ADVERTISEMENT

Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2023, 10:49 IST
Last Updated 28 ಸೆಪ್ಟೆಂಬರ್ 2023, 10:49 IST
<div class="paragraphs"><p>ಚಂದ್ರನ  ಮೇಲೆ ಇಳಿಯಲಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್‌ನ ಚಿತ್ರ – ಕಲಾವಿದನ ಕಣ್ಣಲ್ಲಿ</p></div>

ಚಂದ್ರನ ಮೇಲೆ ಇಳಿಯಲಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್‌ನ ಚಿತ್ರ – ಕಲಾವಿದನ ಕಣ್ಣಲ್ಲಿ

   

ಬೀಜಿಂಗ್: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್‌ ಹೇಳಿದ್ದಾರೆ.

ಚೀನಾದ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿರುವ ಒಯಾಂಗ್‌ ಅವರು ಸೈನ್ಸ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ, ‘ಚಂದ್ರಯಾನ–3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ. ಬದಲಿಗೆ ಅಂಟಾರ್ಟಿಕ್ ಪೊಲಾರ್‌ ಪ್ರದೇಶ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ವರದಿ ಮಾಡಿದೆ.

ADVERTISEMENT

‘ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್ ಇಳಿದಿದೆ. ಇದು ಚಂದ್ರನ ದಕ್ಷಿಣದ ಒಂದು ಭಾಗವಾಗಿದೆಯೇ ಹೊರತು, ದಕ್ಷಿಣ ಧ್ರುವವಲ್ಲ. ದಕ್ಷಿಣ ಧ್ರುವವು 88.5 ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ. ಭೂಮಿ ತಿರುಗುವ ಅಕ್ಷವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಹೀಗಾಗಿ ದಕ್ಷಿಣ ಧ್ರುವವು 66.5 ರಿಂದ 90 ಡಿಗ್ರಿವರೆಗು ಇದೆ. ಆದರೆ ಚಂದ್ರ ಕೇವಲ 1.5 ಡಿಗ್ರಿಯಷ್ಟೇ ವಾಲಿರುವುದರಿಂದ ದಕ್ಷಿಣ ಧ್ರುವದ ಪ್ರದೇಶ ಕಿರಿದಾಗಿದೆ ಎಂದು ವಾದ ಮಂಡಿಸಿದ್ದಾರೆ.

ಅಮೆರಿಕದ ನಾಸಾ ಪ್ರಕಾರ ದಕ್ಷಿಣ ಧ್ರುವವು 80ರಿಂದ 90 ಡಿಗ್ರಿ ದಕ್ಷಿಣದಲ್ಲಿದೆ ಎಂದಿದೆ. ಹಾಗಾದರೆ ಚಂದ್ರಯಾನ–3 ಈ ಪ್ರದೇಶದಿಂದ ತುಸು ಮೇಲೆ ಇಳಿದಿದೆ. ಇದು ಚಂದ್ರಯಾನ–2ರಲ್ಲಿ ಯೋಜಿಸಿದ್ದ ಸ್ಥಳಕ್ಕಿಂತ ತುಸು ಮೇಲೆಯೇ ಆಗಿದೆ. ಆ. 23ರಂದು ನಾಸಾದ ಮುಖ್ಯಸ್ಥ ಬಿಲ್ ನೆಲ್ಸನ್ ಅವರು ಎಕ್ಸ್ ವೇದಿಕೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ–3 ಯಶಸ್ವಿಯಾಗಿ ಇಳಿದಿದೆ ಎಂದು ಬರೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಂಕಾಂಗ್‌ ವಿಶ್ವವಿದ್ಯಾಲಯದ ವಿಜ್ಞಾನಿ ಲೀ ಮಾನ್‌ ಹೊಯ್ ಅವರ ಪ್ರಕಾರ, ‘ಚಂದ್ರಯಾನ–3 ಯೋಜನೆಯು ಚಂದ್ರನ ದಕ್ಷಿಣ ತುದಿಯಿಂದ ಸಾಕಷ್ಟು ಮೇಲೆ ಇಳಿದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೂ ಸಹ ಉನ್ನತ ಅಕ್ಷಾಂಶ ಸ್ಥಳ ಎಂದಿದ್ದಾರೆ ಎಂದೂ ಅವರು ಉಲ್ಲೇಖಿಸಿರುವುದು ವರದಿಯಾಗಿದೆ.

2019ರಲ್ಲಿ ಚೀನಾದ ಚಾಂಗ್ ಎ–4 ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಆಟ್ಕೆನ್‌ ಬೇಸಿನ್‌ನಲ್ಲಿ ಇಳಿದಿತ್ತು. ಇದು ದಕ್ಷಿಣದ 45.44 ಡಿಗ್ರಿ ಅಕ್ಷಾಂಶದಲ್ಲಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಇಳಿಸುವುದೇ ಸಾಹಸ. ಭಾರತದ ಇಸ್ರೊ ಪ್ರಯತ್ನ ನಿಜಕ್ಕೂ ಅದ್ಭುತ’ ಎಂದಿದ್ದಾರೆ.

‘ತಾಂತ್ರಿಕ ಸಾಮರ್ಥ್ಯ ಇರುವ ಯಾರೇ ಆದರೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬಹುದು. ಈ ಭಾಗದ ಹತ್ತಿರ ಭಾರತ ಹೋಗಿದೆ. ಆದರೆ ಚೀನಾದ ಮುಂದಿನ ಯೋಜನೆ ದಕ್ಷಿಣ ಧ್ರುವದ ಅತ್ಯಂತ ಸಮೀಪ ಹೋಗಲಿದೆ. ಈ ಪ್ರಯತ್ನಗಳು ಮನುಷ್ಯನ ವಿಜ್ಞಾನ ಮತ್ತು ಸಾಧನೆಯನ್ನು ಸಂಭ್ರಮಿಸುವ ಕ್ಷಣಗಳಾಗಿವೆ’ ಎಂದು ಬಣ್ಣಿಸಿದ್ದಾರೆ.

2026ರಲ್ಲಿ ಚೀನಾದ ಚಾಂಗ್‌ ಎ–7 ರೋವರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಯೋಜನೆಯನ್ನು ಅಲ್ಲಿನ ಬಾಹ್ಯಾಕಾಶ ಸಂಸ್ಥೆ ಹಮ್ಮಿಕೊಂಡಿದೆ. ನೌಕೆ ಇಳಿಯುವ ಸ್ಥಳವು ಚಂದ್ರನ ದಕ್ಷಿಣದಿಂದ 88.8 ಡಿಗ್ರಿಯಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.