ನಿಮ್ಮ ಇಷ್ಟದ ಹೀರೊಗಳನ್ನು ತಾರೆಯರನ್ನು ಈಗ ನೀವು ಆಕಾಶದಲ್ಲಿ ಕೂಡ ನೋಡಬಹುದು – ಹೌದು, ಖಂಡಿತ ನೋಡಬಹುದು! ಬ್ರಿಟಿಷ್ ಖಗೋಳಶಾಸ್ತ್ರಜ್ಞರು ಎಂಟು ಹೊಸ ತಾರಾಪುಂಜಗಳನ್ನು ಗುರುತಿಸಿ, ಅವುಗಳಿಗೆ ನಮ್ಮ ಕಾಲದ ಹೀರೊಗಳ ಹೆಸರು ಇರಿಸಿದ್ದಾರೆ. ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳನ್ನು ಬರೆದ ಜೆ.ಕೆ. ರೌಲಿಂಗ್, ಟೆನಿಸ್ ಆಟಗಾರ್ತಿ ಸೆರಿನಾ ವಿಲಿಯಮ್ಸ್‌ಮ ಸರ್ ಡೇವಿಡ್ ಅಟೆನ್‌ಬರೊ, ಕ್ರಿಕೆಟ್ ಆಟಗಾರ ಉಸೇನ್ ಬೋಲ್ಟ್ ಅವರಿಗೆ ಗೌರವ ನೀಡುವ ರೀತಿಯಲ್ಲಿ ಈ ತಾರಾಪುಂಜಗಳಿಗೆ ಹೆಸರು ಇಡಲಾಗಿದೆ.
ಹರ್ಕ್ಯುಲಿಸ್ ತಾರಾಪುಂಜ ನೋಡಿ ನೋಡಿ ಬೇಜಾರಾಗಿದ್ದರೆ, ಯುವ ಉತ್ಸಾಹಿಗಳು ಈಗ ಉಸೇನ್ ಬೋಲ್ಟ್ ಅವರ ಜನಪ್ರಿಯ ನೃತ್ಯದ ಭಂಗಿಯ ತಾರಾಪುಂಜ ನೋಡಬಹುದು. ಹಾಗೆಯೇ, ಲಕ್ಷಾಂತರ ಚಿಣ್ಣರ ಹೀರೊ ಹ್ಯಾರಿ ಪಾಟರ್‌ನ ಗೋಲಾಕಾರದ ಕನ್ನಡಕವನ್ನು ಕೂಡ ನೋಡಬಹುದು.
ಸರ್ ಡೇವಿಡ್ ಅಟೆನ್‌ಬರೋ ಗೌರವಾರ್ಥ ಒಂದು ತಾರಾಪುಂಜಕ್ಕೆ ಬ್ಲೂವೇಲ್ ಹೆಸರಿಡಲಾಗಿದೆ. ಸೆರಿನಾ ಅವರ ಟೆನಿಸ್ ರ್ಯಾಕೆಟ್ ಹೋಲುವ ತಾರಾಪುಂಜ, ಖಗೋಳಯಾನಿ ಟಿಮ್ ಪೀಕ್ ಗೌರವಾರ್ಥ ಒಂದು ಆಕಾಶನೌಕೆ, ಅತಿಸಣ್ಣ ವಯಸ್ಸಿನಲ್ಲೇ ನೊಬೆಲ್ ಪ್ರಶಸ್ತಿ ಗರಿಯನ್ನು ಮುಡಿಗೇರಿಸಿಕೊಂಡ ಮಲಾಲಾ ಗೌರವಾರ್ಥ ಒಂದು ಪುಸ್ತಕದಾಕೃತಿಯ ತಾರಾಪುಂಜ ಗುರುತಿಸಲಾಗಿದೆ.
ಈಗಿನ ಕಾಲದ ಮಕ್ಕಳು ರಾತ್ರಿ ಹೊತ್ತಿನಲ್ಲಿ ಆಕಾಶದತ್ತ ನೋಟ ಹರಿಸಿ, ತಾರಾಪುಂಜಗಳನ್ನು ಗುರುತಿಸುವ ಚಟುವಟಿಕೆ ಮಾಡುತ್ತಲೇ ಇಲ್ಲ ಎಂಬುದನ್ನು ಬ್ರಿಟನ್‌ನಲ್ಲಿ ನಡೆದ ಸಂಶೋಧನೆಯೊಂದು ಈಚೆಗೆ ಕಂಡುಕೊಂಡಿತು. ಹಾಗಾಗಿ, ಅವರಿಗೆ ಪುರಾತನ ಗ್ರೀಕ್ ಅಥವಾ ರೋಮನ್ ಪುರಾಣಗಳನ್ನು ಆಧರಿಸಿದ ತಾರಾಪುಂಜಗಳನ್ನು ಅಥವಾ ರಾಶಿ ಆಧಾರಿತ ತಾರಾಪುಂಜಗಳನ್ನು ಗುರುತಿಸುವುದು ಆಗದ ಕೆಲಸ.
ನಕ್ಷತ್ರಗಳನ್ನು ನೋಡುವ ಹವ್ಯಾಸವನ್ನು ಚಿಕ್ಕ ವಯಸ್ಸಿನಲ್ಲೇ ಬೆಳೆಸಬೇಕು ಎಂಬ ಉದ್ದೇಶದಿಂದ ‘ನಕ್ಷತ್ರಗಳಲ್ಲ ನೋಟ ಹರಿಸಿ’ ಎನ್ನುವ ಕಾರ್ಯಕ್ರಮವನ್ನು ಶುರು ಮಾಡಲಾಯಿತು. ಇಂದಿನ ಕಾಲದ ಜನ ಸುಲಭವಾಗಿ ಗುರುತಿಸಬಹುದಾದ ಹೆಸರುಗಳನ್ನು ಈ ತಾರಾಪುಂಜಗಳಿಗೆ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.