ADVERTISEMENT

ಭಾರತದಲ್ಲಿ ಇನ್ನೂ ಹೆಚ್ಚಲಿದೆ ಸಿಡಿಲಾಘಾತ: ಹವಾಮಾನ ಬದಲಾವಣೆಯ ಪರಿಣಾಮ ಎಂದ ತಜ್ಞರು

ಏಜೆನ್ಸೀಸ್
Published 27 ಆಗಸ್ಟ್ 2024, 10:11 IST
Last Updated 27 ಆಗಸ್ಟ್ 2024, 10:11 IST
<div class="paragraphs"><p>Lightning strike</p></div>

Lightning strike

   

ಕೋಲ್ಮಿಂಚು

ನವದೆಹಲಿ: ‘ಜಗತ್ತಿನಲ್ಲೇ ಸಿಡಿಲಾಘಾತಕ್ಕೆ ಮೃತಪಡುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚು ಇದ್ದು, ಇದು ಮುಂಬರುವ ವರ್ಷಗಳಲ್ಲಿ ಇನ್ನೂ ಏರಿಕೆಯಾಗುವ ಅಪಾಯವಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

‘ಪ್ರತಿ ವರ್ಷ ಭಾರತದಲ್ಲಿ ಸುಮಾರು 1,900 ಜನ ಸಿಡಿಲಾಘಾತದಿಂದ ಮೃತಪಡುತ್ತಿದ್ದಾರೆ. 1967ರಿಂದ 2020ರ ಅವಧಿಯಲ್ಲಿ ಒಟ್ಟು 1,01,309 ಮಂದಿ ಸಿಡಿಲಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 2010ರಿಂದ 2020ರ ಅವಧಿಯಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಭಾರಿ ಏರಿಕೆಯಾಗಿರುವುದು ಕಳವಳಕಾರಿ’ ಎಂದು ಒಡಿಶಾದಲ್ಲಿರುವ ಫಕೀರ್ ಮೋಹನ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

‘ಹವಾಮಾನ ಬದಲಾವಣೆಯ ಪರಿಣಾಮ ನೈಸರ್ಗಿಕ ವಿಕೋಪಗಳಂತ ಅನಾಹುತಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಾವಿನ ಸಂಖ್ಯೆ ಮಾತ್ರವಲ್ಲ, ಸಿಡಿಲಿನ ಪ್ರಮಾಣವೂ ಹೆಚ್ಚಳವಾಗಿರುವುದು’ ಆತಂಕಕಾರಿ ಎಂದಿದ್ದಾರೆ.

‘ಭಾರತದ ಪ್ರತಿ ರಾಜ್ಯದಲ್ಲಿ ಸಿಡಿಲಿನಿಂದ ಮೃತರಾಗುತ್ತಿರುವವರ ವಾರ್ಷಿಕ ಸರಾಸರಿ ಸಂಖ್ಯೆ 1967ರಿಂದ 2002ರವರೆಗೆ 38 ಇದೆ. 2003ರಿಂದ 2020ರವರೆಗೆ ಇದು 61ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರಿನಲ್ಲಿ ಸಿಡಿಲಿನ ಪ್ರಮಾಣ ಹೆಚ್ಚು. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದರಿಂದ, ಪ್ರತಿಕೂಲ ಹವಾಮಾನದ ದಿನಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರಿಸಮನಾಗಿ ಸಿಡಿಲು ಬಡಿಯುವುದೂ ಹೆಚ್ಚಳವಾಗಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಸಾಮಾನ್ಯವಾಗಿ ಅಧಿಕ ಗಾಳಿಯ ಉಷ್ಣತೆಯಿಂದ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ನಂತರ ಇದು ಒಂದು ನಿರ್ದಿಷ್ಟ ಎತ್ತರದಲ್ಲಿ ತಂಪಾಗಲಾರಂಭಿಸುತ್ತದೆ. ಇಲ್ಲಿ ಮಿಂಚಿನ ಕಿಡಿಯನ್ನು ಉಂಟುಮಾಡುವ ವಿದ್ಯುದಾವೇಶಗಳನ್ನು ಸೃಷ್ಟಿಸುತ್ತದೆ. ಇದನ್ನು ಪತ್ತೆ ಮಾಡಿ ಜನರಿಗೆ ತಲುಪಿಸುವುದರಿಂದ ಸಾವಿನ ಪ್ರಮಾಣ ತಗ್ಗಿಸಬಹುದು’ ಎನ್ನುವುದು ತಜ್ಞರ ಸಲಹೆ.

‘ಭಾರತದಲ್ಲಿ ಸಿಡಿಲಾಘಾತದಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣಕ್ಕೆ ಜಾಗೃತಿಯ ಕೊರತೆಯೇ ಕಾರಣ. ಜತೆಗೆ ಮುನ್ನೆಚ್ಚರಿಕೆಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದಲೂ ಅಪಾಯದ ಮಟ್ಟ ಹೆಚ್ಚಳವಾಗಿದೆ’ ಎಂಬ ಅಂಶವು ಎನ್ವಿರಾನ್ಮೆಂಟ್‌, ಡೆವಲಪ್ಮೆಂಟ್‌ ಅಂಡ್‌ ಸಸ್ಟೈನಬಿಲಿಟಿ ಎಂಬ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಲೇಖನವೊಂದರಲ್ಲಿ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.