ನವದೆಹಲಿ: ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ಗಿಡಮೂಲಿಕೆಯೊಂದು ಕೋವಿಡ್–19 ಸೋಂಕಿನ ವಿರುದ್ಧದ ಔಷಧ ಸಂಶೋಧನೆಗೆ ಹೊಸ ತಿರುವು ನೀಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಆಯುರ್ವೇದದಲ್ಲಿ ಬಳಸುತ್ತಿರುವ ‘ಮುಲೇಥಿ (ಯಷ್ಟಿಮಧು/ ಇದರ ವೈಜ್ಞಾನಿಕ ಹೆಸರು Glycyrrhizin, Glycyrrhiza glabra)’ಗೆ ಕೋವಿಡ್ ವಿರುದ್ಧ ಔಷಧವಾಗಿ ಹೊರಹೊಮ್ಮುವ ಸಾಮರ್ಥ್ಯವಿದೆ ಮತ್ತು ದೇಹದಲ್ಲಿ ಕೊರೊನಾ ವೈರಸ್ ಬೆಳವಣಿಗೆ ತಡೆಯುವ ಶಕ್ತಿ ಇದೆ ಎಂಬುದನ್ನು ಕಂಡುಕೊಂಡಿರುವುದಾಗಿ ಗುರುಗ್ರಾಮದ ಮಾನೇಸರ್‌ನಲ್ಲಿರುವ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರದ (ಎನ್‌ಬಿಆರ್‌ಸಿ) ವಿಜ್ಞಾನಿಗಳು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ವ್ಯಾಪಿಸಿ 15ಕ್ಕೂ ಹೆಚ್ಚು ತಿಂಗಳು ಕಳೆದಿದ್ದು, ಸೋಂಕಿಗೆ ಅನೇಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಔಷಧ ಕಂಡುಹಿಡಿಯಲು ವಿಜ್ಞಾನಿಗಳು ಇನ್ನೂ ಪ್ರಯತ್ನಿಸುತ್ತಲೇ ಇದ್ದಾರೆ.
ಜೈವಿಕ ತಂತ್ರಜ್ಞಾನ ವಿಭಾಗದ ನೆರವಿನೊಂದಿಗೆ ಎನ್‌ಬಿಆರ್‌ಸಿಯು ಕೋವಿಡ್ ವಿರುದ್ಧ ಹೊಸ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಕಳೆದ ವರ್ಷದಿಂದ, ಲಾಕ್‌ಡೌನ್‌ನ ಮಧ್ಯಭಾಗದ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ.
ಅದ್ಭುತವಾದ ಉರಿಯೂತ ನಿವಾರಣಾ ಅಂಶ ಹೊಂದಿರುವುದರಿಂದ ಮುಲೇಥಿ ಅಥವಾ ಯಷ್ಟಿಮಧು ಮೇಲೆ ಸಂಶೋಧನೆ ನಡೆಸಲಾಯಿತು. ಕೋವಿಡ್ ವಿರುದ್ಧ ಹೋರಾಡುವಲ್ಲಿ ಇದರ ಸಾಮರ್ಥ್ಯವೇನು ಎಂಬುದನ್ನು ತಿಳಿಯಲು ಸರಣಿ ಪ್ರಯೋಗಗಳನ್ನು ಕೈಗೊಳ್ಳಲಾಯಿತು.
ಸಂಶೋಧಕರು ಮಾನವನ ಶ್ವಾಸಕೋಶದ ಕೆಲವು ಕೋಶಗಳಿಗೆ ನಿರ್ದಿಷ್ಟ ವೈರಲ್ ಪ್ರೋಟೀನ್‌ಗಳನ್ನು ನೀಡಿದ್ದು, ವೈರಸ್ ಪ್ರೋಟೀನ್‌ಗಳು ಈ ಕೋಶಗಳಲ್ಲಿ ಉರಿಯೂತವನ್ನು ಪ್ರಚೋದಿಸಿದ್ದು ಕಂಡುಬಂದಿದೆ. ಆದರೆ, ಮುಲೇಥಿ/ಯಷ್ಟಿಮಧು ಚಿಕಿತ್ಸೆಯು ಅಂತಹ ಕೋಶಗಳಲ್ಲಿನ ಉರಿಯೂತವನ್ನು ಕಡಿಮೆಗೊಳಿಸಿದೆ.
‘ಗಂಭೀರ ಕೊವಿಡ್–19 ಪ್ರಕರಣಗಳಲ್ಲಿ ತೀವ್ರ ಪ್ರತಿರಕ್ಷಣಾ ಪ್ರತಿಕ್ರಿಯೆಯ ಮೂಲಕ ಮುಲೇಥಿಯು ಸೋಂಕಿನ ತೀವ್ರತೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಎನ್‌ಬಿಆರ್‌ಸಿಯ ಹಿರಿಯ ವಿಜ್ಞಾನಿ ಎಲ್ಲೋರ ಸೇನ್ ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.
ಈ ಔಷಧಿಯು ವೈರಸ್ ಬೆಳವಣಿಗೆ ಪ್ರಮಾಣವನ್ನೂ ಶೇ 90ರಷ್ಟು ಕಡಿಮೆ ಮಾಡಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಶ್ವಾಸಕೋಶದ ಕಾಯಿಲೆಗಳು, ದೀರ್ಘಕಾಲೀನ ಜ್ವರ, ಉಸಿರಾಟದ ಭಾಗಗಳಲ್ಲಿನ ಉರಿಯೂತಕ್ಕೆ ಮುಲೇಥಿ/ಯಷ್ಟಿಮಧು ಚಿಕಿತ್ಸೆ ನೀಡಲಾಗುತ್ತಿದೆ.
ಸಶೋಧನಾ ವರದಿಯು ‘ಇಂಟರ್‌ನ್ಯಾಷನಲ್ ಸೈಟೊಕೈನ್ ಆ್ಯಂಡ್ ಇಂಟರ್ಫೆರಾನ್ ಸೊಸೈಟಿ’ಯ ‘ಸೈಟೊಕೈನ್’ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.