ADVERTISEMENT

ಮಿಷನ್‌ ಗಗನಯಾನ: ಗಗನಯಾತ್ರಿಗಳಿಗೆ ಮೈಸೂರಿನಿಂದ ಇಡ್ಲಿ–ಸಾಂಬಾರ್‌, ಉಪ್ಪಿಟ್ಟು!

ಏಜೆನ್ಸೀಸ್
Published 7 ಜನವರಿ 2020, 9:22 IST
Last Updated 7 ಜನವರಿ 2020, 9:22 IST
ಡಿಆರ್‌ಡಿಒ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಗಗನಯಾತ್ರಿಗಳಿಗೆ ಸಿದ್ಧಪಡಿಸಲಾಗಿರುವ ತಿಂಡಿಗಳು
ಡಿಆರ್‌ಡಿಒ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಗಗನಯಾತ್ರಿಗಳಿಗೆ ಸಿದ್ಧಪಡಿಸಲಾಗಿರುವ ತಿಂಡಿಗಳು   

ಬೆಂಗಳೂರು:'ಚಂದ್ರಯಾನ–3' ಯೋಜನೆ ಘೋಷಿಸಿರುವಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾನವ ಸಹಿತ 'ಗಗನಯಾನ'ಕ್ಕೂ ಸಿದ್ಧತೆ ನಡೆಸಿದೆ. ಗಗನಯಾತ್ರೆ ಕೈಗೊಳ್ಳಲು ಈಗಾಗಲೇ ವಾಯುಪಡೆ ಸಿಬ್ಬಂದಿ ಆಯ್ಕೆಯೂ ನಡೆದಿದೆ. ಯಾನದ ಅವಧಿಯಲ್ಲಿ ಅವರಿಗೆ ಅಗತ್ಯವಿರುವ ಭಾರತೀಯ ಶೈಲಿಯ ತಿಂಡಿಗಳನ್ನು ಮೈಸೂರಿನಲ್ಲಿ ಸಿದ್ಧಪಡಿಸಲಾಗುತ್ತಿದೆ.

ಅಂತರಿಕ್ಷದಲ್ಲಿದ್ದರೂ ಗಗನಯಾತ್ರಿಗಳು ಮನೆಯಲ್ಲಿ ಸಿದ್ಧಪಡಿಸುವಂಥದ್ದೇ ಆಹಾರವನ್ನು ಪಡೆಯಲಿದ್ದಾರೆ. ಸುಮಾರು 30 ಬಗೆಯ ತಿಂಡಿಗಳನ್ನುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮೈಸೂರಿನ ಆಹಾರಸಂಶೋಧನಾ ಪ್ರಯೋಗಾಲಯ ತಯಾರಿಸುತ್ತಿದೆ.

ಇಡ್ಲಿ ಸಾಂಬಾರ್‌, ಉಪ್ಪಿಟ್ಟು, ತರಕಾರಿ ಪಲಾವ್‌, ಎಗ್‌ ರೋಲ್‌, ವೆಜ್‌ ರೋಲ್‌, ಹೆಸರು ಬೇಳೆ ಹಲ್ವಾ,..ಇನ್ನಷ್ಟು ಬಗೆಯ ತಿಂಡಿಗಳನ್ನು ಗಗನಯಾತ್ರಿಗಳಿಗಾಗಿ ಪ್ರಯೋಗಾಲಯದಲ್ಲಿ ತಯಾರಿಸಲಾಗುತ್ತಿದೆ. ತಿಂಡಿಗಳನ್ನು ಬಿಸಿ ಮಾಡಿಕೊಳ್ಳಲು ಫುಡ್‌ ಹೀಟರ್‌ಗಳನ್ನೂ ಪೂರೈಸಲಿದೆ. ನೀರು ಮತ್ತು ಜ್ಯೂಸ್‌ ಕುಡಿಯಲು ಗಗನಯಾತ್ರಿಗಳಿಗೆ ವಿಶೇಷವಾದ ಸಂಗ್ರಹ ಚೀಲಗಳನ್ನು ನೀಡಲಾಗುತ್ತದೆ.

ADVERTISEMENT

2022ಕ್ಕಿಂತ ಮೊದಲೇ 'ಮಿಷನ್‌ ಗಗನಯಾನ' ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳನ್ನು ಗಗನಯಾತ್ರಿಗಳು ತೆಗೆದುಕೊಂಡು ಹೋಗಲಿದ್ದಾರೆ. ಆಹಾರ ಬಿಸಿ ಮಾಡುವ ತಂತ್ರಜ್ಞಾನ, ಸ್ಟೈನ್‌ಲೆಸ್‌ ಸ್ಟೀಲ್‌ ಚಮಚ, ಚಾಕು ಹಾಗೂ ಕಸ ಹಾಕಿ ಸಂಗ್ರಹಿಕೊಳ್ಳಲು ವಿಶೇಷ ಪ್ಯಾಕ್‌ಗಳನ್ನು ರೂಪಿಸಲಾಗುತ್ತಿದೆ.

ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೊ ಯೋಜಿಸಿದೆ. ಈ ಯೋಜನೆಗಾಗಿ ರಷ್ಯಾದಲ್ಲಿ ತರಬೇತಿ ಪಡೆದುಕೊಳ್ಳಲು ನಾಲ್ವರು ಗಗನಯಾತ್ರಿಗಳನ್ನು ಗುರುತಿಸಲಾಗಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಇತ್ತೀಚೆಗೆ ಬಹಿರಂಗ ಪಡಿಸಿದ್ದರು. ಮಾನವ ಸಹಿತ ಗಗನಯಾನ ಯಶಸ್ವಿಯಾದರೆ ಇಂಥ ಯೋಜನೆ ಕೈಗೊಂಡ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಲಿದೆ. ಈಗಾಗಲೇ ರಷ್ಯಾ, ಅಮೆರಿಕ ಮತ್ತು ಚೀನಾ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.