ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಹವಾಮಾನ ಮುನ್ಸೂಚನೆ ನೀಡುವ ಇನ್‌ಸ್ಯಾಟ್– 3ಡಿಎಸ್ (INSAT-3DS) ಉಪಗ್ರಹವನ್ನು ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಕೇಂದ್ರದಲ್ಲಿ ಇಂದು (ಶನಿವಾರ) ಸಂಜೆ 5.35ಕ್ಕೆ ಇನ್ಸಾಟ್-3DS ಉಪಗ್ರಹವನ್ನು ಜಿಎಸ್‌ಎಲ್‌ವಿ ಎಂಕೆ– 2 ಉಡಾವಣಾ ವಾಹನದ ಮೂಲಕ ಉಡ್ಡಯನ ಮಾಡಲಾಗುವುದು ಎಂದು ಇಸ್ರೊ ತಿಳಿಸಿದೆ.
ಈ ಉಪಗ್ರಹವು ಹವಾಮಾನ ಮುನ್ಸೂಚನೆ ಸೇರಿದಂತೆ ಭಾರತದ ಹವಾಮಾನ ಮೇಲ್ವಿಚಾರಣಾ ಸೇವೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. INSAT-3DS ಎಂದು ಕರೆಯಲ್ಪಡುವ ಇದು ಮೂರನೇ ತಲೆಮಾರಿನ ನವೀಕರಿಸಿದ, ಮೀಸಲಾದ ಹವಾಮಾನ ಉಪಗ್ರಹವಾಗಿದೆ. ಉಪಗ್ರಹವು 2,274 ಕೆ.ಜಿ ತೂಕವಿದೆ ಎಂದು ಇಸ್ರೊ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಉಪಗ್ರಹ ಉಡ್ಡಯನಕ್ಕೂ ಮುನ್ನ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಇಂದು ಬೆಳಿಗ್ಗೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪ್ರಸಿದ್ಧ ಸುಲ್ಲುರಪೇಟೆಯ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.