ADVERTISEMENT

RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?

ಅವಿನಾಶ್ ಬಿ.
Published 3 ಜುಲೈ 2024, 0:18 IST
Last Updated 3 ಜುಲೈ 2024, 0:18 IST
   
ರಿವರ್ಸ್ ಆಸ್ಮೋಸಿಸ್ (RO) ಮೂಲಕ ಹಾನಿಕಾರಕ ಅಂಶಗಳು ಸೋಸಿ ಹೋಗುತ್ತವೆಯಾದರೂ, ಆರ್‌ಒ ಫಿಲ್ಟರ್ ನೀರನ್ನು ಕುಡಿದರೆ ದೇಹಕ್ಕೆ ಅಗತ್ಯವಿರುವ ಖನಿಜಾಂಶಗಳ ಕೊರತೆಯೂ ಕಾಡುತ್ತದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ನೀಡಿದೆ.

ವೈದ್ಯರು ಔಷಧವನ್ನು ಬರೆದು ಕೊಡುವಾಗ ‘ಇದರಿಂದೇನಾದರೂ ಅಡ್ಡಪರಿಣಾಮಗಳಿವೆಯೇ’ ಎಂದು ಪ್ರಶ್ನಿಸುವ ನಾವು, ‘ಹೋಟೆಲೂಟ, ಬೀದಿಬದಿ ತಿಂಡಿ ಅಥವಾ ಜಂಕ್ ಫುಡ್ ಅನ್ನು ಸೇವಿಸುವಾಗ ಇದೇ ಪ್ರಶ್ನೆಯನ್ನು ಕೇಳುವುದಿಲ್ಲ’ ಎಂದು ವ್ಯಂಗ್ಯಭರಿತ ಕಟುಸತ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಅಷ್ಟರ ಮಟ್ಟಿಗೆ ಜನರಲ್ಲಿ ಆರೋಗ್ಯದ ಬಗೆಗಿನ ಜಾಗೃತಿ ಹೆಚ್ಚಿದೆ. ಆದರೆ ಅತಿಯಾದ ಕಾಳಜಿಯ ಆತಂಕವನ್ನೇ ವಿವಿಧ ಕಂಪನಿಗಳು ಲಾಭಕ್ಕೆ ಬಳಸಿಕೊಳ್ಳುವುದು ಮಾರುಕಟ್ಟೆ ತಂತ್ರಗಳಲ್ಲೊಂದು. ಇದಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸುವ ಕ್ಷೇತ್ರವೂ ಹೊರತಾಗಿಲ್ಲ. ನೀರನ್ನು ಜೀವಜಲ ಎನ್ನುವುದು ನಿಜವೇ ಆದರೂ, ನೀರಿನಲ್ಲಿರುವ ಆರೋಗ್ಯಕರ ಅಂಶಗಳನ್ನು ಉಳಿಸಿಕೊಂಡು ಕುಡಿಯುವುದೇ ಇಂದಿನ ದಿನದ ಸವಾಲು.

ಶುದ್ಧೀಕರಿಸಿದ ನೀರು ಎಂದು ಪ್ರಸ್ತಾಪಿಸಿದರೆ ‘ಆರ್‌ಒ ವಾಟರ್ ಫಿಲ್ಟರ್‘ ಈಗ ಹೆಚ್ಚು ಪ್ರಚಾರದಲ್ಲಿದೆ. ಕಲುಷಿತ ನೀರನ್ನು ಕುಡಿದು ಸಾವಿಗೀಡಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಈ ಕುರಿತು ಒಂದಿಷ್ಟು ಜನಜಾಗೃತಿಯೂ ಹೆಚ್ಚಾಗಿದೆ ಮತ್ತು ಫಿಲ್ಟರ್ ಬಳಕೆಯೂ ಹೆಚ್ಚಿದೆ. ಅಲ್ಲದೆ, ‘ಪಕ್ಕದ ಮನೆಯವರು ಅಥವಾ ಬಂಧುಗಳು ಚಂದದ ಆರ್‌ಒ ಫಿಲ್ಟರ್ ಹಾಕಿಸಿಕೊಂಡಿದ್ದಾರೆ, ನಾವೂ ಹಾಕಿಸಿಕೊಳ್ಳಬೇಕು’ ಎಂಬುದು ಪ್ರತಿಷ್ಠೆಯ ವಿಷಯವೂ ಆಗುತ್ತಿದೆ. ಈ ಹಂತದಲ್ಲಿ, RO ಫಿಲ್ಟರ್ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುವ ಮುನ್ನ, ಅದರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.

