ADVERTISEMENT

ಕೋವಿಡ್‌ ಪರೀಕ್ಷೆ: ಐಐಟಿ ಸಂಶೋಧಕರ ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನ

ಐಎಎನ್ಎಸ್
Published 28 ಜನವರಿ 2022, 12:32 IST
Last Updated 28 ಜನವರಿ 2022, 12:32 IST
ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನ
ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನ   

ಜೋಧಪುರ: ಎದೆಗೂಡು ಎಕ್ಸ್‌–ರೇ ಬಳಸಿ ಕೃತಕ ಬುದ್ಧಿಮತ್ತೆಯ (ಎಐ) ಮೂಲಕ ಕೊರೊನಾ ವೈರಸ್‌ ಸೋಂಕು ತಗುಲಿರುವ ಬಗ್ಗೆ ಪರಿಶೀಲಿಸುವ ತಂತ್ರಜ್ಞಾನವನ್ನು ಜೋಧಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ಜೆ) ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಕಾಮಿಟ್‌–ನೆಟ್‌ (COMiT-Net) ಹೆಸರಿನ ಗಣನ ವಿಧಾನ ಬಳಸಿ ಎದೆಗೂಡಿನ ಎಕ್ಸ್‌–ರೇ ವಿಶ್ಲೇಷಿಸಲಾಗುತ್ತಿದೆ. ಶ್ವಾಸಕೋಶದಲ್ಲಿ ಕಂಡು ಬರುವ ವ್ಯತ್ಯಾಸಗಳನ್ನು ಎಐ ಮೂಲಕ ಗುರುತಿಸಲಾಗುತ್ತದೆ. ಕೋವಿಡ್‌ ಪರಿಣಾಮಕ್ಕೆ ಒಳಗಾಗಿರುವ ಶ್ವಾಸಕೋಶ ಮತ್ತು ಸೋಂಕಿಗೆ ಒಳಗಾಗದ ಶ್ವಾಸಕೋಶವನ್ನು ಎಕ್ಸ್‌–ರೇ ಚಿತ್ರಗಳ ಮೂಲಕ ಪತ್ತೆ ಮಾಡಲಾಗುತ್ತಿದೆ.

ಈ ಪ್ರಯೋಗವನ್ನು 2,500ಕ್ಕೂ ಹೆಚ್ಚು ಎದೆಗೂಡು ಎಕ್ಸ್‌–ರೇಗಳಲ್ಲಿ ನಡೆಸಲಾಗಿದ್ದು, ಫಲಿತಾಂಶವು ಶೇಕಡ 96.80ರಷ್ಟು ನಿಖರವಾಗಿರುವುದನ್ನು ತಿಳಿಯಲಾಗಿದೆ.

ADVERTISEMENT

ವ್ಯಕ್ತಿಯು ಕೋವಿಡ್‌–19 ನ್ಯುಮೋನಿಯಾಗೆ ಒಳಗಾಗಿರುವ ಜೊತೆಗೆ ಶ್ವಾಸಕೋಶದಲ್ಲಿ ಸೋಂಕಿಗೆ ಒಳಗಾಗಿರುವ ಭಾಗವನ್ನು ಸಹ ಗುರುತು ಮಾಡುವುದು ಎಐನಿಂದ ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನದ ಕುರಿತ ಸಂಶೋಧನಾ ಪ್ರಬಂಧವು 'ಪ್ಯಾಟರ್ನ್‌ ರೆಕಗ್ನಿಷನ್‌ (ವಾಲ್ಯುಮ್‌ 122)' ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.

ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಕೋವಿಡ್‌–19 ಪರೀಕ್ಷೆಯ ಕಿಟ್‌ಗಳ ಕೊರತೆ ಹಾಗೂ ಪರೀಕ್ಷೆ ನಡೆಸುವ ಕೇಂದ್ರಗಳ ಅಲಭ್ಯತೆಯ ಸಮಸ್ಯೆಗಳನ್ನು ಎದುರಿಸಿವೆ. ಸುಲಭವಾಗಿ ಹಾಗೂ ಇನ್ನಷ್ಟು ವೇಗವಾಗಿ ಪರೀಕ್ಷೆ ನಡೆಸುವ ಮಾರ್ಗಗಳ ಹುಡುಕಾಟವನ್ನು ಸಂಶೋಧಕರು ನಡೆಸಿದ್ದಾರೆ. ಇತ್ತೀಚೆಗೆ ಸ್ಕಾಟ್ಲೆಂಡ್‌ನ ಸಂಶೋಧಕರು ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಪ್ರಸ್ತುತ ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಬಳಕೆಯಲ್ಲಿರುವ ಪಿಸಿಆರ್‌ ಪರೀಕ್ಷೆಗಳಿಗೆ ಪರ್ಯಾಯವಾಗುವ ಸಾಧ್ಯತೆ ಮೂಡಿಸಿದೆ.

ಪಿಸಿಆರ್‌ ಪರೀಕ್ಷೆಗೆ ಸುಮಾರು 2 ತಾಸು ಬೇಕಾದರೆ, 'ಯೂನಿವರ್ಸಿಟಿ ಆಫ್‌ ದಿ ವೆಸ್ಟ್‌ ಆಫ್‌ ಸ್ಕಾಟ್ಲೆಂಡ್‌ನಲ್ಲಿ' ತಜ್ಞರು ಅಭಿವೃದ್ಧಿ ಪಡಿಸಿರುವ ಎಐ ಎಕ್ಸ್‌–ರೇ ತಂತ್ರಜ್ಞಾನದಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್‌–19 ಪರೀಕ್ಷೆ ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದ ಮೂಲಕ ನಡೆಸುವ ಪರೀಕ್ಷೆಯು ಶೇಕಡ 98ರಷ್ಟು ನಿಖರತೆ ಹೊಂದಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.