ಚೆನ್ನೈ: ಚಂದ್ರನ ಸುತ್ತುತ್ತ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಬಾಹ್ಯಾಕಾಶ ನೌಕೆಗಳು ಒಂದಕ್ಕೊಂದು ಅಪ್ಪಳಿಸುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ತಪ್ಪಿಸಿದೆ. ಇಸ್ರೊದ ಚಂದ್ರಯಾನ–2 ಆರ್ಬಿಟರ್ ಮತ್ತು ನಾಸಾದ ಎಲ್‌ಆರ್‌ಒ (ಲೂನಾರ್ ರಿಕನೈಸನ್ಸ್ ಆರ್ಬಿಟರ್) ಡಿಕ್ಕಿಯಾಗುವ ಸಾಧ್ಯತೆ ಎದುರಾಗಿತ್ತು.
ಇಸ್ರೊ ಪ್ರಕಾರ, ಚಂದ್ರನ ಉತ್ತರ ಧ್ರುವದ ಸಮೀಪದಲ್ಲಿ 2021ರ ಅಕ್ಟೋಬರ್ 20ರಂದು ಚಂದ್ರಯಾನ–2 ಆರ್ಬಿಟರ್ ಮತ್ತು ಎಲ್‌ಆರ್‌ಒ ಒಂದಕ್ಕೊಂದು ತೀರ ಹತ್ತಿರಕ್ಕೆ ಬರುವ ಮುನ್ಸೂಚನೆ ದೊರಕಿತ್ತು. ಇಸ್ರೊ ಮತ್ತು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಮಾಡಿದ ಲೆಕ್ಕಾಚಾರಗಳಲ್ಲಿ ಉಭಯ ಬಾಹ್ಯಾಕಾಶ ನೌಕೆಗಳ ಕಕ್ಷೆಗಳ ಅಂತರ 100 ಮೀಟರ್‌ಗೂ ಕಡಿಮೆಯಾಗುವುದನ್ನು ತಿಳಿಯಲಾಯಿತು. ಹಾಗೇ ಅಕ್ಟೋಬರ್ 20ರಂದು ಬೆಳಿಗ್ಗೆ 11:15ಕ್ಕೆ (ಭಾರತೀಯ ಕಾಲಮಾನ) ಎರಡೂ ಬಾಹ್ಯಾಕಾಶ ನೌಕೆಗಳ ನಡುವಿನ ಅಂತರ ಮೂರು ಕಿ.ಮೀ.ಗೆ ಇಳಿಕೆಯಾಗುತ್ತಿತ್ತು. ವೇಗವಾಗಿ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳು ಪ್ರತಿ ಸೆಕೆಂಡ್‌ಗೆ ಹಲವು ಕಿ.ಮೀ. ದೂರ ಕ್ರಮಿಸುವುದರಿಂದ 3 ಕಿ.ಮೀ ದೂರವು ಅತ್ಯಂತ ಕಡಿಮೆ ಅಂತರವೆಂದೇ ಪರಿಗಣಿಸಲಾಗುತ್ತದೆ.
ಉಭಯ ಬಾಹ್ಯಾಕಾಶ ಸಂಸ್ಥೆಗಳ ಒಪ್ಪಂದದ ಅನ್ವಯ 2021ರ ಅಕ್ಟೋಬರ್ 18ರಂದು ಚಂದ್ರಯಾನ–2 ಆರ್ಬಿಟರ್ ಅನ್ನು ನಿಗದಿತ ಕಕ್ಷೆಯಿಂದ ದೂರಕ್ಕೆ ಸರಿಸಲಾಗಿದೆ. ಎರಡೂ ಆರ್ಬಿಟರ್‌ಗಳು ಚಂದ್ರನ ಧ್ರುವೀಯ ಕಕ್ಷೆಯಲ್ಲೇ ಪರಿಭ್ರಮಣ ನಡೆಸುತ್ತಿವೆ. 2019ರಿಂದ ಚಂದ್ರಯಾನ–2 ಆರ್ಬಿಟರ್ ಚಂದ್ರನ ಸುತ್ತ ಸುತ್ತುತ್ತಿದೆ.
ಬಾಹ್ಯಾಕಾಶದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ಹಾಗೂ ಕಾರ್ಯಾಚರಿಸುತ್ತಿರುವ ಗಗನನೌಕೆಗಳೊಂದಿಗೆ ಡಿಕ್ಕಿಯನ್ನು ತಪ್ಪಿಸಲು ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳ ಪಥ ಬದಲಿಸುವ ಕಾರ್ಯವು ಸಾಮಾನ್ಯವಾಗಿದೆ. ಆದರೆ, ಚಂದ್ರನ ಕಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಇಸ್ರೊ ಇಂಥ ಪ್ರಯತ್ನ ಮಾಡಿದೆ.
ಭಾರತದ 700 ಕೆ.ಜಿ. ತೂಕದ ಕಾರ್ಟೊಸ್ಯಾಟ್–2ಎಫ್ ಮತ್ತು ರಷ್ಯಾದ 450 ಕೆ.ಜಿ. ತೂಕದ ಕ್ಯಾನೊಪಸ್–ವಿ ಉಪಗ್ರಹಗಳು 2020ರಲ್ಲಿ 224 ಮೀಟರ್‌ಗಳಷ್ಟು ಸಮೀಪದಲ್ಲಿ ಹಾದು ಹೋಗಿದ್ದವು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.