ, ಯೌವನ, ಪ್ರೌಢಾವಸ್ಥೆ, ವೃದ್ಧಾಪ್ಯ ಹಾಗೂ ಸಾವು ಎಂಬ ಹಂತಗಳು ಇರುತ್ತವೆ. ಈ ವಿವಿಧ ಹಂತಗಳಲ್ಲಿ ವಿವಿಧ ಬಣ್ಣ, ಗಾತ್ರ, ಶಕ್ತಿ, ಪ್ರಭೆ, ಪ್ರೌಢಿಮೆ ನಕ್ಷತ್ರಗಳಿಗೆ ಇರುತ್ತದೆ. ಸಾಮಾನ್ಯವಾಗಿ ಗಮನಿಸಿರಬಹುದು – ವೃದ್ಧಾಪ್ಯ ಹತ್ತಿರವಾಗುವಂತೆ ಜೀವಿಗಳು ದಪ್ಪನಾಗುತ್ತ, ಶಕ್ತಿ ಕಳೆದುಕೊಳ್ಳುತ್ತಾ ಹೋಗುವುದು. ಅಂತೆಯೇ, ನಕ್ಷತ್ರವೂ ವೃದ್ಧಾಪ್ಯದಲ್ಲಿ ಹಿಗ್ಗಿ ಕೊನೆಗೆ ಸಾಯುತ್ತದೆ.

ನಕ್ಷತ್ರ ಸಾಯುವ ಹಂತವನ್ನು ನಾವು ‘ಸೂಪರ್‌ ನೋವಾ’ ಎಂದು ಕರೆಯುತ್ತೇವೆ. ಈ ಹಂತದಲ್ಲಿ ನಕ್ಷತ್ರದೊಳಗಿನ ಎಲ್ಲ ಜನಜನಕವು ಉರಿದು ಖಾಲಿಯಾಗಿ, ಕೊನೆಗೆ ಉರಿಯಲು ಏನೂ ಎಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ನಕ್ಷತ್ರದೊಳಗಿನ ಒತ್ತಡ ಹೆಚ್ಚಾಗಿ ಕುಸಿಯಲು ಶುರುವಾಗುತ್ತದೆ. ಆಗ ಅದು ಅತಿ ಹೆಚ್ಚು ಶಕ್ತಿಯಿಂದ ಸ್ಫೋಟವಾಗುತ್ತದೆ. ಆ ಸ್ಫೋಟದ ತೀವ್ರತೆ ಎಷ್ಟಿರುತ್ತದೆ ಎಂದರೆ, ಹಲವು ದಿನಗಳವರೆಗೂ ಬೆಳಕು ರಾತ್ರಿಗಳನ್ನೇ ಇಲ್ಲವಾಗಿಸುತ್ತದೆ. ಆದರೆ, ಈ ಘಟನೆ ನಡೆದ ಬಳಿಕ ಆ ನಕ್ಷತ್ರದ ಸುತ್ತಮುತ್ತಲಿರುವ ಗ್ರಹಗಳು ಉಳಿಯಲಾರವು. ಅವು ಸುಟ್ಟುಹೋಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ನಂಬಿಕೆ.

ಇಷ್ಟೆಲ್ಲಾ ವಿಚಾರಗಳನ್ನು ಏಕೆ ಹೇಳಬೇಕಾಯಿತು ಎಂದರೆ, ಈ ನಂಬಿಕೆಯನ್ನು ಸುಳ್ಳು ಮಾಡುವಂತೆ ಹೊಸ ಸಂಶೋಧನೆಯೊಂದು ಆಗಿದೆ. ‘ಸೂಪರ್‌ ನೋವಾ’ದ ತೀವ್ರತೆಗೂ ಸಿಕ್ಕಿ ಉಳಿದುಕೊಂಡಿರುವ ಗ್ರಹವೊಂದು ಅಂತರಿಕ್ಷದಲ್ಲಿ ಪತ್ತೆಯಾಗಿದೆ.