ಏನಿದು RO ಶುದ್ಧೀಕರಣ ಪ್ರಕ್ರಿಯೆ?
‘RO’ ಎಂದರೆ ‘ರಿವರ್ಸ್ ಆಸ್ಮೋಸಿಸ್‘ (Reverse Osmosis ಅಂದರೆ ಪ್ರತಿ-ಪರಾಸರಣ) ಎಂಬ ಜೀವರಾಸಾಯನಿಕ ಕ್ರಿಯೆ. ಅತ್ಯಂತ ತೆಳುವಾದ ಅಥವಾ ಸೂಕ್ಷ್ಮವಾದ ಪೊರೆಯ (‘ಮೆಂಬ್ರೇನ್’) ಮೂಲಕ ನೀರನ್ನು ಹಾಯಿಸಿ ಶುದ್ಧೀಕರಣ ಮಾಡುವ ಕ್ರಿಯೆಯಿದು. ಈ ಪೊರೆಯು ಅತ್ಯಂತ ಸೂಕ್ಷ್ಮವಾದ ಕಣಗಳನ್ನಷ್ಟೇ ತನ್ನ ಮೂಲಕ ಹಾದುಹೋಗಲು ಅನುಕೂಲ ಮಾಡಿಕೊಡುತ್ತದೆ. ಅಂದರೆ, ಇದರಲ್ಲಿರುವ ರಂಧ್ರದ ಗಾತ್ರವು 0.0001 ಮೈಕ್ರಾನ್‌ನಷ್ಟು ಸೂಕ್ಷ್ಮವಾಗಿರುತ್ತದೆ. ತ್ಯಾಜ್ಯ, ಸಾವಯವ, ಲೋಹ, ಖನಿಜ ಮುಂತಾದವುಗಳ, ನೀರಿಗಿಂತ ದೊಡ್ಡ ಗಾತ್ರದ ಅಣುಗಳಂತೂ ಹಾದು ಹೋಗುವುದು ಅಸಾಧ್ಯ. ಅಂತಿಮವಾಗಿ ಶುದ್ಧೀಕೃತ ನೀರು ದೊರೆಯುತ್ತದೆ.

ADVERTISEMENT

ಪ್ರಯೋಜನಗಳು
ಬಾವಿಯ ನೀರಿಗಿಂತ ಶುದ್ಧ ನೀರು ಬೇರೆ ಇಲ್ಲ. ಈಗ ಅದರ ಬದಲಾಗಿ ನಾವಿಂದು ಬೋರ್‌ವೆಲ್ ನೀರನ್ನು ಅಥವಾ ನಗರಗಳಲ್ಲಿ ನದಿಯಿಂದ ಸಂಗ್ರಹಿತವಾಗಿ ಬರುವ ನೀರನ್ನೇ ಬಳಕೆಗೆ ನೆಚ್ಚಿಕೊಂಡಿರುತ್ತೇವೆ. ಈ ನೀರಿನಲ್ಲಿ, ವಿಶೇಷವಾಗಿ ಬೋರ್‌ವೆಲ್ ನೀರಿನಲ್ಲಿ ಅನಾರೋಗ್ಯಕರವಾದ ‘ಸಂಪೂರ್ಣವಾಗಿ ಕರಗಿರುವ ಘನವಸ್ತು’ (TDS) ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿರುತ್ತದೆ. ರೋಗಕಾರಕವಾದ ಮಲಿನಾಂಶಗಳು, ಸೀಸ (‘ಲೆಡ್‘) ಮುಂತಾದ ಅಪಾಯಕಾರಿ ಲೋಹದ ಅಂಶಗಳು, ಲವಣಾಂಶಗಳು, ಬ್ಯಾಕ್ಟೀರಿಯಾ, ವೈರಸ್, ಕೀಟನಾಶಕಗಳು ಮತ್ತು ಕರಗಿರುವ ಇತರ ಘನವಸ್ತುಗಳು RO ಫಿಲ್ಟರ್‌ನಲ್ಲಿ ಸೋಸಿ ಹೋಗುತ್ತವೆ. ಈ ನೀರು ಅನಾರೋಗ್ಯಕರ ಅಂಶಗಳಿಂದ ಮುಕ್ತವಾಗಿರುತ್ತದೆ.

