ADVERTISEMENT

ಕ್ಯಾನ್ಸರ್‌ ತಡೆಗೆ ಹೊಸ ಚಿಕಿತ್ಸಾ ಸೂತ್ರ

ಭಾರತದ ವಿಜ್ಞಾನಿಗಳ ತಂಡದಿಂದ ಸಂಶೋಧನೆ

ನೇಸರ ಕಾಡನಕುಪ್ಪೆ
Published 7 ಮೇ 2019, 19:37 IST
Last Updated 7 ಮೇ 2019, 19:37 IST
ಭಾರತೀಯ ವಿಜ್ಞಾನಿಗಳ ತಂಡ ಸಂಶೋಧಿಸಿರುವ ಕ್ಯಾನ್ಸರ್‌ ಚಿಕಿತ್ಸಾ ಸೂತ್ರ
ಭಾರತೀಯ ವಿಜ್ಞಾನಿಗಳ ತಂಡ ಸಂಶೋಧಿಸಿರುವ ಕ್ಯಾನ್ಸರ್‌ ಚಿಕಿತ್ಸಾ ಸೂತ್ರ   

ಮೈಸೂರು: ಕ್ಯಾನ್ಸರ್‌ ಕೋಶಗಳು ದೇಹದ ವಿವಿಧ ಭಾಗಗಳಿಗೆ ಹರಡದಂತೆ ತಡೆಗಟ್ಟುವ ಹೊಸ ಚಿಕಿತ್ಸಾ ವಿಧಾನವನ್ನು ಭಾರತದ ವಿಜ್ಞಾನಿಗಳ ತಂಡ ಕಂಡು ಹಿಡಿದಿದೆ.

ಕ್ಯಾನ್ಸರ್‌ ಗೆ‌ಡ್ಡೆ ದೇಹದ ಭಾಗವೊಂದರಲ್ಲಿ ಕಾಣಿಸಿಕೊಂಡರೆ, ಕೆಲವೇ ಸಮಯದಲ್ಲಿ ಅದು ದೇಹದ ಇತರ ಭಾಗಗಳಿಗೂ ವ್ಯಾಪಿಸುತ್ತದೆ. ಈ ವಿಜ್ಞಾನಿಗಳ ತಂಡವು ಕಂಡುಹಿಡಿದಿರುವ ಚಿಕಿತ್ಸಾ ವಿಧಾನವು, ಕ್ಯಾನ್ಸರ್‌ ಕೋಶಗಳನ್ನು ಒಂದು ಭಾಗದಿಂದ ಇತರ ಭಾಗಗಳಿಗೆ ಕೊಂಡೊಯ್ಯುವ ‘ಹೆಪಾರನೇಸ್’ (Heparanase) ಎಂಬ ಕಿಣ್ವ (Enzyme) ವನ್ನು ನಿಷ್ಕ್ರಿಯಗೊಳಿಸುತ್ತದೆ. ಕ್ಯಾನ್ಸರ್‌ ಬಾಧಿತ ಅಂಗಕ್ಕೆ ಈ ಚಿಕಿತ್ಸೆ ನೀಡಿದರೆ ಸಾಕು.

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಇಸ್ರೇಲಿನ ಪ್ರೊ.ಇಸ್ರೇಲ್ ವ್ಲೊಡಾವ್‌ಸ್ಕೀ ನೇತೃತ್ವದ ವಿಜ್ಞಾನಿಗಳ ತಂಡವು ಒಟ್ಟು ₹ 40 ಲಕ್ಷ ವೆಚ್ಚದಲ್ಲಿ ಈ ಸಂಶೋಧನೆ ಮಾಡಿದೆ. ತಂಡದಲ್ಲಿನ ವಿಜ್ಞಾನಿಗಳಾದ ಡಾ.ಸಿ.ಡಿ.ಮೋಹನ್, ಡಾ.ಆರ್.ಶೋಭಿತ್, ಡಾ.ಚಂದ್ರ ನಾಯಕ್, ಡಾ.ಬಸ‍ಪ್ಪ ಅವರು ಸತತ ಮೂರು ವರ್ಷ ಅವಧಿಯಲ್ಲಿ ಪ್ರಯೋಗಗಳನ್ನು ನಡೆಸಿ ಅಂತಿಮವಾಗಿ ಚಿಕಿತ್ಸಾ ಸೂತ್ರವನ್ನು ಕಂಡುಹಿಡಿದಿದ್ದಾರೆ.