ADVERTISEMENT

‘ಉರ್ಸಾ ಮೈನರ್‌’ ನಕ್ಷತ್ರಪುಂಜದಲ್ಲಿರುವ ಸೌರಮಂಡಲವೊಂದರಲ್ಲಿ ‘ಸೂಪರ ನೋವಾ’ ಘಟಿಸಿದ ಬಳಿಕವೂ ಉಳಿದುಕೊಂಡಿರುವ ಗ್ರಹವನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಇದರ ಹೆಸರು ‘ಹಲ್ಲಾ’ ಎಂದು. ಇದರ ಗಾತ್ರ ನಮ್ಮ ಗುರು ಗ್ರಹದಷ್ಟು. ಅಮೆರಿಕದ ‘ನಾಸಾ’ದ ‘ಟ್ರಾನ್ಸಿಸ್ಟಿಂಗ್ ಎಕ್ಸೋಪ್ಲಾನೆಟ್ ಸರ್ವೇ ಸ್ಯಾಟಲೈಟ್’(ಟೆಸ್)ದಲ್ಲಿರುವ ದೂರದರ್ಶಕ ಹಾಗೂ ಕೆನಡಾ–ಫ್ರಾನ್ಸ್ ಹವಾಯಿ ದೂರದರ್ಶಕಗಳು ಸಹಭಾಗಿತ್ವದಲ್ಲಿ ಈ ಗ್ರಹವನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಹಿರಿಯ ವಿಜ್ಞಾನಿ ಮಾರೋ ಹಾನ್‌ ಅವರ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯ ಆರಂಭದಲ್ಲಿ ‘ಹಲ್ಲಾ’ಗ್ರಹವು ಸೂಪರ್‌ ನೋವಾಕ್ಕೆ ಸಿಲುಕಿದ್ದ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಸೂಕ್ಷ್ಮ ಅಧ್ಯಯನಗಳಿಂದ ಈ ಗ್ರಹವು ಸೂಪರ್‌ ನೋವಾದ ಪಳಯುಳಿಕೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