ಸಮಸ್ಯೆ ಏನು?
ಆದರೆ, ಈ ರೀತಿ ಸೂಕ್ಷ್ಮಾತಿಸೂಕ್ಷ್ಮ ಕಣಗಳಷ್ಟೇ ಹಾದುಹೋಗುವಾಗ, ಸೂಕ್ಷ್ಮವಾದ ಹಾನಿಕಾರಕ ವಸ್ತುಗಳೇನೋ ಫಿಲ್ಟರ್ ಆಗುತ್ತವೆ. ಆದರೆ ದೇಹಕ್ಕೆ, ಬೆಳವಣಿಗೆಗೆ, ಮೆದುಳಿಗೂ ಅಗತ್ಯವಿರುವ ತಾಮ್ರ, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು ಕೂಡ ಸೋಸಲ್ಪಡುತ್ತವೆ. ನೀರಿನಲ್ಲಿ ಕರಗಿರುವ ಅವಶ್ಯ ಖನಿಜಾಂಶಗಳು ಈ ನೀರಿನಲ್ಲಿ ಇಲ್ಲದಿರುವುದರಿಂದ ಇದು ಆರೋಗ್ಯಕ್ಕೆ ಪೂರಕವಲ್ಲ. ಒಳ್ಳೆಯದು ಕೆಟ್ಟದ್ದು ಎನ್ನದೇ ಎಲ್ಲ ರೀತಿಯ ಖನಿಜಾಂಶಗಳನ್ನೂ ‘ರಿವರ್ಸ್ ಆಸ್ಮೋಸಿಸ್’ ನಿವಾರಿಸಿಬಿಡುತ್ತದೆ. ನೀರಿನಲ್ಲಿರುವ ಕ್ಷಾರೀಯ ಖನಿಜಗಳಾದ ಕ್ಯಾಲ್ಷಿಯಂ, ಮೆಗ್ನೀಷಿಯಂಗಳು ಇಲ್ಲದಿರುವುದರಿಂದ ಈ ‘ತಟಸ್ಥ’ ನೀರು ಕೊಂಚ ಆಮ್ಲೀಯವೇ ಆಗಿರುತ್ತದೆ. ರಾಸಾಯನಿಕ ವಿಜ್ಞಾನದ ಪ್ರಕಾರ ಇದರ ಪಿಎಚ್ ಮೌಲ್ಯವು 7ಕ್ಕಿಂತ ಸ್ವಲ್ಪ ಕೆಳಗಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಆರ್‌ಒ ಫಿಲ್ಟರ್‌ನ ನಿರ್ವಹಣಾ ವೆಚ್ಚವೂ ಅಧಿಕ. ಲಭ್ಯ ನೀರಿನ ಗುಣಮಟ್ಟವನ್ನು ಹೊಂದಿಕೊಂಡು ಆಗಾಗ್ಗೆ ಫಿಲ್ಟರ್ ಬದಲಾಯಿಸಬೇಕಾಗುತ್ತದೆ. ಈ ಫಿಲ್ಟರ್‌ಗಳು ದುಬಾರಿ. ಇಷ್ಟೇ ಅಲ್ಲ, ಇದರಲ್ಲಿ ಜಲಕ್ಷಾಮದ ಕಾಲದಲ್ಲಿಯೂ ಅಮೂಲ್ಯವಾದ ನೀರು ಸಿಕ್ಕಾಪಟ್ಟೆ ಎನಿಸುವಷ್ಟು ವ್ಯರ್ಥವಾಗುತ್ತದೆ. ಸೂಕ್ಷ್ಮ ಪೊರೆಯ ಮೂಲಕ ಬಳಕೆಗೆ ಲಭ್ಯವಾಗುವ ನೀರನ್ನು ಪಡೆಯಬೇಕಿದ್ದರೆ  ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ವ್ಯಯಿಸಬೇಕಾಗುತ್ತದೆ. ಬೇರೆಯೇ ಪೈಪ್ ಮೂಲಕ ಹೊರಹೋಗುವ, ತ್ಯಾಜ್ಯಯುಕ್ತ ಅಂಶಗಳಿರುವ ಈ ಗಡುಸು ನೀರನ್ನು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಗಿಡಗಳಿಗೆ ಉಣಿಸಲು ವ್ಯವಸ್ಥೆ ಮಾಡಬಹುದಾದರೂ ಅದು ಗಡುಸಾಗಿರುವುದರಿಂದ ಮತ್ತು ತ್ಯಾಜ್ಯವನ್ನು ಒಳಗೊಂಡಿರುವುದರಿಂದ ಪರಿಸರಕ್ಕೆ ಪೂರಕವಲ್ಲ.