ADVERTISEMENT
ಪ್ರೊ. ರಂಗಪ್ಪ

ವಿಶ್ವದಲ್ಲೇ ಮೊದಲು: ಕ್ಯಾನ್ಸರ್‌ ಕೋಶ ಹರಡುವಿಕೆಗೆ ‘ಹೆಪಾರನೇಸ್’ ಕಿಣ್ವ ಕಾರಣ ಎನ್ನುವುದು ಸಾಕಷ್ಟು ವರ್ಷಗಳ ಹಿಂದೆಯೇ ಪತ್ತೆಯಾಗಿದೆ. ಇದನ್ನು ತಡೆಗಟ್ಟಲು ಸಂಶೋಧನೆಗಳೂ ನಡೆದಿವೆ. ಸಾಮಾನ್ಯವಾಗಿ ಇದಕ್ಕೆ ಟ್ರಯೋಜೋಲೊ ಅಥವಾ ಥಿಯಾಡಿಯಾಜೋಲ್ ಎಂಬ ಅಣುಬೀಜ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಭಾರತದ ವಿಜ್ಞಾನಿಗಳ ಈ ತಂಡವು ಈ ಎರಡೂ ಅಣುಬೀಜ ರಾಸಾಯನಿಕಗಳನ್ನು ಒಂದುಗೂಡಿಸಿ ಪ್ರಯೋಗ ನಡೆಸಿದ್ದು ಫಲ ನೀಡಿದೆ. ಈ ರೀತಿಯ ಪ್ರಯೋಗ ನಡೆಸಿ ಯಶಸ್ವಿಯಾಗಿರುವುದು ವಿಶ್ವದಲ್ಲಿ ಇದೇ ಮೊದಲು ಎನ್ನುತ್ತಾರೆ ಪ್ರೊ. ರಂಗಪ್ಪ.

ಅಂತರರಾಷ್ಟ್ರೀಯ ಖ್ಯಾತಿಯ ‘ಐಸೈನ್ಸ್‌’ ವಿಜ್ಞಾನ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯ ಪ್ರಬಂಧ ಪ್ರಕಟವಾಗಿದೆ. ಭಾರತದಿಂದ, ಈ ನಿಯತಕಾಲಿಕೆಯಲ್ಲಿ ಪ್ರಬಂಧವೊಂದು ಪ್ರಕಟಗೊಂಡಿರುವುದು ಇದೇ ಮೊದಲು ಎಂದು ಅವರು ‘ಪ್ರಜಾವಾಣಿಗೆ’ ಮಾಹಿತಿ ನೀಡಿದರು.

‘ಸೂತ್ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಔಷಧ ಉತ್ಪಾದನೆಗೆ ಹಲವು ಜಾಗತಿಕ ಸಂಸ್ಥೆಗಳು ಆಸಕ್ತಿ ತೋರಿಸಿವೆ. ಜೀವ ಉಳಿಸುವಿಕೆ ನಮ್ಮ ಮೊದಲ ಉದ್ದೇಶ. ಇದಕ್ಕಾಗಿ ಸತತ ಮೂರು ವರ್ಷ ಶ್ರಮವಹಿಸಿದ್ದೇವೆ. ಎಲ್ಲ ಕಾಯಿಲೆಗಳ ಪೈಕಿ ಕ್ಯಾನ್ಸರ್‌ ಬಲು ಅಪಾಯಕಾರಿ. ಔಷಧಗಳು ಪರಿಣಾಮಕಾರಿಯಾಗಿಲ್ಲ. ನಮ್ಮ ಸಂಶೋಧನೆಯು ರೋಗ ಗುಣ‍ಪಡಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಲಿದೆ’ ಎಂದು ಪ್ರೊ.ರಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.

* ಕ್ಯಾನ್ಸರ್‌ ಹರಡುವುದನ್ನು ತಡೆಗಟ್ಟುವುದೂ ಒಂದು ಚಿಕಿತ್ಸಾ ವಿಧಾನ. ಇದರಿಂದ ಕ್ಯಾನರ್‌ ವಿರುದ್ಧ ಹೋರಾಡಲು ವ್ಯಕ್ತಿಗೆ ಸಾಕಷ್ಟು ಸಮಯ ಸಿಗುತ್ತದೆ

- ಪ್ರೊ.ಕೆ.ಎಸ್‌.ರಂಗಪ್ಪ, ಅಧ್ಯಕ್ಷ, ಭಾರತೀಯ ವಿಜ್ಞಾನ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.