‘ಸೂಪರ್‌ ನೋವಾ’ಗೆ ಸಿಲುಕಿದ ಬಳಿಕ ಯಾವುದೇ ಗ್ರಹವು ಉಳಿಯಲಾರದು ಎಂಬುದೇ ಈವರೆಗಿನ ನಂಬಿಕೆ. ಆದರೆ, ಈ ‘ಹಲ್ಲಾ’ ಗ್ರಹವು ನಾಶವಾಗದೇ ಉಳಿದುಕೊಂಡಿದ್ದಾದರೂ ಹೇಗೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ‘ಸೂಪರ್‌ ನೋವಾ’ ಗ್ರಹವೊಂದನ್ನು ಸಂಪೂರ್ಣ ನಾಶ ಮಾಡುತ್ತದೆ ಎಂಬ ಸಿದ್ಧಾಂತವನ್ನು ಈ ಸಂಶೋಧನೆ ತಿರಸ್ಕರಿಸಿದೆ. ‘ಹಲ್ಲಾ’ ಪ್ರದಕ್ಷಿಣೆ ಹಾಕುವ ನಕ್ಷತ್ರವು ಕೆಂಪುನಕ್ಷತ್ರದ ಹಂತಕ್ಕೆ ತಲುಪಿದಾಗ, ಹಲ್ಲಾವನ್ನು ನಕ್ಷತ್ರ ನುಂಗಿ ಹಾಕಿದೆ. ಬಳಿಕ ಸೂಪರ್‌ ನೋವಾ ಘಟನೆಯೂ ಆಗಿದೆ. ಆದರೆ, ‘ಸೂಪರ್ ನೋವಾ’ ಬಳಿಕ ನಕ್ಷತ್ರದ ಪ್ರಭಾದ ಕ್ಷೀಣಿಸಿದಾಗ ‘ಹಲ್ಲಾ’ ಮತ್ತೆ ಗೋಚರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಇದೊಂದು ಅತಿ ಸೂಕ್ಷ್ಮವಾದ ವೈಜ್ಞಾನಿಕ ವೀಕ್ಷಣೆ. ಇದರಲ್ಲಿ ಯಾವುದೇ ಊಹೆಗಳು ಇರುವುದಿಲ್ಲ. ಏಕೆಂದರೆ, ವೀಕ್ಷಣೆಯ ಪ್ರತಿಯೊಂದು ಹಂತಗಳೂ ಭೌತಶಾಸ್ತ್ರದ ಸಿದ್ಧಾಂತಗಳನ್ನು ಅವಲಂಬಿಸಿ ನಡೆಸಿರುವಂಥವು. ಕೆಂಪು ದೈತ್ಯ ಹಂತವನ್ನು ನಕ್ಷತ್ರವು ತಲುಪಿದಾಗ ಅದು ಹಿಗ್ಗುವುದು ನಿಜ. ಆದರೆ, ಹಾಗೆ ಉಬ್ಬುವುದು ನಕ್ಷತ್ರದ ಭೌತಸ್ಥಿತಿ ಆಗಿರಲೇ ಬೇಕು ಎಂದೇನಿಲ್ಲ. ಅದರ ಪ್ರಭಾವಳಿ ನಮಗೆ ಹಿಗ್ಗಿದಂತೆ ಗೋಚರಿಸಬಹುದು. ಹಾಗಾಗಿ, ನಕ್ಷತ್ರದ ಹಿಗ್ಗುವಿಕೆ ಗ್ರಹಗಳನ್ನು ಆಪೋಷಣೆ ಮಾಡಿಕೊಳ್ಳುತ್ತದೆ ಎಂಬ ಸಿದ್ಧಾಂತವನ್ನು ಮರು ಪರಿಶೀಲನೆ ಮಾಡುವ ಅಗತ್ಯ ಎದುರಾಗಿದೆ’ ಎಂದು ವಿಜ್ಞಾನಿ ಮಾರೋ ಹಾನ್ ಅಭಿಪ್ರಾಯ ಪಟ್ಟಿದ್ದಾರೆ.

‘ಎಲ್ಲ ನಕ್ಷತ್ರಗಳೂ ಒಂದೇ ರೀತಿ ಬೆಳೆಯಬೇಕು, ಸಾಯಬೇಕು ಎಂದೇನೂ ಇಲ್ಲ. ಜಲಜನಕ ಹಾಗೂ ಹೀಲಿಯಂ ಎಲ್ಲ ನಕ್ಷತ್ರಗಳಲ್ಲೂ ಕಂಡುಬಂದರೂ, ಪ್ರಮಾಣದಲ್ಲಿ ಏರು–ಪೇರು ಇರುತ್ತದೆ. ಹಾಗಾಗಿ, ನಕ್ಷತ್ರವು ಕೆಂಪುಹಂತ ತಲುಪಿದಾಗ ಹಿಗ್ಗಿದರೆ ಅದು ತನ್ನ ಬಳಿ ಇರುವ ಗ್ರಹಗಳನ್ನು ಭೌತಿಕವಾಗಿ ನುಂಗಲೂಬಹುದು ಅಥವಾ ಅದರ ಪ್ರಭೆಯಲ್ಲಿ ದೃಷ್ಟಿಯನ್ನು ಮಬ್ಬಾಗಿಸಬಹುದು. ನಮ್ಮ ಸೂರ್ಯ ಕ್ಷುದ್ರಗ್ರಹವಾಗಿರುವ ಕಾರಣ, ಅದು ಇತರ ನಕ್ಷತ್ರಗಳಂತೆ ಶಕ್ತಿಶಾಲಿ ಆಗಿರಲಾರದು. ಸೂರ್ಯ ‘ಸೂಪರ್ ನೋವಾ’ ಹಂತ ತಲುಪುವುದೇ ಅನುಮಾನ. ಆದರೂ, ಕೆಂಪುದೈತ್ಯನಾದ ಸೂರ್ಯ ಭೂಮಿ, ಮಂಗಳ ಗ್ರಹಗಳನ್ನು ನಾಶ ಮಾಡುವ ಸಾಧ್ಯತೆಗಳು ಕಡಿಮೆ ಎಂದು ಯೋಚಿಸುವ ಅಗತ್ಯ ಬಂದಿದೆ’ ಎಂದು ಮಾರೋ ಹೇಳಿದ್ದಾರೆ.