RO ನೀರು ಸೇವಿಸಿದರೆ ಅಗತ್ಯ ಖನಿಜ, ಲವಣಾಂಶಗಳು ಸಿಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಸಿದೆ. ದೀರ್ಘಕಾಲ ಈ ನೀರು ಸೇವಿಸುತ್ತಾ ಹೋದಲ್ಲಿ ದೇಹದಲ್ಲಿ ಖನಿಜಾಂಶಗಳ ಕೊರತೆಯಿಂದಾಗಿ ಕಾಣಿಸಿಕೊಳ್ಳುವ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂಬುದು ಜೆಕ್ ಗಣರಾಜ್ಯದಲ್ಲಿ ನಡೆಸಲಾದ ಸಂಶೋಧನೆಯಲ್ಲಿ ಕಂಡುಬಂದಿದೆ. ಗಮನಿಸಬೇಕಾದ ವಿಚಾರವೆಂದರೆ, ಆರ್‌ಒ ಫಿಲ್ಟರ್ ನೀರಿನಲ್ಲಿ ಹಾನಿಕಾರಕ, ಸೋಂಕುಕಾರಕ ಅಥವಾ ವಿಷಕಾರಕ ಅಂಶಗಳು ಇರುವುದಿಲ್ಲ ಎಂಬುದು ಎಷ್ಟು ಸತ್ಯವೋ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು ಇರುವುದಿಲ್ಲ ಎಂಬುದೂ ಅಷ್ಟೇ ನಿಜ.

ಪರಿಹಾರ ಏನು?
ಮೊದಲನೆಯದಾಗಿ, ಆರ್‌ಒ ಶುದ್ಧೀಕರಣದ ನೀರಿನ ಸೇವನೆಯಿಂದ ದೇಹಕ್ಕೆ ಕೊರತೆಯಾಗುವ ಪೋಷಕಾಂಶಗಳನ್ನು ಸರಿದೂಗಿಸಿಕೊಳ್ಳಬೇಕಿದ್ದರೆ ಸತ್ವಭರಿತವಾದ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಇದಕ್ಕೆ ಹೊರತಾಗಿ, ಈಗ ಕೆಲವು RO ಸಿಸ್ಟಂಗಳಲ್ಲಿ ನೀರು ಶುದ್ಧೀಕರಣವಾದ ಬಳಿಕ, ಅದಕ್ಕೆ ಖನಿಜಾಂಶ ಮರುಪೂರಣ ಮಾಡುವ ವ್ಯವಸ್ಥೆಯೂ ಬಂದಿದೆ. ಇದಲ್ಲದೆ, ಅಲ್ಟ್ರಾ ಮತ್ತು ನ್ಯಾನೋ ಫಿಲ್ಟರ್‌ಗಳು ಬಂದಿವೆ. ಉಳಿದಂತೆ ಸೂಕ್ತವಾದ ಡಿಸ್ಟಿಲರ್‌ಗಳ ಮೂಲಕ ನೀರನ್ನು ಸೋಸುವುದು, ನೀರನ್ನು ಕುದಿಸಿ ಆರಿಸುವುದು, ಬಾವಿಯ ನೀರನ್ನೇ ಬಳಸುವುದು ಮುಂತಾದ ಪರ್ಯಾಯ ಮಾರ್ಗಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.