‘ಹಲ್ಲಾ’ಗ್ರಹವು ಸಂಪೂರ್ಣವಾಗಿ ನಾಶವಾಗಿಲ್ಲ ಎನ್ನುವುದು ನಿಜವಾದರೂ, ಆ ಗ್ರಹದ ಮೂಲ ಸ್ಥಿತಿಯಂತೂ ಖಂಡಿತ ಉಳಿದಿರಲಾರದು. ಹಾಗಾಗಿ, ಆ ಗ್ರಹದ ಮೂಲಸ್ವರೂಪ, ಗ್ರಹದ ಪ್ರಮುಖ ಗುಣ–ಲಕ್ಷಣಗಳು ಸಂಪೂರ್ಣವಾಗಿ ಬದಲಾಗಿವೆ. ಹಾಗಾಗಿ, ‘ಹಲ್ಲಾ’ ಈಗ ಕೇವಲ ಅವಶೇಷ ಮಾತ್ರ. ನಮ್ಮ ಭೂಮಿಯು ಕೆಂಪು ದೈತ್ಯನ ಪ್ರಭಾವಕ್ಕೆ ಒಳಗಾದಾಗ ಭೂಮಿಯು ತನ್ನ ಜೀವಪೋಷಕ ಗುಣವನ್ನು ಸಂಪೂರ್ಣ ಕಳೆದುಕೊಂಡಿರುತ್ತದೆ. ಹಾಗಾಗಿ, ಅದೊಂದು ಮೃತಗ್ರಹವಾಗಿರುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಭೂಮಿಯೂ ಸೇರಿದಂತೆ ಇತರ ಎಂಟು ಗ್ರಹಗಳು ಪ್ರದಕ್ಷಿಣೆ ಹಾಕುತ್ತಿರುವ ಸೂರ್ಯ ಪೂರ್ಣ ಪ್ರಮಾಣದ ನಕ್ಷತ್ರವಲ್ಲ. ಸೂರ್ಯನನ್ನು ಕ್ಷುದ್ರನಕ್ಷತ್ರ ಎಂಬ ವಿಧಕ್ಕೆ ಸೇರಿಸಲಾಗಿದೆ. ನಮ್ಮ ಸೂರ್ಯ ಈಗ ಪ್ರೌಢಾವಸ್ಥೆಯಲ್ಲಿದೆ. ಈಗಿನ ಸೂರ್ಯನ ಬಣ್ಣ ಕೇಸರಿ. ಮುಂದಿನ ಹಂತದಲ್ಲಿ ಅದು ಕೆಂಪುಬಣ್ಣಕ್ಕೆ ತಿರುಗಿ, ಕೊನೆಯಲ್ಲಿ ಬಿಳಿಬಣ್ಣಕ್ಕೆ ಬದಲಾಗಿ ನಶಿಸುತ್ತದೆ. ಕೆಂಪು ಹಂತದಲ್ಲಿ ಹಿಗ್ಗಲು ಶುರುವಾಗಿ ಬಿಳಿಹಂತಕ್ಕೆ ನಮ್ಮ ಸೂರ್ಯ ತಲುಪಿದಾಗ ಅದು ಬಹುಶಃ ಮಂಗಳ ಗ್ರಹದವರೆಗೂ ಉಬ್ಬಬಹುದು ಎಂದು ಅಂದಾಜಿಸಲಾಗಿದೆ. ಈ ಹಂತಕ್ಕೆ ತಲುಪಬೇಕಾದರೆ ಇನ್ನೂ ಕನಿಷ್ಠವೆಂದರೂ 500 ಕೋಟಿ ವರ್ಷಗಳು ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.